ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಸಲಹೆಗೆ ನಗರಸಭೆ ಆಕ್ಷೇಪ

Last Updated 9 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಮಗಾರಿಗಳ ಟೆಂಡರ್‌ನ ಮೂಲ ದರ (ಎಸ್‌ಆರ್ ದರ) ನಿಗದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಲಹೆಗೆ ಆಕ್ರೋಶ ವ್ಯಕ್ತಪಡಿಸಿದ ನಗರಸಭೆ ಸದಸ್ಯರು, ಜಿಲ್ಲಾಧಿಕಾರಿ ಸೂಚನೆಯನ್ನು ತಳ್ಳಿಹಾಕಿದರು. ನಗರಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ನಗರದ ವಿವಿಧ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ಎಸ್‌ಆರ್ ದರ ಮೀರದಂತೆ ಗುತ್ತಿಗೆ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಸಭೆ ಗಮನಕ್ಕೆ ತಂದರು. ಅದಕ್ಕೆ ಪಕ್ಷಾತೀತವಾಗಿ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಯಾವುದೇ ಕಾರಣಕ್ಕೂ ಈ ಸಲಹೆಯನ್ನು ಸ್ವೀಕರಿಸಬಾರದು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಸದಸ್ಯ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ‘ಸಾಮಾನ್ಯ ಅನುದಾನದಡಿ ಕಾಮಗಾರಿಗಳ ಗುತ್ತಿಗೆ ನೀಡುವುದರಲ್ಲಿ ನಗರಸಭೆಗೆ ಅಧಿಕಾರವಿದೆ. ಅದರಂತೆ ನಿರ್ಣಯ ತೆಗೆದುಕೊಳ್ಳಿ. ಅದಕ್ಕೆ ಜಿಲ್ಲಾಧಿಕಾರಿ ಕೇಳಿ ಯಾಕೆ ನಿರ್ಣಯ ತೆಗೆದುಕೊಳ್ಳಬೇಕು? ಎಲ್ಲದಕ್ಕೂ ಅವರನ್ನು ಕೇಳುವುದಾದರೆ ನಗರಸಭೆಗೆ ಅಧಿಕಾರ ಏಕೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ದನಿಗೂಡಿಸಿದ ಸದಸ್ಯ ಎಸ್.ಕೆ. ಮರಿಯಪ್ಪ, ‘ಜಿಲ್ಲಾಧಿಕಾರಿ ಕೇಳುವ ಪರಿಸ್ಥಿತಿ ನಮಗೇಕೆ? ಕಂದಾಯ ವಸೂಲಿ ಮಾಡಿ ಅನುದಾನ ಕೊಡುವಂತಹದ್ದು ಇದು. ‘ಸೂಡಾ’, ಲೋಕೋಪಯೋಗಿ ಇಲಾಖೆಗಳೆಲ್ಲಾ ಎಸ್‌ಆರ್ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕಾಮಗಾರಿಗುತ್ತಿಗೆ ನೀಡುತ್ತಿವೆ. ಆದರೆ, ನಗರಸಭೆಗೆ ಮಾತ್ರ ತಾರತಮ್ಯ ಯಾಕೆ?’ ಎಂದು ಪ್ರಶ್ನಿಸಿದರು.
ಉಡುಪಿಯಲ್ಲಿ ಈ ಮಾದರಿ ಅನುಸರಿಸಿರಬಹುದು. ಆದರೆ, ಇಲ್ಲಿ ಸರಿ ಹೊಂದುವುದಿಲ್ಲ. ಗುತ್ತಿಗೆದಾರರು ಮುಂದೆಬರುವುದಿಲ್ಲ. ಆದ್ದರಿಂದ, ಸಾಮಾನ್ಯ ಅನುದಾನಕ್ಕೆ ಅದನ್ನು ಅಳವಡಿಸಬಾರದು ಎಂದು ಸದಸ್ಯರಾದ ಕೆ.ಬಿ. ಪ್ರಸನ್ನಕುಮಾರ್,ಶಂಕರ್ ಗನ್ನಿ ಮತ್ತು ಸೋಮಸುಂದರ್ ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಎಸ್‌ಆರ್ ದರ ನಿಗದಿ ಮಾಡಿ, ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದಕ್ಕೂ ಮೊದಲು ಮಾತನಾಡಿದ ಎಸ್.ಕೆ. ಮರಿಯಪ್ಪ, ಕಾಮಗಾರಿ ಗುತ್ತಿಗೆ ಪಡೆದು, ಈವರೆಗೆ ಕಾರ್ಯ ನಿರ್ವಹಿಸದ ಗುತ್ತಿಗೆದಾರರ ಪಟ್ಟಿಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಕೆ.ಎಸ್. ಗಂಗಾಧರಪ್ಪ, ಕಾಮಗಾರಿ ಪಡೆದು ಕಾರ್ಯ ನಿರ್ವಹಿಸದವರೆಲ್ಲರಿಗೂ ನೋಟಿಸ್ ನೀಡಿ. ನಿಗದಿತ ಅವಧಿ ಒಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಟೆಂಡರ್ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಅಧ್ಯಕ್ಷರು ಮೌನ ಯಾಕೆ?
 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಶೇ. 22.5 ಅನುದಾನದ ದುರ್ಬಳಕೆ ಆರೋಪದ ಬಗ್ಗೆ ಅಧ್ಯಕ್ಷರು ಮೌನ ಯಾಕೆ? ಎಂದ ಮರಿಯಪ್ಪ, ಅದಕ್ಕೆಲ್ಲ ಸಾಮಾನ್ಯ ಸಭೆ ನಡೆಯದಿರುವುದೇ ಕಾರಣ ಎಂದು ಆರೋಪಿಸಿದರು. ಆರಂಭದಲ್ಲಿ ಕೆ.ಬಿ. ಪ್ರಸನ್ನಕುಮಾರ್, ಪ್ರತಿ ತಿಂಗಳು ಸಾಮಾನ್ಯಸಭೆ ಕರೆಯುತ್ತಿಲ್ಲ. ಇದರಿಂದ ಸಮಸ್ಯೆಗಳು ಚರ್ಚೆ ಆಗುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ, ಶುದ್ಧ ಮತ್ತು ಸಮರ್ಪಕನೀರಿನ ಸಮಸ್ಯೆ ಉದ್ಭವಿಸಿವೆ ಎಂದು ದೂರಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು ದನಿಗೂಡಿಸಿದರು. ಉಪಾಧ್ಯಕ್ಷ ಬಿ. ಸತ್ಯನಾರಾಯಣ, ಆಯುಕ್ತ ಬಿ. ಜಯಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT