ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಳೆ-ಗಾಳಿ ಆರ್ಭಟ: ನಷ್ಟ

Last Updated 2 ಆಗಸ್ಟ್ 2013, 12:50 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಳೆ- ಗಾಳಿಗೆ ಹಲವು ಮನೆಗಳು ಕುಸಿದು ಅಪಾರ ಹಾನಿ ಸಂಭವಿಸಿದೆ.

ಪಡು ಗ್ರಾಮದ ಪೊಲಿಪು ಗುಡ್ಡೆಯ ಸತೀಶ ಎಂಬುವರ ಮನೆಯು ಮಳೆ- ಗಾಳಿಯಿಂದಾಗಿ ಕುಸಿದು ಸುಮಾರು ಅರವತ್ತು ಸಾವಿರ ರೂಪಾಯಿ ಹಾನಿಯಾಗಿದೆ. ಶಿರ್ವ ಗ್ರಾಮದ ಕೃಷ್ಣ ಪೂಜಾರಿ ಎಂಬುವರ ಮನೆಗೆ ಮಳೆ ಯಿಂದಾಗಿ ಭಾಗಶಃ ಹಾನಿಯಾಗಿದ್ದು ಸುಮಾರು ಎಂಟು ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.

ಮಳೆ ಗಾಳಿಗೆ ಅತ್ರಾಡಿ ಗ್ರಾಮದ ಮದಗದ ಸುರೇಖಾ ಎಂಬುವರ ಮನೆ ಕುಸಿದು ಭಾಗಶಃ ಹಾನಿಯಾಗಿದ್ದು ಸುಮಾರು ಎಂಟು ಸಾವಿರ ರೂಪಾಯಿ ನಷ್ಟವಾಗಿದೆ. ಪೆರ್ಣಂಕಿಲ ಗ್ರಾಮದ ಬಾಬು ಎಂಬುವರ ಮನೆ ಕುಸಿದು ಇಪ್ಪತ್ತು ಸಾವಿರ ರೂಪಾಯಿ ನಷ್ಟ ವಾಗಿದೆ.

ಉಪ್ಪೂರಿನ ಹರೇಬೆಟ್ಟು ಗ್ರಾಮದ ಭಾಸ್ಕರ ಅವರ ಮನೆಯ ಮೇಲೆ ಮರ ಕುಸಿದ ಪರಿಣಾಮ ಮಾಡು ಕುಸಿದು ಸುಮಾರು ನಲವತ್ತು ಸಾವಿರ ರೂಪಾಯಿ ನಷ್ಟವಾಗಿದೆ. ಹೊಸೂರು ಗ್ರಾಮದ ಉದ್ದೇಳಿಯ ರಾಜಿ ಎಂಬುವರ ಮನೆಯ ಗೋಡೆ ಗಾಳಿ- ಮಳೆಯಿಂದಾಗಿ ಕುಸಿದು ಐವತ್ತು ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಶಿವಳ್ಳಿ ಗ್ರಾಮದ ಸಂಜೀವ ಎಂಬುವರ ಮನೆ ಭಾಗಶಃ ಹಾನಿಗೊಳಗಾಗಿದ್ದು ಹತ್ತು ಸಾವಿರ ರೂಪಾಯಿ ನಷ್ಟವಾಗಿದೆ. ಮನೆಯ ಹಂಚು ಹಾರಿ ಹೋಗಿ ಐದು ಸಾವಿರ ರೂಪಾಯಿ ನಷ್ಟವಾಗಿರುವ ಘಟನೆ 82 ಕುದಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮನೆಯೊಡತಿ ಮೀನಾ ಶೆರಿಗಾರ‌್ತಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ.

ಅಕೇಶಿಯಾ ಮರವೊಂದು ರಮೇಶ್‌ನಾಯ್ಕ ಎಂಬುವರ ಕೋಳಿ ಫಾರಂ ಮೇಲೆ ಕುಸಿದ ಪರಿಣಾಮ ಎಂಟು ಸಾವಿರ ರೂಪಾಯಿ ನಷ್ಟವಾದ ಘಟನೆ ಅಂಜಾರು ಗ್ರಾಮದಲ್ಲಿ ನಡೆದಿದೆ.

ಉಡುಪಿ ತಾಲ್ಲೂಕಿನಲ್ಲಿ 16.8 ಮಿ.ಮೀ, ಕುಂದಾಪುರ ತಾಲ್ಲೂಕಿನಲ್ಲಿ 40 ಮಿ.ಮೀ ಮತ್ತು ಕಾರ್ಕಳದಲ್ಲಿ 51.2 ಮಿ.ಮೀ ಮಳೆಯಾಗಿದೆ.

ಆರ್ಡಿ: ಪುನರ್ವಸತಿ ಕಾರ್ಯಕ್ಕೆ ಚಾಲನೆ
ಸಿದ್ದಾಪುರ ವರದಿ:  ಗುರುವಾರ ಮುಂಜಾನೆ 3.30ರ ಸುಮಾರಿಗೆ ಬೀಸಿದ ಬಿರುಗಾಳಿಗೆ ಕುಂದಾಪುರ ತಾಲೂಕಿನ ಆರ್ಡಿ ಪರಿಸರದ ನಾಗರಿಕರು ತತ್ತರಿಸಿದ್ದಾರೆ. ಬೆಳ್ವೆಯ ಅಲ್ಬಾಡಿ ಗ್ರಾಮ ತೊನ್ನಾಸೆಯಲ್ಲಿ ಬೀಸಿದ ಬಿರುಗಾಳಿ ಕೊಂಜಾಡಿ ಸಮೀಪದ ಮನೆಗಳು ಆರ್ಡಿ ಪೇಟೆ, ಆರ್ಡಿ ಮೇಲ್ಪೇಟೆ ಮತ್ತು ಮಾಬಳಿ ಪರಿಸರದಲ್ಲಿ ಬೀಸಿದೆ. ಆರ್ಡಿ ಸಮೀಪದಲ್ಲಿ ಗಾಳಿಯ ರಭಸ ಹೆಚ್ಚಾಗಿದೆ. ಆರ್ಡಿ ದುರ್ಗಾದೇವಿ ಗೇರು ಬೀಜ ಉದ್ಯಮ ಘಟಕದ ಸಮೀಪದ  ಹಾದು ಹೋದ ಗಾಳಿ ನಂತರ ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿಯಾಗಿದ್ದು ಮನೆ, ತೋಟ, ದೇವರ ಮನೆ ಅವರ 800 ರಬ್ಬರ್, ತೆಂಗು ಹಾಗೂ ಸಾಗುವಾನಿ ಮರಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ಬೆಳಿಗ್ಗೆ ಆಗಮಿಸಿದ ಕುಂದಾಪುರ ತಹಶೀಲ್ದಾರ್ ಗಾಯತ್ರಿ ಎನ್. ನಾಯ್ಕ, ಕುಂದಾಪುರ ಉಪ ವಿಭಾಗಾಧಿಕಾರಿ ಯೊಗೇಶ್ವರ ಕುಂದಾಪುರ ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ್ ಶೆಟ್ಟಿ ಆಗಮಿಸಿ ಹಾನಿಯಾದ ಪ್ರದೇಶದ ಸ್ಥಳ ಸಮೀಕ್ಷೆ  ನಡೆಸಿದರು. ಘಟನೆ ಸಂಭವಿಸಿದ ನಂತರ ಆರ್ಡಿ ಪ್ರೌಢಶಾಲೆಗೆ ರಜೆ ಘೋಷಿಸಲಾಗಿತ್ತು.

ಕುಂದಾಪುರ ಕಂದಾಯ ನಿರೀಕ್ಷಕ ದಾಮ್ಲೆ ನೇತೃತ್ವದಲ್ಲಿ ಗ್ರಾಮ ಕರಣಿಕರ ತಂಡ ಸಂತ್ರಸ್ಥರ ನಷ್ಟದ ಪಟ್ಟಿಯನ್ನು ಅಂದಾಜಿಸಿದ್ದಾರೆ. ಕೊಂಜಾಡಿ ಪರಿಸರದ 8 ಪರಿಶಿಷ್ಟ ಕುಟುಂಬಗಳ ಮನೆಗೆ ಸಂಪೂರ್ಣ ಹಾನಿ ಯಾದ ಬಗ್ಗೆ ಅವರ ಪುನರ್ವಸತಿಗಾಗಿ ಆರ್ಡಿ ಪ್ರೌಢಶಾಲೆ ವಠಾರದಲ್ಲಿ ಗಂಜಿ ಕೇಂದ್ರ ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT