ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆಯಿಲ್ಲ...?

Last Updated 19 ಫೆಬ್ರುವರಿ 2012, 6:55 IST
ಅಕ್ಷರ ಗಾತ್ರ

ಶಹಾಪುರ: ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಇಲ್ಲವೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಅಧೀನ ಅಧಿಕಾರಿಗಳಿಗೆ ನೀಡುವ ಯಾವುದೇ ಸುತ್ತೋಲೆ ಅಥವಾ ಆದೇಶ ಜಾರಿಗೆ ಬರುವುದು ಕಷ್ಟದ ಕೆಲಸದಂತೆ ಆಗಿದೆ.
 
ಜಿಲ್ಲಾಧಿಕಾರಿ ಕಾರ್ಯಾಲಯವು ಕೂಡಾ ಕೇವಲ ಹಿಂಬರಹಕ್ಕೆ ಮಾತ್ರ ಸಿಮೀತವಾಗಿದೆ ಎಂಬ ವ್ಯಾಪಕವಾದ ದೂರುಗಳು ಕೇಳಿ ಬರುತ್ತಲಿವೆ.

ಈಚೆಗೆ ಶಹಾಪುರ ಮತಕ್ಷೇತ್ರದ ಮಲ್ಲಾ(ಬಿ) ಗ್ರಾಮದ ಪ್ರೌಢಶಾಲೆ ಸ್ಥಳಾಂತರ, ಗೋಗಿ ಗ್ರಾಮದ ಮನೆ ಗುಳುಂ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಫಲಾನುಭವಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ.

ಇವೆಲ್ಲವುಗಳಿಗೆ ಮೇಲಾಧಿಕಾರಿಗಳ ಸ್ಪಷ್ಟ ಆದೇಶವಿದ್ದರೂ ಜಾರಿ ಮಾತ್ರ ಆಗುತ್ತಿಲ್ಲ. ಇದರಿಂದ ಜನತೆಯಲ್ಲಿ ಹಿರಿಯ ಅಧಿಕಾರಿಗಳ ವರ್ತನೆಯು ಬೇಸರ ಮೂಡಿಸಿದೆ ಎನ್ನುತ್ತಾರೆ ಮಾನಪ್ಪ ಹಡಪದ.

ಇನ್ನೊಂದು ತಾಜಾತನವೆನ್ನುವಂತೆ ಕಳೆದ 2011 ನವೆಂಬರ್ 21ರಂದು ತಾಲ್ಲೂಕಿನ 210-11ನೇ  ಸಾಲಿನ 13ನೇ ಹಣಕಾಸು ಯೋಜನೆ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಸರಬರಾಜು ಮಾಡಲು 15.90ಲಕ್ಷ ಟೆಂಡರ್ ಕರೆಯಲಾಗಿತ್ತು.

ಟೆಂಡರ್ ಪ್ರಕಟವಾದ ದಿನದಂದು  ಟೆಂಡರ್ ಅರ್ಜಿ ಸಲ್ಲಿಸುವ ಕೊನೆ ದಿನವನ್ನು ನಿಗದಿಪಡಿಸಲಾಗಿತ್ತು. ಟೆಂಡರ್ ಗೋಲ್‌ಮಾಲ್ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಕರಿಬಸಪ್ಪ ಬಿರಾಳ  ಸಲ್ಲಿಸಿದ್ದರು.

ಆಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯು 2011 ನವೆಂಬರ್ 6ರಂದು ಜಿಪಂ ಸಿಇಓಗೆ ಪತ್ರ ಬರೆದು ಪಾರದರ್ಶಕ ನಿಯಮದಂತೆ ಟೆಂಡರ್ ಕರೆಯಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 16 ಅರ್ಜಿಗಳು ಸೀಕೃತವಾಗಿವೆ. ನಾಲ್ಕು ಟೆಂಡರ್‌ದಾರರ ತಾಂತ್ರಿಕ ಹಾಗೂ ಆರ್ಥಿಕ ಬಿಡ್ ಕ್ರಮಬದ್ಧವಾಗಿದ್ದು ಟೆಂಡರ್‌ದಾರರ ಸಮಕ್ಷಮದಲ್ಲಿ ತೆರೆಯಲಾಗಿದೆ ಯಾವುದೆ ಲೋಪ ದೋಷವಾಗಿರುವುದಿಲ್ಲವೆಂದು ಮಾಹಿತಿ ನೀಡಿದ್ದಾರೆ.

ಆಗ ಎಚ್ಚೆತ್ತುಕೊಂಡ ಜಿಪಂ ಸಿಇಓ ಅವರು ಈಗಾಗಲೇ ತಮ್ಮ(ಶಹಾಪುರ) ಕಚೇರಿಯಲ್ಲಿ 12 ಹಾಗೂ 13ನೇ ಹಣಕಾಸು ಯೋಜನೆ ಸಂಬಂಧಪಟ್ಟಂತೆ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಅನುದಾನ ದುರ್ಬಳಕೆ ಮಾಡಿದ ಕುರಿತು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ತಪಾಸಣೆಯಾಗಿ ಶಿಸ್ತಿನ ಕ್ರಮ ಜಾರಿಯಲ್ಲಿರುತ್ತದೆ.

ಆದರೂ ಮತ್ತೆ ಟೆಂಡರ್ ಗೋಲ್‌ಮಾಲ್ ದೂರುಗಳ ಬಗ್ಗೆ ಗಮನಿಸಿದರೆ ಹಿಂದಿನ ಶಿಸ್ತು ಕ್ರಮದ ಬಗ್ಗೆ  ಪರಿವೆಯೇ ಇಲ್ಲ. ಇದರ ಬಗ್ಗೆ ಸಮಗ್ರ ಪರಿಶೀಲನೆಯಾಗುವವರೆಗೆ ಮುಂದಿನ ಯಾವುದೇ ಕ್ರಮ ವಹಿಸದೇ ಇರಲು ಸೂಚಿಸಲಾಗಿದೆ. ಅಲ್ಲದೆ ಸಮಗ್ರ  ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇವೆಲ್ಲವನ್ನು ಕಸದ ಬುಟ್ಟಿಗೆ ಎಸೆದು ಟೆಂಡರ್ ಗೋಲಮಾಲ್ ಪ್ರಕ್ರಿಯೆ ಅಂತಿಮಗೊಳಿಸಿ ಬೇಕಾದ ಟೆಂಡರ್‌ದಾರರಿಗೆ ಹಂಚಿಕೆ ಮಾಡಿದ್ದಾರೆ. ಮಾಹಿತಿ ಹಕ್ಕು ಅಧಿ ನಿಯಮದಡಿಯಲ್ಲಿ ಟೆಂಡರ್ ಗೋಲಮಾಲ್ ದಾಖಲೆಗಳನ್ನು ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಅರ್ಜಿ ಸಲ್ಲಿಸಿ 30 ದಿನಗಳು ಗತಿಸಿವೆ ಇಂದಿಗೂ ಯಾವುದೇ ದಾಖಲೆಗಳನ್ನು ನೀಡಿಲ್ಲ.
 
ಕೊನೆಗೆ ಮೇಲ್ಮನವಿಯನ್ನು ರಾಜ್ಯ ಮಾಹಿತಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ರಕ್ಷಣಾ ವೇದಿಕೆ ಮುಖಂಡ ಕರಬಸಪ್ಪ ಬಿರಾಳ ಹೇಳಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಇದ್ದರು ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದ ಕೆಳ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತುಕ್ರಮ ತೆಗೆದುಕೊಳ್ಳದೆ ಇರುವುದು ಆಡಳಿತಕ್ಕೆ ಮಂಕು ಕವಿದಿದೆ.

ಕೆಳ ಅಧಿಕಾರಿಗಳು ಆಡಳಿತದಲ್ಲಿ ತಪ್ಪು ಮಾಡಿದಾಗ ಸಾಮಾನ್ಯವಾಗಿ ಮೇಲಾಧಿಕಾರಿಗೆ ದೂರು ಸಲ್ಲಿಸುತ್ತೇವೆ ಆದರೆ ಆಡಳಿತ ನಡೆಸುವ ಅಧಿಕಾರಿ ಮಾತ್ರ ಯಾವುದೇ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ಹಲವು ಗುಮಾನಿ ಉಂಟು ಮಾಡಿದೆ ಎನ್ನುವುದು ಮಾನಪ್ಪ ಹಡಪದ ಅವರ ನೇರ ಆರೋಪ.
ಹವಾ ನಿಯಂತ್ರಣ ಕೊಠಡಿಯಿಂದ ಜಿಲ್ಲೆಯ ಉನ್ನತಾಧಿಕಾರಿಯವರು ಹೊರ ಬಂದು ಸಾರ್ವಜನಿಕರ ಸಮಸ್ಯೆ ಹಾಗೂ ಗೊಂದಲಗಳನ್ನು ಬಗೆಹರಿಸಬೇಕೆಂದು ಜನತೆ ಮನವಿ ಮಾಡಿದ್ದಾರೆ.
                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT