ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಿಂದಲೇ ಬಿಜೆಪಿ ಗೆಲುವಿನ ಅಭಿಯಾನ

Last Updated 3 ಡಿಸೆಂಬರ್ 2012, 8:12 IST
ಅಕ್ಷರ ಗಾತ್ರ

ಶಿವಮೊಗ್ಗ: ಹೋರಾಟದ ಜಿಲ್ಲೆ ಶಿವಮೊಗ್ಗದಿಂದಲೇ ಬಿಜೆಪಿ ಗೆಲುವಿನ ಅಭಿಯಾನ ಆರಂಭವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್‌ಕುಮಾರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ವಿರುದ್ಧ ಬಿಜೆಪಿಯ ಹೋರಾಟ ಆರಂಭವಾಗಿದ್ದೇ ಶಿವಮೊಗ್ಗ ಜಿಲ್ಲೆಯಿಂದ. ಈ ಹೋರಾಟ ಐತಿಹಾಸಿಕವಾದದ್ದು. ಜಿಲ್ಲೆಯ ಈ ಹೋರಾಟದ ಕೆಚ್ಚನ್ನು ಇಡೀ ರಾಜ್ಯಕ್ಕೆ ಹಚ್ಚಬೇಕಾಗಿದೆ ಎಂದರು. 
  
ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಪಕ್ಷದ ಮುಖಂಡರು ಸವಿಸ್ತಾರವಾಗಿ ಪ್ರವಾಸ ಕೈಗೊಳ್ಳುವರು ಎಂದರು.

ಸ್ವಯಂಕೃತ ಅಪರಾಧ
ಇದಕ್ಕೂ ಮೊದಲು ನಗರದ ವಾಸವಿ ವಿದ್ಯಾಲಯದಲ್ಲಿ ನಡೆದ ಬಿಜೆಪಿ ಜಿಲ್ಲಾ ನಗರ ಹಾಗೂ ಗ್ರಾಮಾಂತರ ಘಟಕ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೋ ಆಸೆ, ಆಕಾಂಕ್ಷೆಗಳಿಂದಾಗಿ ಹಾಗೂ ವೈಯಕ್ತಿಕ ಹಿತಾಸಕ್ತಿಗಾಗಿ ಸ್ವಯಂಕೃತ ಅಪರಾಧದಿಂದ ತಪ್ಪು ನಿರ್ಧಾರ ಮಾಡಿರುವವರು ಮುಂದೆ ಪಶ್ಚಾತಾಪ ಪಡಲಿದ್ದಾರೆ ಎಂದು ಪರೋಕ್ಷವಾಗಿ ಯುಡಿಯೂರಪ್ಪ ಅವರನ್ನು ಛೇಡಿಸಿದರು.

ಸದ್ಯ ರಾಜ್ಯದ ರಾಜಕೀಯದಲ್ಲಿ ಗ್ರಹಣದ ಛಾಯೆ ಇರಬಹುದು. ಆದರೆ, ಕಾರ್ಮೋಡವಿರಲಿ ಅಥವಾ ಉತ್ತಮ ಮೋಡವಿರಲಿ; ಅದು, ಶಾಶ್ವತವಲ್ಲ. ಗ್ರಹಣ ಸಹ ಬಿಟ್ಟು ಹೋಗುತ್ತದೆ. ರಾಜಕೀಯ ಜೀವನದಲ್ಲೂ ಏರುಪೇರುಗಳಿರುತ್ತವೆ. ಆದರೆ, ಆ ಏರುಪೇರುಗಳಲ್ಲೂ ಪಕ್ಷಕ್ಕೆ ನಿಷ್ಠರಾಗಿರುವುದು ಮುಖ್ಯ ಎಂದರು.
ಕಾರ್ಯಕರ್ತರ ಬೆವರಿನಿಂದ, ಹೋರಾಟದಿಂದ ಪಕ್ಷಕ್ಕೆ, ನಾಯಕರಿಗೆ ಶಕ್ತಿ ಬರುತ್ತದೆ. ಬಿಜೆಪಿಗೆ 5ಕೋಟಿ ಕಾರ್ಯಕರ್ತರಿದ್ದಾರೆ. 10 ಕೋಟಿ ಅಭಿಮಾನಿಗಳಿದ್ದಾರೆ. ಇದು ತಂದೆ ಮಗನ ಪಕ್ಷವಲ್ಲ; ತಾಯಿ ಮಕ್ಕಳ ಪಕ್ಷವಲ್ಲ ಎಂದರು.

ಪಕ್ಷದಲ್ಲೂ ಸರ್ವಾಧಿಕಾರ ಇರಬಾರದು; ದೇಶದಲ್ಲೂ ಸರ್ವಾಧಿಕಾರ ಇರಬಾರದು. ದೇಶದಲ್ಲಿ ಜನಪರ ಅಧಿಕಾರ ಮಾಡಿದ ಪಕ್ಷ ಬಿಜೆಪಿ ಮಾತ್ರ. ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಂಡ ಶೆಟ್ಟರ್ ಅವರು ್ಙ 3,500 ಕೋಟಿ ಬಿಡುಗಡೆ ಮಾಡಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಬಡ್ಡಿ ರಹಿತ ಸಾಲ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ದೇಶದಲ್ಲೂ ಬಿಜೆಪಿ ಗಾಳಿ ಇದ್ದು, ಇತರ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT