ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 160 ಗ್ರಾಮಗಳ ಆಯ್ಕೆ

ಕುಡಿಯುವ ನೀರಿನ ಶುದ್ಧೀಕರಣ ಯೋಜನೆ
Last Updated 14 ಡಿಸೆಂಬರ್ 2013, 8:13 IST
ಅಕ್ಷರ ಗಾತ್ರ

ಮಂಡ್ಯ: ಅಧಿಕ ಫ್ಲೋರೈಡ್ ಇರುವ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಕುಡಿಯುವ ನೀರಿನ ಶುದ್ಧೀಕರಣ ಯೋಜನೆ’ಗೆ ಜಿಲ್ಲೆಯಲ್ಲಿ ಒಟ್ಟು 160 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಜನವಸತಿ ಪ್ರದೇಶದ ಜನಸಂಖ್ಯೆ ಆಧರಿಸಿ ಒಟ್ಟು 160 ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಒಂದು ರೂಪಾಯಿಗೆ 10 ಲೀ. ಶುದ್ಧ ಕುಡಿಯುವ ನೀರು ದೊರೆಯಲಿದೆ.

ಬಹುಗ್ರಾಮ ಯೋಜನೆಯಡಿ ನೀರು ಪಡೆಯುತ್ತಿರುವ ಗ್ರಾಮಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಮಂಡ್ಯ ತಾಲ್ಲೂಕಿನಲ್ಲಿ 49, ನಾಗಮಂಗಲದಲ್ಲಿ 46, ಕೃಷ್ಣರಾಜಪೇಟೆಯಲ್ಲಿ 22, ಮಳವಳ್ಳಿಯಲ್ಲಿ 17, ಪಾಂಡವಪುರದಲ್ಲಿ 12, ಮದ್ದೂರಿನಲ್ಲಿ 10 ಹಾಗೂ ಶ್ರೀರಂಗಪಟ್ಟಣದಲ್ಲಿ 4 ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಗುರುತಿಸಲಾಗಿರುವ ಜನವಸತಿಗಳಲ್ಲಿ ಫ್ಲೋರೈಡ್‌, ಐರನ್‌ ಮತ್ತು ನೈಟ್ರೇಟ್‌ ಲವಣಾಂಶಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ ಎನ್ನುವ ವರದಿ ಆಧರಿಸಿ, ಈ ಗ್ರಾಮಗಳನ್ನು ಯೋಜನೆಗೆ ಪರಿಗಣಿಸಲಾಗಿದೆ.

160 ನೀರಿನ ಶುದ್ಧೀಕರಣ ಘಟಕಗಳ ಪೈಕಿ 500 ಲೀ. ಸಾಮರ್ಥ್ಯದ 124, 1 ಸಾವಿರ ಲೀ. ಸಾಮರ್ಥ್ಯದ 26,  2 ಸಾವಿರ ಲೀ. ಸಾಮರ್ಥ್ಯದ 8 ಹಾಗೂ 4 ಸಾವಿರ ಲೀ. ಸಾಮರ್ಥ್ಯದ 2 ಘಟಕಗಳು ಸೇರಿವೆ.

ಕುಡಿಯುವ ನೀರಿನ ಶುದ್ಧೀಕರಣ ಸಂರಕ್ಷಣಾ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಕರ್ನಾಟಕ ರೂರಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲಪ್‌ಮೆಂಟ್‌ ಲಿಮಿಟೆಡ್‌ಗೆ (ಕೆಆರ್‌ಐಡಿಎಲ್‌) ವಹಿಸಲಾಗಿದೆ. ಇದಕ್ಕಾಗಿ ಪ್ರತಿ ಘಟಕಕ್ಕೆ ತಲಾ 4 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.

‘ಯೋಜನೆಗೆ ಆಯ್ಕೆಯಾಗಿರುವ ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಸಂರಕ್ಷಣಾ ಕಟ್ಟಡ ನಿರ್ಮಾಣ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ. ಶೇ 97ರಷ್ಟು ಸ್ಥಳಗಳಲ್ಲಿ ಅಡಿಪಾಯದ ಕೆಲಸ ಮುಗಿದಿದೆ’ ಎಂದು ಯೋಜನೆಯ ನೋಡೆಲ್‌ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ (ಅಭಿವೃದ್ಧಿ) ಬಿ.ಆರ್‌. ಪೂರ್ಣಿಮಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆಯನ್ನು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಗೆ(ಪಿಆರ್‌ಇಡಿ) ವಹಿಸಲಾಗುವುದು. 2014ರ ಜ.14ರಂದು ಕೆಲ ಘಟಕಗಳ ಕಾರ್ಯಾಚರಣೆ ಆರಂಭಿಸಲಿವೆ. ಫೆಬ್ರುವರಿ ವೇಳೆಗೆ ಎಲ್ಲ ಘಟಕಗಳಲ್ಲೂ ಶುದ್ಧ ಕುಡಿಯುವ ನೀರು ದೊರೆಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT