ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 64 ಹಳ್ಳಿಗಳಲ್ಲಿ ಸೋಲಾರ್ ಸೆನ್ಸರ್ ಸ್ವಿಚ್ ಅಳವಡಿಕೆ

Last Updated 1 ಜುಲೈ 2012, 8:05 IST
ಅಕ್ಷರ ಗಾತ್ರ

ಹಾಸನ: `ವಿದ್ಯಾನಗರದ ಹೊಯ್ಸಳ ಬಡಾವಣೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಸೋಲಾರ್ ಸೆನ್ಸರ್ ಸ್ವಿಚ್ (ಫೋಟೋ ವೋಲ್ಟಿಕ್ ಸ್ವಿಚ್) ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಶೇ 9 ರಷ್ಟು ವಿದ್ಯುತ್ ಉಳಿತಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 64 ಹಳ್ಳಿಗಳಲ್ಲಿ ಈ ಸ್ವಿಚ್‌ಗಳನ್ನು ಅಳವಡಿಸಲು ಜಿಲ್ಲಾ ಪಂಚಾಯಿತಿ ತೀರ್ಮಾನಿಸಿದೆ~ ಎಂದು ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ಹಾಸನ ನಗರಸಭೆಯಲ್ಲಿ ಒಟ್ಟು 7512 ಬೀದಿ ದೀಪಗಳಿವೆ. ಎಲ್ಲ ದೀಪಗಳಿಗೆ ಈ ವ್ಯವಸ್ಥೆ ಅಳವಡಿ ಸಲು ಸುಮಾರು 50ರಿಂದ 75ಸಾವಿರ ರೂಪಾಯಿ ವೆಚ್ಚ ಬರಬಹುದು. ಆದರೆ ಒಂದು ವರ್ಷದಲ್ಲಿ ಕನಿಷ್ಠ ಎಂದರೂ ಒಂದು ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. ಗ್ರಾಮಿಣ ಪ್ರದೇಶಕ್ಕಿಂತ ಪಟ್ಟಣಗಳಿಗೆ ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗುತ್ತದೆ. ಈ ಬಗ್ಗೆ ನಗರಸಭೆಯ ಆಯುಕ್ತರಿಗೆ ಸಲಹೆ ನೀಡಿದ್ದೇನೆ ಎಂದು ಸತ್ಯನಾರಾಯಣ ತಿಳಿಸಿದರು.

`ಸುಜಲ-2 ಆರ್‌ಐಡಿಎಫ್~ (ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಧಿ) ಯೋಜನೆಯಡಿ ಸುಮಾರು ಐದು ಲಕ್ಷ ರೂಪಾಯಿ ಬಂದಿದ್ದು, ಆ ಹಣದಲ್ಲಿ 64 ಗ್ರಾಮಗಳಲ್ಲಿ ಈ ಯೋಜನೆ ಅಳವಡಿಸಲು ತೀರ್ಮಾನಿಸಿದ್ದೇವೆ ಎಂದರು.

ಏನಿದು ಸೋಲಾರ್ ಸ್ವಿಚ್?: ಹೊರಗಿನ ಬೆಳಕನ್ನು ತಾನಾ ಗಿಯೇ ಗ್ರಹಿಸಿಕೊಂಡು ಸಕಾಲಕ್ಕೆ ಸ್ವಯಂಚಾಲಿತವಾಗಿ ಬೀದಿ ದೀಪಗಳನ್ನು ಆನ್ ಹಾಗೂ ಆಫ್ ಮಾಡುವ ಉಪಕರಣ ವಿದು. ಬೀದಿ ದೀಪಗಳ ಸ್ವಿಚ್‌ಗಳಿಗೆ ಈ ಸೆನ್ಸರ್ ಅಳವಡಿಸಿ ದರೆ ಕತ್ತಲಾದಾಗ (ಸೂರ್ಯನ ಬೆಳಕಿನ ಪ್ರಮಾಣ ಒಂದು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದಾಗ) ಈ ಸ್ವಿಚ್ ತಾನಾ ಗಿಯೇ ಬೀದಿ ದೀಪಗಳನ್ನು ಆನ್ ಮಾಡುತ್ತದೆ. ಮುಂಜಾನೆ ಸೂರ್ಯೋದಯವಾದಾಗ ದೀಪಗಳು ತಾವಾಗಿಯೇ ಆರುತ್ತವೆ.

ಈಗ ಲೈನ್‌ಮನ್‌ಗಳು ಎಲ್ಲ ಬೀದಿಗೆ ಹೋಗಿ ಸ್ವಿಚ್ ಆನ್ ಮಾಡುವ ವ್ಯವಸ್ಥೆ ಇದೆ. ಈ ಸಮಯದಲ್ಲಿ ಸಂಜೆ 7 ಗಂಟೆ ವರೆಗೂ ಸಾಕಷ್ಟು ಬೆಳಕಿದ್ದರೂ, ಲೈನ್‌ಮನ್‌ಗಳು ಸಂಜೆ 6 ಗಂಟೆಗೇ ದೀಪಗಳನ್ನು ಆನ್ ಮಾಡುತ್ತಾರೆ. ಬೆಳಿಗ್ಗೆ ಅವರು ಪ್ರತಿ ಬೀದಿಗೆ ಹೋಗಿ ದೀಪ ಆರಿಸುವಾಗ ತಡವಾಗುತ್ತದೆ. ತಾನಾಗಿಯೇ ದೀಪ ಉರಿಯುವ/ಆರುವ ವ್ಯವಸ್ಥೆ ಮಾಡಿ ದರೆ ನಿತ್ಯ ಕನಿಷ್ಠ 2 ಗಂಟೆ ವಿದ್ಯುತ್ ವ್ಯರ್ಥವಾಗುವು ದನ್ನು ಉಳಿಸಬಹುದು ಎಂದು ಸತ್ಯನಾರಾಯಣ ತಿಳಿಸುತ್ತಾರೆ.

5 ಕೆ.ವಿ. ಸಾಮರ್ಥ್ಯದ ಒಂದು ಸೋಲಾರ್ ಸೆನ್ಸರ್ ಸ್ವಿಚ್‌ನ ಬೆಲೆ ಕೇವಲ 1500 ರೂಪಾಯಿ ಇದ್ದು, ಇದರಿಂದ ಸುಮಾರು 120 ಟ್ಯೂಬ್‌ಲೈಟ್‌ಗಳನ್ನು ನಿಯಂತ್ರಿಸಬ ಹುದು. ಅಗತ್ಯವಿದ್ದರೆ ಹೆಚ್ಚಿನ ಸಾಮರ್ಥ್ಯದ ಸ್ವಿಚ್‌ಗಳನ್ನೂ ಅಳವಡಿಸಬಹುದು. ಸ್ಥಳೀಯ ಖಾಸಗಿ ಸಂಸ್ಥೆಯೊಂದು ಇದನ್ನು ಉತ್ಪಾದಿಸಿ ಕೊಡುತ್ತಿದೆ ಎಂದರು.

200 ಕಡೆ ಮರುಪೂರಣ: ಹಾಸನ ತಾಲ್ಲೂಕಿನಲ್ಲಿ ಜಿಲ್ಲಆ ಪಂಚಾಯಿತಿ ವತಿಯಿಂದ ಈಗಾಗಲೇ ಒಂದು ಕೊಳವೆ ಬಾವಿಗೆ ನೀರು ಮರುಪೂರಣ ವ್ಯವಸ್ಥೆ ಮಾಡಿದ್ದೇವೆ. ಉದ್ಯೋಗ ಖಾತ್ರಿ ಯೋಜನೆಯಡಿ ಇಂಥ ಇನ್ನಷ್ಟು ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಈ ವರ್ಷ ಜಿಲ್ಲೆಯ ವಿವಿಧೆಡೆ 200 ಕೊಳವೆಬಾವಿಗಳಿಗೆ ಈ ವ್ಯವಸ್ಥೆ ಅಳವಡಿಸಲಾಗುವುದು. ಈ ಬಗ್ಗೆ ಕೇಂದ್ರದ ಪರಿಸರ ಖಾತೆ ಸಚಿವರಿಗೂ ಪತ್ರ ಬರೆದಿದ್ದು, ಚೆಕ್‌ಡ್ಯಾಮ್‌ಗಳ ಬದಲು ಈ ವ್ಯವಸ್ಥೆಗೆ ಹಣ ಒದಗಿಸುವಂತೆ ಮನವಿ ಮಾಡಿದ್ದೇವೆ ಎಂದರು.

ಶಿಕ್ಷಕರಿಗೆ ತರಬೇತಿ: ಪ್ರಸಕ್ತ ಸಾಲಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಸೆಂಟ್ರಲ್ ಸಿಲೆಬಸ್ ಅಳವಡಿಸಿರುವುದರಿಂದ ಗಣಿತ ವಿಷಯ ಮಕ್ಕಳಿಗೆ ಕಠಿಣವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಗಣಿತ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಜಿ.ಪಂ ತೀರ್ಮಾನಿಸಿದೆ.

ಜು. 2ರಂದು ಕಂದಲಿಯ ಮೊರಾರ್ಜಿ ಸ್ಕೂಲ್‌ನಲ್ಲಿ ಹಾಸನ ಮತ್ತು ಆಲೂರು ತಾಲ್ಲೂಕಿನ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಇದಾದ ಬಳಿಕ ಜು. 3ರಂದು ಚನ್ನರಾಯ ಪಟ್ಟಣ ಮೊರಾರ್ಜಿ ಸ್ಕೂಲ್‌ನಲ್ಲಿ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳ ಶಿಕ್ಷಕರು, 4ರಂದು ಅರಕಲಗೂಡು ಮೊರಾರ್ಜಿ ಸ್ಕೂಲ್‌ನಲ್ಲಿ ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕು ಶಿಕ್ಷಕರಿಗೆ ಮತ್ತು ಜು. 5ರಂದು ಕಂದಲಿಯ ಮೊರಾರ್ಜಿ ಸ್ಕೂಲ್‌ನಲ್ಲಿ ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕಿನ ಗಣಿತ ಶಿಕ್ಷಕರಿಗೆ ತರಬೇತಿ ಆಯೋಜಿಸಲಾಗುವುದು. ಪಠ್ಯಪುಸ್ತಕ ಸಿದ್ಧಪಡಿಸಿದವರೇ ಬಂದು ತರಬೇತಿ ನೀಡಲಿದ್ದಾರೆ ಎಂದರು.

ಕಳೆದ ವರ್ಷ ಕಡಿಮೆ ಫಲಿತಾಂಶ ಬಂದ ಜಿಲ್ಲೆಯ 110  ಶಾಲೆಗಳಲ್ಲಿ ಸಿ.ಡಿ ಗಳ ಮೂಲಕ ಪಾಠ ಮಾಡುವ ವ್ಯವಸ್ಥೆ ಜಾರಿ ಮಾಡಿದ್ದೆವು. ಅದು ಉತ್ತಮ ಫಲಿತಾಂಶ ನೀಡಿದ್ದು, ಈ ವರ್ಷ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೂ ಈ ಸೌಲಭ್ಯ ವಿಸ್ತರಿಸಲಾಗುವುದು ಎಂದು ಸತ್ಯನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT