ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಸಿಐಟಿಯು ಮುತ್ತಿಗೆ: ಬಂಧನ

Last Updated 20 ಡಿಸೆಂಬರ್ 2012, 9:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸದಸ್ಯರು ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   
   
ಸಿಐಟಿಯು ಸಂಘಟನೆಯ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ರೂ.10 ಸಾವಿರ  ನೀಡಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿರುವ ಕಾರ್ಮಿಕರ ಉದ್ಯೋಗವನ್ನು ಕಾಯಂ ಗೊಳಿಸ ಬೇಕು ಎಂದು ಒತ್ತಾಯಿಸಿದರು.    
   
ಗುತ್ತಿಗೆ ದಿನಗೂಲಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಗ್ರಾಮ ಪಂಚಾಯತಿ ನೌಕರರಿಗೆ ರಾಜ್ಯಸರ್ಕಾರ ಪ್ರಕಟಿಸಿದ ಕನಿಷ್ಠ ವೇತನ ಜಾರಿಗೊಳಿಸಬೇಕು. ಪ್ರತಿ ತಿಂಗಳಿಗೆ ಒಂದರಂತೆ ವರ್ಷಕ್ಕೆ ಹನ್ನೆರಡು ಗ್ಯಾಸ್ ಸಿಲಿಂಡರ್ ನೀಡಬೇಕು.

ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ತರುವುದನ್ನು ತಡೆಯಬೇಕು. ಸರ್ಕಾರದ ಯೋಜನೆಗಳಲ್ಲಿ ದುಡಿಯುವ ನೌಕರರನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.   ತಾಲ್ಲೂಕು ಅಕ್ಷರ ದಾಸೋಹ ಸಂಘದ ಪ್ರಮಿಳಾ, ಮಂಜುಳಾ, ಎಂ.ಕೃಷ್ಣ, ಭಾರತಿ ಇತರರು ಉಪಸ್ಥಿತರಿದ್ದರು.

ಉದ್ಯೋಗ ಭದ್ರತೆಗೆ ಆಗ್ರಹ
ಗೌರಿಬಿದನೂರು:
ಕನಿಷ್ಠ ವೇತನ ಮತ್ತು ಉದ್ಯೋಗ ಭದ್ರತೆ ಒದಗಿಸುವುದು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರು, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರು ಬುಧವಾರ ಸಿಐಟಿಯು ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಅಂಬೇಡ್ಕರ್ ವೃತ್ತ ಹಾಗೂ ನಾಗಯ್ಯರೆಡ್ಡಿ ವೃತ್ತದ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕನಿಷ್ಠ ವೇತನ, ಸೇವಾ ಭದ್ರತೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ 300ಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.  ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಸಿದ್ದಗಂಗಪ್ಪ, ತಾಲ್ಲೂಕು ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಪ್ರಾಂತ ರೈತ ಸಂಘದ ಅಧ್ಯಕ್ಷ ರವಿಚಂದ್ರರೆಡ್ಡಿ, ಅನ್ವರ್‌ಬಾಷಾ, ಶ್ರೀನಿವಾಸ್, ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ನಾರಾಯಣಮ್ಮ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ಸರಸ್ವತಮ್ಮ, ನಾಗರತ್ನಮ್ಮ, ಗಂಗರತ್ನಮ್ಮ, ಲಕ್ಷ್ಮೀದೇವಿ ಮತ್ತಿತರರು ಪಾಲ್ಗೊಂಡಿದ್ದರು.

ಕನಿಷ್ಠ ವೇತನಕ್ಕೆ ಒತ್ತಾಯ
ಬಾಗೇಪಲ್ಲಿ:
ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ  ಸಿಐಟಿಯು ನೇತೃತ್ವದಲ್ಲಿ ಬುಧವಾರ ಅಂಗನವಾಡಿ, ಆಶಾ, ಬಿಸಿ ಊಟ, ಗ್ರಾಮ ಪಂಚಾಯಿತಿ, ಟೋಲ್‌ಗೇಟ್ ನೌಕರರು, ಟೆಂಪೊ ಚಾಲಕರು ಹಾಗೂ ಹಮಾಲಿ ಅಸಂಘಟಿತ ಸದಸ್ಯರು ಜೈಲ್‌ಬರೋ ನಡೆಸಿದರು. ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.   
        
ಪಟ್ಟಣದ ಎಚ್.ಎನ್.ವೃತ್ತದಿಂದ ಹೊರಟ ನೂರಾರು ಸಿಐಟಿಯು ಕಾರ್ಯಕರ್ತರು ಮುಖ್ಯರಸ್ತೆಗಳಲ್ಲಿ ಸಂಚರಿಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ನಂತರ ರಸ್ತೆ ಸಾರಿಗೆ ಬಸ್ ನಿಲ್ದಾಣದ ಮುಂದೆ ಮಾನವ ಸರಪಳಿ ನಡೆಸಿ, ಕೆಲ ಕಾಲ ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಿಐಟಿಯು ತಾಲ್ಲೂಕು ಅಧ್ಯಕ್ಷ ವೈ.ಆರ್.ವೆಂಕಟೇಶ್‌ಬಾಬು ಮಾತನಾಡಿ `ಅಸಂಘಟಿತ ಕಾರ್ಮಿಕರಿಗೆ ಜೀವ ಭದ್ರತೆ ಹಾಗೂ ಕನಿಷ್ಠ ಮೂಲಸೌಕರ್ಯ ಕಲ್ಪಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಪಾವತಿಸಬೇಕು. ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.       
       
200ಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು. ಸಿಐಟಿಯು ತಾಲ್ಲೂಕು ಘಟಕದ ಉಪಾಧ್ಯಕ್ಷ ಆಂಜನೇಯರೆಡ್ಡಿ, ಕಾರ್ಯದರ್ಶಿ ಜಿ.ಮುಸ್ತಾಫ, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ವಿಜಯಭಾರತಿ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ರತ್ನಮ್ಮ, ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟರಾಮಯ್ಯ, ಸಹಕಾರ್ಯದರ್ಶಿ ಬಾಬುರೆಡ್ಡಿ, ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಅಧ್ಯಕ್ಷ ರಾಧಮ್ಮ, ಶಿವಾರೆಡ್ಡಿ, ವೆಂಕಟರೆಡ್ಡಿ, ಹಮಾಲಿ ಸಂಘದ ವೆಂಕಟೇಶಪ್ಪ, ಸೀನಪ್ಪ, ಬಿಸಿ ಊಟ ನೌಕರರ ಸಂಘ ಅಧ್ಯಕ್ಷ ವೆಂಕಟಲಕ್ಷ್ಮಮ್ಮ, ಗೀತಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಿಐಟಿಯು ಪ್ರತಿಭಟನೆ
ಶಿಡ್ಲಘಟ್ಟ:
ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ಕನಿಷ್ಠ ವೇತನ ರೂ. 10 ಸಾವಿರ ನಿಗದಿಪಡಿಸಬೇಕು.

ವಿದೇಶಿ ಬಂಡವಾಳ ಹೂಡಿಕೆ ನಿಲ್ಲಬೇಕು. ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಆಹಾರ ಸರಬರಾಜಾಗಬೇಕು ಎಂದು ಆಗ್ರಹಿಸಿ ಬಿಸಿಯೂಟ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ನೌಕರರ ಸಂಘದ ಸದಸ್ಯರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.

ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಮುಖಂಡರಾದ ಲಕ್ಷ್ಮೀದೇವಮ್ಮ, ಮುನೀಂದ್ರ, ಪಾಪಣ್ಣ, ಅಶ್ವತ್ಥಮ್ಮ, ಭಾಗ್ಯಮ್ಮ, ಮುನಿಲಕ್ಷ್ಮಮ್ಮ, ಶಾಂತಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT