ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

Last Updated 7 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ಬೆಳಗಾವಿ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶನಿವಾರ ಕರೆ ನೀಡಿದ್ದ `ಕರ್ನಾಟಕ ಬಂದ್~ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ವಿವಿಧ ಕನ್ನಡ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸಿದವು.

ಬೆಳಗಾವಿ ನಗರದಲ್ಲಿ ಬಸ್, ಆಟೋಗಳು ಸುಗಮವಾಗಿ ಸಂಚರಿಸಿದರೆ, ಶಾಲಾ- ಕಾಲೇಜುಗಳು ಎಂದಿನಂತೆ ನಡೆದವು. ಮಾರ್ಕೆಟ್‌ನ ಕೆಲವು ಅಂಗಡಿಗಳು ಮುಚ್ಚಿದ್ದನ್ನು ಬಿಟ್ಟರೆ, ಉಳಿದಂತೆ ವಹಿವಾಟು ಸರಾಗವಾಗಿ ನಡೆಯಿತು. ರಾಮದುರ್ಗ ತಾಲ್ಲೂಕಿನಲ್ಲಿ ಶಾಲಾ- ಕಾಲೇಜು ಬಂದ್ ಮಾಡಲಾಗಿತ್ತು.

ಚಿಕ್ಕೋಡಿ ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ ಕೆಲ ಕಾಲ ಬಸ್ ಸಂಚಾರ ವ್ಯತ್ಯಯಗೊಂಡಿತ್ತು. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕನ್ನಡ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬೆಳಗಾವಿ ನಗರದ ಚನ್ನಮ್ಮ ವೃತ್ತ ಹಾಗೂ ಸಿಬಿಟಿ ಬಸ್ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಪಡೆಯ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಕರ್ನಾಟಕ ನವ ನಿರ್ಮಾಣ ಪಡೆಯ ಅಧ್ಯಕ್ಷ ರಾಜೀವ ಟೋಪಣ್ಣವರ ನೇತೃತ್ವದಲ್ಲಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದಾಗ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು. ಸಿಬಿಟಿ ಬಸ್ ನಿಲ್ದಾಣದ ಎದುರು ಧರಣಿ ನಡೆಸಿ ಸಂಚಾರಕ್ಕೆ ಅಡ್ಡಿ ಪಡಿಸಿದ ನವ ನಿರ್ಮಾಣ ಪಡೆಯ ಇನ್ನೊಂದಿಷ್ಟು ಕಾರ್ಯಕರ್ತರು ಬಂಧನಕ್ಕೊಳಗಾದರು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ ನೇತೃತ್ವದಲ್ಲಿ ಚನ್ನಮ್ಮ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಪ್ರತಿಭಟಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಶ್ರಯದಲ್ಲಿ ವಿವಿಧ ಮುಖಂಡರು ಚನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. `ಕಾವೇರಿ ನೀರು ಬಿಡುಗಡೆ ವಿಷಯದಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಜಲಾಶಯದಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣವನ್ನು ಪರಿಗಣಿಸಿ, ಕೂಡಲೇ ಕಾವೇರಿ ನೀರನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ  ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ, ಅಶೋಕ ಚಂದರಗಿ, ರಮೇಶ ಸೊಂಟಕ್ಕಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ಮಾಜಿ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ, ಶಂಕರ ಬಾಗೇವಾಡಿ ಮತ್ತಿತರರು ಹಾಜರಿದ್ದರು.

ಜೆಡಿಎಸ್ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಜಾತ್ಯತೀತ ಜನತಾದ ದಳದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜಾರಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದರು. ಬಳಿಕ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಮುಖಂಡರು, `ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸದೇ ಇರುವುದರಿಂದ ನೀರು ಬಿಡುವಂತಾಗಿದೆ. ರಾಜ್ಯದಲ್ಲಿ ತೀವ್ರ ಬರ ಇರುವುದರಿಂದ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು~ ಎಂದು ಒತ್ತಾಯಿಸಿದರು.

ಕೃಷಿಕ ಸಮಾಜ:
ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಲಿಂಗರಾಜ ಪಾಟೀಲ ನೇತೃತ್ವದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕೋಲಾ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಚಿಕ್ಕೋಡಿ: ಮನವಿ ಆರ್ಪಣೆ
ಚಿಕ್ಕೋಡಿ:
ಕರ್ನಾಟಕ ಬಂದ್‌ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆದರೆ, ಅಂಕಲಿಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಟ್ಟಣದಲ್ಲಿ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡಿಗರೆಲ್ಲ ಜಾತ್ಯತೀತ ಮತ್ತು ಪಕ್ಷಾತೀತವಾದ ಹೋರಾಟ ನಡೆಸುವ ಅಗತ್ಯವಿದೆ. ರಾಜ್ಯದ ಹಿತ ಕಾಪಾಡಲು ಮುಖ್ಯಮಂತ್ರಿಗಳು ಅಧಿಕಾರ ತ್ಯಜಿಸಲೂ ಸಿದ್ಧರಾಗಿರಬೇಕು ಎಂದು ಹೇಳಿದರು.

 ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೇಂದ್ರ ಬಸ್‌ನಿಲ್ದಾಣದ ಬಳಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನೂ ಕೂಗಿದರು. ನಿವೃತ್ತ ಪ್ರಾಧ್ಯಾಪಕ ಎಸ್.ವೈ.ಹಂಜಿ, ಕರವೇ ತಾಲ್ಲೂಕು ಅಧ್ಯಕ್ಷ ಸಂಜು ಬಡಿಗೇರ, ಶಿವಾನಂದ ಘರಬುಡೆ, ಕೆಂಪೆಗೌಡ ಪೂಜಾರಿ, ಮಾನಿಂಗ ಬಾನಿ, ಶಿವಾನಂದ ಮಾಳಿ, ಬಸ್ವರಾಜ ಪಾಶ್ಚಾಪೂರೆ  ಪಾಲ್ಗೊಂಡಿದ್ದರು.

ಕೆಲಹೊತ್ತು ಸಾರಿಗೆ ಸಂಚಾರವೂ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಬೇಕಾಯಿತು. ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು.

ರಸ್ತೆ ತಡೆ: ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಕನ್ನಡಪರ ಕಾರ್ಯಕರ್ತರು, ಗ್ರಾ.ಪಂ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೇ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಸಿದರು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆದ ಪರಿಣಾಮವಾಗಿ ಸಾರಿಗೆ ಸಂಚಾರ ಅಸ್ತವ್ಯಸ್ತವಾಯಿತು.

ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಡಿಕೆಎಸ್‌ಎಸ್‌ಕೆ ಸಂಚಾಲಕ ಮಲ್ಲಿಕಾರ್ಜುನ ಕೋರೆ, ಸುರೇಶ ಪಾಟೀಲ, ಪಿಂಟು ಹಿರೇಕುರಬರ, ತುಕಾರಾಮ ಪಾಟೀಲ, ದೀಪಕ ಮೇದಾರ, ವಿವೇಕ ಕಮತೆ ಭಾಗವಹಿಸಿದ್ದರು.

ಪ್ರಧಾನಿ ಅಣಕು ಶವಯಾತ್ರೆ

ಗೋಕಾಕ:
ಕಾವೇರಿ ನೀರು ಬಿಡುಗಡೆ ಸಂಬಂಧ ಕೇಂದ್ರ ಸರ್ಕಾರದ   ಧೋರಣೆ  ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು..
ಇಲ್ಲಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನೆರೆದ ವಿವಿಧ ಸಂಘಟನೆಗಳು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು, ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್  ಪ್ರತಿಕೃತಿಯ ಶವಯಾತ್ರೆ ನಡೆಸಿ, ಬಸವೇಶ್ವರ ವೃತ್ತದಲ್ಲಿ ಪ್ರತಿಕೃತಿ ಶವಸಂಸ್ಕಾರ ನಡೆಸಲಾಯಿತು.

ಪ್ರವೀಣಶೆಟ್ಟಿ ಬಣದ ಕರವೇ ಅಧ್ಯಕ್ಷೆ ಕಿರಣ ಡಮಾಮಗರ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಯಲ್ಲಪ್ಪ ಮಾದರ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವನಗೌಡ ಗೌಡರ, ಸತ್ಯಜೀತ ಕರವಾಡೆ, ಬಿ.ಬಿ.ಹತ್ತರಕಿ, ಶಿವಾನಂದ ಆಶಿ, ಯಲ್ಲಪ್ಪ ಗೌಡರ ಭಾಗವಹಿಸಿದ್ದರು.

ಜೆಡಿಎಸ್ ಪ್ರತಿಭಟನೆ: ಗೋಕಾಕ ನಗರದಲ್ಲಿ ಜೆಡಿಎಸ್  ಕಾರ್ಯಕರ್ತರು  ಕಾವೇರಿ  ನೀರು ಬಿಡುಗಡೆಯ ಸಂಬಂಧ  ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ರಾಜು ನಿರ್ವಾಣಿ, ಬಸವಣ್ಣೆಪ್ಪ ಕಂಬಾರ, ಶ್ರೀಶೈಲ ಪೂಜಾರಿ, ಸಂಜಯ ಪೂಜಾರಿ, ಅನ್ನಪೂರ್ಣಾ ನಿರ್ವಾಣಿ ಮೊದಲಾದವರು ಪಾಲ್ಗೊಂಡಿದ್ದರು.

ಘಟಪ್ರಭಾ ವರದಿ : ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ, ಕರ್ನಾಟಕ ನವ ನಿರ್ಮಾಣ ಪಡೆ, ರೈತ ಸಂಘ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಘಟಪ್ರಭಾ ಗ್ರಾಮದಲ್ಲಿ ಪ್ರತಿಭಟಿಸಿದರು.

ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಗುಬ್ಬಲಗುಡ್ಡ ಕೆಂಪಯ್ಯೊಸ್ವಾಮಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಭೀಮಶೆಪ್ಪ ಕಮತ, ಕೆ.ಕೆ.ಪಟ್ಟಣಶೆಟ್ಟಿ, ಭೀಮಶಿ ಗದಾಡಿ, ಮಡಿವಾಳಪ್ಪ ಮುಚಳಂಬಿ, ಸುರೇಶ ಪಾಟೀಲ, ಕರಲಿಂಗನವರ, ಕಲ್ಲಪ್ಪ ಚೌಕಶಿ, ಬಸವರಾಜ ಕತ್ತಿ, ಸಾಧಿಕ ಹಲ್ಯಾಳ, ಕೃಷ್ಣಾ ಬಂಡಿವಡ್ಡರ, ಶಫಿ ಜಮಾದಾರ,
 
ಅಬ್ಬಾಸ ದೇಸಾಯಿ, ಶಂಕರ ಹೂಲಿಕಟ್ಟಿ, ಕಲ್ಲೋಳೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಕೆಂಪಣ್ಣ ಕಡಕೋಳ, ನಾಗಪ್ಪ ಗದಾಡಿ, ರಾಮಸಿದ್ದ ತೋಳಿ, ರೆಹಮಾನ ಮೊಕಾಶಿ, ವಸಂತ ತಳಗೇರಿ, ಕರೆಪ್ಪ ಹೊರಟ್ಟಿ, ಪಪ್ಪು ಹಂದಿಗುಂದ ಮತ್ತು ಕೃಷ್ಣಾ ಖಾನಪ್ಪನವರ   ಉಪಸ್ಥಿತರಿದ್ದರು.

ಶಾಂತಿಯುತ ಬಂದ್
ಸಂಕೇಶ್ವರ
:ಪಟ್ಟಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಸಂಕೇಶ್ವರ ಬಂದ್ ಆಚರಿಸಲಾಯಿತು. ಬಂದ್ ಶಾಂತಯುತವಾಗಿತ್ತು.

ಬಂದ್ ಅಂಗವಾಗಿ ಅಂಗಡಿಗಳು, ಹೋಟೆಲುಗಳು ಮುಚ್ಚಿದ್ದವು. ವಾಹನ ಸಂಚಾರ ವಿರಳವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಂದ್ ಅಂಗವಾಗಿ ಮಹಾತ್ಮಾ ಗಾಂಧಿ ವೃತ್ತದಿಂದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವನಿರ್ಮಾಣ ಪಡೆ, ಕನ್ನಡ ಬಳಗ, ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಮೆರವಣಿಗೆ ನಡೆಸಿ ಉಪ-ತಹಶೀಲ್ದಾರರಿಗೆ ಮನವಿ ಅರ್ಪಿಸಿ, ತಕ್ಷಣವೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರಾಮದುರ್ಗದಲ್ಲಿ ಪ್ರತಿಭಟನೆ
ರಾಮದುರ್ಗ:
ಕೇಂದ್ರ ಸರ್ಕಾರದ ಜಲ ನೀತಿಯನ್ನು ವಿರೋಧಿಸಿ ಇಲ್ಲಿನ ಜೆಡಿಎಸ್ ಪಕ್ಷ ಮತ್ತು  ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ ಹಂಪಿಹೊಳಿ, ತಮಿಳುನಾಡಿನ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಿದೆ. ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. ಶೀಘ್ರ ಕಾವೇರಿ ನೀರನ್ನು ನಿಲ್ಲಿಸಿ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ತಮಿಳುನಾಡಿಗೆ ನೀರು ಹರಿಸಿರುವುದು ಖೇದಕರ ಸಂಗತಿ ಎಂದು ಹೇಳಿದರು.

ಮಾಜಿ ಶಾಸಕ ಎನ್. ವಿ. ಪಾಟೀಲ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೈ. ಎಚ್. ಪಾಟೀಲ, ದುಂಡಯ್ಯ ಹಿರೇಮಠ,  ಜೆಡಿಎಸ್ ಮುಖಂಡ ಪಿ. ಎಫ್. ಪಾಟೀಲ, ಜಿ. ವಿ. ನಾಡಗೌಡ, ಮುಸ್ತಾಫ್ ದಾವಲಭಾಯಿ, ಬಿ. ಆರ್. ದೊಡಮನಿ, ಬಿ. ಬಿ. ಹಿರೇರಡ್ಡಿ, ಸೋನಾಭಾಯಿ ಮೇತ್ರಿ, ನಿಂಗಪ್ಪ ಗುದಗಿ, ಮಹಾಂತೇಶ ಗೋಲಶೆಟ್ಟಿ, ಕೃಷ್ಣ ಸಾಲಿಮನಿ, ಶಾಸನಗೌಡ ಪಾಟೀಲ, ಬಿ. ಎನ್. ಸಿಂಗಾರಗೊಪ್ಪ ನೇತೃತ್ವ ವಹಿಸಿದ್ದರು.

ನೀರು ಬಿಡದಿರಲು ಆಗ್ರಹ
ಮೂಡಲಗಿ:
ಶನಿವಾರ ಕರ್ನಾಟಕ ಬಂದ್‌ಗೆ  ಬೆಂಬಲ ನೀಡಿ ಸ್ಥಳೀಯ ಮತ್ತು ಕಮಲದಿನ್ನಿ, ರಂಗಾಪುರ  ಕರವೇ ಸಂಘಟನೆಗಳು ಹಾಗೂ ಸಾರ್ವಜನಿಕರು ಪ್ರತಿಭಟಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಘಟಕ ಮತ್ತು ಕಮಲದಿನ್ನಿಯ ಘಟಕ ಹಾಗೂ ಪುರಸಭೆಯ ಸದಸ್ಯರಿದ್ದ ಜಾಥಾವು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ವಿವಿಧ ಘೋಷಣೆಗಳು ನೀಡುತ್ತಾ ಪಟ್ಟಣದಲ್ಲಿ ಸಂಚರಿಸಿದರು. ನಂತರ ಕಲ್ಮೇಶ್ವರ ವೃತ್ತದ ಬಳಿಯಲ್ಲಿ ಟೈರ್‌ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯ ಶಿವಬಸು ಹಂದಿಗುಂದ, ಸತೀಶ ಲಂಕೆಪ್ಪನ್ನವರ ಮತ್ತು ಶ್ರೀಶೈಲ್ ಬೆಳವಿ ಮಾತನಾಡಿದರು.
ಎನ್.ಟಿ. ಪಿರೋಜಿ, ಪುರಸಭೆ ಸದಸ್ಯರಾದ ಜಯಾನಂದ ಪಾಟೀಲ,  ಮಲ್ಲಪ್ಪ ಢವಳೇಶ್ವರ, ಸಚಿನ ಸೋನವಾಲಕರ, ಗಿರೀಶ ಢವಳೇಶ್ವರ, ಹನಮಂತ ಸತರಡ್ಡಿ, ಚೇತನ ನಿಶಾನಿಮಠ, ವಿನೋದ ಪಾಟೀಲ,
ಸೋಮು ಹಿರೇಮಠ,  ಶ್ರೀಕಾಂತ ಪತ್ತಾರ, ತಾಲ್ಲೂಕು ಘಟಕದ ಕಾರ್ಯದರ್ಶಿ ಶಿವರಡ್ಡಿ ಹುಚರಡ್ಡಿ, ರಂಗಾಪೂರದ ಹನಮಂತ ಪಾಟೀಲ, ಕಮಲದಿನ್ನಿಯ ಹನಮಂತ ಡೊಂಬರ, ಬಸು ಮಸರಗುಪ್ಪಿ, ರವಿ ಮಂಟೂರ, ರಾಮು ತಳವಾರ ರಮೇಶ ಹೊಸೂರ ಭಾಗವಹಿಸಿದ್ದರು.

ರಾಜ್ಯಪಾಲರಿಗೆ ಮನವಿ
ಬೈಲಹೊಂಗಲ:
ತಮಿಳುನಾಡಿಗೆ ಕಾವೇರಿ ನದಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ  ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಮಾಡಲಗಿ ಮಾತನಾಡಿ, ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡದೇ ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಖಂಡನೀಯವಾಗಿದೆ ಎಂದು ದೂರಿದರು.
ಬ್ಲಾಕ್ ಕಾರ್ಯಾಧ್ಯಕ್ಷ ಮಹೇಶ ಹರಕುಣಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಬೆಟಗೇರಿ, ಪುರಸಭೆ ಸದಸ್ಯ ಬಸವರಾಜ ಕಲಾದಗಿ, ಸುಬಾನಿ ಸಯ್ಯದ, ಗುಂಡಪ್ಪ ಸನದಿ, ಬಾಬು ಸಂಗೊಳ್ಳಿ, ಅಜಿತ ಕೋಟಗಿ, ಬಿಎಸ್‌ಆರ್ ಪಕ್ಷದ ಸಂಚಾಲಕ ಜೆ.ಎನ್.ಮೆಟಗುಡ್ಡ ಹಾಗೂ ದಯಾನಂದ ಚಿಕ್ಕಮಠ ಪಾಲ್ಗೊಂಡಿದ್ದರು.

ಕಲಾಪ ಬಹಿಷ್ಕಾರ: ವಕೀಲರು ನ್ಯಾಯಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿ ಕಾರಿಗಳಿಗೆ ಮನವಿ ಸಲ್ಲಿಸಿದರು.

ಅಧ್ಯಕ್ಷ ಎಸ್.ಬಿ. ಆನಿಗೋಳ, ಉಪಾಧ್ಯಕ್ಷ ಎಸ್.ಬಿ.ಲದ್ದಿಕಟ್ಟಿ, ಕಾರ್ಯದರ್ಶಿ ಶ್ರೀಧರ ಲೋಕೂರ, ಎಸ್.ಎಸ್.ಮಠದ, ಬಸವರಾಜ ಧೋತರ. ಎಸ್.ಜಿ.ಹಿರೇಮಠ. ಎಸ್.ಜಿ.ಸಿದ್ದಮನಿ, ವಿ.ಜಿ.ಕಟದಾಳ ಮತ್ತು ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹಾಜರಿದ್ದರು.

ಪಟ್ಟಣದಲ್ಲಿ ಅಟೋ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಕಾರ್ಯ ನಿರ್ಹಹಿಸಿದವು. ನೇಸರಗಿಯಲ್ಲಿ  ಅಂಗಡಿಗಳು ಮುಚ್ಚಿದ್ದವು. ದೊಡವಾಡ ಗ್ರಾಮದಲ್ಲಿ ಜನಜೀವನ ಸಾಮಾನ್ಯವಾಗಿತ್ತು.

ಮುರಗೋಡದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನುಗ್ಗಾನಟ್ಟಿ ಕ್ರಾಸ್, ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ರಸ್ತೆತಡೆ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT