ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 67.5 ರಷ್ಟು ಮತದಾನ

Last Updated 1 ಜನವರಿ 2011, 7:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಹಾಗೂ ಏಳು ತಾಲ್ಲೂಕು ಪಂಚಾಯಿತಿಗಳಿಗೆ ಶುಕ್ರವಾರ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿದ್ದು, ಶೇಕಡ 67.5 ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ರಿಂದ 11 ರ ವರೆಗೆ ಮತದಾನ ನೀರಸವಾಗಿತ್ತು. ಈ ಅವಧಿಯಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ಶೇಕಡ 10 ರಿಂದ 12 ರಷ್ಟು ಮಾತ್ರ ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆ ನಂತರ ಮಹಿಳೆಯರು ಮನೆ ಕೆಲಸ ಮುಗಿಸಿ ಮತಗಟ್ಟೆಗಳತ್ತ ಮುಖ ಮಾಡಿದ್ದರಿಂದ ಮತದಾನ ಚುರುಕುಗೊಂಡಿತು. ಸಾಯಂಕಾಲ 4 ಗಂಟೆ ನಂತರ ಮತಗಟ್ಟೆಗಳ ಮುಂದೆ ಮಹಿಳೆಯರು, ಪುರುಷರು ಮತ ಹಾಕಲು ಸಾಲುಗಟ್ಟಿ ನಿಂತಿದ್ದರು.

ಮೈಸೂರು ತಾಲ್ಲೂಕಿನ ಹಿನಕಲ್, ಹೂಟಗಳ್ಳಿ, ಆಲನಹಳ್ಳಿ, ರಮಾಬಾಯಿನಗರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿದರು. ಇನ್ನು ಕೆಲವು ಕಡೆ ಮತಯಂತ್ರ ಕೈಗೊಟ್ಟಿದ್ದರಿಂದ ಸ್ವಲ್ಪ ಹೊತ್ತು ಮತದಾನಕ್ಕೆ ತೊಂದರೆಯಾಗಿತ್ತು. ಇಷ್ಟನ್ನು ಹೊರತು ಪಡಿಸಿದರೆ ಉಳಿದಂತೆ ಮತದಾನ ಶಾಂತಿಯುತವಾಗಿತ್ತು.

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ ಶೇಕಡ 71 ಮಂದಿ ಮತ ಚಲಾಯಿಸಿದ್ದು, ನಂಜನಗೂಡು ತಾಲ್ಲೂಕಿನಲ್ಲಿ ಅತಿಕಡಿಮೆ ಶೇಕಡಾ (62) ರಷ್ಟು ಮತದಾನವಾಗಿದೆ.

ಜಿಲ್ಲೆಯ ವಿವಿಧ ಕಡೆ ಮತದಾನ ಸಂದರ್ಭದಲ್ಲಿ ಕಂಡು ಬಂದ ಸ್ವಾರಸ್ಯಗಳು ಹೀಗಿವೆ.

ಚುನಾವಣೆ ಅಂದ ಮೇಲೆ ಎಣ್ಣೆ (ಮದ್ಯ) ಇರಲೇಬೇಕು. ಇಲ್ಲದಿದ್ದರೆ ಅದು ಚುನಾವಣೆಯೇ ಇಲ್ಲ ಎನ್ನುವುದು ಮದ್ಯಪ್ರಿಯರ ಖಡಕ್ ಮಾತು. ಇದನ್ನು ಸಾಬೀತು ಪಡಿಸುವಂತೆ ಮತಗಟ್ಟೆಯ ಮುಂದೆ ಬೆಳಿಗ್ಗೆಯೇ ಎಣ್ಣೆ ಹಾಕಿದವರು ನಿಂತಿದ್ದವರಿಗೆ ‘ಪುಕ್ಕಟೆ ಮನರಂಜನೆ’ ಕೊಡುತ್ತಿದ್ದರು. ರಾತ್ರಿ ಏರಿಸಿದ್ದು ಇಳಿದಿದ್ದ ಕಾರಣ ಕಾಫಿ, ಟೀ ಗೂ  ಮುನ್ನವೇ ಆ ಪಾರ್ಟಿ, ಈ ಪಾರ್ಟಿಯವರು ಕೊಟ್ಟ ಎಣ್ಣೆಯನ್ನು ಕಂಠಮಟ್ಟ ಏರಿಸಿ ಅಮಲಿನಲ್ಲಿ ವಾಲಾಡುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಾ ಜೋಕರ್‌ಗಳಾಗಿದ್ದರು.

ಬನ್ನಿಕುಪ್ಪೆಯಲ್ಲಿ ಸಂಜೆಯಾದರೂ ಎಣ್ಣೆ ಏಟು ಕಡಿಮೆಯಾಗಿದ ವ್ಯಕ್ತಿಯೊಬ್ಬ ‘ವತ್ತಾರೆಯಿಂದ ಕಾಯ್ತಾನೇ  ಇವ್ನಿ. ಯಾರೂ ಏನೂ ಕೊಡ್ತಾನೇ ಇಲ್ಲ. ಈಗ ಕಣ್ಣೀರ್ ಹಾಕಂಡು ವೋಯ್ತಾವ್ನಿ’ ಎಂದು ದುಃಖದಿಂದಲೇ ತಪ್ಪು ತಪ್ಪು ಹೆಜ್ಜೆ ಹಾಕುತ್ತಿದ್ದನು.

‘ನಿಮ್ದು ಟೋಕನ್ನ, ಬಿಲ್ಲಾ?’ ಹೂಟಗಳ್ಳಿ ದರ್ಶಿನಿಯೊಂದಲ್ಲಿ ತಿಂಡಿ ತಿನ್ನಲು ಹೋದ ಪತ್ರಕರ್ತರಿಗೆ ಹೋಟೆಲ್ ಮಾಲೀಕ ಕೇಳಿದ ಮಾತು ಇದು. ಆ ದರ್ಶಿನಿ ಸಮೀಪವೇ ಮತಗಟ್ಟೆ ಇತ್ತು. ಚುನಾವಣೆಯಲ್ಲಿ ಕೆಲಸ ಮಾಡುವ  ಕಾರ್ಯಕರ್ತರಿಗೆ ಆ ದರ್ಶಿನಿಯಲ್ಲಿ ತಿಂಡಿ, ಊಟ, ಚಹಾ ಕುಡಿಯಲು ಟೋಕನ್ ವ್ಯವಸ್ಥೆ ಮಾಡಲಾಗಿತ್ತು. ಟೋಕನ್ ಕೊಟ್ಟರೆ ತಿನ್ನಲು, ಕುಡಿಯಲು ಸಿಗುತ್ತಿತ್ತು. ಇದೇ ರೀತಿ ಹಲವು ಊರುಗಳಲ್ಲಿ ಟೋಕನ್ ಪದ್ಧತಿ ಇತ್ತು.

 ‘ಸಾ, ನಮ್ಮೂರಲ್ಲಿ ನಾವು ಎಲೆಕ್ಸನ್‌ಗಾಗಿ ಜಗಳ ಆಡುದಿಲ್ಲ. ಅವರವರು ಇಷ್ಟವಾದ ಪಾರ್ಟಿಗೆ ಕೆಲ್ಸ  ಮಾಡ್ತೀವಿ. ಎಲೆಕ್ಸನ್ ಮುಗುದ್ಮೇಲೆ ಒಂದೇ. ಬೆಳಗಾದ್ರೆ ಅವರ ಮಕ ನಾವು ನಮ್ ಮಕ ಅವ್ರ ನೋಡ್ಬೇಕು ಅಲ್ವಾ’ ಎಂದು ಹಳ್ಳಿಗರು ಜಾಣರಂತೆ ಮಾತನಾಡುತ್ತಿದ್ದರು.

ಪತ್ರಕರ್ತರು ಕುತೂಹಲದಿಂದ ‘ನಿಮ್ಮೂರಲ್ಲಿ ಹೇಗಿದೆ ಸ್ವಾಮೀ’ ಅಂತ ಕೇಳಿದರೆ ‘ಮೂರು ಪಕ್ಸ ಅವೆ. ವಿಜಯಲಕ್ಷ್ಮಿ ಯಾರಿಗೆ ಒಲಿತಳೋ ಆ ದೇವ್ರೆಗೊತ್ತು’ ಎಂದು ಆಕಾಶದತ್ತ ಮುಖಮಾಡುತ್ತಿದ್ದರು.

ಕೆ.ಆರ್.ನಗರ ತಾಲ್ಲೂಕಿನ ಚೀರ್ನಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಸ್ಪರ್ಧೆಗಿಳಿದಿದ್ದಾರೆ. ಇವರ ವೃತ್ತಿ ಕೂಲಿ ಕೆಲಸ. ‘ನಾನು ಕೂಲಿ ಕೆಲ್ಸ ಮಾಡ್ತಿನಿ. ಆದ್ರೂ ಜನರೇ ದುಡ್ಡುಕೊಟ್ಟು ಎಲೆಕ್ಸನ್ಗೆ ನಿಲ್ಸವ್ರೆ. ಗೆಲುವು ನಿಶ್ಚಿತ. ಫಲಿತಾಂಶ ಬಂದ ಮೇಲೆ ನನ್ನನ್ನು ಕೇಳಿ’ ಎಂದು ಅದಮ್ಯ ವಿಶ್ವಾಸದಿಂದಲೇ ಹೇಳಿ ಅಚ್ಚರಿ ಮೂಡಿಸಿದರು.

ಇಲವಾಲ ಮತಗಟ್ಟೆ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಮತ ಕೇಳುತ್ತಿದ್ದರು. ಅವರ ಪಕ್ಕದಲ್ಲಿಯೇ ಜೆಡಿಎಸ್  ಕಾರ್ಯಕರ್ತನೊಬ್ಬ ತಮ್ಮ ಪಕ್ಷದ ಪರವಾಗಿ ವೋಟ್ ಕೇಳುತ್ತಿದ್ದನು. ಆಗ ಕಾಂಗ್ರೆಸ್ ಅಭ್ಯರ್ಥಿ ‘ಅವರ ಮಾತು  ಕೇಳಬೇಡಿ, ನಂಗೆ ವೋಟ್ ಹಾಕಿ’ ಎಂದರು. ಆಗ ಜೆಡಿಎಸ್ ಕಾರ್ಯಕರ್ತ ‘ನಂಗೂ ನೀವೆ ಗೆಲ್ಬೇಕು ಅಂತ ಆಸೆ. ನೀವು ಗೆದ್ರೆ ಬ್ಯಾಡ ಅಂತಿನಾ? ಎಂದು ರಾಗ ಬದಲಿಸಿದನು.

ಕಿತ್ತೂರು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೆಂಕಟೇಶ್ ಅವರ ಗ್ರಾಮ. ಬೆಳಿಗ್ಗೆ ಶಾಸಕರು  ಮತ ಚಲಾಯಿಸಲು ಮತಗಟ್ಟೆಗೆ ಹೋದರು. ಮತದಾರರ ಪಟ್ಟಿಯಲ್ಲಿ ಶಾಸಕ ಕೆ.ವೆಂಕಟೇಶ್ ಹೆಸರು, ವಿಳಾಸ ಎಲ್ಲವೂ ಸರಿ ಇತ್ತು. ಆದರೆ ಫೋಟೋ ಮಾತ್ರ ಬೇರೆ ಯಾರದೋ ಇತ್ತು! ಅಲ್ಲದೇ ಶಾಸಕರ ಪುತ್ರ ಪವನ್ ಪಿ.  ಅವರ ಹೆಸರು ಮತದಾರರ ಪಟ್ಟಿಯಲ್ಲಿ ‘ಡಿಲಿಟೆಡ್’ ಎಂದು ನಮೂದಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT