ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಗ್ರಾಮಾಭಿವೃದ್ಧಿ ಯೋಜನೆ

Last Updated 21 ಜನವರಿ 2011, 9:10 IST
ಅಕ್ಷರ ಗಾತ್ರ

ತುಮಕೂರು: ಗ್ರಾಮೀಣ ಕೃಷಿಕರು ಮತ್ತು ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಆರಂಭವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಜಿಲ್ಲೆಗೂ ವಿಸ್ತರಣೆಯಾಗಿದೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯೋಜನೆಗೆ ಗುರುವಾರ ನಗರದಲ್ಲಿ ವಿಧ್ಯುಕ್ತ ಚಾಲನೆ ನೀಡಿದರು.

ನಂತರ ಮಾತನಾಡಿದ ಹೆಗ್ಗಡೆಯವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಈಗಾಗಲೇ ಯೋಜನೆ ಕಾರ್ಯ ಆರಂಭಿಸಿ, ಯಶಸ್ವಿಯಾಗಿ ನಡೆಯುತ್ತಿದೆ. 1.18 ಲಕ್ಷ ಸಂಘಗಳನ್ನು ರಚಿಸಿ, 13,37,601 ಕುಟುಂಬಗಳು ವಾರಕ್ಕೆ 10 ರೂಪಾಯಿಯಂತೆ ಉಳಿತಾಯ ಮಾಡಿರುವ ಹಣವೇ ರೂ. 278 ಕೋಟಿ ಆಗಿದೆ. ಅಲ್ಲದೆ ಈವರೆಗೆ ರೂ. 919 ಕೋಟಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯೂ ಶೇಕಡ ನೂರಷ್ಟು ಇದೆ.   ಮಹಿಳೆಯರು ಉಳಿತಾಯ ಮಾಡುವುದರಲ್ಲಿ ಜಾಗೃತರಾದರೆ ಪರಿವರ್ತನೆ ಸುಲಭ ಎಂದು ತಿಳಿಸಿದರು.

ಬಡತನ ಎನ್ನುವುದು ಶಾಶ್ವತವಲ್ಲ. ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಒಳ್ಳೆಯ ಯೋಜನೆಗಳನ್ನು ಆರಂಭಿಸಿವೆ. ಆದರೆ, ಅವು ಅರ್ಹರನ್ನು ತುಲುಪುವಲ್ಲಿ ವಿಫಲವಾಗಿವೆ. ರೈತರ ಸಾಲ ಮನ್ನಾ ಮಾಡುವುದು ವ್ಯವಹಾರ ಧರ್ಮ ತಪ್ಪುವಂತೆ ಮಾಡುತ್ತದೆ. ಸಾಲ, ಸೌಲಭ್ಯ ಒದಗಿಸುವುದು ಮುಖ್ಯವಲ್ಲ, ಒದಗಿಸಿದ ಸಾಲ ಸದ್ಬಳಕೆ ಕೂಡ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಒದಗಿಸುವ ‘ಪ್ರಗತಿ ನಿಧಿ’ ಸರಿಯಾದ ರೀತಿಯಲ್ಲಿ ಸದುಪಯೋಗವಾಗುವಂತೆ ನಿಗಾವಹಿಸಲಾಗುತ್ತದೆ ಎಂದರು.

ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಸೊಗಡು ಶಿವಣ್ಣ, ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಶಫಿ ಅಹಮದ್, ಧರ್ಮ ಸ್ಥಳದ ಸೇವಾ ಕಾರ್ಯ ಮತ್ತು ಗ್ರಾಮೀಣ ಜನರ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT