ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಳೆರಾಯನ ರುದ್ರನರ್ತನ

Last Updated 17 ಅಕ್ಟೋಬರ್ 2011, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಭಾನುವಾರ ಮಳೆರಾಯ ಜೋರಾಗಿ ಆರ್ಭಟಿಸಿದ್ದು, ಮನೆ ಕುಸಿದು ಬಾಲಕರಿಬ್ಬರು ಮೃತಪಟ್ಟ ಘಟನೆ ಅಮರಗೋಳದಲ್ಲಿ ನಡೆದಿದೆ. ಸಿಡಿಲಿನಿಂದ ಇಬ್ಬರು  ಮೃತಪಟ್ಟ ಘಟನೆ ನವಲಗುಂದ ತಾಲ್ಲೂಕಿನ ಅಣ್ಣಿಗೇರಿ ಪಟ್ಟಣದಲ್ಲಿ ಸಂಭವಿಸಿದೆ. ಗುಡುಗು-ಸಿಡಿಲಿನ ಅಟಾಟೋಪದಿಂದ ಬೆಚ್ಚಿಬಿದ್ದ ಹಲವರು ಆಘಾತಕ್ಕೆ ಒಳಗಾಗಿದ್ದು, ಕಿಮ್ಸಗೆ ದಾಖಲಿಸಲಾಗಿದೆ.

ಅಮರಗೋಳದ ಆಶ್ರಯ ಕಾಲೊನಿಯಲ್ಲಿಯ ಮನೆಯೊಂದು ಬಿದ್ದು, ರಾಘವೇಂದ್ರ (4) ಹಾಗೂ ರಾಜು (8) ಹರಿಜನ ಎಂಬ ಸೋದರರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಅಣ್ಣಿಗೇರಿಯ ಹಳ್ಳಿಕೇರಿ ರಸ್ತೆಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪರ್ವೀನ್‌ಬಾನು ಹುಸೇನ್‌ಸಾಬ್ ನದಾಫ್ (16) ಮತ್ತು ಕೊಂಡಿಕೊಪ್ಪ ರಸ್ತೆ ಹೊಲದಲ್ಲಿದ್ದ ಮೆಹಬೂಬ್‌ಸಾಬ ಮರ್ದಾನ್‌ನಸಾಬ ಶೇಖಬಡಗಿ (45) ಸಾವಿಗಿಡಾಗಿದ್ದಾರೆ. ಗಂಗವ್ವ ಜಗದೇವಪ್ಪ ಆಡಕಾವು ಹಾಗೂ ಮಂಜವ್ವ ಶಿವನಗೌಡ ನಾಯ್ಕರ ತೀವ್ರವಾಗಿ ಗಾಯಗೊಂಡಿದ್ದಾರೆ.

ಅಣ್ಣಿಗೇರಿಯ ಗುದ್ನೇಶ್ವರ ಮಠದ ಹತ್ತಿರ ವಾಸವಾಗಿದ್ದ ಮೂಲತಃ ನವಲಗುಂದದ ಪರ್ವೀನ್‌ಬಾನು ಸ್ಥಳೀಯ ಪ್ರೌಢಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು, ಬಡತನದಿಂದಾಗಿ ರಜೆಯ ದಿನಗಳಲ್ಲಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದಳು.

ಮೆಹಬೂಬ್‌ಸಾಬ್ ಮುಳಗುಂದ ಪಟ್ಟಣದವರಾಗಿದ್ದು, ಅಣ್ಣಿಗೇರಿ ಗುಡಿಸಲಗೇರಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸವಾಗಿದ್ದರು.

ಜಿಲ್ಲೆಯ ವಿವಿಧ ಕಡೆ ಭಾರಿ ಪ್ರಮಾಣದ ಮಳೆ ಸುರಿದ ವರದಿಗಳು ಬಂದಿವೆ. ಕಲಘಟಗಿ, ಕುಂದಗೋಳ, ನವಲಗುಂದ ಮತ್ತು ಧಾರವಾಡ ತಾಲ್ಲೂಕುಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಕಲಘಟಗಿಯಿಂದ ಯಲ್ಲಾಪುರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ ಕುಸಿದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಪ್ರದೇಶದಲ್ಲಿ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಅವಳಿನಗರದಲ್ಲೂ ಆರ್ಭಟ: ಮಳೆಯ ಸಂದರ್ಭದಲ್ಲಿ ಸಿಡಿಲಿನ ಅಟಾಟೋಪ ಭಯ ತರಿಸುವಂತಿತ್ತು. ಉಣಕಲ್ ಮತ್ತಿತರ ಕಡೆಗಳಲ್ಲಿ ಸಿಡಿಲು ಆರ್ಭಟದಿಂದ ಆಘಾತಕ್ಕೆ ಒಳಗಾದ ಹಲವರನ್ನು ಕಿಮ್ಸಗೆ ದಾಖಲು ಮಾಡಲಾಯಿತು. ಸಂಜೆ ಹೊತ್ತಿಗೆ ಬಿಡುವು ಕೊಟ್ಟ ಮಳೆ ರಾತ್ರಿ ಎಂಟು ಗಂಟೆ ಹೊತ್ತಿಗೆ ಮತ್ತೆ ರಭಸದಿಂದ ಸುರಿಯಿತು.

ಅವಳಿನಗರದ ಚರಂಡಿಗಳೆಲ್ಲ ತುಂಬಿ ರಸ್ತೆ ಮೇಲೆ ನೀರು ಹರಿದಾಡಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಲೋಕಪ್ಪನ ಹಕ್ಕಲ ಸೇರಿದಂತೆ ವಿವಿಧ ಪ್ರದೇಶಗಳ ಮನೆಗಳಲ್ಲಿ ನೀರು ನಿಂತಿತ್ತು. ವಿದ್ಯುತ್ ಮಾರ್ಗದ ಹಲವು ಜಂಪ್‌ಗಳು ಸಿಕ್ಕ-ಸಿಕ್ಕಲ್ಲಿ ತುಂಡರಿಸಿದ್ದರಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿತ್ತು. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಜನ ಬೇಸತ್ತರು. ಧಾರವಾಡ ಹಾಗೂ ನವನಗರ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು ರಸ್ತೆಗಳೆಲ್ಲ ಹಳ್ಳಗಳಂತೆ ಭಾಸವಾದವು.

ಮಳೆ ಒಮ್ಮೆಲೇ ರಭಸವಾಗಿ ಸುರಿಯಲು ಆರಂಭ ವಾಗಿದ್ದರಿಂದ ಭವಾನಿನಗರದ ದೋಭಿ ಘಾಟ್‌ನಲ್ಲಿ ಗಡಿಬಿಡಿ ಕಂಡು ಬಂತು. ರಜಾ ದಿನದ ಮಾರ್ಕೆಟ್‌ಗೆ ತೆರಳಿದ್ದ ಜನ ಕೂಡ ಬೆಂಬಿಡದೆ ಸುರಿದ ಮಳೆಯಿಂದ ತಾಪತ್ರಯ ಅನುಭವಿ ಸುವಂತಾಯಿತು. ಕಾಯಿಪಲ್ಲೆ ಮಾರುವವರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಯಥಾಪ್ರಕಾರ ತೊಂದರೆ ಎದುರಿಸಿದರು.

ಗೋಕುಲ ರಸ್ತೆಯ ಕೆಇಸಿ ಪ್ರದೇಶದಲ್ಲಿ ನಡೆಯುವ ಭಾನುವಾರದ ಸಂತೆಯನ್ನೂ ಮಳೆ ಕಾಡದೆ ಬಿಡಲಿಲ್ಲ. ಸಂಜೆ ಮಳೆಯಿಂದ ರಸ್ತೆ ಮೇಲೆ ಬಂದ ಪ್ರವಾಹ ಕಾಯಿಪಲ್ಲೆಯನ್ನು ಕೊಚ್ಚಿಕೊಂಡು ಹೋಯಿತು. ನೀರಲ್ಲಿ ತೇಲಿ ಹೊರಟಿದ್ದ ಉಳ್ಳಾಗಡ್ಡಿ, ಸೌತೆಕಾಯಿ, ಹೂಕೋಸುಗಳನ್ನು ವ್ಯಾಪಾರಿಗಳು ಎತ್ತಿಕೊಂಡು ದಂಡೆ ಮೇಲೆ ಇಡಲು ಹೆಣಗಾಡಿದರು.

ಹುಬ್ಬಳ್ಳಿ-ಧಾರವಾಡ ರಸ್ತೆಯ ಗುಂಡಿಗಳಿಗೆ ಜಲ್ಲಿಕಲ್ಲು-ಸಿಮೆಂಟ್ ಮಿಶ್ರಣವನ್ನು ಹಾಕಿ ಹೋದ ಕೆಲ ಹೊತ್ತಿನಲ್ಲೇ ಮಳೆ ಸುರಿದಿದ್ದರಿಂದ ಹಾಕಿದ್ದ ಕಾಂಕ್ರೀಟ್ ಕಿತ್ತು ಮತ್ತೆ ಗುಂಡಿಗಳು ಕಾಣಿಸಿಕೊಂಡವು. ಎಸ್.ಎಂ.ಕೃಷ್ಣನಗರ ಸೇರಿ ಕೆಲವು ಬಡಾವಣೆಗಳಲ್ಲಿ ಮೊದಲೇ ಕಿತ್ತುಹೋಗಿದ್ದ ರಸ್ತೆಗಳು ಇನ್ನಷ್ಟು ವಿರೂಪಗೊಂಡವು. ನಗರದ ಬಹುತೇಕ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ನೀರು ತುಂಬಿಕೊಂಡು ಚಾಲಕರ ಸಾಮರ್ಥ್ಯಕ್ಕೆ ಸವಾಲಾಗಿ ನಿಂತವು.

ಸಿಡಿಲು ಬಡಿದು ಗಾಯ: ಸಿಡಿಲು ಬಡಿದು ಇಬ್ಬರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಅಲ್ಲಿಪುರ ಗ್ರಾಮದ ದೇವಪ್ಪ ಹರಿಜನ ಹಾಗೂ ಅವರ ಪತ್ನಿ ಆಶವ್ವ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಗಾಯಗೊಂಡಿದ್ದು, ಅವರನ್ನು ಇಲ್ಲಿಯ ಕಿಮ್ಸಗೆ ದಾಖಲಿಸಲಾಗಿದೆ.

ನಾಲ್ವರಿಗೆ ಆಘಾತ: ಹೊಲದಲ್ಲಿ ಸಿಡಿಲು ಬಿದ್ದಿದ್ದನ್ನು ಕಂಡ ನಾಲ್ವರು ಆಘಾತಗೊಂಡ ಘಟನೆ ಭಾನುವಾರ ಹುಬ್ಬಳ್ಳಿಯ ಉಣಕಲ್ಲದಲ್ಲಿ ನಡೆದಿದೆ. ನೀಲವ್ವ ಹೊಂಬಳ, ಕಲ್ಲವ್ವ ಗೋಡೆಕಟ್ಟಿ, ಚನ್ನವ್ವ ಸಂಕಣ್ಣವರ ಹಾಗೂ ಗಂಗವ್ವ ಅದಕರ ಅವರು ಉಣಕಲ್ಲ ಸಮೀಪದ ಹೊಲದಲ್ಲಿ ಕೆಲಸ ಮಾಡುವಾಗ, ಅವರ ಹತ್ತಿರದಲ್ಲಿಯೇ ಸಿಡಿಲು ಬಿದ್ದಿದ್ದರಿಂದ ನಾಲ್ವರೂ ಆಘಾತಗೊಂಡಿದ್ದಾರೆ. ಇವರನ್ನು ಕಿಮ್ಸಗೆ ದಾಖಲಿಸಲಾಗಿದೆ.

ಮತ್ತೆ ಮಳೆ: ರಸ್ತೆಗಳು ಜಲಾವೃತ
ಧಾರವಾಡ:
ನಗರದಲ್ಲಿ ಭಾನುವಾರ ಸಂಜೆ ಭಾರಿ ಮಲೆಯಾಗಿದ್ದು, ಕೆಲವು ರಸ್ತೆಗಳು ಜಲಾವೃತಗೊಂಡಿದ್ದವು. ತಗ್ಗು ಪ್ರದೇಶದಲ್ಲಿ ಮನೆಯೊಳಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

ನಗರದ ಕಿಟೆಲ್ ಕಲೇಜು ಎದುರು, ದೈವಜ್ಞ ಕಲ್ಯಾಣ ಮಂಟಪದ ಎದುರು, ಅನಿಬೆಸಂಟ್ ವೃತ್ತದಲ್ಲಿ ರಸ್ತೆ ಮೇಲೆ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಯಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನಿರು ನುಗ್ಗಿತ್ತು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ.

ಜಿಲ್ಲೆಯ ಕಲಘಟಗಿ ತಾಲ್ಲೂಕಿನಲ್ಲಿಯೂ ಮಳೆ ಸುರಿದಿದೆ. ಆಕಾಶದಲ್ಲಿ ಸಂಜೆ 4 ಗಂಟೆಗೆ ಕಾರ್ಮೋಡ ಕವಿದಿತ್ತು. ಸಂಜೆ 6 ಗಂಟೆಗೆ ಕತ್ತಲು ಕವಿದು ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT