ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಮಾನ್ಯತೆಗೆ ಒತ್ತಾಯ

Last Updated 17 ಡಿಸೆಂಬರ್ 2013, 6:41 IST
ಅಕ್ಷರ ಗಾತ್ರ

ಶಿರಸಿ: ‘ತಾಲ್ಲೂಕಿನ ನಿವೇಶನ ರಹಿತರಿಗೆ ಮನೆ ನಿವೇಶನ ಒದಗಿಸಬೇಕು, ಬಡವರ ಅತಿಕ್ರಮಣ ಜಮೀನು ಸಕ್ರಮ ಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಸೋಮವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿತು.

ತಾಲ್ಲೂಕು ಸಮಿತಿ ಅಧ್ಯಕ್ಷ ಬಂಗಾರೇಶ್ವರ ಗೌಡ ಮಾತನಾಡಿ, ‘ತಾಲ್ಲೂಕಿನ ಎಲ್ಲ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಹಾಗೂ ವಸತಿ ಒದಗಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿವೇಶನ ರಹಿತರು ಇದ್ದು, ಅವರಿಗೆ ಆಡಳಿತ ಬದುಕಿಗೆ ಅನುಕೂಲ ಮಾಡಿಕೊಡಬೇಕು’ ಎಂದರು.

‘ಕೃಷಿ ಕೂಲಿಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ನಿವೇಶನ ರಹಿತರ ವೈಯಕ್ತಿಕ ಅರ್ಜಿಗಳನ್ನು ಪರಿಶೀಲಿಸಿ ಕ್ರಮವಹಿಸಬೇಕು. ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಬೇಕು. ವಾರ್ಡ್‌ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಿ ಆ ಮೂಲಕ ಅರ್ಜಿ ಸ್ವೀಕೃತವಾಗಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಸಂಘಟನೆಯ ಸಿ.ಆರ್.ಶಾನಭಾಗ್‌, ನಾಗಪ್ಪ ನಾಯ್ಕ, ಲಲಿತಾ ದೇವಾಡಿಗ ಉಪಸ್ಥಿತರಿದ್ದರು.

ರಸ್ತೆ ತಡೆ
ಹೊನ್ನಾವರ:
ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಭೂಮಿ ಹಕ್ಕು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ಸೋಮವಾರ ರಸ್ತೆ ತಡೆ ನಡೆಸಿ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

‘ಬುಡಕಟ್ಟು ಜನಾಂಗದವರಿಗೆ ನಿರ್ದಿಷ್ಟಪಡಿಸಿರುವಂತೆ 2005ರೊಳಗಿನ ಅತಿಕ್ರಮಣ ಭೂಮಿಯನ್ನು ಮಂಜೂರು ಮಾಡುವುದನ್ನು ಇತರ ಪಾರಂಪರಿಕ ಅರಣ್ಯವಾಸಿಗಳಿಗೂ ಅನ್ವಯಿಸಬೇಕು, ಆದಿವಾಸಿ ಬುಡಕಟ್ಟು ಜನಾಂಗದವರ ಎಲ್ಲ ಅರಣ್ಯ ಅತಿಕ್ರಮಣ ಅರ್ಜಿಗಳನ್ನು ಮಾನ್ಯ ಮಾಡಬೇಕು, ಬಗರ ಹುಕುಂ ಸಾಗವಳಿದಾರರ ಅರ್ಜಿಯನ್ನು ಅಂಗೀಕರಿಸಬೇಕು, ಬಡವರಿಗೆ ಮನೆ ನಿವೇಶನ ನೀಡಿ ಮನೆ ಕಟ್ಟಿಕೊಡಬೇಕು, ಹೊನ್ನಾವರ ಪಟ್ಟಣ ವಾರ್ಡ್ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಿ ಅರ್ಜಿ ಸ್ವೀಕರಸಬೇಕು, ಡಾ.ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು, ಜನತಾ ಮನೆಗಳ ಮಾಲೀಕರ ಹೆಸರು ಪಹಣಿ ಪತ್ರಿಕೆಯಲ್ಲಿ ನೋಂದಣಿಯಾಗಬೇಕು’ ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಸರ್ಕಾರದ ಮುಂದಿಡಲಾಗಿದೆ.

ಮುಖಂಡ ತಿಲಕ ಗೌಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ತಿಮ್ಮಪ್ಪ ಗೌಡ, ಗಣೇಶ ಭಂಡಾರಿ ಹಾಜರಿದ್ದರು.

ಸರ್ಕಾರಕ್ಕೆ ಮನವಿ
ಭಟ್ಕಳ:
ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಭಟ್ಕಳ ತಾಲ್ಲೂಕು ಸಮಿತಿಯ ನಿಯೋಗವು ಸೋಮವಾರ ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಅರಣ್ಯ ಹಕ್ಕು ಮಾನ್ಯ ಮಾಡುವ ತಿದ್ದುಪಡಿ ಅಧಿನಿಯಮ 2012ರಲ್ಲಿ ಒತ್ತಿ ಹೇಳಿರುವಂತೆ 3 ತಲೆಮಾರು ಅಂದರೆ 75 ವರ್ಷ ಜಮೀನು ಸ್ವಾಧೀನದಲ್ಲಿರುವವರ ಸಾಕ್ಷ್ಯ ಕೇಳಿರುವುದನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಬುಡಕಟ್ಟು ಜನರಿಗೆ ಇರುವಂತೆ, 13–12–2005ರವರೆಗೆ ವಶದಲ್ಲಿದ್ದ ಇತರೇ ಅರಣ್ಯವಾಸಿಗಳಿಗೂ ಹಕ್ಕುಪತ್ರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅವಶ್ಯವಿದ್ದರೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಬೇಕು. ಎಲ್ಲಾ ಅರಣ್ಯ ಅತಿಕ್ರಮಣ ಅರ್ಜಿಗಳನ್ನು ಮಾನ್ಯ ಮಾಡಬೇಕು. ಸ್ವಾಧೀನದಲ್ಲಿರುವಷ್ಟು ಭೂಮಿಗೆ ಹಕ್ಕುಪತ್ರ ನೀಡಬೇಕು ಎಂದು ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸುಭಾಷ್‌ ಕೊಪ್ಪೀಕರ್‌, ಮಾದೇವ ಶಿರಾಲಿ ಮುಂತಾದವರು ಉಪಸ್ಥಿತರಿದ್ದರು.

ಹೆದ್ದಾರಿ ತಡೆದು ಪ್ರತಿಭಟನೆ
ಅಂಕೋಲಾ:
ಕರ್ನಾಟಕ ಪ್ರಾಂತ ರೈತ ಸಂಘದವರು ಅರಣ್ಯ ಅತಿಕ್ರಮಣ ಸಕ್ರಮಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಹೊರವಲಯದ ನೀಲಂಪುರ ಬಳಿ ರಾಷ್ಟ್ರೀಯ ಹೆದ್ದಾರಿ 66ನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಅರಣ್ಯ ಅತಿಕ್ರಮಣವನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತಾಲ್ಲೂಕಿನ ನೀಲಂಕಪುರ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಹಿಡಿದು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಜಿ.ಎನ್. ನಾಯ್ಕ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ತಾಲ್ಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಗಿರೀಶ ಡಿ. ಗೌಡ, ಶಿವಪ್ಪ ನಾಯಕ, ರಮೇಶ ನಾಯಕ, ಶಾಂತಾರಾಮ ನಾಯಕ ಅಚವೆ, ರವಿ ಸಿದ್ದಿ, ಸುರೇಶ ನಾಯ್ಕ, ಸುಚಿತ್ ನಾಯಕ, ಶ್ರೀಕಾಂತ ಜಾಂಬಳೇಕರ್, ಉದಯ ಗುನಗಾ, ರಂಜನ, ಬಾಲಚಂದ್ರ ಶೆಟ್ಟಿ, ನೂರಾರು ಅತಿಕ್ರಮಣದಾರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT