ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ರೈತರ ಮುತ್ತಿಗೆ

Last Updated 11 ಅಕ್ಟೋಬರ್ 2011, 8:05 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯನ್ನು ಬರಪೀಡಿತ ಜಿಲ್ಲೆಗಳ ಸಾಲಿನಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು ಒಣಗಿದ ಹತ್ತಿಗಿಡಗಳನ್ನು ಹಿಡಿದು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು, ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಸಿದ್ದಪ್ಪ ಹೊಸಮನಿ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದ ರೈತರು, ಸುಮಾರು 3ಗಂಟೆಗಳ ಕಾಲ ಯಾವುದೇ ವಾಹನ ಜಿಲ್ಲಾಧಿಕಾರಿಗಳ ಕಚೇರಿಯೊಳಗೆ ಹೋಗದಂತೆ ತಡೆಹಿಡಿದರು.

ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗಿಲ್ಲ. ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಇನ್ನು ಕೆಲ ತಾಲೂಕುಗಳಲ್ಲಿ ಮಳೆ ಹೆಚ್ಚಾಗಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿಲ್ಲ. ಇನ್ನೂ ಕೆಲವಡೆ ಹೆಚ್ಚಾದ ಮಳೆಯಿಂದ ಬೆಳೆ ಸಿಡಿ ಹಾಯ್ದು ಒಣಗಿ ಹೋಗಿದೆ. ಆದರೂ ರಾಜ್ಯ ಸರ್ಕಾರ ಬರ ಪೀಡಿತ ಜಿಲ್ಲೆಗಳ ಪಟ್ಟಿಗೆ ಹಾವೇರಿ ಜಿಲ್ಲೆಯನ್ನು ಸೇರಿಸಿದೇ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಸರ್ಕಾರ ಜಿಲ್ಲೆಯ ಅಧಿಕಾರಿಗಳು ನೀಡಿದ ವರದಿ ಆಧರಿಸಿ ಬರ ಪೀಡಿತ ಜಿಲ್ಲೆಗಳ ಘೋಷಣೆ ಮಾಡಿದೆ. ಆದರೆ, ಜಿಲ್ಲೆ ಅಧಿಕಾರಿಗಳು ಯಾವುದೇ ಹೊಲಗಳಿಗೆ ಭೇಟಿ ನೀಡದೇ ಕಚೇರಿಯಲ್ಲಿ ಕುಳಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದೇ ಕಾರಣಕ್ಕೆ ಜಿಲ್ಲೆಯ ಯಾವ ತಾಲ್ಲೂಕುಗಳು ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಲ್ಲ ಎಂದು ಹೇಳಿದರು.

ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಶಿವಾನಂದ ಗುರುಮಠ ಮಾತನಾಡಿ, ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶದ ಆಯ್ಕೆ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಆಯ್ಕೆ ಮಾನದಂಡ ಸರಿಯಾಗಿಲ್ಲ. ಖುದ್ದು ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ 2 ಸಾವಿರ, ಹತ್ತಿಗೆ 10 ಸಾವಿರ, ಭತ್ತಕ್ಕೆ 2500 ರೂ. ಕಬ್ಬಿಗೆ 2500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಕೃಷಿಗೆ ಬೇಕಾದ ರಸಗೊಬ್ಬರ, ಔಷಧಿ, ಕೂಲಿ, ಟ್ಯ್ರಾಕ್ಟರ್ ಬಾಡಿಗೆ ಹಾಗೂ ಇನ್ನಿತರ ಪರಿಕರಗಳ ಬೆಲೆ ಏರಿಕೆಯಿಂದ ರೈತ ತತ್ತರಿಸಿ ಹೋಗಿದ್ದಾನೆ. ಸಾಲದ ಸುಳಿಯಲ್ಲಿ ಸಿಲುಕಿ ನೇಣಿಗೆ ಶರಣಾಗುತ್ತಿದ್ದಾನೆ. ಈ ಎಲ್ಲ ಸಮಸ್ಯೆಗಳಿಂದ ರೈತನನ್ನು ಪಾರು ಮಾಡಲು ರೈತರ ಶ್ರಮಕ್ಕೆ ತಕ್ಕ ಬೆಲೆ ನಿಗದಿಪಡಿಸುವುದು ಅವಶ್ಯವಾಗಿದೆ ಎಂದರು.

ಮೆಕ್ಕೆಜೋಳ ಒಣಗಿಸುವುದಕ್ಕಾಗಿ ಎಪಿಎಂಸಿಗಳಲ್ಲಿ ಆಧುನಿಕ ಒಣಗಿಸುವ ಯಂತ್ರಗಳಾದ ಡ್ರೈಯರ್ ಯಂತ್ರಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚೆಳ್ಳೆರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ವಿಪರೀತವಾಗಿದೆ. ಆದ್ದರಿಂದ ಅಕ್ರಮ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಬೇಕು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಉಗ್ರ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಜಿಲಾಧ್ಲಿಕಾರಿ ಎಚ್.ಜಿ. ಶ್ರೀವರ ಅವರು, ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜೆ.ಎ.ಹಿರೇಮಠ, ಬಸನಗೌಡ ಗಂಗಪ್ಪಳವರ, ರುದ್ರಗೌಡ ಕಾಡನಗೌಡ್ರ, ಬಸವರಾಜ ಕಡೂರು, ಸುರೇಶ ಚಲವಾದಿ, ದಾದಾಪೀರ ಅನಿಮಾರ, ಬಸವರಾಜ ಪೂಜಾರ, ನಾರಾಯಣ ಕಾಳೆ ಸೇರಿದಂತೆ  ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT