ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮುಂದುವರಿದ ಮಳೆ: ಪ್ರವಾಹ ಭೀತಿ

Last Updated 8 ಜುಲೈ 2013, 5:44 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರಾವಳಿ ಒಳನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಟ್ಕಳದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದರೆ, ಮತ್ತೊಂದು ಮನೆ ಕುಸಿದಿದೆ.

ಕರಾವಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಲ್ಲಿ ಮುಂಜಾನೆಯಿಂದಲೇ ಆರಂಭವಾದ ಮಳೆ ದಿನವಿಡೀ ಜೋರಾಗಿ ಸುರಿಯಿತು. ಘಟ್ಟ ಪ್ರದೇಶಗಳಾದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲೂ ಬೆಳಿಗ್ಗೆಯಿಂದಲೇ ನಿರಂತರ ಮಳೆಯಾಗಿದೆ. ಅರೆಬಯಲು ಸೀಮೆಗಳಾದ ಹಳಿಯಾಳ, ದಾಂಡೇಲಿ ಹಾಗೂ ಮುಂಡಗೋಡ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ.

ಕಾರವಾರದಲ್ಲಿ ಮಳೆ ಬಿಡುವು ನೀಡದೆ ಜೋರಾಗಿ ಸುರಿಯಿತು. ಜನಜಂಗುಳಿಯಿಂದ ಕೂಡಿರುತ್ತಿದ್ದ ಭಾನುವಾರದ ಸಂತೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆಯಾಯಿತು. ದಿನವಿಡೀ ಸುರಿದ ಮಳೆಗೆ ಜನಸಂಚಾರ ಅಸ್ತವ್ಯಸ್ತವಾಗಿತ್ತು. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಕೊಡೆ ಹಿಡಿದು ಸಾಗಿದರು. ಕದ್ರಾ ಅಣೆಕಟ್ಟೆಗೆ ಒಳಹರಿವು ಜಾಸ್ತಿಯಾಗಿದೆ. ನೀರು ಹೊರಬಿಟ್ಟರೆ ನದಿಯಂಚಿನ ಗ್ರಾಮಗಳು ಜಲಾವೃತವಾಗುವುದರಿಂದ ಇಲ್ಲಿನ ಜನರು ಆತಂಕದಲ್ಲಿದ್ದಾರೆ.

ಎರಡು ಮನೆಗೆ ಹಾನಿ
ಭಟ್ಕಳ: ಎರಡು ದಿನಗಳಿಂದ ಸಣ್ಣದಾಗಿ ಬೀಳುತ್ತಿದ್ದ ಮಳೆ ಭಾನುವಾರ ಬೆಳಿಗ್ಗೆಯಿಂದ ಬಿರುಸು ಪಡೆದಿರುವುದರಿಂದ ಎರಡು ಮನೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನ ಕಾಯ್ಕಿಣಿ ಸಮೀಪ ಮಾಸ್ತಮ್ಮ ನಾಯ್ಕ ಎಂಬವರಿಗೆ ಸೇರಿದ ಮನೆಯ ಗೋಡೆ ಮಳೆಯ ರಭಸಕ್ಕೆ ಕುಸಿದ್ದು ಬಿದ್ದು ಹಾನಿಯಾಗಿದೆ. ಹುರುಳಿಸಾಲ್‌ನಲ್ಲಿ ಮಾದೇವ ಈರ ನಾಯ್ಕ ಎಂಬವರಿಗೆ ಸೇರಿದ ಮನೆಯ ಮೇಲೆ ಅಡಿಕೆ ಮರವೊಂದು ಮುರಿದ್ದು ಬಿದ್ದು ಹಂಚು, ರೀಪುಗಳೆಲ್ಲಾ ತುಂಡಾಗಿ ಸಾವಿರಾರು ರೂಪಾಯಿ ಹಾನಿಯಾಗಿದೆ.

ಗಾಳಿ ಸ್ವಲ್ಪ ಕಡಿಮೆಯಾಗಿದ್ದರೂ ಮಳೆಯ ಆರ್ಭಟ ಮಾತ್ರ ಭಾನುವಾರ ಸಂಜೆವರೆಗೂ ಮುಂದುವರಿದಿತ್ತು. ರಭಸದ ಮಳೆಯಲ್ಲೇ ವಾರದ ಸಂತೆಯು ಸಹ  ನಡೆಯಿತು. ಒಂದು ತಿಂಗಳ ಗಾಳಿ ಮಳೆಗೆ ಈವರೆಗೆ ತಾಲ್ಲೂಕಿನಲ್ಲಿ ವಿದ್ಯುತ್ ತಂತಿ, ಕಂಬಗಳು ಬಿದ್ದು ಇಲ್ಲಿನ ಹೆಸ್ಕಾಂ ಇಲಾಖೆಗೆ ಈವರೆಗೆ ಒಟ್ಟು 4.59 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ವರದಿ ನೀಡಿದ್ದಾರೆ. ಮಳೆ ಗಾಳಿಗೆ ಸುಮಾರು 60 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.13 ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿವೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT