ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ; ಧರಣಿ

Last Updated 20 ಡಿಸೆಂಬರ್ 2012, 9:15 IST
ಅಕ್ಷರ ಗಾತ್ರ

ಕೋಲಾರ: ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಜನ ಸಾಮಾನ್ಯರ ಬೇಡಿಕೆ ಹಾಗೂ ಅಸಂಘಟಿತ ಕಾರ್ಮಿಕರ ಬೇಡಿಕೆ ಈಡೇರಿಸಲು ಕೇಂದ್ರ, ರಾಜ್ಯ ಸರ್ಕಾರಗಳೆರೆಡು ಹಿಂದೇಟು ಹಾಕುತ್ತಿವೆ. ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆ ಷೇರು ಬಂಡವಾಳ ಮಾರಾಟ ಮಾಡಿ ದೇಶದ ಬಡವರ ಬದುಕು ದುಸ್ತರಗೊಳಿಸಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಾರ್ವಜನಿಕ, ಖಾಸಗಿ ರಂಗದ ಎರಡು ವಲಯದಲ್ಲೂ ಕಾರ್ಮಿಕರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ, ಬೋನಸ್, ಇಎಸ್‌ಐ ಮೊದಲಾದ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಉದ್ಯೋಗ ರಕ್ಷಣೆ ಒದಗಿಸಬೇಕು. ಸಾಮಾಜಿಕ ಭದ್ರತೆಗೆ ಹಣಕಾಸು ಸಂಪನ್ಮೂಲ ಒದಗಿಸುವಂತೆ ಒತ್ತಿ ಹೇಳಿದರು.
ಬಿಪಿಎಲ್ ಪಡಿತರ ವ್ಯವಸ್ಥೆ ಎಲ್ಲ ಬಡ ಕಾರ್ಮಿಕರಿಗೆ ಸಿಗಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ, ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಸಮಿತಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಹೇಳಿದರು.

ನಂತರ ಜಿಲ್ಲಾಧಿಕಾರಿ ಡಾ.ಡಿ.ಎಸ್‌ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಬಿ.ಎಸ್.ನಾಗರತ್ನ, ಸಹ ಕಾರ್ಯದರ್ಶಿ ಬಿ.ವಿ.ಸಂಪಂಗಿ, ಜಿಲ್ಲಾ ಸಮಿತಿ ಸದಸ್ಯರಾದ ಎನ್.ಅಶೋಕ, ಮುನಿರಾಜಮ್ಮ, ಎಚ್.ಎಂ.ಯಲ್ಲಪ್ಪ ಇತರರು ಪಾಲ್ಗೊಂಡಿದ್ದರು.

ಸಿಐಟಿಯು ಧರಣಿ
ಶ್ರೀನಿವಾಸಪುರ:
ಪಟ್ಟಣದ ಮಿನಿ ವಿಧಾನಸೌಧದ ಎದುರು ಬುಧವಾರ ಸಿಐಟಿಯು ಕಾರ್ಯಕರ್ತರು ಜೈಲ್‌ಭರೋ ಕಾರ್ಯಕ್ರಮದ ಅಂಗವಾಗಿ ಧರಣಿ ನಡೆಸಿ ಬಂಧನಕ್ಕೆ ಒಳಗಾದರು.

ಜಿಲ್ಲಾ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಈಶ್ವರಮ್ಮ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ಅಂಗನವಾಡಿ, ಬಿಸಿಯೂಟ ನೌಕರರ ಬಗ್ಗೆ ತಾತ್ಸಾರ ಮನೋಭಾವ ಹೊಂದಿವೆ. ಇವರು ಕಡಿಮೆ ಗೌರವ ಧನ ಪಡೆದು ಹೆಚ್ಚು ದುಡಿಯುತ್ತಿದ್ದಾರೆ ಎಂದು ಆಪಾದಿಸಿದರು.

ಒಂದು ಹಂತದಲ್ಲಿ ಮಿನಿ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು, ತಮ್ಮ ವಾಹನದಲ್ಲಿ ತುಂಬಿಕೊಂಡು ಠಾಣೆಗೆ ಕರೆದೊಯ್ದರು. ಇದಕ್ಕೂ ಮೊದಲು ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ನೀಡಲಾಯಿತು.
ಸಿಐಟಿಯು ಮುಖಂಡರಾದ ಪಿ.ಆರ್.ಸೂರ್ಯನಾರಾಯಣ, ಪಿ.ಆರ್.ನವೀನ್ ಕುಮಾರ್, ಅಮರನಾರಾಯಣ, ಜಿ.ಜಯಮ್ಮ, ಸರಸ್ವತಿ, ರಾಧಮ್ಮ, ಲಕ್ಷ್ಮೀದೇವಮ್ಮ,           ಎಚ್.ಎಂ.ಜಯಲಕ್ಷ್ಮಮ್ಮ, ಆರ್.ಲಕ್ಷ್ಮೀದೇವಮ್ಮ, ವಿ.ಆನಂದ್, ಶ್ರೀನಿವಾಸ್, ಮುನಿಯಪ್ಪ, ಜಿ.ಎಸ್,ಕೃಷ್ಣಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ದೈಹಿಕ ಕಸರತ್ತಿಗೆ ಹಣ: ಆಕ್ರೋಶ
ಕೋಲಾರ:
ಸರ್ಕಾರದ ವ್ಯಾಯಾಮ ಶಾಲೆಯಲ್ಲಿ ದೈಹಿಕ ಕಸರತ್ತು ನಡೆಸಲು ಸಹ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿ ಕ್ರೀಡಾಪಟುಗಳು ಬುಧವಾರ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ ಘಟನೆ ಜರುಗಿತು.

ಸರ್ಕಾರ, ಇಲಾಖೆ ಯಾವುದೇ ಸೌಕರ್ಯನೀಡುತ್ತಿಲ್ಲ. ಬದಲಾಗಿ ನಮ್ಮಿಂದಲೇ ಹಣ ಕೀಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಮರ್ಥ ಉತ್ತರ ನೀಡುವಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕರು ವಿಫಲವಾದರು.

ನಮಗೆ ಬೇಕಾದ ಯಾವುದೇ ಸಾಧನ, ಸಲಕರಣೆ ಇಲ್ಲ. ಸರ್ಕಾರ ನೀಡುವ ಹಣ ಉಪಯೋಗಿಸುವ ಬದಲು ಬಡ ಕ್ರೀಡಾಪಟುಗಳ ಶೋಷಣೆ ನಡೆಸುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದ  ಕ್ರೀಡಾಪಟುಗಳು ದೂರಿದರು.

ಸರ್ಕಾರಿ ವ್ಯಾಯಾಮ ಶಾಲೆಯಲ್ಲಿ ಉಸ್ತುವಾರಿ ನೋಡಿಕೊಳ್ಳುವ ಕ್ರೀಡಾ ವಸತಿ ಶಾಲೆ ವಾರ್ಡನ್ ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ. ಹೊರಗಿನ ಕ್ರೀಡಾಪಟುಗಳಿಗೆ ಕ್ರಿಕೆಟ್ ಆಡಲು ಅವಕಾಶ ನೀಡುತ್ತಿದ್ದಾರೆ ಹೊರತು ಜಿಲ್ಲೆಯಲ್ಲಿ ಸಾಧನೆ ಮಾಡಿದವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ್ದ ಇಬ್ಬರು ಹೆಡ್ ಕಾನ್ಸ್‌ಟೆಬಲ್, ವಿದ್ಯಾರ್ಥಿ ಮುಖಂಡರಿಬ್ಬರಿಂದ ಪರಿಸ್ಥಿತಿ ತಿಳಿಯಾಗುವ ಬದಲು ಇನ್ನಷ್ಟು ಬಿಗಡಾಯಿಸಿತು.

`ಪ್ರಜಾವಾಣಿ' ಜತೆ ಮಾತನಾಡಿದ ಕ್ರೀಡಾಪಟುಗಳಾದ ಗುರು, ಮಹೇಶ್, ನರೇಶ್ `ನಗರಸಭೆ, ಜಿಲ್ಲಾ ಪಂಚಾಯಿತಿಯಿಂದ ಬರುವ ಯಾವುದೇ ಅನುದಾನ ನೀಡುತ್ತಿಲ್ಲ. ಅದು ಹೋದರೆ ಹೋಗಲಿ. ಈಗ ನಾವು ಮುಂಬರುವ ಕ್ರೀಡೆಗಳಿಗೆ ದೈಹಿಕ ಕಸರತ್ತು ನಡೆಸುವುದು ಅನಿವಾರ್ಯ. ಆದರೆ ದುಡ್ಡು ಕೇಳುವುದು ಏಕೆ ? ನಾವು ಎಲ್ಲಿಂದ ತರಬೇಕು ?' ಎಂದು ಅಲವತ್ತು ಕೊಂಡರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಾ.ಡಿಎಸ್.ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದ ಕ್ರೀಡಾಪಟುಗಳು, `ಕ್ರೀಡಾ ವಸತಿ ಶಾಲೆ ವಾರ್ಡನ್ ಹಣ ನೀಡಿದರೆ ಒಳಗೆ ಬನ್ನಿ ಇಲ್ಲದಿದ್ದರೆ ಬೇಡ' ಎಂದು ಕ್ರೀಡಾಪಟುಗಳನ್ನು ತುಚ್ಛವಾಗಿ ಕಾಣುತ್ತಿದ್ದಾರೆ' ಎಂದು ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, `ಎರಡು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಕ್ರೀಡಾಪಟುಗಳು ಸಮಾಧಾನಗೊಂಡರು.

ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರ
ಕೋಲಾರ:
ಕೇಂದ್ರ ಸರ್ಕಾರದ ಭ್ರಷ್ಟಾಚಾರ ವ್ಯಾಪಕವಾಗಿದೆ. 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣದಿಂದ ನುಣುಚಿಕೊಳ್ಳಲು ಹಲ ಅಧಿವೇಶನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಎಬಿವಿಪಿ ಭ್ರಷ್ಟಾಚಾರ ವಿರೋಧಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸಚಿವರಾದ ಪಿ.ಚಿದಂಬರಂ, ಸಲ್ಮಾನ್ ಖುರ್ಷಿದ್ ಅವರನ್ನು ರಕ್ಷಿಸಲಾಗುತ್ತಿದೆ. ಅವರಿಗೆ ಪ್ರಮುಖ ಹುದ್ದೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಲಾಗಿದೆ ಎಂದು ದೂರಿದರು.
ಕೇಂದ್ರದ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ, ಮಧ್ಯಮ ವರ್ಗದ ಜನರು ಜೀವನ ನಡೆಸುವುದು ದುಸ್ತರವಾಗಿದೆ. ಎಫ್‌ಡಿಐ ಅಧಿಸೂಚನೆಗೆ ಬೆಂಬಲಿಸಲು ಬೇರೆ ಬೇರೆ ಪಕ್ಷಗಳ ಮೇಲೆ ಅನೈತಿಕ ಒತ್ತಡ ನಿರ್ಮಿಸಿ ಕಾಯಿದೆ ಪಾಸ್ ಮಾಡಲಾಗಿದೆ ಎಂದು ಆರೋಪಿಸಿದರು.

ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಅಶ್ವಿನಿ, ಶ್ವೇತಾ, ಪ್ರತಿಮಾ, ಸೌಮ್ಯ, ಪವಿತ್ರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೇದಾರ್‌ನಾಥ್, ಮಲ್ಲಿಕಾರ್ಜುನ್‌ಮಹೇಶ್, ನವೀನ್, ಅಶ್ವಿನ್, ರಾಕೇಶ್, ಮುರಳಿ ಪಾಲ್ಗೊಂಡಿದ್ದರು.

ಡಿ ಗ್ರೂಪ್ ನೌಕರರ ಬೇಡಿಕೆ ಈಡೇರಿಸಲು ಆಗ್ರಹ
ಶ್ರೀನಿವಾಸಪುರ:
ಸರ್ಕಾರ ಡಿ ಗೂಪ್ ನೌಕರರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಖಜಾಂಚಿ ವಿ.ಕೃಷ್ಣಪ್ಪ ಆಗ್ರಹಪಡಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಎದುರು ಮಂಗಳವಾರ ಬೇಡಿಕೆ ಈಡೇರಿಕೆಗಾಗಿ ಧರಣಿ ನಡೆಸಿದ ಡಿ ಗ್ರೂಪ್ ನೌಕರರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಡಿ ಗ್ರೂಪ್ ನೌಕರರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಪಾದಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಿಬ್ಬಂದಿಗೂ ಆಯಾ ತಿಂಗಳ ವೇತನ ಕ್ರಮವಾಗಿ ನೀಡಬೇಕು, ಹೊರಗುತ್ತಿಗೆ ಆಧಾರದ ನೇಮಕಾತಿ ನಿಲ್ಲಿಸಬೇಕು, ಪೊಲೀಸ್ ಇಲಾಖೆ ಸಿಬ್ಬಂದಿಗೆ ನೀಡುವಂತೆ ಕುಟುಂಬ ಪಡಿತರ ಚೀಟಿ ನೀಡಬೇಕು.

ಆರೋಗ್ಯ ಭಾಗ್ಯ ಯೋಜನೆ ಯೋಜನೆಗೆ ಒಳಪಡಿಸಬೇಕು. ನೌಕರರ ಮಕ್ಕಳಿಗೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿಯವರೆಗೆ ಉಚಿತ ಶಿಕ್ಷಣ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್‌ಎಸ್‌ಎಲ್‌ಸಿ ಪಾಸಾದ ನೌಕರರಿಗೆ ಖಾಲಿ ಇರುವ ಕಡೆ ಗುಮಾಸ್ತೆ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಭರ್ತಿ ಮಾಡಬೇಕು... ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್, ತಾಲ್ಲೂಕು ಡಿ ಗ್ರೂಪ್ ನೌಕರ ಸಂಘದ ಅಧ್ಯಕ್ಷ ಎಂ ನರಸಿಂಹಪ್ಪ, ಉಪಾಧ್ಯಕ್ಷ ಕೆ.ಉಮಾಪತಿ, ಕಾರ್ಯದರ್ಶಿ ಎಂ.ಸತೀಶ್ ಕುಮಾರ್, ಖಜಾಂಚಿ ಎಸ್.ರಮೇಶ್ ಬಾಬು, ಸಂಘಟನಾ ಕಾರ್ಯದರ್ಶಿ ಕೆ.ವಿ.ಸುರೇಶ್, ಮಹಿಳಾ ಸಂಘಟನಾ ಕಾರ್ಯದರ್ಶಿಗಳಾದ ಮುನಿರತ್ನಮ್ಮ, ಸರೋಜಮ್ಮ, ಎಸ್.ಎನ್.ಗೀತಾ, ಪದಾಧಿಕಾರಿಗಳಾದ ಸರ್ವೋತ್ತಮ್, ಎಚ್.ಎನ್. ನಾರಾಯಣ, ಮುನಿಪಾಪಣ್ಣ, ಸತ್ಯ, ಮುನಿಯಪ್ಪ, ಚಂದ್ರಮೌಳಿ, ಮುಖಂಡ ಎಂ.ನಾರಾಯಣಸ್ವಾಮಿ ಈ ಸಂದರ್ಭ ಉಪಸ್ಥಿತರಿದ್ದರು.

ಸಾಂಕೇತಿಕ ಧರಣಿ ಇಂದು
ಕೋಲಾರ:
ನಗರದಲ್ಲಿನ ವಿಭಾಗದ ಅಂಚೆ ಇಲಾಖೆ ಮತ್ತು ಗ್ರಾಮೀಣ ಅಂಚೆ ಸೇವಕರು ಡಿ.20ರಂದು ಪಿ.ಸಿ.ಬಡಾವಣೆ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲಿದ್ದಾರೆ. ಎಲ್ಲ ಅಂಚೆ ಕಚೇರಿ ನೌಕರರು ಧರಣಿಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

`ಬೇಡಿಕೆ ಈಡೇರಿಸಿ; ತೊಂದರೆ ತಪ್ಪಿಸಿ'
ಕೋಲಾರ:
ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ನೌಕರರು ಡಿ.21ರಿಂದ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಮುನ್ನವೇ ಸರ್ಕಾರ ಬೇಡಿಕೆ ಈಡೇರಿಕೆಗೆ ಸ್ಪಂದಿಸಿ ಜನರಿಗೆ ಆಗುವ ತೊಂದರೆ ತಪ್ಪಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಮುಷ್ಕರದಿಂದ ವೈದ್ಯಕೀಯ ಸೇವೆಗೆ ಚ್ಯುತಿ ಬರುವ ಕಾರಣ ಸಮಸ್ಯೆಗೆ ಸರ್ಕಾರವೇ ನೇರ ಕಾರಣವೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವರ್ತೂರು ಬೆಂಬಲಿಗರ ಹಲ್ಲೆ: ವಾಲ್ಮೀಕಿ ಸಂಘ ಖಂಡನೆ
ಕೋಲಾರ:
ತಾಲ್ಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಬಣದ ಅಭ್ಯರ್ಥಿಗೆ ಮತ ಚಲಾಯಿಸಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರ ಹಲ್ಲೆ ನಡೆಸಿರುವುದು ಅತ್ಯಂತ ಹೇಯ ಎಂದು  ತಾಲ್ಲೂಕು ವಾಲ್ಮೀಕಿ ನಾಯಕ ಸಂಘ ದೂರಿದೆ.

ದೊಡ್ಡಹಸಾಳ ಗ್ರಾ.ಪಂ. ಸದಸ್ಯೆ ತಿಮ್ಮಕ್ಕ, ಆಕೆ ಪತಿ, ಮಗಳ ಮೇಲೆ ರಾತ್ರಿ ವೇಳೆ ಹಲ್ಲೆ ನಡೆಸಲಾಗಿದೆ. ಬಡವರ್ಗದ ಮೇಲೆ ಅಟ್ಟಹಾಸ ನಡೆಸುತ್ತಿರುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ  ಅರಾಭಿ ಕೊತ್ತನೂರು ಮಂಜು ಆಗ್ರಹಿಸಿದ್ದಾರೆ.

ಶಾಲೆಯಲ್ಲೂ ಅಸ್ಪೃಶ್ಯತೆ: ದಲಿತ ನೌಕರರ ಒಕ್ಕೂಟ ಆರೋಪ
ಕೋಲಾರ:
ಬಂಗಾರಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ನೌಕರರ ಒಕ್ಕೂಟ ಆಗ್ರಹಿಸಿದೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಇದಕ್ಕೆ ಬಲಿಯಾಗಿದ್ದಾರೆ. ಘಟನೆಗೆ ಕಾರಣರಾದ ಆಡಳಿತ ಮಂಡಳಿ ಮೇಲೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಚಿಕ್ಕಣ್ಣ ಒತ್ತಾಯಿಸಿದ್ದಾರೆ.

ಬಸ್ ಬ್ರೇಕ್ ವಿಫಲ

ಚಿಂತಾಮಣಿ:  ನಗರದ ಕೆಎಂಡಿ ಕಲ್ಯಾಣ ಮಂಟಪಕ್ಕೆ ಮದುವೆ ಜನರನ್ನು ಕರೆದುಕೊಂಡು ಬಂದಿದ್ದ ಖಾಸಗಿ ಬಸ್ ಬ್ರೇಕ್ ವೈಫಲ್ಯದಿಂದ ಎಂ.ಜಿ. ರಸ್ತೆಯಲ್ಲಿರುವ ಆಲದ ಮರದ ಎದುರು ನಿಂತಿದ್ದ ದ್ವಿಚಕ್ರ ವಾಹನದ ಮೇಲೆ ಹರಿದು ಚರಂಡಿಗೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಯಾವುದೇ ಅನಾಹುತವಾಗದೆ ಪಾರಾಗಿರುವ ಘಟನೆ ಬುಧವಾರ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT