ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ

Last Updated 10 ಏಪ್ರಿಲ್ 2013, 7:04 IST
ಅಕ್ಷರ ಗಾತ್ರ

ತುಮಕೂರು/ತಿಪಟೂರು: ಕೆಜೆಪಿ ಅಧಿಕಾರಕ್ಕೆ ಬಂದಲ್ಲಿ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವ ಮೂಲಕ ಜನರ ದಶಕಗಳ ಕನಸನ್ನು ನನಸು ಮಾಡಲಾಗುವುದು ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ತುಮಕೂರು ತಾಲ್ಲೂಕು ಗೂಳೂರಿನಲ್ಲಿ ಮಂಗಳವಾರ ನಡೆದ ಕೆಜೆಪಿ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಜೆಪಿಯನ್ನು ಗೆಲ್ಲಿಸಿದರೆ ಗ್ರಾಮಾಂತರ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ ಎಂದರು.

ಕೆಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ರೈತರ ರೂ. 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡಲಾಗುವುದು. ಭಾಗ್ಯಲಕ್ಷ್ಮೀ ಯೋಜನೆಯನ್ನು ಮಧ್ಯಮ ವರ್ಗದ ಕುಟುಂಬಗಳಿಗೂ ವಿಸ್ತರಣೆ ಮಾಡಲಾಗುವುದು. ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವೃತ್ತಿ ಶಿಕ್ಷಣ ಪಡೆಯುವ ರೈತರ ಮಕ್ಕಳ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದರು.

ಕ್ಷೇತ್ರದ ಅಭ್ಯರ್ಥಿ ಎಚ್.ನಿಂಗಪ್ಪ ಮಾತನಾಡಿ, ಯಡಿಯೂರಪ್ಪ ಅವರನ್ನು ತಂದೆ ಎಂದು ಕೊಂಡು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಪಡೆದ ಶಾಸಕ ಸುರೇಶ್‌ಗೌಡ ತಮ್ಮ ತಂದೆಯನ್ನೇ ಮರೆತಿದ್ದಾರೆ. ಮತ್ತೊಂದೆಡೆ ಹಣವಿದೆ ಎಂಬ ಕಾರಣಕ್ಕೆ ಜೆಡಿಎಸ್ ಗೌರಿಶಂಕರ್‌ಗೆ ಟಿಕೆಟ್ ನೀಡಿದೆ ಎಂದು ವಾಗ್ದಾಳಿ ನಡೆಸಿದರು.

ಈ ಕ್ಷೇತ್ರ ಅಭಿವೃದ್ಧಿ ಕಂಡಿರುವುದು ಯಡಿಯೂರಪ್ಪ ಬೆಂಬಲದಿಂದ. ತಾವು ಜೆಡಿಎಸ್‌ನಿಂದ ಮೋಸ ಹೋಗಿದ್ದು, ಯಡಿಯೂರಪ್ಪ ಬಿಜೆಪಿಯಿಂದ ಮೋಸ ಹೋದರು. ಮೋಸ ಹೋದವರ ನೋವು ಅವರಿಗೆ ಅರ್ಥವಾಗುತ್ತದೆ. ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯಕ್ಕೆ ಸಮಾನ. ರಾಜಕೀಯಕ್ಕಾಗಿ ಕೆಲವರು ತಮ್ಮನ್ನು ತಾವು ಮಣ್ಣಿನ ಮಗ ಎಂದು ಘೋಷಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಸಂಸದ ಜಿ.ಎಸ್.ಬಸವರಾಜು, ನಗರ ಕ್ಷೇತ್ರದ ಅಭ್ಯರ್ಥಿ ಜ್ಯೋತಿಗಣೇಶ್, ಜಿಲ್ಲಾ ಘಟಕದ ಅಧ್ಯಕ್ಷ ರವಿ ಹೆಬ್ಬಾಕ, ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ, ರಂಗಾನಾಯಕ್, ಕೊಪ್ಪಳ್‌ನಾಗರಾಜ್, ಚಂದ್ರಮೌಳಿ, ಹೆಬ್ಬೂರು ರಂಗಪ್ಪ ಇತರರು ಭಾಗವಹಿಸಿದ್ದರು.

ಸುರೇಶ್‌ಗೌಡ ವಿರುದ್ಧ ವಾಗ್ದಾಳಿ
ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಕೇಳಿದಷ್ಟು ಅನುದಾನ ನೀಡಿದೆ. ರಾಜ್ಯದ ಇತರ ಯಾವುದೇ ಕ್ಷೇತ್ರಕ್ಕೆ ದೊರೆಯದಷ್ಟು ಅನುದಾನವನ್ನು ಇಲ್ಲಿಗೆ ನೀಡಲಾಯಿತು. ನೀರಾವರಿ ಯೋಜನೆಗಳಿಗೆ, ಕೆರೆಕಟ್ಟೆ ತುಂಬಿಸಲು, ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಆದರೆ ಈ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ತಮ್ಮನ್ನು ಅಪ್ಪಾಜಿ, ಅಪ್ಪಾಜಿ ಎಂದು ಕೊಂಡೆ ಬೆನ್ನಿಗೆ ಚೂರಿ ಹಾಕಿದರು. ಇಂತಹ ವ್ಯಕ್ತಿಯನ್ನು ನಂಬಲು ಸಾಧ್ಯವಿಲ್ಲ. ಸಜ್ಜನರಾದ ನಿಂಗಪ್ಪ ಅವರನ್ನು ಬೆಂಬಲಿಸಬೇಕೆಂದು ಯಡಿಯೂರಪ್ಪ ಕೋರಿದರು.

ಎಚ್.ನಿಂಗಪ್ಪ ಕೆಜೆಪಿಗೆ ಸೇರಿದ್ದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಪ್ರಾಮಾಣಿಕ ರಾಜಕಾರಣಿಯಾದ ಅವರ ಅನುಭವವನ್ನು ಪಕ್ಷ ಸಂಪೂರ್ಣ ಬಳಕೆ ಮಾಡಿಕೊಳ್ಳಲಿದೆ. ಸಾಹಸ ಶೀಲರಿಗೆ ಮಾತ್ರ ಅದೃಷ್ಟ ಒಲಿಯಲಿದೆ. ಹೇಡಿಯಾಗಿ ಮನೆಯಲ್ಲಿ ಕೂರುವುದಿಲ್ಲ ಎಂದು ಅವರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT