ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಬಿಜೆಪಿ ಪ್ರತಿಭಟನೆ

Last Updated 23 ಜನವರಿ 2011, 10:35 IST
ಅಕ್ಷರ ಗಾತ್ರ

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರನ್ನು ಕೂಡಲೇ ವಾಪಸು ಕರೆಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಗಿರೇಗೌಡ ರಾಷ್ಟ್ರಪತಿ ಅವರನ್ನು ಆಗ್ರಹಿಸಿದರು.

ರಾಜ್ಯಪಾಲರು ಕ್ರಮವನ್ನು ಖಂಡಿಸಿ ನಗರದಲ್ಲಿ ಶನಿವಾರ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಕೈಗೊಂಡಿದೆ. ಅಭಿವೃದ್ಧಿ ಆಧಾರದ ಮೇಲೆ ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಲಭಿಸಿದೆ. ಆದರೆ, ರಾಜ್ಯಪಾಲರು ಒಂದು ವಿರೋಧ ಪಕ್ಷದಂತೆ ವರ್ತನೆ ಮಾಡುತ್ತಿದ್ದು, ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಆರ್.ಅಶೋಕ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವ ಮೂಲಕ ರಾಜ್ಯಪಾಲರು ಪ್ರಜಾಪ್ರಭತ್ವದ ಘನತೆಗೆ ಕುಂದು ತಂದಿದ್ದಾರೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯಪಾಲರನ್ನು ವಾಪಸು ಕರೆಸಿಕೊಳ್ಳಬೇಕು ಎಂದು ಅವರು ರಾಷ್ಟ್ರಪತಿ ಅವರಲ್ಲಿ ಮನವಿ ಮಾಡಿದರು. ಅಲ್ಲದೇ, ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಆಗ್ರಹ
ಗಂಗಾವತಿ: ಮುಖ್ಯಮಂತ್ರಿ ಮೇಲೆ ದಾವೆ ಹೂಡಲು ಅನುಮತಿ ನೀಡಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಕ್ರಮ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಅಂಗವಾಗಿ ಶನಿವಾರ ನಗರದಲ್ಲೂ ಬಿಜೆಪಿ ಶಾಸಕರ ನೇತೃತ್ವದಲ್ಲಿ ಬಂದ್ ಆಚರಿಸಲಾಯಿತು.ಸಿಬಿಎಸ್‌ದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಅಶಾಂತಿಗೆ ಕಾರಣವಾದ ರಾಜ್ಯಪಾಲರನ್ನು ಕೇಂದ್ರ ಕೂಡಲೆ ವಾಪಾಸ್ ಕರೆಯಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಗಾಂಧಿ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಜಿಲ್ಲಾ ಎಸ್ಸಿಎಸ್‌ಟಿ ಮೊರ್ಚಾದ ಮಾರೇಶ ಮುಸ್ಟೂರು, ಎಚ್. ಪ್ರಭಾಕರ, ತಿಪ್ಪೇರುದ್ರಸ್ವಾಮಿ ಮೊದಲಾದವರು ಮಾತನಾಡಿದರು.     ಜನಾದೇಶದಿಂದ ಆಯ್ಕೆಯಾದ ಸರ್ಕಾರದ ಪ್ರತಿಯೊಂದು ಕಾರ್ಯಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಮುಖ್ಯಮಂತ್ರಿಗಳ ಮೇಲೆ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ಕ್ರಮ ಸರಿಯಲ್ಲ ಎಂದು ಮುಖಂಡರು ಖಂಡಿಸಿದರು.

ಈ ಹಿನ್ನೆಲೆ ಮುಕ್ತ ಪ್ರಜಾತಂತ್ರ ವ್ಯವಸ್ಥೆಯ ಸರ್ಕಾರ ನಡೆಸಲು ಕೇಂದ್ರ ಸರ್ಕಾರ ಕೂಡಲೆ ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದು ಒತ್ತಾಯಿಸಿದ ಮನವಿಯನ್ನು ನಗರ ಘಟಕದ ಅಧ್ಯಕ್ಷ ಶಂಕರಗೌಡ ಹೊಸಳ್ಳಿ, ತಹಸೀಲ್ದಾರರ ಮೂಲಕ ರಾಷ್ಟ್ರಪತಿಗೆ ಕಳುಹಿಸಿದರು.ಈ ಸಂದರ್ಭದಲ್ಲಿ ಸಿಂಗನಾಳ ವಿರುಪಾಕ್ಷಪ್ಪ, ಸಿದ್ದಾಪುರ ಮಂಜುನಾಥ, ಮಹಿಳಾ ಘಟಕದ ಮುಂದಾಳು ರಾಧಮ್ಮ, ವೀರಭದ್ರಪ್ಪ ನಾಯಕ, ಕೆ. ಲಿಂಗನಗೌಡ, ಸೈಯದ್‌ಅಲಿ, ರಾಜು ಸಾ, ನಾರಾಯಣಪ್ಪ ಬಿ, ಗುತ್ತಿಗೆದಾರ ಶರಣಪ್ಪ ಪಟ್ಟಣಶೆಟ್ಟಿ ಇತರರಿದ್ದರು.

ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ: ಆರೋಪ
ಯಲಬುರ್ಗಾ: ರಾಜ್ಯದ ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದರು. ರಾಜ್ಯಪಾಲರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಸಭೆ ಸೇರಿ, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ನೇಮಿಸಿದ ರಾಜ್ಯಪಾಲರು ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುವ ಮೂಲಕ ತಮ್ಮ ಸ್ಥಾನಕ್ಕೆ ಧಕ್ಕೆ ತಂದಿದ್ದಾರೆ. ಗೌರವನಾನ್ವಿತ ಸ್ಥಾನದಲ್ಲಿದ್ದುಕೊಂಡು ಸಂವಿಧಾನ ಬದ್ದವಾಗಿ ನಡೆದುಕೊಳ್ಳುವ ಬದಲು ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒಪ್ಪಿಗೆ ಕೊಡುವುದು ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಿದೆ ಎಂದರು.

ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ವೀರಣ್ಣ ಹುಬ್ಬಳ್ಳಿ, ಯುವ ಮುಖಂಡ ನವೀನ್ ಗುಳಗಣ್ಣವರ್, ಗಣ್ಯರಾದ ಶಿವನಗೌಡ ಬನಪ್ಪಗೌಡ, ದ್ಯಾಮಣ್ಣ ಜಮಖಂಡಿ, ಪಟ್ಟಣ ಪಂಚಾಯತಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಸೇರಿದಂತೆ ಅನೇಕರು ಮಾತನಾಡಿ ರಾಜ್ಯಪಾಲರ ವಿರುದ್ಧ ಟೀಕಿಸಿದರು. ತಾಪಂ ಸದಸ್ಯರಾದ ರಾಜಶೇಖರ ಗುಳಗಣ್ಣವರ್, ನಾರಾಯಣಮ್ಮ ಕಜ್ಜಿ ಶಿವಪ್ಪ ಮುತ್ತಾಳ, ಷಣ್ಮುಖಪ್ಪ ರಾಂಪೂರ, ಸಿದ್ಧರಾಮಪ್ಪ ಮ್ಯಾಗೇರಿ ಸೇರಿದಂತೆ ಅನೇಕರು ಹಾಜರಿದ್ದರು.

ಬಿಜೆಪಿ ಬಂದ್ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾಗಶಃ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ಅಲ್ಲದೇ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದ ಪ್ರಯಾಣಿಕರಿಗೆ ಮಧ್ಯಾಹ್ನದವರೆಗೆ ಸ್ವಲ್ಪ ತೊಂದರೆಯಾಯಿತು. ಶಾಲೆ ಕಾಲೇಜುಗಳು ರಜೆ ಘೋಷಿಸಿದ್ದರ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಹುತೇಕ ಗ್ರಾಮದ ಶಾಲೆಗಳು ಬಂದ್ ಮಾಡಿದ್ದು ವರದಿಯಾಗಿದೆ.

ರಾಜ್ಯಪಾಲರ ವಿರುದ್ಧ ಬಿಜೆಪಿ ಪ್ರತಿಭಟನೆ
ಕುಕನೂರು: ಇಲ್ಲಿಯ ಬಿ.ಜೆ.ಪಿ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲ ಹಂಸರಾಜ್ ಭ್ವಾರದ್ವಾಜ್ ಅವರ ಕ್ರಮವನ್ನು ಉಗ್ರವಾಗಿ ಖಂಡಿಸಿದರು.  

ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿ.ಜೆ.ಪಿ ಮುಖಂಡರು ಹಾಗೂ ಕಾರ್ಯಕರ್ತರು ಕೊಪ್ಪಳ-ಯಲಬುರ್ಗಾ ಮುಖ್ಯರಸ್ತೆಯ ಮೂಲಕ ಶಿರೂರ ವೀರಭದ್ರಪ್ಪ ವೃತ್ತದ ವರೆಗೂ ಪ್ರತಿಭಟನೆ ನಡೆಸಿ ರಾಜ್ಯಪಾಲರು, ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳ ವಿರುದ್ಧ ಹಲವಾರು ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಬಿ.ಜೆ.ಪಿ ಮುಖಂಡ ದ್ಯಾಮಣ್ಣ ಜಮಖಂಡಿ, ಯುವ ಮುಖಂಡ ನವೀನ್‌ಕುಮಾರ್ ಗುಳಗಣ್ಣವರ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿ, ಜನಪರ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ಜೆ.ಪಿ ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ, ಘನವೆತ್ತ ರಾಜ್ಯಪಾಲರು ತಮ್ಮ ಹುದ್ದೆಗೆ ತಕ್ಕಂತೆ ಅಧಿಕಾರ ನಡೆಸದೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ತುರ್ತಾಗಿ ವಾಪಸ್ ಕರೆಯಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಗ್ರಾಪಂ ಉಪಾಧ್ಯಕ್ಷ ಕರಬಸಯ್ಯ ಬಿನ್ನಾಳ, ಡಾ.ಮಲ್ಲಿಕಾರ್ಜುನ ಬಿನ್ನಾಳ, ವೀರಣ್ಣ ಅಣ್ಣಗೇರಿ, ದೇವಪ್ಪ ಹಟ್ಟಿ, ರವಿ ಜಕ್ಕಾ, ತಾಪಂ ಸದಸ್ಯ ರಾಜಶೇಖರ್ ಹೊಂಬಳ, ನಗರ ಬಿಜೆಪಿ ಘಟಕದ ಅಧ್ಯಕ್ಷ ದೇವಪ್ಪ ಸೋಬಾನದ, ಶರಣಪ್ಪಗೌಡ ಪಾಟೀಲ, ಬಿ.ಎಸ್.ನವಲೆ, ಬಸವನಗೌಡ ತೊಂಡಿಹಾಳ, ರಾಮಣ್ಣ ಯಡ್ಡೋಣಿ, ನಾಗಪ್ಪ ಕಲ್ಮನಿ, ಶೇಖರ್ ಗೊರ್ಲೆಕೊಪ್ಪ, ಶಿವಪ್ಪ ಮುಂದಲಮನಿ, ಪ್ರಕಾಶ ಬೋರಣ್ಣವರ, ಜಂಭಣ್ಣ ರುದ್ರಾಕ್ಷಿ, ನೂರಅಹ್ಮದ್ ಹಣಜಗೇರಿ, ವಿನಾಯಕ ಯಾಳಗಿ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿ.ಪಿ.ಐ ಬಸವರಾಜ ಭಜಂತ್ರಿ ಅವರು ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವೊಂದು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದರೆ ಮತ್ತೆ ಕೆಲವು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನದ ಮೂಲಕ ಪ್ರಯಾಣ ಮಾಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT