ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ

Last Updated 27 ಜೂನ್ 2012, 8:35 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಪೊಲೀಸರ ಕೊರತೆ ದಿನೇ ದಿನೇ ಹೆಚ್ಚುತ್ತಿದ್ದು, ಇರುವ ಸಿಬ್ಬಂದಿ ಮೇಲೆ ತೀವ್ರ ಒತ್ತಡ ಬೀಳುತ್ತಿದೆ. ಅಗತ್ಯ ಸಿಬ್ಬಂದಿಗಾಗಿ ಪ್ರತಿ ವರ್ಷ ಪ್ರಸ್ತಾವ ಸಲ್ಲಿಸಲಾಗುತ್ತಿದ್ದರೂ; ನಿಗದಿತ ಸಮಯಕ್ಕೆ ಹುದ್ದೆ ಭರ್ತಿಯಾಗದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ.

ಪ್ರತಿ ವರ್ಷ ಇರುವ ಸಿಬ್ಬಂದಿಯ ಶೇ 10ರಷ್ಟು ಮಂದಿ ನಿವೃತ್ತಿ ಮತ್ತು ಬದಲಿ ಉದ್ಯೋಗಕ್ಕೆ ತೆರಳುವ ಕಾರಣಕ್ಕೆ ಹುದ್ದೆಗಳು ಖಾಲಿ ಆಗುತ್ತಿವೆ. ಆದರೆ ಸರ್ಕಾರದ ಹಂತದಲ್ಲಿ ಅನುಮತಿ ಪಡೆದು ಭರ್ತಿ ಮಾಡಲು ಸುಮಾರು ಎರಡು ವರ್ಷಗಳ ಕಾಲ ಬೇಕಾಗುತ್ತದೆ. ಇದು ಪ್ರತಿ ವರ್ಷದ ಸಮಸ್ಯೆಯಾಗಿ ಪೊಲೀಸ್ ಇಲಾಖೆಯನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಹುದ್ದೆ ಸೇರಿದಂತೆ ಉನ್ನತ ಹುದ್ದೆಗಳು ಸಹ ಖಾಲಿ ಇವೆ. ಕಳೆದ 8 ತಿಂಗಳ ಹಿಂದೆ ಎಎಸ್‌ಪಿ ಶಿವಶಂಕರ್ ವರ್ಗಾವಣೆಯಾದ ನಂತರ ಮತ್ತೊಬ್ಬರ ವರ್ಗಾವಣೆಯಾಗಿಲ್ಲ.

ತುಮಕೂರು 10 ತಾಲ್ಲೂಕುಗಳ ದೊಡ್ಡ ಜಿಲ್ಲೆ. ಆದರೆ ಸಂಚಾರಿ ಠಾಣೆಗಳು ಸೇರಿದಂತೆ ಕೇವಲ 38 ಠಾಣೆಗಳಿವೆ. ಮಂಜೂರಾಗಿರುವ ಹುದ್ದೆಗಳಲ್ಲಿ 161 ಹುದ್ದೆ ಖಾಲಿ ಇವೆ. ಅಲ್ಲದೆ ಮುಂದೆ ಭರ್ತಿಯಾಗುವವರೆಗೆ ಈ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಅಲ್ಲದೆ ಈಚೆಗೆ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಸೇರಿದಂತೆ ಇತರೆ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಕಾನೂನು ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಬರುತ್ತಿದ್ದಾರೆ.

ಅವರು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉನ್ನತ ಹುದ್ದೆಗಳಿಗೆ ತೆರಳುವುದರಿಂದ ಸಹ ಪೊಲೀಸ್ ಉದ್ಯೋಗ ಬಿಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ತಕ್ಷಣ ಇಂತಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗದ ಕಾರಣ ಸಮಸ್ಯೆಯಾಗಿದೆ.

ಜಿಲ್ಲೆಯಲ್ಲಿ 119 ಎಎಸ್‌ಐ, 472 ಹೆಡ್ ಕಾನ್‌ಸ್ಟೆಬಲ್, 1443 ಕಾನ್‌ಸ್ಟೆಬಲ್ ಹುದ್ದೆ ಮಂಜೂರಾತಿ ಆಗಿದೆ. ಆದರೆ ಇದು 15 ವರ್ಷದ ಹಿಂದೆ ನೀಡಲಾಗಿದ್ದ ಮಂಜೂರಾತಿ. ಇದುವರೆಗೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಆದರೆ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆ, ಸಿಬ್ಬಂದಿಯಲ್ಲಿ ಹೆಚ್ಚಳವಾಗಿಲ್ಲ. ಜಿಲ್ಲೆಯಲ್ಲಿ 3 ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತವೆ. ಇದರಿಂದ ಸಚಿವರು ಮತ್ತು ಗಣ್ಯರ ಸಂಚಾರವೂ ಹೆಚ್ಚು. ಈ ಸಂದರ್ಭದಲ್ಲಿ ಎಸ್ಕಾರ್ಟ್ ನೀಡಬೇಕಾಗುತ್ತದೆ. ಹೀಗಾಗಿ ಸಿಬ್ಬಂದಿ ಮೇಲೆ ಒತ್ತಡವಿದೆ ಎಂದು ಎಸ್‌ಪಿ ಟಿ.ಆರ್.ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಜಿಲ್ಲೆಗೆ 85 ಕಾನ್‌ಸ್ಟೆಬಲ್ ಹುದ್ದೆ ಮಂಜೂರು ಮಾಡಲಾಗಿದೆ. ತರಬೇತಿ ನಂತರ ಅವರು ಸೇವೆಗೆ ಬರಲಿದ್ದಾರೆ. ಆದರೆ ಆಸಮಯಕ್ಕೆ ಮತ್ತೆ ಒಂದಷ್ಟು ಮಂದಿ ನಿವೃತ್ತರಾಗುತ್ತಾರೆ. ಮತ್ತಷ್ಟು ಸಿಬ್ಬಂದಿ ಇತರೆ ಇಲಾಖೆಗೆ ಹುದ್ದೆ ಬದಲಿಸುತ್ತಾರೆ. ಸಿಬ್ಬಂದಿ ಸಮಸ್ಯೆ ನಿರಂತರ ಎನ್ನುವಂತಾಗಿದೆ ಎಂದರು.

ಒತ್ತಡ ನಿರ್ವಹಣೆಗೆ ಯೋಗದ ಮೊರೆ

ಪೊಲೀಸ್ ಸಿಬ್ಬಂದಿಯ ಒತ್ತಡ ನಿರ್ವಹಣೆಗೆ ಯೋಗ ಮತ್ತು ಧ್ಯಾನ ಶಿಬಿರ ನಡೆಸಲು ಯೋಚಿಸಲಾಗಿದೆ. ಕಳೆದ ವರ್ಷ ಅಂತಹ ಪ್ರಯೋಗ ಮಾಡಲಾಗಿತ್ತು. ಆದರೆ ಪ್ರತಿನಿತ್ಯ ತಡರಾತ್ರಿವರೆಗೂ ಸಿಬ್ಬಂದಿ ಕೆಲಸ ನಿರ್ವಹಿಸುವುದರಿಂದ ಬೆಳಿಗ್ಗೆ ಶಿಬಿರಕ್ಕೆ ಬರುವುದು ಸಮಸ್ಯೆ. ಆದರೂ ಕೆಲವು ಬ್ಯಾಚ್‌ಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ನಗರದಲ್ಲಿ ಎರಡು ಕಡೆ ಮತ್ತು ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಶಿಬಿರ ನಡೆಸಲಾಗುವುದು. ಅಗತ್ಯ ಆಸನಗಳನ್ನು ಸಿಬ್ಬಂದಿಗೆ ಕಲಿಸುವಂತೆ ಯೋಗ ಗುರುಗಳನ್ನು ಕೋರಲಾಗಿದೆ. ಅಲ್ಲದೆ ಸಿಬ್ಬಂದಿ ತಮ್ಮಂದಿಗೆ ಯಾವುದೇ ಸಮಯದಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ. ಒಟ್ಟಾರೆ ಸಿಬ್ಬಂದಿಯ ವರ್ತನೆ ಸರಿಪಡಿಸುವುದು ಮತ್ತು ಕಾರ್ಯನಿರ್ವಹಣೆ ಸಾಮರ್ಥ್ಯ ಹೆಚ್ಚಿಸುವುದು ತಮ್ಮ ಗುರಿ ಎಂದು ಎಸ್ಪಿ ತಿಳಿಸಿದರು.

5 ಠಾಣೆಗೆ ಪ್ರಸ್ತಾವ
ಜಿಲ್ಲೆಗೆ 5 ಹೆಚ್ಚುವರಿ ಪೊಲೀಸ್ ಠಾಣೆ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ನಗರದ ಜಯನಗರ, ಶಿರಾ ಗ್ರಾಮಾಂತರ, ನಿಟ್ಟೂರು, ಕೋಳಾಲದಲ್ಲಿ ಠಾಣೆ ಹಾಗೂ ತಿಪಟೂರಿನಲ್ಲಿ ಸಂಚಾರಿ ಠಾಣೆ ತೆರೆಯುವಂತೆ ಕೋರಲಾಗಿದೆ. ಇದಕ್ಕೆ ಮಂಜೂರಾತಿ ಸಿಗುವ ಭರವಸೆ ಇದೆ ಎಂದು ಎಸ್ಪಿ ಟಿ.ಆರ್.ಸುರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT