ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿಗೆ ಸಮೀಕ್ಷೆ ವರದಿ ಶೀಘ್ರ ಸಲ್ಲಿಕೆ

Last Updated 7 ಫೆಬ್ರುವರಿ 2011, 9:50 IST
ಅಕ್ಷರ ಗಾತ್ರ

ಧಾರವಾಡ: “ಆಶ್ರಯ ಮನೆ ಯೋಜನೆಯಡಿಯಲ್ಲಿ 1992ರಿಂದ 2006ರ ವರೆಗೆ ಹಂಚಿಕೆಯಾದ ನಿವೇಶನಗಳು ಅರ್ಹ ಫಲಾನುಭವಿಗಳಿಗೆ ದೊರೆತಿಲ್ಲ. ಬೇನಾಮಿ ಹೆಸರಿನಿಂದ ನಿವೇಶನಗಳು ಕೊಡಲ್ಪಟ್ಟಿವೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಎರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು” ಎಂದು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಬಸವರಾಜ ವಿಭೂತಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಮರಗೋಳದಲ್ಲಿ 1991- 92ನೇ ಸಾಲಿನಲ್ಲಿ ಒಂದು ವರ್ಷದ ಮಗುವಿಗೆ ನಿವೇಶನ ಮಂಜೂರು ಮಾಡಲಾಗಿತ್ತು. ಇಲ್ಲಿ 825 ನಿವೇಶನಗಳ ಪೈಕಿ 673 ನಿವೇಶನಗಳು ಖಾಲಿ ಬಿದ್ದಿವೆ. ಇವೆಲ್ಲ ನಿವೇಶನಗಳನ್ನು ಮರಳಿ ಪಡೆಯಬೇಕು. ಪಶ್ಚಿಮ ಮತಕ್ಷೇತ್ರದಲ್ಲಿ ಬರುವ ಆಶ್ರಯ ನಿವೇಶನಗಳ ಸಮೀಕ್ಷೆ ನಡೆಸಿದ ನಂತರ ಪಾಲಿಕೆಗೆ 4 ಕೋಟಿ ರೂ. ಆದಾಯ ಬಂದಿದೆ ಎಂದರು.

ವಾಜಪೇಯಿ ನಗರ ವಸತಿ ಯೋಜನೆ ಹಾಗೂ ನಮ್ಮ ಮನೆ ಯೋಜನೆಯಡಿಯಲ್ಲಿ ಮನೆ ವಿತರಿಸಲು ಪ್ರಕ್ರಿಯೆ ಪ್ರಾರಂಭವಾಗಿದ್ದು, 6000 ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 2000 ಅರ್ಜಿಗಳು ಬಂದಿವೆ. 500 ಫಲಾನುಭವಿಗಳಿಗೆ ಈ ಎರಡೂ ಯೋಜನೆಯಲ್ಲಿ ನಿವೇಶನ ವಿತರಿಸಲಾಗುವುದು ಎಂದು ಹೇಳಿದರು. ಆಶ್ರಯ ಯೋಜನೆಯಡಿಯಲ್ಲಿ 4696 ನಿವೇಶನಗಳನ್ನು ಇಲ್ಲಿಯವರೆಗೆ ರಚಿಸಲಾಗಿದೆ. ಇದರಲ್ಲಿ 4674 ನಿವೇಶನಗಳು ಹಂಚಿಕೆಯಾಗಿದ್ದು, 3787 ಮನೆಗಳನ್ನು ನಿರ್ಮಿಸಲಾಗಿದೆ. 1006 ಮನೆಗಳಲ್ಲಿ ಅಧಿಕೃತವಾಗಿ ವಾಸವಾಗಿದ್ದು, 645 ಮನೆಗಳಲ್ಲಿ ಅನಿಧಿಕೃತವಾಗಿ ವಾಸವಿರುವವರಿದ್ದಾರೆ.

1982 ಮನೆಗಳಿಗೆ ಕೀಲಿ ಹಾಕಲಾಗಿದೆ. ಖಾಲಿ ಇರುವ ಮನೆಗಳನ್ನು ಮರಳಿ ಪಡೆದು, ಈಗ ಅರ್ಜಿ ಸಲ್ಲಿಸಿದವರಿಗೆ ಅವುಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಶಾಸಕ ಚಂದ್ರಕಾಂತ ಬೆಲ್ಲದ, ಸುರೇಶ ಬೇದರೆ, ಸಂಜಯ ಕಪಟಕರ, ಮೋಹನ ರಾಮದುರ್ಗ, ಗೀತಾ ಪಾಟೀಲ, ರಾಮಣ್ಣ ಬಡಿಗೇರ, ಗೌಡಪ್ಪ ಪಾಟೀಲ, ಮಲ್ಲೇಶಪ್ಪ ಹೊಸಮನಿ, ಎಂ. ಬಸವಣ್ಣ, ಚಂದ್ರು ನೀಲಗಾರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT