ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಒತ್ತಾಯ

Last Updated 7 ಸೆಪ್ಟೆಂಬರ್ 2013, 6:41 IST
ಅಕ್ಷರ ಗಾತ್ರ

ಶಿರಸಿ: ಯುವಜನರ ಮಹಾನಗರ ವಲಸೆ ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ವಿವಿಧ ವಿಶ್ವವಿದ್ಯಾಲಯಗಳನ್ನು ಜಿಲ್ಲೆಗೆ ತರುವ ಮೂಲಕ ಉನ್ನತ ಶಿಕ್ಷಣ ಹೆದ್ದಾರಿಯನ್ನಾಗಿ ರೂಪಿಸುವ ಅವಕಾಶಗಳ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಾಮಾಜಿಕ ಚಿಂತಕ ಶಶಿಭೂಷಣ ಹೆಗಡೆ ಸರ್ಕಾರವನ್ನು ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾ ವಲಯವನ್ನು ವಿಕೇಂದ್ರೀಕಣ ಮಾಡುವಲ್ಲಿ ಸರ್ಕಾರ ಎಡವಿದ್ದರಿಂದ ದೇಶದಲ್ಲಿ ಆರ್ಥಿಕ ವಲಯ ಸಂಕಷ್ಟಕ್ಕೆ ಸಿಲುಕಿದೆ. ಮಹಾನಗರ, ಎರಡನೇ ಹಂತದ ನಗರಗಳಲ್ಲಿ ಮಾತ್ರ ಐಟಿ, ಬಿಪಿಓ ಮತ್ತಿತರ ಉದ್ಯೋಗ ಸೃಷ್ಟಿಸುವ ಸೇವಾವಲಯ ಸ್ಥಾಪನೆಗೆ ಮುಂದಾಗುವ ಬದಲಾಗಿ ಮೂರನೇ ಹಂತದ ಸಣ್ಣ ನಗರಗಳಲ್ಲಿ ಇಂತಹ ಸೇವಾ ವಲಯ ವಿಸ್ತರಣೆ ಮಾಡಬೇಕು ಎಂದರು.

ಇದರಿಂದ ಸ್ಥಳೀಯ ಪದವೀಧರರಿಗೆ ಉದ್ಯೋಗ ದೊರೆತು ಮಹಾನಗರ ವಲಸೆ ಕಡಿಮೆಯಾಗುತ್ತದೆ. ಸೂಕ್ಷ್ಮ ಆರ್ಥಿಕತೆ ಸಹ ಅಭಿವೃದ್ಧಿಯಾಗುವುದಷ್ಟೇ ಅಲ್ಲ ಸೇವಾ ವಲಯದ ಭವಿಷ್ಯ ಉಜ್ವಲವಾಗುತ್ತದೆ. ಶಿರಸಿ ಮತ್ತು ಕುಮಟಾ ಐಟಿ ಪಾರ್ಕ್ ಸ್ಥಾಪನೆಗೆ ಸೂಕ್ತ ಸ್ಥಳವಾಗಿವೆ ಎಂದರು.

ಜಿಲ್ಲೆಯ ಪರಿಸರ ಬೃಹತ್ ಕೈಗಾರಿಕೆ ಸ್ಥಾಪನೆಗೆ ಪೂರಕವಾಗಿಲ್ಲ. ಇಂತಹ ಸೂಕ್ಷ್ಮ ಜಿಲ್ಲೆಯನ್ನು ಉನ್ನತ ಶಿಕ್ಷಣ ಹೆದ್ದಾರಿಯನ್ನಾಗಿ ರೂಪಿಸಲು ವಿಫುಲ ಅವಕಾಶಗಳಿವೆ. ಸರ್ಕಾರ 13 ಹೊಸ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಇಚ್ಛಾಶಕ್ತಿ ತೋರಿ ಅವನ್ನು ಜಿಲ್ಲೆಗೆ ಕರೆ ತಂದರೆ ದೇಶದಲ್ಲೇ ವಿನೂತನ ಯೋಜನೆ ಉತ್ತರ ಕನ್ನಡದಲ್ಲಿ ಜಾರಿಗೊಂಡಂತಾಗುತ್ತದೆ ಎಂದು ಅವರು ಹೇಳಿದರು.

ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಖುದ್ದು ಭೇಟಿ ಮಾಡಿ ಮಾತನಾಡಲಾಗುವುದು ಎಂದು ಶಶಿಭೂಷಣ ಹೆಗಡೆ ಹೇಳಿದರು. ಎನ್. ಎಸ್. ಹೆಗಡೆ, ಜಿ.ಎನ್. ಹೆಗಡೆ ಹೂತನ್, ಶ್ರೀರಾಮ ಭಟ್ಟ, ಸತೀಶ ನಾಯ್ಕ, ಪಿ.ಟಿ.ನಾಯ್ಕ, ಸುಭಾಷ್ ಮಂಡೂರ್, ಆರ್.ಎಂ.ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT