ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 37 ಸಾವಿರ ಪತ್ರ ರವಾನೆ

ಶೌಚಾಲಯ, ಉದ್ಯೋಗಖಾತ್ರಿ ಗುರಿ ತಲುಪಲು ಜಿ.ಪಂ. ಪತ್ರ ಚಳವಳಿ
Last Updated 11 ಡಿಸೆಂಬರ್ 2012, 10:47 IST
ಅಕ್ಷರ ಗಾತ್ರ

ತುಮಕೂರು: ರಾಷ್ಟ್ರಪಿತ ಗಾಂಧಿಜಯಂತಿ ದಿನ 2005ರಲ್ಲಿ ಜಾರಿಯಾದ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡುವ ಕನಸಿನ ಗುರಿಯಲ್ಲಿ ಅರ್ಧದಷ್ಟು ಹೆಜ್ಜೆಯನ್ನು ಇನ್ನೂ ಇಡಲಾಗಿಲ್ಲ. ಏಳು ವರ್ಷಗಳ ಬಳಿಕ ಜಿಲ್ಲಾ ಪಂಚಾಯಿತಿ ಈಗ ಕನಸಿನ ಗುರಿ ತಲುಪಲು ಎಚ್ಚೆತ್ತುಕೊಂಡಿದ್ದು ವಿನೂತನ ಸಾಹಸಕ್ಕೆ ಕೈಹಾಕಿದೆ.

ದಕ್ಷಿಣ ಕನ್ನಡ ಜಿಲ್ಲೆ ಶೇ ನೂರರಷ್ಟು ನಿರ್ಮಲ ಗ್ರಾಮ, ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಯಾಗಿಸಲು ಅನೇಕ ಪ್ರಯೋಗಳನ್ನು ಮಾಡಿ ಯಶಸ್ವಿಯಾಗಿದೆ. ಶೌಚಾಲಯ ಕಟ್ಟುವಲ್ಲಿ ಶ್ರಮದಾನದ ಕಲ್ಪನೆ ನೀಡಿದ ಇರಾ, ಗೋಳ್ತಮಜಲು ಮಾದರಿಯು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿತ್ತು. ಈಗ ದಕ್ಷಿಣ ಕನ್ನಡದ ಹಾದಿಯಲ್ಲೇ ಸಾಗುವ ಮುನ್ಸೂಚನೆಯನ್ನು ಜಿಲ್ಲಾ ಪಂಚಾಯಿತಿ ನೀಡ ತೊಡಗಿದೆ.

ಜಿಲ್ಲೆಯಲ್ಲಿ ಅಂದಾಜು 6 ಲಕ್ಷ ಮನೆಗಳಿವೆ. ಆದರೆ ಇಲ್ಲಿಯವರೆಗೂ ಬಿಪಿಎಲ್, ಎಪಿಎಲ್ ಸೇರಿದಂತೆ ಒಟ್ಟಾರೆ ಸುಮಾರು 1.5 ಲಕ್ಷ ಕುಟುಂಬಗಳಷ್ಟೇ ಶೌಚಾಲಯ ಹೊಂದಿವೆ. ಉಳಿದಂತೆ ಶೌಚಾಲಯ ಇಲ್ಲ. ಶೌಚಾಲಯ ಕಟ್ಟಿಕೊಳ್ಳಲು ಜನರ ಮನವೊಲಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿತ್ತು. ಇದನ್ನು ಮನಗಂಡು ಈಗ ಜನರ ಮನವೊಲಿಕೆಗೆ ಮೊದಲ ಪ್ರಾಮುಖ್ಯತೆ ನೀಡ ತೊಡಗಿದೆ

ಶೌಚಾಲಯದ ಅಗತ್ಯ, ಪ್ರಾಮುಖ್ಯತೆ, ಸಂಪೂರ್ಣ ಸ್ವಚ್ಛತಾ ಜಿಲ್ಲೆಯನ್ನಾಗಿಸುವ ಜಿಲ್ಲಾ ಪಂಚಾಯಿತಿ ಕನಸಿನ ಜೊತೆ ಕೈ
ಜೋಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಪತ್ರದ ಮೊರೆ ಹೋಗಿದ್ದಾರೆ.
ಕೇವಲ ಎರಡು ತಿಂಗಳಲ್ಲಿ ಬರೋಬರಿ 37 ಸಾವಿರ ಜನರಿಗೆ ಜಿಲ್ಲಾ ಪಂಚಾಯಿತಿ ಮೂಲಕ ಮನವಿ ರೂಪದ ಪತ್ರವನ್ನು ಅಂಚೆ ಮೂಲಕ ರವಾನಿಸಿ ಶೌಚಾಲಯ ಕಟ್ಟುವ ಹೆಜ್ಜೆಗೆ ಕೈ ಜೋಡಿಸುವಂತೆ ಕೇಳಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸಂಘದ 26 ಸಾವಿರ ಸದಸ್ಯರಿಗೆ, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಯ ಒಟ್ಟು 6 ಸಾವಿರ ಸದಸ್ಯರಿಗೆ ಈ ಪತ್ರ ಬರೆಯಲಾಗಿದೆ. ಅಲ್ಲದೆ ಅಂಗನವಾಡಿಯ ನಾಲ್ಕು ಸಾವಿರ ಕಾರ್ಯಕರ್ತೆಯರು, ಜಿಲ್ಲೆಯ ಮೂರು ಸಾವಿರ ಶಿಕ್ಷಕರು, ಒಂದು ಸಾವಿರ ರೈತ ಪ್ರತಿನಿಧಿಗಳಿಗೂ ಪತ್ರ ರವಾನಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸ್ತ್ರೀಶಕ್ತಿ ಗುಂಪು ಸೇರಿದಂತೆ ಇನ್ನಿತರರಿಗೂ ಬೇರೆ ಬೇರೆ ರೂಪದ ಪತ್ರಗಳನ್ನು ಬರೆದಿರುವುದು ವಿಶೇಷ. ಖುದ್ದು ಭೇಟಿ ಮಾಡಿ ಜಿಲ್ಲೆಯ ಶೌಚಾಲಯ ಪ್ರಗತಿಯ ಕುರಿತು ನಿಮ್ಮ ಸಲಹೆ, ಸೂಚನೆ, ಮಾರ್ಗದರ್ಶನ ಪಡೆಯಬೇಕೆಂಬ ಆಸೆ ಇದ್ದರೂ ಅದು ಸಾಧ್ಯವಾಗದ ಕಾರಣ ಪತ್ರ ಮುಖೇನ ಈ ಮನವಿ ಮಾಡುತ್ತಿರುವುದಾಗಿ ಪತ್ರದಲ್ಲಿ ನಮೂದಿಸಿದ್ದಾರೆ.

ಬಿಪಿಎಲ್ ಕುಟುಂಬಕ್ಕೆ ಶೌಚಾಲಯ ಕಟ್ಟಿಕೊಳ್ಳಲು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಣವಾಗಿ ರೂ. 4500 ಹಾಗೂ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ರೂ. 4700 ಸಹಾಯಧನ ಸೇರಿ ಒಟ್ಟು ರೂ. 9200 ನೀಡಲಾಗುವುದು. ನಿಮ್ಮ ವ್ಯಾಪ್ತಿಯಲ್ಲಿ ಶೌಚಾಲಯದ ಮಹತ್ವ ಕುರಿತು ಪ್ರಚಾರ ಮಾಡಿ ನಾಲ್ಕು ತಿಂಗಳಲ್ಲಿ ಎಲ್ಲ ಮನೆಯವರೂ ಶೌಚಾಲಯ ನಿರ್ಮಿಸುವಂತೆ ನೋಡಿಕೊಳ್ಳುವಂತೆ ಪತ್ರದಲ್ಲಿ ಕೋರಿದ್ದಾರೆ.

ಕೇವಲ ಶೌಚಾಲಯವನ್ನಷ್ಟೇ ಪತ್ರದಲ್ಲಿ ಹೇಳಿಲ್ಲ. ಬದಲಿಗೆ ಗ್ರಾಮೀಣ ಜನರು ಕೂಲಿಗಾಗಿ ವಲಸೆ ಹೋಗುವುದನ್ನು ತಡೆಯುವಂತೆಯೂ ಮನವಿ ಮಾಡಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಒದಗಿಸುವಂತೆಯೂ ತಿಳಿಸಿದ್ದಾರೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಗಳ ಕೊಳವೆ ಬಾವಿಗಳ ಮಳೆ ನೀರು ಮರುಪೂರಣ, ಕೆರೆ ಕಟ್ಟೆ ಹೂಳೆತ್ತುವ, ಗುಂಡು ತೋಪು ನಿರ್ಮಿಸಬಹುದು. ಯೋಜನೆಯ ಬಳಕೆಯ ಕುರಿತು ಗ್ರಾಮೀಣ ಜನರಿಗೆ ತಿಳುವಳಿಕೆ, ಜಾಗೃತಿ ನೀಡುವಂತೆಯೂ ಸಲಹೆ ಮಾಡಿದ್ದಾರೆ.

ಜಿಲ್ಲೆಯು ಪ್ರಗತಿಯ ಜಿಲ್ಲೆಗಳ ಸಾಲಿನಲ್ಲಿ ಮಂಚೂಣಿಯಲ್ಲಿರುವಂತೆ ಮಾಡುವ ಕನಸಿಗೆ ನೀವು ಭಾಗಿಯಾಗಬೇಕು. ಪ್ರತಿ ದಿನ ಬಿಡುವಿನ ಸಮಯದಲ್ಲಿ ಎರಡು ಗಂಟೆಯಾದರೂ ಈ ಯೋಜನೆಗಳನ್ನು ಬಳಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿರುವುದು ವಿಶೇಷವಾಗಿದೆ.

`ಶೌಚಾಲಯ ಮತ್ತು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಮೊದಲಿನಿಂದಲೂ ಹಿಂದೆ ಬಿದ್ದಿದೆ. ಜನರ ಸಹಭಾಗಿತ್ವದೊಂದಿಗೆ ಆಡಳಿತದಲ್ಲಿ ಯಶಸ್ಸು ಕಾಣಬೇಕೆಂಬ ಗುರಿಯೊಂದಿಗೆ ವೈಯಕ್ತಿಕ ಪತ್ರ ಬರೆಯುವ ಉದ್ದೇಶಿಸಿದೆ. ಯಾವುದೇ ಯೋಜನೆ ಯಶಸ್ಸು ಆಗಬೇಕಾದರೆ ಜನರು ನಮ್ಮಂದಿಗೆ ಕೈ ಜೋಡಿಸಬೇಕು. ಪತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ' ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು `ಪ್ರಜಾವಾಣಿ'ಗೆ ತಿಳಿಸಿದರು.

ನಿರ್ಮಲ ಗ್ರಾಮ ಯೋಜನೆ ಜಾರಿಗೊಂಡು ಏಳು ವರ್ಷ ಸಂದರೂ ಜಿಲ್ಲೆಯ 321 ಗ್ರಾ.ಪಂ.ಗಳಲ್ಲಿ ಕೇವಲ 5 ಗ್ರಾ.ಪಂ.ಗೆ ಮಾತ್ರ ಪುರಸ್ಕಾರ ಸಿಕ್ಕಿದೆ. ಕನಿಷ್ಠ ನೂರು ಗ್ರಾ.ಪಂ. ನಿರ್ಮಲ ಪುರಸ್ಕಾರ ಪಡೆಯುವಂತಾಗಬೇಕೆಂಬ ಗುರಿ ಇಟ್ಟುಕೊಂಡು ಮಾಡುತ್ತಿರುವ ಅನೇಕ ಪ್ರಯತ್ನಗಳಿಂದಾಗಿ ಈ ಪತ್ರ ಚಳವಳಿಯೂ ಸೇರಿದೆ' ಎಂದು ಹೇಳಿದರು.50 ಮಾದರಿ ಗ್ರಾಮಗಳು

ಜಿಲ್ಲೆಯ 50 ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಮಾಡಲು ಪಣ ತೊಡಲಾಗಿದೆ. ಈ ಗ್ರಾಮಗಳಲ್ಲಿ ಶೇ ನೂರರಷ್ಟು ಶೌಚಾಲಯ, ಒಳಚರಂಡಿ, ಕುಡಿಯುವ ನೀರಿನ ನಲ್ಲಿ ಸಂಪರ್ಕ, ಅನಿಲ ಸಂಪರ್ಕ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ಅಪ್ನಾದೇಶ್ ಸ್ವಯಂ ಸೇವಾ ಸಂಘಟನೆ ನೆರವು ಪಡೆಯಲಾಗಿದೆ. ಈಗಾಗಲೇ ಈ 50 ಗ್ರಾಮಗಳಲ್ಲಿ ಜನ ಜಾಗೃತಿಯ ಕೆಲಸಗಳು ನಡೆಯುತ್ತಿವೆ.
ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT