ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ವಿಭಜನೆ ಕೂಡದು: ನಾ.ಡಿಸೋಜ

Last Updated 10 ಆಗಸ್ಟ್ 2012, 10:45 IST
ಅಕ್ಷರ ಗಾತ್ರ

ಸಾಗರ: ಕರ್ನಾಟಕದಲ್ಲಿ ಐತಿಹಾಸಿಕ, ಸಾಂಸ್ಕೃತಿಕ ವಿಶಿಷ್ಟ ಸ್ಥಾನ ಗಳಿಸಿರುವ ಶಿವಮೊಗ್ಗ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು ಎಂದು ಸಾಹಿತಿ ಡಾ.ನಾ.ಡಿಸೋಜ ಒತ್ತಾಯಿಸಿದರು.

ಸಾಗರ ಜಿಲ್ಲಾ ಹೋರಾಟ ಸಮಿತಿ ಈ ಕುರಿತು ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಸುದ್ದಿಗಾರರೊಂದಿಗೆ ವಿಷಯ ಹಂಚಿಕೊಂಡ ವೇಳೆ ಮಾತನಾಡಿದ ಅವರು, ಜಿಲ್ಲೆ ಎಂದರೆ ಅದು ಕೇವಲ ಭೌಗೋಳಿಕ ಪ್ರದೇಶ ಅಷ್ಟೇ ಆಗಿರುವುದಿಲ್ಲ. ಪ್ರತಿಯೊಂದು ಜಿಲ್ಲೆಗೂ ಅದರದ್ದೆ ಆದ ವಿಶೇಷತೆ ಇರುತ್ತದೆ. ಜೋಗ ಜಲಪಾತ ಹೇಗೆ ಶಿವಮೊಗ್ಗ ಜಿಲ್ಲೆಗೆ ಸೇರಿದೆ ಎಂದು ಹೆಮ್ಮೆಯಿಂದ ಹೇಳುತ್ತೇವೆಯೋ, ಅದೇ ರೀತಿ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಕೂಡ ಶಿವಮೊಗ್ಗ ಜಿಲ್ಲೆಯದ್ದು ಎನ್ನುತ್ತೇವೆ. ಇದನ್ನು ವಿಭಜಿಸುವ ಕಾರ್ಯ ಸಲ್ಲ ಎಂದರು.

ಜಿಲ್ಲೆಯನ್ನು ವಿಭಜಿಸುವುದಿಲ್ಲ ಎಂದು ಸಂಸದ ಬಿ.ವೈ.  ರಾಘವೇಂದ್ರ  ಅವರು ಈ ಹಿಂದೆ ಶಿವಮೊಗ್ಗದಲ್ಲಿ  ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಬಹಿರಂಗವಾಗಿ ಘೋಷಿಸಿದ್ದರು. ಇತ್ತೀಚೆಗಷ್ಟೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಕೂಡ ಇದೇ ಉತ್ತರ ಹೇಳಿದ್ದಾರೆ. ಆದಾಗ್ಯೂ ಮಾಧ್ಯಮಗಳಲ್ಲಿ ಪ್ರತಿನಿತ್ಯ ಜಿಲ್ಲೆಯ ವಿಭಜನೆ ಸುದ್ದಿ ಬರುತ್ತಿರುವುದರಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆ ವಿಭಜನೆ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಈ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಹೇಳಿದರು.

ಜಿಲ್ಲಾ ಹೋರಾಟ ಸಮಿತಿ ಮುಖಂಡ ಯು.ಜೆ.ಮಲ್ಲಿಕಾರ್ಜುನ ಮಾತನಾಡಿ, ಒಂದೊಮ್ಮೆ ಶಿವಮೊಗ್ಗ ಜಿಲ್ಲೆ ವಿಭಜಿಸಿ ನೂತನ ಜಿಲ್ಲಾ ಕೇಂದ್ರ ಮಾಡುವುದಾದರೆ ಉಪ ವಿಭಾಗೀಯ ಕೇಂದ್ರ ಆಗಿರುವ ಸಾಗರವನ್ನೆ ಜಿಲ್ಲಾ ಕೇಂದ್ರವಾಗಿ ಮಾಡಬೇಕು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಜಿಲ್ಲೆಯ ವಿಭಜನೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆ ವಿಭಜಿಸಬಾರದು ಎಂದು ಒತ್ತಾಯಿಸಿ ಆ. 10ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿ ಮಾಡಿದರು.

ಹೋರಾಟ ಸಮಿತಿಯ ವಿಲಿಯಂ ಮಾತನಾಡಿ, ಜಿಲ್ಲೆ ವಿಭಜಿಸಬಾರದು ಎಂದು ಒತ್ತಾಯಿಸುವ ಸಲುವಾಗಿ ಶೀಘ ಬೆಂಗಳೂರಿಗೆ ಇಲ್ಲಿನ ಸರ್ವ ಪಕ್ಷ ನಿಯೋಗ ತೆರಳಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.

ಹೋರಾಟ ಸಮಿತಿಯ ಅ.ರಾ. ಲಂಬೋದರ್, ಡಿ. ದಿನೇಶ್, ಮಹೇಶ್ ಹಿರೇಮಠ್, ತಿಮ್ಮಪ್ಪ, ವ.ಶಂ. ರಾಮಚಂದ್ರಭಟ್, ಎಸ್. ಲಿಂಗರಾಜು, ಪರಮೇಶ್ವರ ದೂಗೂರು, ಶಿವಾನಂದ ಕುಗ್ವೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT