ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಮಾನವ ಸಂಪನ್ಮೂಲ: ವರದಿಗೆ ಸಿದ್ಧತೆ

ಮಲೆಕುಡಿಯರು, ಕೊರಗರ ಜೀವನ ಸುಧಾರಣೆಗೆ ಸೂತ್ರ
Last Updated 7 ಡಿಸೆಂಬರ್ 2012, 9:07 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಸಂಪನ್ಮೂಲ ಹೇಗಿದೆ? ಜನರ ಜೀವನ ಮಟ್ಟ ಸುಧಾರಣೆಗೆ ಏನೇನು ನಡೆಯಬೇಕಿದೆ? ಆದಿವಾಸಿಗಳು, ಮೂಲನಿವಾಸಿಗಳಿಗೆ ಎಂತಹ ಸೌಲಭ್ಯ ಒದಗಿಸಬೇಕು ಮುಂತಾದ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸುವ ಕಾರ್ಯಕ್ಕೆ ಇದೀಗ ಚಾಲನೆ ದೊರೆತಿದೆ. ಎಲ್ಲವೂ ನಿಗದಿಪಡಿಸಿದಂತೆ ನಡೆದರೆ ಮಾರ್ಚ್ ಅಂತ್ಯಕ್ಕೆ ವರದಿ ಸಿದ್ಧಗೊಳ್ಳಲಿದೆ.

ವರದಿ ಸಿದ್ಧಪಡಿಸುವುದಕ್ಕೆ ನಿಯೋಜಿಸಲಾದ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಖ್ಯಸ್ಥರು. ಜತೆಗೆ ಆಹಾರ, ಆರೋಗ್ಯ ಸಹಿತ ಕೆಲವು ಇಲಾಖೆಗಳ ಹಿರಿಯ ಅಧಿಕಾರಿಗಳು, ಮಂಗಳೂರು ಮತ್ತು ಮಣಿಪಾಲ ವಿಶ್ವವಿದ್ಯಾಲಯದ ತಲಾ ಒಬ್ಬರು ತಜ್ಞರು ಸಹಿತ  12 ಮಂದಿ ಇದ್ದಾರೆ. ಇವರೆಲ್ಲ ಕಳೆದ ವಾರ ಮೈಸೂರಿನಲ್ಲಿ ಒಂದು ವಾರ ತರಬೇತಿ ಮುಗಿಸಿಂದಿದ್ದಾರೆ.

ಕೇಂದ್ರ ಸರ್ಕಾರದ ಈ ಯೋಜನೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಿಂಗಳೊಳಗೆ ಇಂತಹ ಸಮಿತಿ ರಚನೆ ಆಗಬೇಕಾಗಿದ್ದು, ದ.ಕ.ಜಿಲ್ಲೆ ವರದಿ ಸಿದ್ಧಪಡಿಸುವ ಕಾರ್ಯಕ್ಕೆ ಕೈಹಚ್ಚಿದೆ.

ದ.ಕ.ಜಿಲ್ಲೆಯ ಸ್ಥಿತಿಗತಿ ನೋಡಿಕೊಂಡು ಮುಖ್ಯವಾಗಿ 10 ವಿಷಯಗಳಲ್ಲಿ ವರದಿ ಸಿದ್ಧಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿಯೇ ಆರು ಉಪಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಿಂದ ಆಗಿರುವ ಬದಲಾವಣೆ, ಜಿಲ್ಲೆಯಿಂದ ಹೊರಗೆ ಹೋಗಿ ದುಡಿಯುತ್ತಿರುವ ಜನರಿಂದ ಜಿಲ್ಲೆಗೆ ಆಗುತ್ತಿರುವ ಪ್ರಯೋಜನ, ಜಿಲ್ಲೆಯ ಪ್ರವಾಸೋದ್ಯಮ ಅವಕಾಶಗಳು, ಎಂಆರ್‌ಪಿಎಲ್‌ನಂತಹ ಕಂಪೆನಿಗಳಿಂದ ಆಗಿರುವ ಪರಿಸರ ಮಾಲಿನ್ಯ ಮತ್ತು ಅಸಮತೋಲನ, ಮಲೆಕುಡಿಯರು, ಕೊರಗರ ಸ್ಥಿತಿಗತಿ, ಡೆಂಗೆಯಂತಹ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ನಿರುದ್ಯೋಗ ಸಮಸ್ಯೆ, ಕಾರ್ಮಿಕರ ಕೊರತೆಯಿಂದ ಹೋಟೆಲ್‌ನಂತಹ ಉದ್ಯಮಗಳಿಗೆ ಒದಗಿರುವ ಬಿಕ್ಕಟ್ಟು ಮೊದಲಾದ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ನಡೆಯಲಿದೆ. ಈ ವರದಿ ಜಿಲ್ಲೆಯ ಸಮಗ್ರ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ದಿಕ್ಸೂಚಿಯಂತೆ ನೆರವಿಗೆ ಬರಲಿದೆ ಎಂದು ಸಮಿತಿಯಲ್ಲಿರುವ ಅಧಿಕಾರಿಯೊಬ್ಬರು ಗುರುವಾರ `ಪ್ರಜಾವಾಣಿ'ಗೆ ತಿಳಿಸಿದರು.

ಮಂಗಳೂರಿನಲ್ಲಿ ಕಳೆದ ತಿಂಗಳು ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ತರಬೇತಿ ಶಿಬಿರವೊಂದು ನಡೆದಿತ್ತು. ಅದೇ ಮಾದರಿಯಲ್ಲಿ ಈ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿಯೂ ನಡೆದಿದೆ. ಜಿಲ್ಲೆಯ ಜನರ ಜೀವನ ಮಟ್ಟ ಸುಧಾರಣೆಗೆ ಇಂತಹ ಸಮಗ್ರ ವರದಿಯೊಂದರ ಅಗತ್ಯ ಇತ್ತು. ಅದು ತನ್ನ ಕೈಚಳಕ ತೋರಿಸಬಹುದುದೇ ಅಥವಾ ಇತರ ಹಲವು ವರದಿಗಳಂತೆ ಕಪಾಟುಗಳಲ್ಲಿ ದೂಳು ತಿನ್ನಬೇಕಾದೀತೇ ಎಂಬ ಸಣ್ಣ ಪ್ರಶ್ನೆಯೊಂದನ್ನೂ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT