ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಬಾಪೂಜಿ, ಶಾಸ್ತ್ರೀಜಿ ಜಯಂತಿ ಆಚರಣೆ

Last Updated 3 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಶಿರಸಿ: `ಬೆಳಗಾಗ ನಾನೆದ್ದು ಯಾರ‌್ಯಾರ ನೆನೆಯಲಿ~ ಎಂಬ ಯೋಚನೆಯೊಂದಿಗೆ ನಾಲ್ಕು ದಶಕಗಳಿಂದ ಚಮ್ಮಾರಿಕೆ, ಕೌರಿಕ, ಹಮಾಲಿ, ತರಕಾರಿ ವ್ಯಾಪಾರ, ಹೋಟೆಲ್ ಮಾಣಿ, ಪೌರಕಾರ್ಮಿಕ ಕೆಲಸ ಮಾಡುತ್ತಿರುವ ಶ್ರಮ ಜೀವಿಗಳನ್ನು ಆಹ್ವಾನಿಸಿ ಶ್ರಮ ಗೌರವ ಸಮರ್ಪಿಸುವ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಚಿಂತನ ಸಂಘಟನೆ ಜಂಟಿಯಾಗಿ ಮಂಗಳವಾರ ಇಲ್ಲಿನ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಮ್ಮಾರ ವಿಶ್ವನಾಥ ಜೋಗಳೇಕರ, ಕ್ಷೌರಿಕ ಭುಜಂಗ ನವಿಲುಗೋಣ, ಹಣ್ಣಿನ ಬುಟ್ಟಿ ಹೊತ್ತು ಗಲ್ಲಿ ತಿರುಗುವ ಮಹಿಳೆ ಫರಿದಾಬಿ ಶೇಖ, ಹಮಾಲಿ ನಾರಾಯಣ ನಾಯ್ಕ, ತರಕಾರಿ ವ್ಯಾಪಾರಿ ತಿಮ್ಮಪ್ಪ ಸಕಲಾತಿ, ಅಂಗನವಾಡಿ ಸಹಾಯಕಿ ಸುಶೀಲಾ ಹೆಗಡೆ, ರಿಕ್ಷಾ ಚಾಲಕ ನರಸಿಂಗ ನಾಯ್ಕ, ಕೊನೆಗೌಡ ಗಣೇಶ ಪಟಗಾರ, ಹೋಟೆಲ್ ಮಾಣಿ ಶಂಕರ ನಾಯ್ಕ, ಕಲಾವಿದ ಶಾಂತಾರಾಮ ಶೆಟ್ಟಿ, ದಿವಾಕರ ನಾಯ್ಕ, ಸಮಾಜ ಸೇವಕರಾದ ವಸಂತ ದೇವಳಿ,

ಗಫೂರ ಸಾಬ್, ಜವಾನರಾದ ಚಂದ್ರಕಾಂತ ಮಡಗಾಂವಕರ, ಪಿಲಿಫ್ ಫರ್ನಾಂಡೀಸ್, ಸಾರಿಗೆ ಸಂಸ್ಥೆಯ ನಾಗೇಶ ಶೆಟ್ಟಿ, ಪೇಪರ್ ಹಂಚುವ ದಿನೇಶ ನಿಲೇಕಣಿ, ಖಾನಾವಳಿ ನಡೆಸುವ ಸುಶೀಲಮ್ಮಾ ಕವಲೂರಮಠ, ಬಿಸಿಯೂಟ ಸಹಾಯಕಿ ಫೇರಾಂಬಿ ಕರ್ಜಗಿ, ಪೌರ ಕಾರ್ಮಿಕ ಮಾಸ್ತಿ ಹರಿಜನ, ಗ್ರಾಮ ಸಹಾಯಕ ಪರಮೇಶ್ವರ ಅಂಬಿಗ ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.

ತಹಸೀಲ್ದಾರ ರುದ್ರೇಶ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಡಿ.ಹೆಗಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ.ಕೆ.ವಾಳ್ವೇಕರ, ಚಿಂತನದ ಸಿ.ಆರ್.ಶಾನಭಾಗ ಉಪಸ್ಥಿತರಿದ್ದರು. ವಿಶ್ವನಾಥ ಹಿರೇಮಠ ಜಾನಪದ ಗೀತೆ ಪ್ರಸ್ತುತ ಪಡಿಸಿದರು. ಶ್ರೀಪಾದ ಭಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಮುಂಡಗೋಡ ವರದಿ
 ಮಹಾತ್ಮಾ ಗಾಂಧಿ ಅವರ ಕನಸಿನಂತೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ನಾಡು ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕ ವಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಗಾಂಧಿನಗರ(ಬಸವನಗರ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ನೂತನ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಮಾತ್ರ ದೇಶ ಅಭಿವೃದ್ಧಿಯಾಗುವುದು ಎಂದ ಶಾಸಕರು ಗಾಂಧೀಜಿಯವರ ಕನಸನ್ನು ನನಸು ಮಾಡಲು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಅಗತ್ಯವಿದೆ ಎಂದರು.

ಗಾಂಧಿನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಡಿ. ಕಿತ್ತೂರ, ಪ.ಪಂ. ಅಧ್ಯಕ್ಷ ಎಂ.ಕೆ. ಗಡವಾಲೆ, ತಹಶೀಲ್ದಾರ ವಿ.ಎನ್. ನಾಡಗೌಡ, ಬಿಇಓ ವೈ.ಬಿ. ಬಾದವಾಡಗಿ, ಸಿಡಿಪಿಓ ಬೈಲಪತ್ತಾರ, ಮಂಜುಳಾ ಗಜಾಕೋಶ, ಯಲ್ಲಪ್ಪ ಕೊರವರ, ಎಸ್.ಬಿ. ಹೂಗಾರ, ದಿನೇಶ ರೇವಣಕರ ಪಾಲ್ಗೊಂಡಿದ್ದರು.

ದಾಂಡೇಲಿ ವರದಿ

ಇಲ್ಲಿಯ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಎಂಪ್ಲಾಯಿಸ್ ಕ್ಲಬ್ ಎದುರಿಗಿರುವ ಗಾಂಧಿಪಾರ್ಕ್‌ನಲ್ಲಿ 1962ರಲ್ಲಿ ಸ್ಥಾಪಿಸಲ್ಪಟ್ಟ ಅಮೃತ ಶಿಲೆಯ ಆಕರ್ಷಕ ಗಾಂಧಿ ಪುತ್ಥಳಿಗೆ  ಗಾಂಧಿ ಜಯಂತಿಯ ಅಂಗವಾಗಿ ಮಂಗಳವಾರ ಪೂಜೆ ಸಲ್ಲಿಸಲಾಯಿತು.

ಈ ಬಾರಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಗದ ಕಾರ್ಖಾನೆ ಆಡಳಿತ ಮಂಡಳಿಯವರ ಸಹಯೋಗದಲ್ಲಿ ಆಹ್ವಾನಿತ ಗಣ್ಯರೊಂದಿಗೆ ದಾಂಡೇಲಿಯಲ್ಲಿರುವ ಮಹಾತ್ಮಾ ಗಾಂಧೀಜಿ ಏಕೈಕ ಪುತ್ಥಳಿಗೆ ಅದ್ಧೂರಿಯ ಸಾಂಪ್ರಾದಾಯಿಕ ಪೂಜೆಯನ್ನು ಸಲ್ಲಿಸಲಾಯಿತು. ಕರವೇ ಅಧ್ಯಕ್ಷ ಶಂಕರ ಮುಂಗರವಾಡಿ, ಪಿಆರ್‌ಓ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಜಿ.ಗಿರಿರಾಜ, ಕ್ರೀಡಾ ಹಾಗೂ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ಜಿ.ತಿವಾರಿ, ಪಿಆರ್‌ಓ ವಿಭಾಗದ ಎಸ್.ಕೆ. ದಾಸ್, ಎಸ್.ಎಂ.ಪಾಟೀಲ,

ಸಹಾಯಕ ಕಾನೂನು ಅಧಿಕಾರಿ ಜಿ.ಎಲ್.ಭಾಗವತ್, ಜಂಟಿ ಸಂದಾನ ಸಮಿತಿಯ ಕಾರ್ಯದರ್ಶಿ ದಾವಲ್‌ಸಾಬ್ ಕುರ್ತಕೋಟಿ, ನಗರಸಭಾ ಸದಸ್ಯ ರಾಮಲಿಂಗ ಜಾಧವ, ಕರವೇ ಉಪಾಧ್ಯಕ್ಷ ದಾಂಡೇಲಪ್ಪ ಪಾಟೀಲ, ರಮೇಶ ಉಪ್ಪಾರ, ಕಾರ್ಯದರ್ಶಿ ಶಿವಬಸಪ್ಪ ನರೇಗಲ್, ಸಹಕಾರ್ಯದರ್ಶಿ ಮೋಹನ ಸನದಿ, ಕಾರ್ಯಕರ್ತರಾದ ತುಕಾರಾಮ ಪಾಟೀಲ, ರವಿ.ಎಸ್.ಸೇಲಾರ, ಎಸ್.ಜಿ.ತೆಂಗಿನ ಮಠ, ಅರುಣ ಗಾಂವಕರ, ಎಚ್.ಎಂ.ಮೊಕಾಶಿ, ಪೊಲೀಸ್ ಇಲಾಖೆಯ ಪುಟ್ಟೇಗೌಡ ಉಪಸ್ಥಿತರಿದ್ದರು. 

ಅಂಕೋಲಾ ವರದಿ
 ಗಾಂಧೀಜಿಯವರ ಆದರ್ಶ ಹಾಗೂ ತತ್ವಗಳು ಇಂದಿಗೂ ಪ್ರಸ್ತುತ, ಅವರ ಆಚಾರ ವಿಚಾರಗಳನ್ನು ನಾವು ನಿಯಮದಂತೆ ಪಾಲಿಸಬೇಕು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಭಾಸ್ಕರ ನಾರ್ವೇಕರ ಅಭಿಪ್ರಾಯಪಟ್ಟರು.
 
ಮಂಗಳವಾರ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗಾಂಧೀ ಜಯಂತಿ ನಿಮಿತ್ತ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ.ಪಂ.ಇಂಜಿನಿಯರ್ ಭಾಸ್ಕರ ಗೌಡ, ಸಿಬ್ಬಂದಿಗಳಾದ ಶ್ರೀಜೇಶ, ರಾಠೋಡ ಮುಂತಾದವರು ಉಪಸ್ಥಿತರಿದ್ದರು.

ಯಲ್ಲಾಪುರ ವರದಿ
ಇಲ್ಲಿಯ ಸಿದ್ಧೀಖಿಯಾ ವೆಲಫೇರ್ ಟ್ರಸ್ಟ್ ಹಾಗೂ ಮಿಲ್ಲತ್ ತಾಲೀಮಿ ಇದಾರಾ ಶಿಕ್ಷಣ ಸಂಸ್ಥೆಗಳ ಸದಸ್ಯರು ಗಾಂಧಿ ಜಯಂತಿ ನಿಮಿತ್ತ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು.

ತಾಮೀರ ಕೋ-ಆಪ್ ಸೊಸೈಟಿಯ ನೂತನ ಅಧ್ಯಕ್ಷ ಮಹಮ್ಮದ್‌ಗೌಸ್ ಎ.ಶೇಖ, ಸಿದ್ಧೀಖಿಯಾ ವೆಲಫೇರ್ ಟ್ರಸ್ಟ್ ಹಾಗೂ ಮಿಲ್ಲತ್ ತಾಲೀಮಿ ಇದಾರಾ ಶಿಕ್ಷಣ ಸಂಸ್ಥೆಗಳ ಸದಸ್ಯರುಗಳಾದ ಎಂ.ಎಂ.ಶೇಖ, ಫೀರಸಾಬ್ ವಿ.ಶೇಖ, ಅಬ್ದುಲ್ ಖಾದರ ಬ್ಯಾರಿ, ಬಾಬಾಸಾಬ್ ಅಲಾನ್, ಮೈನುದ್ದೀನ್ ಸಯ್ಯದ್, ಶೇಖ ಶಬ್ಬಿರ್, ಅನ್ವರ್ ಫೀರಖಾನ್, ನೂರ್‌ಮಹಮ್ಮದ್, ಮೈದುನಿಸಾಬ್ ಪಠಾಣ, ಅಬ್ದುಲ್ ಶುಕುರ್, ಹಾಜಿ ಅಬ್ದುಲ್ ರಜಾಕವಲ್ಲಿ ಎಂ,ಡಿ,ಮುಲ್ಲಾ, ವೈದ್ಯಾಧಿಕಾರಿಗಳಾದ ಡಾ.ಅನ್ನಪೂರ್ಣ ವಸ್ತ್ರದ, ಡಾ.ದೀಪಕ ಭಟ್ಟ ಸಿಬ್ಬಂದಿ ಉಪಸ್ಥಿತರಿದ್ದರು.

ಸಿದ್ದಾಪುರ ವರದಿ
ಮದ್ಯಪಾನ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಸುಭಾಷ ನಾಯ್ಕ ಆರೋಪಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ-ಸಿದ್ದಾಪುರ ಘಟಕ ಮತ್ತು ಅಖಿಲ ಕರ್ನಾಟಕ  ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಂಗಳವಾರ ಏರ್ಪಡಿಸಿದ್ದ  ಗಾಂಧಿ ಜಯಂತಿ  ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು  ಮದ್ಯಪಾನದ ವಿರುದ್ಧ ಜನಜಾಗೃತಿ ಮಾಡುತ್ತಿದೆ ಎಂದರು.

ಬಾಲಿಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಎಂ.ಎಲ್.ನಾಯ್ಕ  ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈನುಗಾರಿಕಾ ಅಧಿಕಾರಿ ಗೋವಿಂದ, ತಾಲ್ಲೂಕು ನವ ಜೀವನ ಸಮಿತಿಯ ಅಧ್ಯಕ್ಷ ಚಂದ್ರು ಅಂಬಿಗ ಮಾತನಾಡಿದರು.

ಶೋಭಾ ನಾಯ್ಕ ಪ್ರಾರ್ಥನಾಗೀತೆ ಹಾಡಿದರು. ಫಾತಿಮಾ ಸ್ವಾಗತಿಸಿದರು. ಶಂಭುಕೃಷ್ಣ ಪ್ರಾಸ್ತಾವಿಕ ಮಾತನಾಡಿದರು. ನಾಗೇಶ ನಿರೂಪಿಸಿದರು.  ವಿಜಯಾ ವಂದಿಸಿದರು.

ನಿವೃತ್ತ ನೌಕರರ ಸಂಘ: ತಾಲ್ಲೂಕಿನ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಪಟ್ಟಣದ  ಸರ್ಕಾರಿ ನೌಕರರ ಸಭಾಭವನದಲ್ಲಿ ಮಂಗಳವಾರ ಗಾಂಧಿ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಿವೃತ್ತ ನೌಕರ ಜಿ.ಎಂ.ಕುಮಟಾಕರ್, ಗಾಂಧೀಜಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ಗಾಂಧೀಜಿಯವರಿಗೆ ಪ್ರಿಯವಾದ `ವೈಷ್ಣವ ಜನತೋ ತೇನೆ~ ಮತ್ತು ಮಹಾತ್ಮರ ಕುರಿತ ಸ್ವರಚಿತ ಗೀತೆಯನ್ನು ಅವರು ಹಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಟಿ.ಕೊಡಿಯಾ ಮಾತನಾಡಿ, ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಇಂದಿನ ಸಮಾಜದಲ್ಲಿ ಮರೆಯಾಗುತ್ತಿವೆ ಎಂದರು.

ಪಾಲಿಟೆಕ್ನಿಕ್ ಕಾಲೇಜು: ಸಿದ್ದಾಪುರ :
ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ನೈತಿಕ ಮೌಲ್ಯ ಉಳಿಸಿಕೊಳ್ಳುವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಪಟ್ಟಣದ ಎಂಜಿಸಿ ಕಾಲೇಜಿನ ಉಪನ್ಯಾಸಕ ಡಾ.ವಿಠ್ಠಲ ಭಂಡಾರಿ ಕರೆ ನೀಡಿದರು.

ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆಶ್ರಯದಲ್ಲಿ  ಪಟ್ಟಣದ ಬಂಕೇಶ್ವರ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಮತ್ತು ವಿದ್ಯಾರ್ಥಿ ಹಾಗೂ ಕ್ರೀಡಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ನಿಖಿಲ್ ಹಾಗೂ ರತ್ನಾ, ವಿದ್ಯಾರ್ಥಿ ಪ್ರತಿನಿಧಿಗಳಾದ  ಗೋಪಾಲ್, ಪ್ರಮೋದ್, ವೀಣಾ, ಭಾಗ್ಯಶ್ರೀ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ವಾಸುದೇವ ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು. ನೂತನ್ ಪ್ರಾರ್ಥನಾಗೀತೆ ಹಾಡಿದರು.ಚೇತನ ನಾಯ್ಕ ವಂದಿಸಿದರು. ವೀಣಾ ಮತ್ತು ರಾಕೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT