ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ವಿಭಜನೆಗೆ ಸದಸ್ಯರ ವಿರೋಧ

Last Updated 6 ಆಗಸ್ಟ್ 2012, 6:10 IST
ಅಕ್ಷರ ಗಾತ್ರ

ಸಾಗರ: ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಇಬ್ಭಾಗ ಮಾಡಬಾರದು. ಒಂದು ವೇಳೆ ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ನಗರಸಭೆ ವತಿಯಿಂದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲು ಭಾನುವಾರ ನಡೆದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಸೋಮವಾರ ಪೌರ ಸನ್ಮಾನ ನೀಡುವ ಸಂಬಂಧ ಕರೆಯಲಾಗಿದ್ದ ತುರ್ತುಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಂದರ್‌ಸಿಂಗ್, ಮಾಧ್ಯಮಗಳಲ್ಲಿ ಶಿಕಾರಿಪುರವನ್ನು ನೂತನ ಜಿಲ್ಲಾ ಕೇಂದ್ರವಾಗಿ ಮಾಡಲಾಗುವುದು ಎನ್ನುವ ಬಗ್ಗೆ ಸುದ್ದಿಗಳು ಬರುತ್ತಿವೆ. ಇದು ಸಾಗರದ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಸರ್ಕಾರದ ಪ್ರಮುಖ ಸ್ಥಾನದಲ್ಲಿ ಇರುವವರು ಈ ಬಗ್ಗೆ ಈವರೆಗೂ ಸ್ಪಷ್ಟೀಕರಣ ನೀಡಿಲ್ಲ. ಹೀಗಾಗಿ, ಉಪ ಮುಖ್ಯಮಂತ್ರಿ ಬಳಿ ಈ ವಿಷಯ ಚರ್ಚಿಸುವುದು ಸೂಕ್ತ ಎಂದರು.

ಮತ್ತೊಬ್ಬ ಸದಸ್ಯೆ ಶರಾವತಿ ಸಿ. ರಾವ್ ಮಾತನಾಡಿ, ನೂತನ ಜಿಲ್ಲಾ ಕೇಂದ್ರ ರಚನೆ ಆಗುವುದಾದರೆ ಸಾಗರಕ್ಕೆ ಮೊದಲ ಆದ್ಯತೆ ಸಿಗಬೇಕು ಎಂದು ಕೇಳುವುದರಲ್ಲಿ ಅರ್ಥವಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಐ.ಎನ್. ಸುರೇಶ್‌ಬಾಬು ಮಾತನಾಡಿ, ನಗರಸಭೆ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಂಡಿರುವ ಭೂಮಿಗೆ ಹಣ ಪಾವತಿ ಮಾಡುವ ವಿವಿಧ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇದಕ್ಕೆ ಅಗತ್ಯವಿರುವ ಹಣವನ್ನು ನಗರಸಭೆ ಪಾವತಿಸಲು ಸರ್ಕಾರದ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಡಿಸಿಎಂಗೆ ಒತ್ತಾಯಿಸೋಣ ಎಂದು ಸಲಹೆ ನೀಡಿದರು.

ಸದಸ್ಯ ಟಿ.ಡಿ. ಮೇಘರಾಜ್ ಮಾತನಾಡಿ, ತಾಳಗುಪ್ಪ-ಬೆಂಗಳೂರು ನಡುವೆ ಶೀಘ್ರ ರೈಲು ಸಂಚಾರ ಆರಂಭ, ಶ್ರೀನಗರ ಬಡಾವಣೆ ಹಾಗೂ ಭದ್ರಕಾಳಿ ದೇವಸ್ಥಾನದ ರಸ್ತೆಯಲ್ಲಿ ರೈಲ್ವೆ ಮೇಲ್‌ಸೇತುವೆ ನಿರ್ಮಾಣ ಕುರಿತು ಡಿಸಿಎಂಗೆ ಮನವಿ ಸಲ್ಲಿಸೋಣ ಎಂದರು.

ಸದಸ್ಯ ಎಸ್.ವಿ. ಕೃಷ್ಣಮೂರ್ತಿ ಮಾತನಾಡಿ, ಸಾಗರ ನಗರಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡುವಂತೆ, ಶ್ರೀಗಂಧ ಕರಕುಶಲಕರ್ಮಿ ಶ್ರೀಗಂಧದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಪುನರ್ವಸತಿಗೆ ವಿಶೇಷ ಯೋಜನೆ ರೂಪಿಸುವಂತೆ ಆಗ್ರಹಿಸೋಣ ಎಂದು ಹೇಳಿದರು.

ಸದಸ್ಯರ ಅಭಿಪ್ರಾಯದಂತೆ ಉಪ ಮುಖ್ಯಮಂತ್ರಿಗಳಿಗೆ ಪೌರ ಸನ್ಮಾನ ಸಲ್ಲಿಸಿ ಮನವಿ ಸಲ್ಲಿಸೋಣ. ಸನ್ಮಾನ ಸಮಾರಂಭಕ್ಕೆ ವಿವಿಧ ಪಕ್ಷಗಳು ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸೋಣ ಎಂದು ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಹೇಳಿದರು. ಉಪಾಧ್ಯಕ್ಷ ಡಿ. ರವಿ, ಪೌರಾಯುಕ್ತ ನರಸಿಂಹಮೂರ್ತಿ ಹಾಜರಿದ್ದರು.

ಸಾಗರಕ್ಕೆ ಇಂದು ಡಿಸಿಎಂ ಕೆ.ಎಸ್. ಈಶ್ವರಪ್ಪ

ಸಾಗರ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಆ. 6ರಂದು ನಗರಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 7.30ಕ್ಕೆ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಅವರು ಭೇಟಿ ನೀಡಲಿದ್ದಾರೆ. 9ಕ್ಕೆ ನಗರಸಭಾ ಆವರಣದಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 9.30ಕ್ಕೆ ನಗರಸಭೆ ವತಿಯಿಂದ ಈಶ್ವರಪ್ಪ ಅವರಿಗೆ ಪೌರ ಸನ್ಮಾನ ಏರ್ಪಡಿಸಲಾಗಿದೆ.

ಬೆಳಿಗ್ಗೆ 10.30ಕ್ಕೆ ವರದಶ್ರೀ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಈಶ್ವರಪ್ಪ ಭಾಗವಹಿಸಲಿದ್ದಾರೆ. 11ಕ್ಕೆ ಶೃಂಗೇರಿ ಶಂಕರ ಮಠದಲ್ಲಿ ನಡೆಯಲಿರುವ ಶತ ಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT