ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 487 ಮ್ಯಾನುಯಲ್ ಸ್ಕ್ಯಾವೆಂಜರ್ಸ್

ಸಮೀಕ್ಷೆ ನಡೆದಿದೆ: ಒಬ್ಬರೂ ಕಂಡು ಬಂದಿಲ್ಲ
Last Updated 1 ಜೂನ್ 2013, 10:58 IST
ಅಕ್ಷರ ಗಾತ್ರ

ಕೋಲಾರ: ಮಲ ಹೊರುವುದು (ಮ್ಯಾನುಯಲ್ ಸ್ಕ್ಯಾವೆಂಜಿಂಗ್) ತಮ್ಮ ವೃತ್ತಿ ಎಂದು 2011ರ ಜನಗಣತಿ ಸಂದರ್ಭದಲ್ಲಿ ಜಿಲ್ಲೆಯ 487 ಮಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆ ವ್ಯಾಪ್ತಿಯ ಎರಡು ನಗರಸಭೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಆದರೆ ಇದುವರೆಗೂ ಅಂಥ ಒಬ್ಬರೂ ಕಂಡು ಬಂದಿಲ್ಲ.

ಜಿಲ್ಲೆಯಲ್ಲಿ ಎರಡು ನಗರಸಭೆ ಮತ್ತು ನಾಲ್ಕು ಪುರಸಭೆಗಳಿವೆ. ಆ ಪೈಕಿ ನಾಲ್ಕು ಪುರಸಭೆಗಳಲ್ಲಿ ಮಲ ಹೊರುವವರು ಇಲ್ಲ. ಆದರೆ ಕೋಲಾರ ನಗರಸಭೆ ಮತ್ತು ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆ ನಗರಸಭೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಇದ್ದಾರೆ ಎಂಬುದು 2011ರ ಜನಗಣತಿಯಲ್ಲಿ ದಾಖಲಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಅವರಿಗೆ ಬೇರೆ ವೃತ್ತಿ ಸೌಕರ್ಯ ಕಲ್ಪಿಸುವ ಸಲುವಾಗಿ ಸಮೀಕ್ಷೆ ನಡೆಯುತ್ತಿದೆ. ಈ ಪ್ರಕ್ರಿಯೆ ದೇಶದಾದ್ಯಂತ ನಡೆಯುತ್ತಿರುವುದು ವಿಶೇಷ.

ಜಿಲ್ಲೆಯ 4 ಪುರಸಭೆ ಮತ್ತು 2 ನಗರಸಭೆಗಳ ಒಟ್ಟು 1,02,416 ಮನೆಗಳ ಪೈಕಿ 82,141 ಮನೆಗಳಲ್ಲಿ ಮಾತ್ರ  ಶೌಚಾಲಯ ಸೌಲಭ್ಯವಿದೆ. ಅವುಗಳ ಪೈಕಿ 2882 ಶೌಚಾಲಯಗಳ ಸಂಪರ್ಕವನ್ನು ತೆರೆದ ಚರಂಡಿಗೆ ನೀಡಲಾಗಿದೆ. ಉಳಿದಂತೆ 487 ಮನೆಗಳಲ್ಲಿ ಶೌಚಾಲಯ ಸ್ವಚ್ಛತೆಗೆ ಮಾನವ ಸೇವೆ ಬಳಸಲಾಗುತ್ತಿದೆ.

ಕೋಲಾರ ನಗರಸಭೆಯ ವ್ಯಾಪ್ತಿಯಲ್ಲಿ 450 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿದ್ದಾರೆ. ಕೆಜಿಎಫ್‌ನ ರಾಬರ್ಟ್‌ಸನ್ ಪೇಟೆ ನಗರಸಭೆ ವ್ಯಾಪ್ತಿಯಲಿ ಅಂಥ ಕೆಲಸ ಮಾಡುವ 37  ಮಂದಿ ಇದ್ದಾರೆ ಎಂಬುದು 2011ರ ಜನಗಣಿಯಲ್ಲಿ ತಿಳಿದುಬಂದ ಅಂಶ.
ವಿಪರ್ಯಾಸವೆಂದರೆ 2011ರಲ್ಲಿ ಈ ನಗರಸಭೆಗಳು ತಮ್ಮ ವ್ಯಾಪ್ತಿಯಲ್ಲಿ ಮಲ- ಮೂತ್ರ ಸ್ವಚ್ಛತೆಗೆ ಮಾನವ ಸೇವೆಯನ್ನು ಬಳಸಲಾಗುತ್ತಿಲ್ಲ ಎಂದು ವರದಿಯನ್ನು ಸಲ್ಲಿಸಿದ್ದವು.

ನಗರದಲ್ಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಇಲಾಖೆ ಸೂಚನೆ ಮೇರೆಗೆ ನಡೆಸುತ್ತಿರುವ ಸಮೀಕ್ಷೆಗಾಗಿ 13 ಸಮೀಕ್ಷಕರು, 6 ಮೇಲ್ವಿಚಾರಕರು, ಒಬ್ಬ ಡಾಟಾ ಎಂಟ್ರಿ ಆಪರೇಟರ್ ಅನ್ನು ನೇಮಿಸಲಾಗಿದೆ.  ನಗರದ 35 ವಾರ್ಡ್‌ಗಳ ಪೈಕಿ ವಾರ್ಡ್ ನಂ 1, 35, 6 ಮತ್ತು 17ರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಅಲ್ಲಿ ಶೌಚಾಲಯ ಸ್ವಚ್ಛತೆಗಾಗಿ ಮಾನವ ಸೇವೆಯನ್ನು ಬಳಸುತ್ತಿರಬಹುದು. ಹೀಗಾಗಿ ಈ 4 ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ರಮೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಸಮೀಕ್ಷಕರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ನಗರಸಭೆಗೆ ಬಂದು ಮಾಹಿತಿ ನೀಡಿ, ನೋಂದಣಿ ಮಾಡಿಸುವ ವ್ಯವಸ್ಥೆಯೂ ಇದೆ. ಆದರೆ ಇದುವರೆಗೂ ಯಾರೊಬ್ಬರೂ ನೋಂದಣಿ ಮಾಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಶನಿವಾರ ಸಮೀಕ್ಷೆ ಮುಗಿಯಲಿದ್ದು, ಸಂಗ್ರಹಿಸಿದ ಮಾಹಿತಿಗಳ ಪರಿಶೀಲನೆ ಬಳಿಕವಷ್ಟೇ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಅವರು ತಿಳಿಸಿದ್ದಾರೆ.

ಶೌಚಾಲಯಗಳಿಂದ ಮಲ- ಮೂತ್ರಗಳನ್ನು ಸಂಗ್ರಹಿಸಲು ಎರಡು ಗುಂಡಿಗಳನ್ನು ಅಳವಡಿಸಿದ್ದರೆ ಅದು ಅನೈರ್ಮಲ್ಯ ಶೌಚಾಲಯವಲ್ಲ. ಒಂದೇ ಗುಂಡಿಯಲ್ಲಿ ಸಂಗ್ರಹಿಸಿ ಅದು ಒಣಗುವ ಮುನ್ನವೇ ಮಾನವ ಸೇವೆ ಬಳಸಿ ಸ್ವಚ್ಛಗೊಳಿಸಿದರೆ ಅದು ಅನೈರ್ಮಲ್ಯ ಶೌಚಾಲಯವಾಗುತ್ತದೆ. ಅಂಥ ಶೌಚಾಲಯಗಳನ್ನೂ ಸಮೀಕ್ಷೆ ಸಂದರ್ಭದಲ್ಲಿ ಪತ್ತೆ ಹಚ್ಚಲಾಗುವುದು ಎಂದಿದ್ದಾರೆ.

ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಯಾರು?
ಸಫಾಯಿ ಕರ್ಮಚಾರಿಗಳು ಮತ್ತು ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಮಾಡುವ ಕೆಲಸ ಒಂದೇ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಆದರೆ ಈ ಇಬ್ಬರ ವೃತ್ತಿಯಲ್ಲಿ ವ್ಯತ್ಯಾಸಗಳಿವೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಾಯಂ ಅಥವಾ ಗುತ್ತಿಗೆ ಆಧಾರದಲ್ಲಿ ರಸ್ತೆ ಗುಡಿಸಲು, ನೈರ್ಮಲ್ಯ, ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸಲು ನೇಮಕವಾದ ವ್ಯಕ್ತಿಗಳು ಸಫಾಯಿ ಕರ್ಮಚಾರಿಗಳು. ಇವರು ಮೂಲತಃ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಲ್ಲ ಎನ್ನುತ್ತದೆ ಸಬಲೀಕರಣ ಇಲಾಖೆ.

ಅನೈರ್ಮಲ್ಯ ಶೌಚಾಲಯಗಳಿಂದ, ತೆರೆದ ಚರಂಡಿ ಅಥವಾ ಗುಂಡಿಗಳಿಂದ ಮಲಮೂತ್ರಗಳನ್ನು ಅವು ಸಂಪೂರ್ಣ ಕೊಳೆಯುವ ಮೊದಲೇ ಸ್ವಚ್ಛಗೊಳಿಸುವವರು, ಬೇರೆ ಕಡೆಗೆ ಸಾಗಿಸುವವರು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು. ಸ್ವಯಂ ಉದ್ಯೋಗ ಅಥವಾ ಗುತ್ತಿಗೆ ಆಧಾರದಲ್ಲಿ ಈ ಕೆಲಸವನ್ನು ಅವರು ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT