ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಬೆಳೆ ನಷ್ಟ: ರೈತರಿಗೆ ಪರಿಹಾರ: 15 ದಿನದಲ್ಲಿ ವರದಿ ಸಲ್ಲಿಸಿ

Last Updated 19 ಅಕ್ಟೋಬರ್ 2012, 3:30 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಬರಗಾಲದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟ (ಶೇ 50ಕ್ಕೂ ಹೆಚ್ಚು ನಷ್ಟ) ಎದುರಿಸಿರುವ ರೈತರನ್ನು ಗುರುತಿಸಿ 15 ದಿನದೊಳಗೆ ಪರಿಹಾರ ಒದಗಿಸಿ, ಆ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ (ಬರ ಮತ್ತು ವಿಪತ್ತು ನಿರ್ವಹಣೆ) ಸರೋಜಮ್ಮ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬರ ನಿರ್ವಹಣೆ ಮತ್ತು ಪರಿಹಾರ ಕುರಿತು ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿರುವ ಉಪ ಕಾರ್ಯದರ್ಶಿ ಅವರ ನೇತೃತ್ವದ ತಂಡ ಗುರುವಾರ ರಾಮನಗರಕ್ಕೆ ಆಗಮಿಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಬರ ಪರಿಹಾರ ಕುರಿತು ಪರಿಶೀಲನಾ ಸಭೆ ನಡೆಸಿತು.

2011-12ನೇ ಸಾಲಿನ ಬರದಿಂದ ತತ್ತರಿಸಿ ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಳಂಬ ಮಾಡದೆ ಬೆಳೆ ಪರಿಹಾರ ಒದಗಿಸಬೇಕು. ಕೃಷಿ ಬೆಳೆಗೆ ಎಕರೆಗೆ ಗರಿಷ್ಠ 1000 ಮತ್ತು ತೋಟಗಾರಿಕಾ ಬೆಳೆಗೆ ಎಕರೆಗೆ ಗರಿಷ್ಠ 2000 ರೂಪಾಯಿ ಪರಿಹಾರ ಒದಗಿಸುವಂತೆ ಸರ್ಕಾರ ತಿಳಿಸಿದೆ. ಕನಿಷ್ಠ 250 ರೂಪಾಯಿ ಮಿತಿ ಕಾಯ್ದುಕೊಳ್ಳುವಂತೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಲೋಪ ಆಗದಂತೆ ಎಚ್ಚರ ವಹಿಸಿ: ಬರದಿಂದ ರೈತರಿಗೆ ಅಪಾರ ನಷ್ಟವಾಗಿದೆ. ಈಗ ಕೊಡುವ ಪರಿಹಾರದಿಂದ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂಬ ಅರಿವೂ ಇದೆ. ಆದರೆ ಸರ್ಕಾರದ ಆದೇಶ ಮತ್ತು ನಿಯಮದಂತೆ ನಾವು ಬೆಳೆ ಪರಿಹಾರ ರೈತರನ್ನು ತಲುಪಿಸುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಎಲ್ಲೂ ಲೋಪ ಆಗಬಾರದು ಎಂದು ಅವರು ಸೂಚಿಸಿದರು.

ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಬೆಳೆ ನಷ್ಟ ಮತ್ತು ಪರಿಹಾರ ಪಡೆಯಬೇಕಾದ ರೈತರ ಪಟ್ಟಿ ಸಿದ್ಧವಾಗಿದೆ. ಆದರೆ ರಾಮನಗರದಲ್ಲಿ ಇನ್ನೂ ಇದು ಸಿದ್ಧವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಳಂಬವಾಗದಂತೆ ತ್ವರಿತವಾಗಿ ಬೆಳೆ ಪರಿಹಾರ ವಿತರಿಸುವ ಕೆಲಸ ಮಾಡಿ, ಸರ್ಕಾರಕ್ಕೆ ವರದಿ ನೀಡುವುದಾಗಿ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು ಪ್ರತಿಕ್ರಿಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದರು.

`ಈಗಾಗಲೇ ನಮ್ಮ ತಂಡ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಹಾರದ ಪರಿಶೀಲನೆ ನಡೆಸಿ, ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದೆ. ಬರ ಪರಿಹಾರಕ್ಕೆ ಸರ್ಕಾರ ವಿನಿಯೋಗಿಸಿರುವ ಹಣ ಸಮರ್ಪಕವಾಗಿ ಬಳಕೆಯಾಗಿದೆ. ಆದರೆ `ಪೇಪರ್ ವರ್ಕ್~ ಮಾತ್ರ ಬಾಕಿ ಇದೆ.

ಕೆಲ ಜಿಲ್ಲೆಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ವೀಕ್ಷಿಸಿದ್ದೇವೆ. ಬಹುತೇಕ ಜಿಲ್ಲೆಗಳಲ್ಲಿ ತೃಪ್ತಿದಾಯಕವಾಗಿ ಕೆಲಸಗಳು ನಡೆದಿವೆ~ ಎಂದು ಉಪ ಕಾರ್ಯದರ್ಶಿ ಸರೋಜಮ್ಮ ಸುದ್ದಿಗಾರರಿಗೆ ತಿಳಿಸಿದರು.

ರಾಮನಗರ ಜಿಲ್ಲೆಯ ಬರ ಪರಿಹಾರ ಕಾಮಗಾರಿಗಳನ್ನು ವೀಕ್ಷಿಸಲು ಸಾಧ್ಯವಾಗಿಲ್ಲ. ಇನ್ನೊಮ್ಮೆ ಬಂದು ಕಾಮಗಾರಿಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಒಂಬತ್ತು ಕೋಟಿ ರೂಪಾಯಿ ಖರ್ಚು: ಬರ ನಿರ್ವಹಣೆಗೆಂದು ಇಲ್ಲಿಯವರೆಗೆ ಜಿಲ್ಲೆಗೆ 9 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಅದನ್ನು ಕುಡಿಯುವ ನೀರು, ಮೇವು, ಮೇವಿನ ಕಿಟ್, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ವಿನಿಯೋಗಿಸಲಾಗಿದೆ. ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 1.20 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಮನಗರ ನಗರಸಭೆಯ ಕೆಲಸವನ್ನು ಹೊರತು ಪಡಿಸಿ ಉಳಿದ ನಗರಸಭೆ, ಪುರಸಭೆಗಳು ತೃಪ್ತಿಕರವಾದ ಕೆಲಸ ಮಾಡಿವೆ ಎಂದು ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದರು.

ಬರ ನಿರ್ವಹಣೆಗೆ ಇನ್ನಷ್ಟು ಹಣಕಾಸಿನ ಅಗತ್ಯ ಇದ್ದು, ಈ ಸಂಬಂಧ ಐದು ಕೋಟಿ ರೂಪಾಯಿ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿರುವುದಾಗಿ ಹೇಳಿದರು. ಈ ಪ್ರಸ್ತಾವವನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಪ ಕಾರ್ಯದರ್ಶಿ ಪ್ರತಿಕ್ರಿಯಿಸಿದರು.

ರಾಜ್ಯ ಅಂಕಿ ಸಂಖ್ಯಾ ಅಧಿಕಾರಿ ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT