ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಬಿರುಸಾದ ತೆರೆಮರೆ ರಾಜಕೀಯ

Last Updated 20 ಏಪ್ರಿಲ್ 2013, 10:55 IST
ಅಕ್ಷರ ಗಾತ್ರ

ಯಾದಗಿರಿ: ವಿಧಾನಸಭೆ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಇದೀಗ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ನಾಮಪತ್ರ ಹಿಂತೆಗೆಸಲು ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಎಲ್ಲ ರಾಜಕೀಯ ಪಕ್ಷಗಳು ತಮ್ಮ ಬಲ ಪ್ರದರ್ಶನ ಮಾಡಲು ಮುಂದಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನು ಒರೆಗೆ ಹಚ್ಚಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿಯೇ ಇದು ಬಹಿರಂಗಗೊಂಡಿದೆ.

ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಒಟ್ಟು 59 ಅಭ್ಯರ್ಥಿಗಳ 92 ನಾಮಪತ್ರಗಳು ಕ್ರಮ ಬದ್ಧವಾಗಿದ್ದು, 24 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಹುತೇಕ ಪಕ್ಷೇತರ ಅಭ್ಯರ್ಥಿಗಳೇ, ಪ್ರಮುಖ ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮತಗಳ ವಿಭಜನೆ ಆಗದಂತೆ ತಡೆಯಲು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಸಲು ಶತಾಯಗತಾಯ ಪ್ರಯತ್ನಗಳು ನಡೆಯುತ್ತಿವೆ.

ಪ್ರತಿಯೊಂದು ಕ್ಷೇತ್ರದಲ್ಲೂ ಈ ಬಾರಿ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್‌ನ ಅಭ್ಯರ್ಥಿಗಳೂ ಕಣಕ್ಕೆ ಇಳಿದಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಮತ್ತಷ್ಟು ಚಿಂತೆಯನ್ನು ಒಡ್ಡಿದೆ.

ಸುರಪುರ ಕ್ಷೇತ್ರದಲ್ಲಿ ನಾಲ್ಕು, ಶಹಾಪುರ ಹಾಗೂ ಯಾದಗಿರಿ ಕ್ಷೇತ್ರಗಳ ತಲಾ ಐದು, ಗುರುಮಠಕಲ್ ಮತಕ್ಷೇತ್ರದಲ್ಲಿ 10 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರ ಜೊತೆಗೆ ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್‌ನಲ್ಲಿ ಬಿಎಸ್ಪಿ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪ್ರಾದೇಶಿಕ ಪಕ್ಷಗಳ ಜೊತೆಗೆ ಪೈಪೋಟಿ ನಡೆಸುವುದು ಅನಿವಾರ್ಯವಾಗಿದ್ದು, ಇದರ ಜೊತೆಗೆ ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿ ಉಳಿದರೆ, ಮತಗಳು ಹಂಚಿ ಹೋಗುವುದು ನಿಶ್ಚಿತ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಪ್ರತಿನಿಧಿಸುತ್ತಿರುವ ಸಮಾಜ, ಸಂಘಟನೆಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬಲಾಬಲಗಳು ಗಣನೆ ಆಗುತ್ತಿವೆ. ಹೀಗಾಗಿ ಪ್ರಮುಖ ಪಕ್ಷೇತರ ಅಭ್ಯರ್ಥಿಗಳ ಮೇಲೆಯೇ ರಾಜಕೀಯ ಪಕ್ಷಗಳ ದೃಷ್ಟಿ ನೆಟ್ಟಿದ್ದು, ಶನಿವಾರ ನಾಮಪತ್ರ ಹಿಂತೆಗೆಸಲು ಎಲ್ಲ ರೀತಿಯ ಪ್ರಯತ್ನಗಳು ತೆರೆಮರೆಯಲ್ಲಿ ಆರಂಭವಾಗಿದೆ.

ನಾಮಪತ್ರಗಳ ಪರಿಶೀಲನೆ ಪೂರ್ಣಗೊಳ್ಳುತ್ತಿದ್ದಂತೆಯೇ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗಿದ್ದು, ಇವರ ಪೈಕಿ ಪ್ರಬಲ ಪಕ್ಷೇತರ ಅಭ್ಯರ್ಥಿಗಳು ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಹೆಚ್ಚಿನ ಮತಗಳನ್ನು ಸೆಳೆಯುವ ಪಕ್ಷೇತರ ಅಭ್ಯರ್ಥಿಗಳು ಗುರುತಿಸಿ, ಅವರನ್ನು ಕಣದಿಂದ ಹಿಂದಕ್ಕೆ ಸರಿಸುವ ಪ್ರಯತ್ನದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿರುವುದು ಗುಟ್ಟಾಗಿ ಉಳಿದಿಲ್ಲ.

ನಾಲ್ಕೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳನ್ನು ತಮ್ಮ ಪಾಳೆಯಕ್ಕೆ ಸೇರಿಸಿಕೊಳ್ಳುವ ಉತ್ಸುಕತೆಯಲ್ಲಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಗಳಿಂದಲೂ ಅಷ್ಟೇ ಪ್ರಮಾಣದಲ್ಲಿ ಬೇಡಿಕೆ ಎದುರಾಗುತ್ತಿದ್ದು, ಪ್ರಮುಖ ಪಕ್ಷಗಳ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್ ಕ್ಷೇತ್ರಗಳಲ್ಲಿ ಚುನಾವಣಾ ಕಣ ರಂಗೇರಿದ್ದು, ಯಾವ ಅಭ್ಯರ್ಥಿಗಳ ತಕ್ಕಡಿ ಭಾರವಾಗಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪಕ್ಷೇತರ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ನಾಲ್ಕು ಕ್ಷೇತ್ರಗಳಲ್ಲೂ ಮೂರು ರಾಷ್ಟ್ರೀಯ ಪಕ್ಷಗಳು ಹಾಗೂ ಎರಡು ಪ್ರಾದೇಶಿಕ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಹೀಗಾಗಿ ಪ್ರತಿಯೊಬ್ಬ ಅಭ್ಯರ್ಥಿ ಸಾಕಷ್ಟು ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿ ಉಳಿದಲ್ಲಿ ಮತಗಳ ಹಂಚಿಕೆ ಆಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಗೆಲುವಿನ ಅಂತರ ಅಷ್ಟೇನೂ ಹೆಚ್ಚಿಗೆ ಆಗುವಂತೆ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಗಳು ಗಳಿಸುವ ಮತಗಳೂ ತಮಗೇ ಸಿಕ್ಕಲ್ಲಿ, ಹೆಚ್ಚಿನ ಪ್ರಯೋಜನ ಆಗಲಿದೆ ಎಂಬ ಮಾತನ್ನು ಅಭ್ಯರ್ಥಿಗಳು ಹೇಳುತ್ತಿದ್ದಾರೆ.

ವ್ಯವಹಾರಕ್ಕೆ ವೇದಿಕೆ: ನಾಮಪತ್ರ ಹಿಂದಕ್ಕೆ ಪಡೆಯಲು ಶನಿವಾರ ಅಂತಿಮ ದಿನವಾಗಿದ್ದು, ಅಷ್ಟರಲ್ಲಿಯೇ ತಮಗೆ ಬೇಕಾದ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಸರಿಸುವ ಪ್ರಯತ್ನಗಳು ಶುಕ್ರವಾರ ರಾತ್ರಿಯಿಂದಲೇ ಆರಂಭವಾಗಿವೆ.

ಇದಕ್ಕಾಗಿಯೇ ವ್ಯವಹಾರ ಕುದುರಿಸುವ ವೇದಿಕೆಗಳೂ ಅಲ್ಲಲ್ಲಿ ಸಿದ್ಧವಾಗುತ್ತಿವೆ. ಬಹುತೇಕ ಅಭ್ಯರ್ಥಿಗಳಿಗೆ ಹಣ, ಮತ್ತಿತರ ಆಮಿಷಗಳನ್ನು ತೋರಿಸಲಾಗುತ್ತಿದ್ದು, ಚುನಾವಣೆ ನೀತಿ ಸಂಹಿತೆಯ ಕಟ್ಟು ನಿಟ್ಟಿನ ಹಿನ್ನೆಲೆಯಲ್ಲಿ ಎಲ್ಲವೂ ತೆರೆಮರೆಯಲ್ಲಿಯೇ ನಡೆಯುತ್ತಿವೆ.

ಇದರ ಜೊತೆಗೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ವಂಚಿತರಿಗೂ ಗಾಳ ಹಾಕಲು ಇತರ ಪಕ್ಷಗಳು ಮುಂದಾಗಿವೆ. ಈಗಾಗಲೇ ಇಂತಹ ಪ್ರಯತ್ನಗಳು ಫಲಕಾರಿಯಾಗಿವೆ ಎಂದು ತಿಳಿದು ಬಂದಿದೆ.

ಚುನಾಣೆಯ ನೀತಿ ಸಂಹಿತೆಯ ಕಟ್ಟುನಿಟ್ಟಿನಿಂದಾಗಿ ಬ್ಯಾನರ್, ಕಟೌಟ್, ಜಾಹೀರಾತುಗಳಿಗೆ ಕಡಿವಾಣ ಬಿದ್ದಿದ್ದು, ಇದರಲ್ಲಿ ಉಳಿಯುವ ಹಣವನ್ನೇ ಇಂತಹ ಕಾರ್ಯಗಳಿಗೆ ಬಳಸಲು ಮುಂದಾಗಿವೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT