ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ರೂ 122 ಕೋಟಿಯಷ್ಟು ಬೆಳೆ ಹಾನಿ:ಪ್ರಕೃತಿಗಿಂತ ಯೂರಿಯಾ ಪ್ರಕೋಪ ಜಾಸ್ತಿ!

Last Updated 19 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಕೃತಿ ವಿಕೋಪ (ಬರ)ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ `ಯೂರಿಯಾ ಪ್ರಕೋಪ~ದಿಂದ ಬೆಳೆ ಹಾನಿ ಸಂಭವಿಸಿದೆ. ಇದು ರೈತರು ಅವರಾಗಿಯೇ ಮಾಡಿಕೊಂಡ ತಪ್ಪು. ಬೇಡ ಬೇಡ ಎಂದರೂ ಚಪ್ಪಡಿಕಲ್ಲನ್ನು ಎಳೆದುಕೊಂಡಂತಾಗಿದೆ!

- ಜಿಲ್ಲೆಯಲ್ಲಿ ಮೆಳೆ ಬೆಳೆಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್ ವಿಷಾದದಿಂದ ಹೇಳಿದ್ದು ಹೀಗೆ.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎಷ್ಟೇ ಹೇಳಿದರೂ ರೈತರು ಯೂರಿಯಾ ಬಳಕೆ ಪ್ರಮಾಣ ಕಡಿಮೆ ಮಾಡುತ್ತಿಲ್ಲ.

ಕಳೆದ ತಿಂಗಳ ಆರಂಭದಲ್ಲಿ ಒಂದಷ್ಟು ಮಳೆ ಬಂದಾಗ ಯೂರಿಯಾ ಹೆಚ್ಚಾಗಿ ಬಳಸಿದರು. ಇದರಿಂದ ಬೆಳೆಗಳೆಲ್ಲಾ ಒಣಗಿದೆ. ರೈತರು, ಬರ ಸಮರ್ಪಕವಾಗಿ ಎದುರಿಸಲು ತಯಾರಿಯನ್ನೇ ಮಾಡಿಕೊಳ್ಳುತ್ತಿಲ್ಲ ಎಂದರು.

 ರೂ 18 ಕೋಟಿ ಕೋರಿ ಪ್ರಸ್ತಾವ
ಜಿಲ್ಲೆಯಲ್ಲಿ ಮಳೆಯಾಗದೇ, ಬಹಳ ಆತಂಕದ ಸ್ಥಿತಿ ಇದೆ. ರಾಗಿ ಬೆಳೆಯಲ್ಲಿಯೂ ತೀವ್ರ ಹಾನಿಗೆ ಒಳಗಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ, 68,393 ಹೆಕ್ಟೇರ್ ರಾಗಿಯಲ್ಲಿ ಶೇ 50ಕ್ಕಿಂತಲೂ ಹೆಚ್ಚು ಹಾನಿಯಾಗಿದೆ. ಈ ಸಂಬಂಧ ರೂ 18 ಕೋಟಿ ಬೆಳೆಹಾನಿ ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ರೂ 122 ಕೋಟಿ ಮೌಲ್ಯದಷ್ಟು ಬೆಳೆಹಾನಿಯಾಗಿದ್ದು; ಇನ್ನೂ ಹೆಚ್ಚುವ ಸ್ಥಿತಿ ಇದೆ. ಹೊನ್ನಾಳಿ ತಾಲ್ಲೂಕಿನಲ್ಲಿ ಈ ಪ್ರಮಾಣ ಜಾಸ್ತಿ. ಹರಿಹರದಲ್ಲಿ ಸ್ವಲ್ಪ ನೀರಾವರಿ ಇರುವುದರಿಂದ ಹಾನಿ ಪ್ರಮಾಣ ಕಡಿಮೆ ಇದೆ ಎಂದು ಮಾಹಿತಿ ನೀಡಿದರು.

ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬರುವುದೇ ಅಕ್ಟೋಬರ್‌ನಲ್ಲಿ. ವಾಡಿಕೆ 119 ಮಿ.ಮೀ. ಇದ್ದರೆ, ಬಿದ್ದಿದ್ದು 15 ಮಿ.ಮೀ. ಮಾತ್ರ. ಸೆಪ್ಟೆಂಬರ್‌ನಲ್ಲಿ ವಾಡಿಕೆ 114 ಮಿ.ಮೀ. ಇದ್ದರೆ, ಮಳೆಯಾದದ್ದು 45 ಮಿ.ಮೀ. ಮಾತ್ರ. ಸೆಪ್ಟೆಂಬರ್‌ನಲ್ಲಿ  ಮಳೆ ಬಂದಾಗ ಹಾಕಿದ ಬೆಳೆಗೆ ಯೂರಿಯಾ ಜಾಸ್ತಿ ಹಾಕಲಾಯಿತು. ಇದರಿಂದ ಆ ಬೆಳೆ ಉಳಿಸಿಕೊಳ್ಳಲು ಆಗಿಲ್ಲ ಎಂದು ಹೇಳಿದರು.

ಮುಂದಿನ ವಾರಾಂತ್ಯದಲ್ಲಿ ಪರಿಹಾರ: ಕಳೆದ ವರ್ಷ ಮಳೆ ಬಂದಿರಲಿಲ್ಲ. ಬೆಳೆ ಹಾನಿ ಪರಿಹಾರ ನೀಡಲು ರೂ 13 ಕೋಟಿ (66 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸಂಬಂಧಿಸಿದಂತೆ) ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪೈಕಿ ರೂ 6.25 ಕೋಟಿ ಅನುದಾನ ಬಂದಿದೆ. ಮುಂದಿನ ವಾರಾಂತ್ಯದಲ್ಲಿ ಪರಿಹಾರ ವಿತರಿಸಲಾಗುವುದು.

ಈ ಬಾರಿ ಆಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆಯೂ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.ಎಲ್ಲ ವಿಕೋಪಕ್ಕೂ ನಾನೇ ಕಾರಣ ಎಂಬಂತೆ, ರೈತರು ತಮ್ಮನ್ನು ದೂರುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಅರಿವು ಮೂಡಿಸಿದರೂ, ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು `ತಲೆ ತೆಗೆಯುತ್ತೇನೆ~ ಎಂದೇ ಹೇಳುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು.

ಬರಕ್ಕೆ ತುತ್ತಾಗಿರುವ ರೈತರ ಸ್ಥಿತಿ ಚಿಂತಾಜನಕವಾಗಿದೆ. ವೈಜ್ಞಾನಿಕ ಹಾಗೂ ಸಮರ್ಪಕ ಸಮೀಕ್ಷೆ ನಡೆಸಿ, ಬೆಳೆಹಾನಿ ಪರಿಹಾರ ಕೊಡಿಸಬೇಕು. ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್ ಹಾಗೂ ಸಿಇಒ ಎ.ಬಿ. ಹೇಮಚಂದ್ರ ಸೂಚಿಸಿದರು.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ವೀರೇಂದ್ರಪಾಟೀಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಬಿಕಾ ರಾಜಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT