ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ಅಂಕೆ’ ತಪ್ಪಿದ ಏಡ್ಸ್‌!

Last Updated 2 ಡಿಸೆಂಬರ್ 2013, 9:10 IST
ಅಕ್ಷರ ಗಾತ್ರ

ಬಾಗಲಕೋಟೆ: ಅಧಿಕ ಸಂಖ್ಯೆಯ ಎಚ್ಐವಿ ಸೋಂಕಿತರಿಂದಾಗಿ ಏಷ್ಯಾಖಂಡದ ಗಮನ ಸೆಳೆದ ಬಾಗಲಕೋಟೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರೋಗ ಹರಡುವಿಕೆ ಕಡಿಮೆಯಾಗುತ್ತಿದೆ ಎಂಬ ಸಮಾಧಾನಕರ ಸುದ್ದಿ ಕೇಳಿಬರುತ್ತಿದೆಯಾದರೂ ರಾಜ್ಯದ ಮಟ್ಟಿಗೆ ಈಗಲೂ ಬಾಗಲಕೋಟೆಯೇ ನಂ.1ಜಿಲ್ಲೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 35 ಸಾವಿರ ಜನರಲ್ಲಿ ಎಚ್‌ಐವಿ ಪತ್ತೆಯಾಗಿದೆ ಎಂಬುದು ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಆದರೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌, ‘ನ್ಯಾಕೋ ನಡೆಸಿದ ಎಚ್‌ಎಸ್‌ಎಸ್‌ ಸಮೀಕ್ಷೆ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿ 56,947 ಜನರಲ್ಲಿ ಎಚ್‌ಐವಿ ಪತ್ತೆಯಾಗಿದೆ’ ಎಂಬ ಕಳವಳಕಾರಿ ಹೇಳಿಕೆ ನೀಡಿದ್ದಾರೆ.

ಹಾಗಾದರೆ, ಈ ಎರಡು ಅಂಕೆ–ಸಂಖ್ಯೆಗಳಲ್ಲಿ ಯಾವ ಲೆಕ್ಕ ಸರಿ ಎಂಬುದು ಜಿಲ್ಲೆಯ ಮಟ್ಟಿಗೆ ಯಕ್ಷ ಪ್ರಶ್ನೆಯಾಗಿದೆ. ದ್ವಂದ್ವದಿಂದ ಕೂಡಿರುವ ಈ  ಎರಡು ಅಂಕಿ–ಅಂಶಗಳು ಜಿಲ್ಲೆಯ ಜನರಲ್ಲಿ ಭಯಭೀತಿ ಹುಟ್ಟುಹಾಕಿವೆ.

‘ನಮ್ಮ ಲೆಕ್ಕವೇ ಸರಿ’: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಅರಹುಣಸಿ,‘ನ್ಯಾಕೋ ಸಮೀಕ್ಷೆ ಅಂದಾಜಿನ­ದಾಗಿರುತ್ತದೆ, ಸಮೀಕ್ಷೆ ಸಂದರ್ಭದಲ್ಲಿ ತಾನು ಪರೀಕ್ಷೆಗೆ ಒಳಪಡಿಸುವ 100 ಜನರಲ್ಲಿ ಎಷ್ಟು ಜನರಲ್ಲಿ ಸೋಂಕು ಕಂಡುಬಂದಿರುತ್ತದೆಯೋ ಅದರ ಆಧಾರದ ಮೇಲೆ ಇಡೀ ಜಿಲ್ಲೆಯ ಸರಾಸರಿ ಇಷ್ಟಿರಬಹುದು ಎಂದು ಅಂದಾಜಿಸುತ್ತದೆ. ಇದರಿಂದ ತಪ್ಪುಗಳಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ನೀಡಿರುವ ಮಾಹಿತಿಯೇ ನೈಜವಾಗಿದೆ. ನಮ್ಮ ಎಆರ್‌ಟಿ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಮಾಡಿರುವ ವರದಿ ಪ್ರಕಾರ ಜಿಲ್ಲೆಯಲ್ಲಿ 35 ಸಾವಿರ ಜನರಲ್ಲಿ ಎಚ್‌ಐವಿ ಪತ್ತೆಯಾಗಿದೆ. ಅದರಲ್ಲಿ 28,299 ಜನರು ಚಿಕಿತ್ಸೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 10,405 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ಸಾವಿನ ಸಂಖ್ಯೆ: ‘2006 ರಿಂದ 2013 ಅಕ್ಟೋಬರ್‌ ವರೆಗೆ ಜಿಲ್ಲೆಯಲ್ಲಿ 3,587 ಜನ ಏಡ್ಸ್‌ ಸೊಂಕಿತರಾಗಿದ್ದಾರೆ. ಪ್ರಸಕ್ತ ವರ್ಷವೊಂದರಲ್ಲೇ 778 ಜನ ರೋಗದಿಂದ ಜೀವ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.

ಏಡ್ಸ್ ಜಾಗೃತಿ ಜಾಥಾ ಇಂದು

ಬಾಗಲಕೋಟೆ: ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಇದೇ 2 ರಂದು ಬೆಳಗ್ಗೆ 9ಕ್ಕೆ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಆಶ್ರಯದಲ್ಲಿ ಜನ ಜಾಗೃತಿಗಾಗಿ ಜಾಥಾ ಏರ್ಪಡಿಸಲಾಗಿದೆ.

ನಗರದ 50 ಹಾಸಿಗೆಯ ಆಸ್ಪತ್ರೆಯಿಂದ ಪ್ರಾರಂಭವಾಗುವ ಜಾಥಾ, ವಾಸವಿ ಚಿತ್ರ ಮಂದಿರ, ಕೆನರಾ ಬ್ಯಾಂಕ್ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ವಲ್ಲಭಬಾಯಿ ಚೌಕದ ಮೂಲಕ ಹಳೇ ಬಸವೇಶ್ವರ ಬ್ಯಾಂಕ್, ಟೆಂಗಿನಮಠದ ಮಾರ್ಗವಾಗಿ ಬಿ.ವಿ.ವಿ ಸಂಘದ ಅಡಿಟೋರಿಯಂ ಸಭಾಭವನಕ್ಕೆ ಬಂದು ಮುಕ್ತಾಯವಾಗಲಿದೆ.

ಬಳಿಕ ಬಿವಿವಿ ಸಂಘದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಸಾರ್ವಜನಿಕ ಕಾರ್ಯಕ್ರಮ ಹಾಗೂ ಅತಿಥಿ ಉಪನ್ಯಾಸ ಹಾಗೂ ಏಡ್ಸ್‌ ತಡೆಗಟ್ಟುವ ಪ್ರತಿಜ್ಞಾವಿಧಿ ಸ್ವೀಕಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT