ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಿಲ್ಲೆಗೆ ಶೈಕ್ಷಣಿಕ ಸಾಧನೆಯ ಗರಿ ಮೂಡಲಿ'

Last Updated 6 ಸೆಪ್ಟೆಂಬರ್ 2013, 6:53 IST
ಅಕ್ಷರ ಗಾತ್ರ

ಮಡಿಕೇರಿ: ಮುಂಬರುವ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕೊಡಗು ಜಿಲ್ಲೆ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವತ್ತ ಶಿಕ್ಷಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತಕಂಡಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶದಲ್ಲಿ ಇನ್ನಷ್ಟು ಉತ್ತಮ ಸಾಧನೆಗೆ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಅವರು ಕರೆ ನೀಡಿದರು.

ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಶಿಕ್ಷಕರು ಪ್ರತಿಭಟನೆ ಮಾಡುವುದು ಸಮಂಜಸವಲ್ಲ. ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ತೀತಿರ ಮಣಿನಂಜಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖಸ್ಥ ಶ್ರಿಧರ ಹೆಗಡೆ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಓ ಕೆ.ಬಿ.ಅಂಜನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀನಾ ಜಗನ್ನಾಥ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರಿಮೂರ್ತಿ, ಸರ್ವ ಶಿಕ್ಷಣ ಅಭಿಯಾನ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್  ಇದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಿ.ಎಚ್.ಬಸವರಾಜು ಸ್ವಾಗತಿಸಿದರು. ಮೂರ್ನಾಡು ಶಾಲೆಯ ಶಿಕ್ಷಕಿಯರು ನಾಡಗೀತೆ ಹಾಡಿದರು. ಮಡಿಕೇರಿ ಕ್ಲಸ್ಟರ್ ಶಿಕ್ಷಕಿಯರು ರೈತಗೀತೆ ಹಾಡಿದರು. ಶಿಕ್ಷಕರಾದ ಪೆರಾಜೆ ಮೋಹನ್, ಅನಿತಾ ನಿರೂಪಿಸಿದರು. 

`ವ್ಯಾಪಾರೀಕರಣವಾದ ಶಿಕ್ಷಣ'
ಶಿಕ್ಷಣ ಇಂದು ಸೇವೆಯಾಗಿ ಉಳಿಯದೆ, ವ್ಯಾಪಾರೀಕರಣವಾಗಿದೆ ಎಂದು ಸಮಾನಶಿಕ್ಷಣ ಜನಾಂದೋಲನ ಸಮಿತಿಯ ಡಾ. ವಾಸು ವಿಷಾದ ವ್ಯಕ್ತಪಡಿಸಿದರು.

ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಹಿಂದೆ ಸೇವೆಗಾಗಿ ಶಿಕ್ಷಣ ಕಲಿಸುವ ವ್ಯವಸ್ಥೆ ಇತ್ತು. ಆದರೆ, ಇಂದು ಖಾಸಗೀಕರಣದ ಪ್ರಭಾವದಿಂದಾಗಿ ಶಿಕ್ಷಣ ದೊಡ್ಡ ವ್ಯಾಪಾರವಾಗಿ ಹೊರಹೊಮ್ಮುತ್ತಿದೆ. ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆ ಎದ್ದು ಕಾಣುತ್ತಿದೆ. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಶಿಕ್ಷಣ ಕ್ಷೇತ್ರದ ಸುಧಾರಣೆ ಸಾಧ್ಯ.  ಈ ಬಗ್ಗೆ ಜನಾಂದೋಲನ ರೂಪಿಸುವ ಮೂಲಕ ಸಮಾಜದ ಎಲ್ಲ ವರ್ಗದವದ ಮಕ್ಕಳು ಒಂದೇ ಕಡೆ ಶಿಕ್ಷಣ ಪಡೆಯುವಂತಾಗಬೇಕು ಎಂದರು.

ಇಂದು ಸರ್ಕಾರದ ಕೆಲವು ನೀತಿಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು, ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಶಿಕ್ಷಕರ ಮೇಲೆ ಶಿಕ್ಷಣೇತರ ಜವಾಬ್ದಾರಿಯನ್ನು ಹೊರಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ದೇಶದ ಉನ್ನತ ಅಧಿಕಾರಿಗಳು ಮತ್ತು ಕಾರ್ಪೊರೇಟ್ ವಲಯದ ಪ್ರಭಾವದಿಂದಾಗಿ ಶಿಕ್ಷಣವು ಬಹುದೊಡ್ಡ ಉದ್ದಿಮೆಯಾಗಿ ರೂಪುಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಸಮರ್ಥ ಜ್ಞಾನವುಳ್ಳ ಶಿಕ್ಷಕರಿಂದ ಮಾತ್ರ ಸಾಧ್ಯ. ಎಲ್ಲಾ ವರ್ಗದ ಜನರಿಗೂ ಶಿಕ್ಷಣ ತಲುಪಬೇಕಾದರೆ ಅದು ಸುಶಿಕ್ಷಿತ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ. ಸೋಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರರಾಜೇ ಅರಸ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಟಿ. ದಯಾನಂದ ಪ್ರಕಾಶ್, ಕಾರ್ಯದರ್ಶಿ ಎನ್. ವೆಂಕಟನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಪ್ರಕಾಶ್, ಕಾರ್ಯದರ್ಶಿ ಹೆಚ್.ಎನ್. ಮಂಜುನಾಥ್ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜನ್ಮದಿನೋತ್ಸವ :
ಸಮೀಪದ ಯಡೂರು ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ  ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಗುರುವಾರ ನಡೆಯಿತು.

ಕಾಲೇಜು ಪ್ರಾಂಶುಪಾಲ ಪ್ರೊ. ಸದಾಶಿವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಚ್.ಎನ್. ರಮೇಶ್, ಪ್ರೊ. ಬಸವರಾಜು ಹಾಗೂ ತೃತೀಯ ಬಿ.ಕಾಂ ವಿದ್ಯಾರ್ಥಿನಿ ದಿವ್ಯಾ ಶಿಕ್ಷಕರ ದಿನದ ಮಹತ್ವದ ಬಗ್ಗೆ ಮಾತನಾಡಿದರು.

`ಅಕ್ಷರ ಕಲಿಸಿದವರನ್ನು ಸ್ಮರಿಸಿ'
ಅಕ್ಷರ ಕಲಿಸಿ ಉತ್ತಮ ಬದುಕಿನೆಡೆಗೆ ದಾರಿ ತೋರಿಸುವ ಗುರುವನ್ನು    ಸ್ಮರಿಸಿಕೊಳ್ಳಬೇಕಾದುದು ಪ್ರತಿಯೊಬ್ಬ ಅಕ್ಷರಸ್ಥರ ಪ್ರಮುಖ ಕರ್ತವ್ಯ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ವಿ. ಶ್ರೀಮೂರ್ತಿ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಹೇಳಿದರು
ಹಿರಿಯ ಉಪನ್ಯಾಸಕಿ ಕೆ.ಪಿ. ಪೊನ್ನಮ್ಮ ಮಾತನಾಡಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಉತ್ತಮ ಹೆಸರು ಗಳಿಸಿದರೆ ಅದೇ ಗುರುಗಳಿಗೆ ನೀಡುವ  ಶ್ರೇಷ್ಠ ಗುರುಕಾಣಿಕೆ ಎಂದರು.

ಉಪನ್ಯಾಸಕರಾದ ಕೆ.ಜಿ. ಅಶ್ವಿನಿಕಮಾರ್, ಎನ್.ಕೆ. ಪ್ರಭು, ಪ್ರತಿಭಾ ಉತ್ತಪ್ಪ ಮಾತನಾಡಿದರು. ಡಾ.ಜೆ. ಸೋಮಣ್ಣ ಪ್ರಾಸ್ತಾವಿಕ ಮಾತನಾಡಿದರು.

ಚಿತ್ರಾ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕರಾದ ಎನ್.ಎಸ್. ಚೈತ್ರಾ ಸ್ವಾಗತಿಸಿದರು. ರೋಹಿಣಿ ವಂದಿಸಿದರು. ಶ್ರೀಧನ್ಯ ನಿರೂಪಿಸಿದರು. 

`ನಿರಂತರ ಅಧ್ಯಯನ ಅಗತ್ಯ'
ಶಿಕ್ಷಕರು ಜೀವನದಾದ್ಯಂತ ವಿದ್ಯಾರ್ಥಿಗಳಾಗಿದ್ದು, ನಿರಂತರವಾಗಿ ಪ್ರಚಲಿತ ವಿದ್ಯಮಾನಗಳ ಅಧ್ಯಯನದಲ್ಲಿ ತೊಡಗಿದರೆ ಮಾತ್ರ ಡಾ. ರಾಧಾಕೃಷ್ಣನ್ ಅವರಂತೆ ನುರಿತ ತರಬೇತುದಾರರಾಗಲು ಸಾಧ್ಯ ಎಂದು ಚೆಶೈರ್ ಹೋಂ ಅಂಗವಿಕಲ ವಿದ್ಯಾರ್ಥಿಗಳ ಶಾಲೆಯ ಮುಖ್ಯ ಶಿಕ್ಷಕ ಶಿವರಾಜ್.ಎಸ್. ಚಂದ್ರಶೇಖರ್ ಹೇಳಿದರು.

ಇಲ್ಲಿಗೆ ಸಮೀಪದ ಪಾಲಿಬೆಟ್ಟದಲ್ಲಿ ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾಗಿರುವ ಚೆಶೈರ್ ಹೋಂ ವಿದ್ಯಾಲಯದಲ್ಲಿ ಅಧ್ಯಾಪಕರ ದಿನಾಚರಣೆಯ ಅಂಗವಾಗಿ ಪೋಷಕರ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನಿಗಳು, ಸಮರ್ಥರು, ಕಳಂಕರಹಿತರು ಎಂಬ ಕಾರಣಕ್ಕಾಗಿಯೇ ಸರ್ಕಾರ ಅಧ್ಯಾಪಕರನ್ನು ಜವಾಬ್ದಾರಿಯುತ ಕೆಲಸಗಳಾದ ಜನಸಂಖ್ಯಾ ಗಣತಿ, ಚುಣಾವಣಾ ಪ್ರಕ್ರಿಯೆ ಮುಂತಾದ ವಿಶೇಷ ಯೋಜನೆಗಳಿಗೆ ನಿಯೋಜನೆ ಮಾಡುತ್ತಿದೆ. ಇದು ಅಧ್ಯಾಪಕ ವೃಂದಕ್ಕೆ ಹೆಮ್ಮೆ ತರುವಂತದ್ದು ಎಂದು ಹೇಳಿದರು.

ಇತರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಲಭಿಸುವ ದಾಸೋಹದ ಕಾರ್ಯಕ್ರಮವನ್ನು ಚೆಶೈರ್ ಹೋಂ ವಿದ್ಯಾಲಯಕ್ಕೂ ವಿಸ್ತರಿಸುವಂತೆ ಶಿವರಾಜ್ ಮನವಿ ಮಾಡಿದರು.

ಡಾ.ವಾಸು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾಲಿಬೆಟ್ಟ ಐಒಬಿ ಬ್ಯಾಂಕ್ ವ್ಯವಸ್ಥಾಪಕ ಪಾಧಿ, ಸಂಸ್ಥೆಯ ಗೌರವ ಕಾರ್ಯದರ್ಶಿ ಗೀತಾ ಚಂಗಪ್ಪ, ಸದಸ್ಯರಾದ ಎ.ಸಿ. ಗಣಪತಿ, ಕುಶಿ ಕಾರ್ಯಪ್ಪ, ಸಂಸ್ಥೆಯ ಸ್ವಯಂ ಸೇವಕರಾದ ನಿಶಾ, ಪಂಜು, ಲೀನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT