ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ

ಅಘನಾಶಿನಿ, ವರದೆಯಲ್ಲಿ ಪ್ರವಾಹ *ಸೇತುವೆ-ಮನೆ ಕುಸಿತ * ಧರೆಗುರುಳಿದ ಮರಗಳು
Last Updated 25 ಜುಲೈ 2013, 8:19 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಮಳೆಯಾಗಿದೆ. ಮಲೆನಾಡು, ಅರೆಬಯಲುಸೀಮೆ ಹಾಗೂ ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿದಿತ್ತು. ಮಳೆಯಿಂದ ಸಿದ್ದಾಪುರದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.

ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿ ದಿನವಿಡೀ ಬಿಟ್ಟು ಬಿಟ್ಟು ಸುರಿಯಿತು.  ಹಳಿಯಾಳ, ದಾಂಡೇಲಿ, ಮುಂಡಗೋಡ ಹಾಗೂ ಮಲೆನಾಡು ಪ್ರದೇಶಗಳಾದ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಇದರಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಪರದಾಡಿದರು ಹಾಗೂ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟವೂ ವಿರಳವಾಗಿತ್ತು.

ನೀರಿನ ಮಟ್ಟ ಏರಿಕೆ: ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ. ಕದ್ರಾ, ಕೊಡಸಳ್ಳಿ, ಹಾಗೂ ಸೂಪಾ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿದೆ.

ಜಿಲ್ಲೆಯಲ್ಲಿ  39.2 ಮಿ.ಮೀ. ಮಳೆ:ಜುಲೈ 24 ರಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 39.2 ಮಿ.ಮೀ ಮಳೆಯಾಗಿದೆ. ಅಂಕೋಲಾ 17.6 ಮಿ.ಮೀ, ಭಟ್ಕಳ 27.4 ಮಿ.ಮೀ, ಹಳಿಯಾಳ 38.8 ಮಿ.ಮೀ, ಹೊನ್ನಾವರ 21.4 ಮಿ.ಮೀ, ಕಾರವಾರ 21.7 ಮಿ.ಮೀ, ಕುಮಟಾ 34.2 ಮಿ.ಮೀ, ಮುಂಡಗೋಡ 25.2 ಮಿ.ಮೀ, ಸಿದ್ಧಾಪುರ 82.8 ಮಿ.ಮೀ, ಶಿರಸಿ 40.5 ಮಿ.ಮೀ, ಜೋಯಿಡಾ 63.2 ಮಿ.ಮೀ, ಯಲ್ಲಾಪುರ 58.4 ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ ಇಂದಿನವರೆಗೆ 925.9ಮಿ.ಮೀ ಮಳೆಯಾಗಿದೆ.

ಅಘನಾಶಿನಿಯಲ್ಲಿ ನೆರೆ ಭೀತಿ
ಕುಮಟಾ:
ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಬಿರುಸಿನ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಅಘನಾಶಿನಿ ನದಿಯಲ್ಲಿ ನೆರೆಯ ನೀರು ಕಡಿಮೆಯಾಗದೇ ಒಂದೇ ಪ್ರಮಾಣದಲ್ಲಿ ಮುಂದುವರಿದಿದೆ.

ಬುಧವಾರ ಮಧ್ಯಾಹ್ನ 1 ಗಂಟೆಯ ವರೆಗೆ  ಮಳೆ ಇಲ್ಲದೆ ಸೆಖೆ ಆರಂಭವಾಗುವಂಥ ವಾತಾವಾರಣ ನಿರ್ಮಾಣವಾಗಿದ್ದು, ನಂತರ ಬಿರುಸು ಮಳೆ ಆರಂಭವಾಯಿತು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಅಘನಾಶಿನಿ ನದಿಯ ಪ್ರವಾಹ ಇಳಿಮುಖವಾಗಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರ ಕಡಿಮೆಯಾಗದೇ ಇರುವುದರಿಂದ ಮೀನುಗಾರು ಸಮುದ್ರಕ್ಕೆ ಇಳಿಯಲಿಲ್ಲ. ಆದರೆ ಕಳೆದ ಹಲವಾರು ದಿವಸಗಳಿಂದ ಮೀನು ಹಿಡಿಯಲು ಸಾಧ್ಯವಾಗದ್ದರಿಂದ  ಮತ್ತು ಈ ಸಂದರ್ಭದಲ್ಲಿ ಕೊಂಚ ಮೀನು ಸಿಕ್ಕರೂ ಹೆಚ್ಚಿನ ಬೆಲೆಗೆ ಮಾರಾಟವಾಗುವುದರಿಂದ ಕೆಲ ಮೀನುಗಾರರು ದಡದಲ್ಲಿಯೇ ಬಲೆ ಹಾಕಿ ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬನವಾಸಿಯಲ್ಲಿ ವರದೆಗೆ ಪ್ರವಾಹ
ಶಿರಸಿ:
ತಾಲ್ಲೂಕಿನಲ್ಲಿ ಬಿರುಸಿನಿಂದ ಮಳೆಯಾಗುತ್ತಿದ್ದು, ಬುಧವಾರ ಇಡೀ ದಿನ ಬಿಡುವಿಲ್ಲದೆ ಮಳೆ ಸುರಿಯಿತು. ಮಂಗಳವಾರ ಮಧ್ಯಾಹ್ನದ ನಂತರ ಕೊಂಚ ಬಿಡುವು ನೀಡಿದ್ದ ಮಳೆ ಬುಧವಾರ ಬೆಳಿಗ್ಗೆಯಿಂದಲೇ ಮತ್ತೆ ಆರ್ಭಟ ಹೆಚ್ಚಿಸಿದೆ.

ನಿರಂತರ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಬನವಾಸಿಯಲ್ಲಿ ವರದಾ ನದಿಗೆ ಪ್ರವಾಹ ಬಂದಿದೆ. ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ ಸಂಪೂರ್ಣ ಮುಳುಗಿದೆ. ಮೊಗಳ್ಳಿ, ಹೊಸ್ಕೇರಿ ಭಾಗದ ಸಾವಿರಾರು ಎಕರೆ ಭತ್ತ ಗದ್ದೆ, ಕೃಷಿಭೂಮಿ ಜಲಾವೃತವಾಗಿವೆ.

`ಸೊರಬ ಹಾಗೂ ಸುತ್ತಲಿನ ಪ್ರದೇಶದಲ್ಲಿ ಇದೇ ರೀತಿ ಮಳೆಯಾದರೆ ಬನವಾಸಿಯಿಂದ ಮೊಗಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಕಂದಾಯ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಅಪಾಯ ಪರಿಸ್ಥಿತಿ ಬಂದಲ್ಲಿ ಎದುರಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ' ಎಂದು ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ತಿಳಿಸಿದರು.

ಮಳೆಹಾನಿ: ನಿರಂತರ ಸುರಿಯುತ್ತಿರುವ ಮಳೆಗೆ ಎಸ್‌ಬಿಐ ಕಾಲೊನಿಯ ಭವಾನಿ ಗಂಗೊಳ್ಳಿ ಅವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅಂದಾಜು ರೂ 60ಸಾವಿರ ಹಾಗೂ ಮರಾಠಿಕೊಪ್ಪ ನಂದು ಆಚಾರಿ ಮನೆಯ ಗೋಡಿ ಕುಸಿದು ರೂ 10ಸಾವಿರ ಹಾನಿ ಸಂಭವಿಸಿದೆ ಎಂದು ತಹಶೀಲ್ದಾರ್ ಕಚೇರಿಯ ಮೂಲ ತಿಳಿಸಿದೆ.

ಮೂರು ಮನೆಗಳಿಗೆ ಹಾನಿ
ಭಟ್ಕಳ:
ತಾಲ್ಲೂಕಿನಲ್ಲಿ ಬುಧವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಮಳೆಗೆ ಮೂರು ಮನೆಗಳಿಗೆ ಹಾನಿಯಾಗಿವೆ. ತಾಲ್ಲೂಕಿನ ಕಾಯ್ಕಿಣಿಯ ಮಾದೇವ ದುರ್ಗಪ್ಪ ನಾಯ್ಕ ಎಂಬವರ ಮನೆ ಭಾಗಶಃ ಕುಸಿದಿದ್ದು 7 ಸಾವಿರ ರೂಪಾಯಿ ಮೌಲ್ಯದ ಹಾನಿಯಾಗಿದೆ.

ಶಿರಾಲಿಯ ಗೌರಿ ಈರಯ್ಯ ದೇವಾಡಿಗ ಎಂಬುವವರಿಗೆ ಸೇರಿದ ಮನೆಯೂ ಸಹ ಮಳೆಗೆ ಭಾಗಶಃ ಕುಸಿದುಬಿದ್ದು 10 ಸಾವಿರ ರೂಪಾಯಿ ಹಾನಿಯಾಗಿದೆ. ಅದೇ ರೀತಿ ಮಾರುಕೇರಿ ಕೋಟಖಂಡದ ಗೋವಿಂದ ರಾಮಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಮನೆ ಕುಸಿದುಬಿದ್ದು ಐದು ಸಾವಿರ ಹಾನಿಯಾಗಿದೆ.

ಹಾನಿಯಾದ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಡಿದ್ದಾರೆ. ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೇವಲ 1472 ಮಿ.ಮೀ ಮಳೆಯಾಗಿದ್ದರೆ, ಈ ವರ್ಷ 2606 ಮಿ.ಮೀ ಮಳೆಯಾಗಿದೆ. ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಳುತ್ತಿದೆ. ಸಮುದ್ರ ಕೊರೆತವೂ ಆರಂಭವಾಗಿದೆ. ಸಾರ್ವಜನಿಕರು ಮಳೆಯಿಂದ ಏನೇ ಸಮಸ್ಯೆ ಉಂಟಾದಲ್ಲಿ  ತಕ್ಷಣ ತಹಶೀಲ್ದಾರ್ ಕಚೇರಿ ಸಹಾಯವಾಣಿ ಸಂಖ್ಯೆ 08385-226422ಗೆ ಕರೆ ಮಾಡಬಹುದಾಗಿದೆ. 

ಗದ್ದೆಗೆ ನುಗ್ಗಿದ ನೆರೆ
ಸಿದ್ದಾಪುರ:
ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಬುಧವಾರವೂ ಮುಂದುವರಿದಿದ್ದು, ಆಗಾಗ ಬಿಡುವು ನೀಡುತ್ತಲೇ ಮಳೆ ಆರ್ಭಟಿಸಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಹೊಳೆಗಳ ಸಮೀಪದ ಗದ್ದೆಗಳಲ್ಲಿ ನೀರು ತುಂಬಿರುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದ  ಈ ಗದ್ದೆಗಳಲ್ಲಿ ಭತ್ತದ ಕೃಷಿಗೆ ತೊಂದರೆ ಉಂಟಾಗಿದೆ.

ಭಾರಿ ಮಳೆಯಿಂದ ತಾಲ್ಲೂಕಿನ ಮನಮನೆಯ ಲಿಂಗಪ್ಪ ಮಾಸ್ತ್ಯಾ ನಾಯ್ಕ ಎಂಬವರ ಮನೆಗೆ ಹಾನಿಯಾಗಿದ್ದು, ರೂ 38 ಸಾವಿರ ನಷ್ಟ ಸಂಭವಿಸಿರುವುದಾಗಿ ಅಂದಾಜು ಮಾಡಲಾಗಿದೆ.

ಬುಧವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 82.8 ಮಿ.ಮೀ. ಮಳೆ ದಾಖಲಾಗಿದ್ದು, ಇದುವರೆಗೆ ಒಟ್ಟು 1994.8 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯವರೆಗ ಒಟ್ಟು 948.2 ಮಿ.ಮೀ. ಮಳೆ ದಾಖಲಾಗಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಕುಸಿದ ತಾತ್ಕಾಲಿಕ ಸೇತುವೆ
ಯಲ್ಲಾಪುರ:
ಆನಗೋಡ ಗ್ರಾ.ಪಂ ವ್ಯಾಪ್ತಿಯ ಗೇರಾಳ ಹಾಗೂ ಬರಗದ್ದೆ ಗ್ರಾಮವನ್ನು ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯ ಇದ್ದ ತಾತ್ಕಾಲಿಕ ಸೇತುವೆಯೊಂದು  ಮಳೆಯ ರಭಸಕ್ಕೆ ಕುಸಿತಗೊಂಡಿದೆ.

ಇದರಿಂದಾಗಿ ಬಿಸಗೋಡ,  ಬರಗದ್ದೆ, ಗೇರಾಳ ಸೇರಿದಂತೆ ಯಲ್ಲಾಪುರಕ್ಕೆ ಬರುವ ಶಾಲಾ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಸುತ್ತು ಬಳಸಿ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಭಾರಿ ಮಳೆಯಿಂದ ಆಗಾಗ ಈ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಮಕ್ಕಳ ಬಗ್ಗೆ ಆತಂಕ ಮೂಡುವಂತಾಗಿದೆ.

ತೋಟದ ಮಧ್ಯೆ ಹಾದು ಹೋದ ಈ ರಸ್ತೆಗೆ ಈ ಸಂಪರ್ಕ ಸೇತುವೆಯನ್ನು ಈ ಹಿಂದೆ ಸಾರ್ವಜನಿಕರೇ ತಾತ್ಕಾಲಿಕವಾಗಿ ನಿರ್ಮಿಸಿದ್ದರು. ಅದು ಈಗ ಸಂಪೂರ್ಣ ಕುಸಿತಕ್ಕೊಳಗಾಗಿದೆ. ಗೇರಾಳ, ಕಾರೆಮನೆ, ಅಗ್ಗಾಶಿಕುಂಬ್ರಿ, ಸಾವಗದ್ದೆ, ಕಿಚ್ಚುಪಾಲ, ಬರಗದ್ದೆ, ಬಗನಗದ್ದೆ, ಬಿಸಗೋಡ ಭಾಗದ ಗ್ರಾಮಸ್ಥರು ಈ ರಸ್ತೆಯಲ್ಲಿ ನಿತ್ಯವೂ ಸಂಚರಿಸಬೇಕಾಗಿದೆ. ಇಲ್ಲಿ ಶಾಶ್ವತವಾದ ಕಿರು ಸೇತುವೆಯನ್ನು ನಿರ್ಮಿಸಬೇಕೆಂದು ಸ್ಥಳೀಯ ಗ್ರಾ.ಪಂ ಸದಸ್ಯ ಡಾ.ರವಿ ಭಟ್ಟ ಬರಗದ್ದೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT