ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಉತ್ಸವ

Last Updated 19 ಜನವರಿ 2011, 10:00 IST
ಅಕ್ಷರ ಗಾತ್ರ

ಧಾರವಾಡ: “ಎಲ್ಲ ಜನರನ್ನು ಮುಟ್ಟುವಂಥ ಜಿಲ್ಲೆಯ ಎಲ್ಲ ಕಡೆಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಪ್ರಯತ್ನ ಮಾಡಿರುವುದು ಈ ಬಾರಿಯ ಧಾರವಾಡ ಉತ್ಸವದ ವಿಶೇಷವಾಗಿದೆ” ಎಂದು ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣಾ ಸಮಿತಿ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಧಾರವಾಡದಲ್ಲಿ 10 ವೇದಿಕೆಗಳು, ಹುಬ್ಬಳ್ಳಿಯಲ್ಲಿ 6 ಹಾಗೂ ನವಲಗುಂದ, ಕಲಘಟಗಿ, ಕುಂದಗೋಳ, ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಉತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಹಿಂದೆ 3 ದಿನಗಳವರೆಗೆ ನಡೆಯುತ್ತಿದ್ದ ಉತ್ಸವ, ಈ ಬಾರಿ ನಾಲ್ಕು ದಿನಗಳವರೆಗೆ (ಜ. 22 ರಿಂದ 25) ಜರುಗಲಿದೆ ಎಂದರು. ‘ಉತ್ಸವದಲ್ಲಿ ರಾಷ್ಟ್ರಮಟ್ಟದ 6, ರಾಜ್ಯಮಟ್ಟದ 35 ಕಲಾವಿದರು ಸೇರಿದಂತೆ ಒಟ್ಟು 201 ತಂಡಗಳು, 2457 ಕಲಾವಿದರು ಭಾಗವಹಿಸಲಿದ್ದಾರೆ. 23ಕ್ಕೂ ಹೆಚ್ಚು ಸ್ಥಳೀಯ ತಂಡಗಳು ನೃತ್ಯ ಪ್ರದರ್ಶನ ನೀಡಲಿವೆ.

25ರಂದು ಕೆಸಿಡಿ ಮೈದಾನದಲ್ಲಿ ರಾಷ್ಟ್ರೀಯ ಐಕ್ಯತೆ ವಿಷಯವನ್ನಿಟ್ಟುಕೊಂಡು 7 ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು.ಜಿಲ್ಲೆಯ ಜನತೆಗೆ ನೃತ್ಯ, ಸಂಗೀತ, ಫ್ಯೂಜನ್, ಕೋಲಾಟ, ಜಾನಪದ, ನಾಟಕ, ಯಕ್ಷಗಾನ, ಗಾಯನ, ಕವ್ವಾಲಿ, ಸುಗಮ-ಶಾಸ್ತ್ರೀಯ ಸಂಗೀತ, ದೊಡ್ಡಾಟ, ಕಂಸಾಳೆ, ಪೂಜಾ ಕುಣಿತ, ಚಿತ್ರಕಲೆ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ವಿವಿಧ ಸಮಿತಿಗಳಲ್ಲಿನ ಹಿರಿಯ ಸಾಹಿತಿಗಳು, ಕಲಾವಿದರು ಪ್ರಯತ್ನಿಸಿದ್ದಾರೆ ಎಂದರು.

ಜಿಲ್ಲೆಯ ಸಂರಕ್ಷಿತ ಐತಿಹಾಸಿಕ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಕುರಿತು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಉಣಕಲ್ಲಿನ ಚಂದ್ರಮೌಳೇಶ್ವರ ದೇವಾಲಯ ಹಾಗೂ ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಉತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈಗಾಗಲೇ ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿದ ಧಾರವಾಡದ ಕೆಸಿ ಪಾರ್ಕ್, ಸಾಧನಕೇರಿ ಕೆರೆ, ಹುಬ್ಬಳ್ಳಿಯ ನೃಪತುಂಗ ಬೆಟ್ಟ ಹಾಗೂ ಕೆಸಿಡಿ, ಆಲೂರು ವೆಂಕಟರಾವ್ ಭವನ, ಸೃಜನಾ ರಂಗಮಂದಿರ, ಕರ್ನಾಟಕ ವಿದ್ಯಾವರ್ಧಕ ಸಂಘ, ಡಾ. ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರ, ಸವಾಯಿ ಗಂಧರ್ವ ಹಾಲ್, ಸಿದ್ಧಾರೂಢಮಠ, ಕಿಮ್ಸ್ ಸಭಾಂಗಣ, ಚಿಟಗುಪ್ಪಿ ಆಸ್ಪತ್ರೆ ಆವರಣದ ವಿಜಯ ಮಹಾಂತೇಶ ಚಿತ್ರಕಲಾ ಕಾಲೇಜುಗಳಲ್ಲಿ ಉತ್ಸವದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಕಡಪಾ ಮೈದಾನದಲ್ಲಿ ಮಕ್ಕಳು ಹಾಗೂ ಯುವಕರಿಗೆ ಶಕ್ತಿ ಪ್ರದರ್ಶನ, ಕ್ರೀಡೆಗಳನ್ನು ನಡೆಸಲಾಗುವುದು. ಕಬಡ್ಡಿ ಹಾಗೂ ಕುಸ್ತಿ ಪಂದ್ಯಗಳನ್ನು ಒಳಾಂಗಣ ಕ್ರೀಡಾಂಗಣದಲ್ಲಿ, ಉಣಕಲ್ಲದ ಗುರುಕುಲ ಬಳಿ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗುವುದು. ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾ ಸಮಿತಿ ರಚಿಸಲಾಗಿದೆ ಎಂದ ಅವರು, ಈ ಬಾರಿ ಆಹಾರ ಮೇಳ ಸಹ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಬೇರೆ ಬೇರೆ ಕಲಾಪ್ರಕಾರದ ಹಾಗೂ ಅವಕಾಶ ಸಿಗದ ಕಲಾವಿದರಿಗೆ ವೇದಿಕೆ ಕಲ್ಪಿಸಲು ಗ್ರಾಮೀಣ ಯುವಜನರಿಗೆ ತಮ್ಮ ಆಟೋಟ, ಚಾತುರ್ಯ ಪ್ರದರ್ಶಿಲು ಅವಕಾಶ ಕಲ್ಪಿಸುವುದರ ಜೊತೆಗೆ ಆಯಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಇಂಬು ನೀಡುವುದು ಉತ್ಸವದ ಉದ್ದೇಶ. ಮುಂದಿನ ವರ್ಷಗಳಲ್ಲಿ ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲ, ಇಂದಿರಾ ಗಾಜಿನ ಮನೆ, ಕನ್ನಡ ಭವನ, ಹಳೇ ಎಪಿಎಂಸಿಯಲ್ಲಿನ ಕನ್ವೆನ್ಷನ್ ಹಾಲ್, ಕೋಳಿವಾಡದ ಕುಮಾರವ್ಯಾಸ ಸ್ಮಾರಕ ಭವನ, ಅಣ್ಣಿಗೇರಿಯ ಪಂಪ ಸ್ಮಾರಕ, ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ, ಧಾರವಾಡದ ಅಂಬೇಡ್ಕರ್ ಭವನ ಉತ್ಸವದ ವೇದಿಕೆಗಳಾಗಲಿವೆ.

ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನ ಹಾಗೂ ಸವಾಯಿ ಗಂಧರ್ವ ಹಾಲ್‌ಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಉತ್ಸವದ ನಂತರವೂ ಕೆಸಿ ಪಾರ್ಕ್ ಹಾಗೂ ಸಾಧನಕೇರಿಯ ಕೆರೆ ಅಂಗಳದಲ್ಲಿ ಉದಯರಾಗ, ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿ ತಿಂಗಳು ಅಥವಾ ಪ್ರತಿ ವಾರ ಏರ್ಪಡಿಸಲು ಚಿಂತನೆ ನಡೆದಿದೆ ಎಂದರು ಜೈನ್ ಹೇಳಿದರು.ಉತ್ಸವದ ಅಂಗವಾಗಿ ಜಿಲ್ಲೆಯ 15 ಹಳ್ಳಿಗಳಲ್ಲಿ ಚಲನಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಉತ್ಸವಕ್ಕೆ 60 ಲಕ್ಷ ರೂ. ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಧಾರವಾಡದ ಒಳಾಂಗಣ ಕ್ರೀಡಾಂಗಣ ಹಾಗೂ ಬಾರೋ ಸಾಧನಕೇರಿ ಕೆರೆ ಯೋಜನೆಯನ್ನು ಜ. 20 ರಂದು ಉದ್ಘಾಟಿಸಲಾಗುವುದು. ಕ್ರೀಡಾ ಹಾಗೂ ಪ್ರವಾಸೋದ್ಯಮ ಸಚಿವರು ಉದ್ಘಾಟನೆ ಮಾಡುವರು ಎಂದ ಅವರು, ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT