ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮತ್ತೆ ಕಾವೇರಿದ ಪ್ರತಿಭಟನೆ

Last Updated 12 ಅಕ್ಟೋಬರ್ 2012, 6:10 IST
ಅಕ್ಷರ ಗಾತ್ರ

ಮಂಡ್ಯ: ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಸೂಚನೆ ನೀಡುವ ವಿಷಯ ತಿಳಿಯುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗಿವೆ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ರೈತರು, ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು ತಡೆದು ಪ್ರತಿಭಟಿಸಿದರು. ಮಂಡ್ಯದ ಸಂಜಯ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರೂ ಒಂಟಿ ಕಾಲಿನ ಮೇಲೆ ನಿಂತು ಪ್ರತಿಭಟನೆ ಮಾಡಿದರು.

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದನ್ನು ಖಂಡಿಸಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿ 28ನೇ ದಿನಕ್ಕೂ ಮತ್ತು ಸರದಿ ಉಪವಾಸ ಸತ್ಯಾಗ್ರಹ 8ನೇ ದಿನವೂ ಮುಂದುವರೆದಿದೆ. 

ನಗರದ ಕಾವೇರಿ ವನ ಎದುರು ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಗುರುವಾರ ಶಿವಾನಂದಮಯ್ಯ, ಹೊಳಲು ರಾಘವೇಂದ್ರ, ಕೆ.ವಿಜಯಸಿಂಹ, ಮಾಲಾ ನಾಗೇಶ್ವರರಾವ್, ರಾಜಲಕ್ಷ್ಮಿ ಶ್ರೀಹರ್ಷ ಹಾಗೂ ಮಧುಸೂದನ್ ಪಾಲ್ಗೊಂಡಿದ್ದರು.

ನಟರಾಜ ಕಲಾನಿಕೇತನ ಸಂಘ, ರಂಗರತ್ನ ಕಲಾವಿದರ ಸಂಘ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಶ್ರೀ ರಂಜನಿ ಕಲಾ ವೇದಿಕೆ, ಆರ್ಕೆಸ್ಟ್ರಾ ಕಲಾವಿದರನ್ನು ಒಳಗೊಂಡ ತಂಡವು ಜಿಲ್ಲಾ ಕಲಾವಿದರ ಒಕ್ಕೂಟ ಹೆಸರಿನಲ್ಲಿ ಧರಣಿಯಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಿತು. ಕಲಾವಿದರು, ಸುಗಮ-ಸಂಗೀತ, ರಂಗಗೀತೆ, ಭರತನಾಟ್ಯ, ಭಾವಗೀತೆಗಳನ್ನು ಪ್ರಸ್ತುತ ಪಡಿಸಿ ಗಮನ ಸೆಳೆದರು.

ಎಂ.ಎಸ್.ರಾಜೇಂದ್ರಪ್ರಸಾದ್ ವಿದ್ಯಾಸಂಸ್ಥೆಯ ಕಾಳೇಗೌಡ ಪ್ರೌಢಶಾಲೆ, ಸಿದ್ದಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಗರಸಭೆಯ ಕೆಲ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಎತ್ತಿನಗಾಡಿ ಮೆರವಣಿಗೆ:
ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮಸ್ಥರು ಎತ್ತಿನಗಾಡಿಗಳಲ್ಲಿ ನಗರಕ್ಕೆ ಆಗಮಿಸಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಗರದ ಸರ್ಕಾರಿ ಬಸ್ ನಿಲ್ದಾಣ ಸಮೀಪ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ, ಧರಣಿಯಲ್ಲಿ ಪಾಲ್ಗೊಂಡರು.

ಕಲ್ಲು ಹೊತ್ತು ದಿಢೀರ್ ಪ್ರತಿಭಟನೆ

ಶ್ರೀರಂಗಪಟ್ಟಣ: ಕಾವೇರಿ ನದಿ ನೀರು ಹಂಚಿಕೆ ಕುರಿತ ಮೇಲುಸ್ತು ವಾರಿ ಸಮಿತಿ ತಮಿಳುನಾಡಿಗೆ 8.75 ಟಿಎಂಸಿ ಅಡಿ ನೀರು ಬಿಡುವಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವುದನ್ನು ವಿರೋಧಿಸಿ ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರು ಗುರುವಾರ ಸಂಜೆ ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ತಲೆಯ ಮೇಲೆ ಕಲ್ಲುಗಳನ್ನು ಹೊತ್ತು ವಿನೂತನ ಪ್ರತಿಭಟನೆ ನಡೆಸಿದರು. ಸುಮಾರು ಅರ್ಧತಾಸು ಹೆದ್ದಾರಿಯಲ್ಲಿ ಕಲ್ಲುಗಳನ್ನು ತಲೆಯ ಮೇಲೆ ಹೊತ್ತು ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

`ಈಗಾಗಲೇ 20 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಕೆಆರ್‌ಎಸ್ ಜಲಾಶಯದಲ್ಲಿ 19 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಉಳಿದಿದೆ. ಕಾವೇರಿ ಕೊಳ್ಳದ ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳು ತಳ ಮುಟ್ಟಿವೆ. ಪರಿಸ್ಥಿತಿ ಹೀಗಿದ್ದರೂ ಮೇಲುಸ್ತುವಾರಿ ಸಮಿತಿ ರಾಜ್ಯಕ್ಕೆ ವ್ಯತಿರಿಕ್ತ ತೀರ್ಪು ನೀಡಿದೆ~ ಎಂದು ಕೆ.ಎಸ್.ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ಕರವೇ ಮುಖಂಡ ಸಿ.ಸ್ವಾಮಿಗೌಡ, ಎನ್.ಶಿವಸ್ವಾಮಿ, ನಾಗೇಂದ್ರ ಸ್ವಾಮಿ, ಡಿ.ಎಂ.ರವಿ, ಪಾಲಹಳ್ಳಿ ಡೇರಿ ಗಿರೀಶ್, ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲ್ಲೂಕು ಧ್ಯಕ್ಷ ಎಂ.ಸಿ.ಪ್ರಕಾಶ್, ಪಾಂಡು, ಬಿ.ಸಿ.ಕೃಷ್ಣೇ ಗೌಡ, ಬಲ್ಲೇನಹಳ್ಳಿ ಮಂಜುನಾಥ್, ಉಮೇಶ್ ಕುಮಾರ್, ದೊಡ್ಡಪಾಳ್ಯ ಕೃಷ್ಣೇಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸರ್ಕಾರ ಬೆಳೆ ನಷ್ಟ ಭರಿಸಲಿ: ನಂಜುಂಡೇಗೌಡ
ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರ ರೈತರು ಅನುಭವಿ ಸುವ ಬೆಳೆ ನಷ್ಟವನ್ನು ಭರಿಸಬೇಕು ಎಂದು ಕಾವೇರಿ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಗುರುವಾರ ಪಟ್ಟಣದಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ವಿ.ಚಲುವರಾಜು, ಭಾರತ್ ಸೇವಾದಲದ ತಾಲ್ಲೂಕು ಅಧ್ಯಕ್ಷ ಎನ್.ಶಿವಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರಪ್ಪ, ಸದಸ್ಯೆ ಲತಾ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಬೆಳವಾಡಿ ನಂದಕುಮಾರ್, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಡಿ.ಎಸ್.ಚಂದ್ರಶೇಖರ್, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ. ಬಿ.ಸಿ.ಕೃಷ್ಣೇಗೌಡ, ಎಪಿಎಂಸಿ ನಿರ್ದೇಶಕ ಕೆ.ಶೆಟ್ಟಹಳ್ಳಿ ಸುರೇಶ್ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

ಗೆಜ್ಜಲಗೆರೆ ಬಳಿ ರೈಲು ತಡೆ
ಮದ್ದೂರು: ಕಾವೇರಿ ಉಸ್ತುವಾರಿ ಸಮಿತಿ ಕೆಆರ್‌ಎಸ್ ಜಲಾಶಯದಿಂದ 8.75 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿರುವುದನ್ನು ಖಂಡಿಸಿ ಸಮೀಪದ ಗೆಜ್ಜಲಗೆರೆ ಬಳಿ ರೈತ ಕಾರ್ಯಕರ್ತರು ಗುರುವಾರ ಸಂಜೆ ರೈಲು ತಡೆ ನಡೆಸಿದರು.

ಸಮಿತಿ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಅವರು, ಯಾವುದೇ ಕಾರಣಕ್ಕೂ ಒಂದು ಹನಿ ನೀರು ಬಿಡಬಾರದು ಎಂದು ಆಗ್ರಹಿಸಿ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲನ್ನು ಅರ್ಧಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟನೆ ನಡೆಸಿದರು.

ರೈತ ಮುಖಂಡರಾದ ಜಿ.ಎ.ಶಂಕರ್, ಚಂದ್ರು, ಆತ್ಮಾನಂದ, ನಿಂಗಪ್ಪ, ವೀರಪ್ಪ, ಮಹೇಶ್, ರಾಮು ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT