ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕಾಣೆಯಾದ ಉತ್ಸವ, ಹೋರಾಟ

Last Updated 22 ಅಕ್ಟೋಬರ್ 2011, 11:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ತಿಂಗಳ ವೇಳೆಗೆ ಎರಡು ಬಾರಿ ಜಿಲ್ಲಾ ನಂದಿ ಉತ್ಸವ ಆಚರಣೆಯಾಗಬೇಕಿತ್ತು. ಕೆಲ ತಿಂಗಳ ಹಿಂದೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ರೇಷ್ಮೆ ಕೃಷಿಕರ ಹೋರಾಟ ಈ ವೇಳೆಗೆ ಸ್ಪಷ್ಟವಾದ ನಿರ್ಣಯಕ್ಕೆ ಬರಬೇಕಿತ್ತು.
 
ಜಿಲ್ಲಾ ಬಂದ್ ಆಚರಣೆ ಮಾಡಿದ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಭಾರಿ ಚಳವಳಿಯನ್ನೇ ಮಾಡುವುದಾಗಿ ಹೇಳಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ಧನ ಸಿಗುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಜಮೀನು ಕಳೆದುಕೊಂಡ ರೈತರು ಹೇಳಿದ್ದರು.

ರಾಜಕೀಯ ಚಟುವಟಿಕೆಯಲ್ಲಿ ಕೆಲವು ಏರುಪೇರಾದ ಕಾರಣ ಕಳೆದ ವರ್ಷವೇ ಆಚರಣೆಯಾಗಬೇಕಿದ್ದ ಜಿಲ್ಲಾ ನಂದಿ ಉತ್ಸವ ಮುಂದೂಡಲ್ಪಟ್ಟಿತ್ತು. ಎಲ್ಲ ರೀತಿಯ ಮತ್ತು ಎಲ್ಲ ಹಂತಗಳ ಸಿದ್ಧತೆ ಪೂರ್ಣಗೊಂಡಿದ್ದರೂ; ಮುಖ್ಯಮಂತ್ರಿಯವರೇ ಉತ್ಸವ ಉದ್ಘಾಟಿಸಬೇಕು ಎಂಬ ವಾದ ಬಲವಾಗಿ ಕೇಳಿ ಬಂದ ಕಾರಣದಿಂದಲೂ ಉತ್ಸವ ಆಚರಣೆ ಮುಂದೂಡಲ್ಪಟ್ಟಿತ್ತು.

ಪ್ರೊ.ಮುಮ್ತಾಜ್ ಅಲಿಖಾನ್ ಜಿಲ್ಲಾ ಉಸ್ತವಾರಿ ಸಚಿವರಾಗಿದ್ದಲೇ ನೆರವೇರಬೇಕಿದ್ದ ನಂದಿ ಉತ್ಸವ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವಧಿಯ್ಲ್ಲಲೂ ನಡೆಯುವ ಸಾಧ್ಯತೆ ಕಡಿಮೆ ಎಂಬ ಮಾತು ಕೇಳಿ ಬರುತ್ತಿವೆ.

ಕೋಲಾರದಿಂದ ಬೇರ್ಪಟ್ಟು 2007ರ ಆಗಸ್ಟ್ 23ರಂದು ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜಿಲ್ಲಾ ನಂದಿ ಉತ್ಸವ ಆಚರಿಸಲು ತೀರ್ಮಾನಿಸಲಾಗಿತ್ತು. ಆದರೆ ಈವರೆಗೆ ಒಂದು ಬಾರಿ ಮಾತ್ರವೇ ಉತ್ಸವ ಆಚರಿಸಲಾಗಿದ್ದು, ಬೇರೆ ಬೇರೆ ಕಾರಣಗಳಿಂದ ಉತ್ಸವ ಮುಂದೂಡಲ್ಪಡುತ್ತಿದೆ.

ಆಗಸ್ಟ್ 23ರಂದು ಜಿಲ್ಲಾಡಳಿತದಿಂದ ಅಥವಾ ಸರ್ಕಾರದಿಂದ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಜಿಲ್ಲೆಯ ಕೆಲ ಮುಖಂಡರು ಸಿಹಿ ಹಂಚುವುದು ಹೊರತುಪಡಿಸಿದರೆ, ಬೇರೆ ಸಂಭ್ರಮ ಕಾಣಸಿಗುವುದಿಲ್ಲ.
`ಪ್ರಸಕ್ತ ವರ್ಷ ನಂದಿ ಉತ್ಸವ ಆಚರಿಸಲೇಬೇಕು ಎಂದು ತೀರ್ಮಾನಿಸಿದ್ದೆವು.

ಕೆಲ ತಿಂಗಳ ಹಿಂದೆ ನಂದಿ ಬೆಟ್ಟದಲ್ಲಿ ನಡೆದ ಜಿಲ್ಲಾಡಳಿತದ ಸಭೆಯಲ್ಲಿ ಈ ವಿಷಯವನ್ನು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಪ್ರಸ್ತಾಪಿಸಿದ್ದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಂದಿ ಉತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಲ್ಲದೇ ಬರಗಾಲ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಸಚಿವರಿಗೆ ಉತ್ಸವದ ವಿಷಯ ಪ್ರಸ್ತಾಪಿಸುವುದು ಹೇಗೆ ಮತ್ತು ಉತ್ಸವ ಆಚರಿಸುವುದಾದರೂ ಹೇಗೆ~ ಎಂದು ಶಾಸಕ ಕೆ.ಪಿ.ಬಚ್ಚೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಉತ್ಸವ ಆಚರಣೆ ಸ್ಥಿತಿ ಹೀಗಿದ್ದರೆ, ಹೋರಾಟದ ಸ್ಥಿತಿಗತಿಯಲ್ಲೂ ಹೆಚ್ಚಿನ ಭಿನ್ನತೆ ಏನೂ ಇಲ್ಲ. ಸುಂಕರಹಿತ ರೇಷ್ಮೆ ಆಮದನ್ನು ವಿರೋಧಿಸಿ ಮತ್ತು ರೇಷ್ಮೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಜಿಲ್ಲೆಯ ರೇಷ್ಮೆ ಕೃಷಿಕರು ಭಾರಿ ಪ್ರಮಾಣದ ಹೋರಾಟ ಕೈಗೊಂಡಿದ್ದರು.

ಜಿಲ್ಲಾ ಬಂದ್ ಆಚರಿಸಿದ್ದ ರೇಷ್ಮೆ ಕೃಷಿಕರು ಹಲವು ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಹೋರಾಟದ ಸಂದರ್ಭದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರನ್ನು ಶಿಡ್ಲಘಟ್ಟದಲ್ಲಿ ಘೇರಾವ್ ಕೂಡ ಮಾಡಿದ್ದರು. ಈಚಿನ ದಿನಗಳಲ್ಲಿ ಹೋರಾಟ ತಣ್ಣಗಾಗಿರುವ ಬಗ್ಗೆ ರೇಷ್ಮೆ ಕೃಷಿಕರೇ ನಿರಾಸೆ ವ್ಯಕ್ತಪಡಿಸುತ್ತಾರೆ.

ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಮೂಲಕ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಭಾರಿ ಆಶಾಭಾವನೆ ಇಟ್ಟುಕೊಂಡಿದ್ದರು.

ನೀರಾವರಿ ತಜ್ಞ ಡಾ. ಜಿ.ಎಸ್.ಪರಮಶಿವಯ್ಯ ವರದಿ ಅನುಷ್ಠಾನಗೊಳಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದಾಗ ಎಲ್ಲೆಡೆ ಸಂಭ್ರಮಾಚರಣೆ ಕೈಗೊಳ್ಳಲಾಗಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಲಾಗಿತ್ತು. ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರಗತಿ ಕಾಣದಿರುವ ಬಗ್ಗೆ ಹೋರಾಟ ಸಮಿತಿ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ.

ಹೋರಾಟ ಕುರಿತು ರೇಷ್ಮೆ ಕೃಷಿಕರನ್ನು ಮತ್ತು ನೀರಾವರಿ ಹೋರಾಟ ಸಮಿತಿ ಸದಸ್ಯರನ್ನು ಪ್ರಶ್ನಿಸಿದರೆ, ಬೇರೆ ಬೇರೆಯದ್ದೇ ಉತ್ತರ ದೊರೆಯುತ್ತವೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಸಂಸತ್ ಚಲೋ ಹಮ್ಮಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ರೇಷ್ಮೆ ಕೃಷಿಕರು ಹೇಳುತ್ತಾರೆ.

ಕೋಲಾರದಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಧ್ವನಿಯೆತ್ತಿದ ನಂತರ ಮತ್ತೆ ಜಾಗೃತಗೊಂಡಿರುವ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT