ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತ ವಿಮುಕ್ತರಿಗೆ ಅಂತ್ಯೋದಯ ಚೀಟಿ ಸೌಲಭ್ಯ

ಫಲಾನುಭವಿಗಳನ್ನು ಗುರುತಿಸಲು ಸಮೀಕ್ಷೆ
Last Updated 24 ಸೆಪ್ಟೆಂಬರ್ 2013, 9:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅರ್ಹ ನಿವಾಸಿಗಳಿಗೆ ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿ­ಸುವಂತೆ ರಾಜ್ಯ ಸರ್ಕಾರವು ಆದೇಶಿಸಿದ್ದು, ಅದರಂತೆಯೇ ತಾಲ್ಲೂಕಿನಾದ್ಯಂತ ಸಮೀಕ್ಷೆ ನಡೆಸ­ಲಾಗು­ತ್ತಿದೆ. ಅರ್ಹರನ್ನು ಗುರುತಿಸಿ ಅವರಿಗೆ ಕೆಲವೇ ದಿನಗಳಲ್ಲಿ ಅಂತ್ಯೋದಯ ಪಡಿತರ ಚೀಟಿ­ಗಳನ್ನು ವಿತರಿಸಲಾಗು­ವುದು ಎಂದು ತಾಲ್ಲೂಕು ಆಹಾರ ವಿಭಾಗದ ಶಿರಸ್ತೇದಾರ ಸಯ್ಯದ್‌ ನವೀದ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ವತಿಯಿಂದ ಸೋಮ­ವಾರ ಆಯೋಜಿಸಿದ್ದ ಜೀತ ಪದ್ಧತಿಯಿಂದ ಮುಕ್ತರಾದ ಕುಟುಂಬ ಸದಸ್ಯರ ಸಭೆಯಲ್ಲಿ ಮಾತನಾಡಿ,  ಜೀತದಾಳುಗಳು ಕಡುಬಡವರ ವಿಭಾಗದ ವ್ಯಾಪ್ತಿಗೆ ಬರುತ್ತಾರೆ ಎಂದರು.

ಜೀತ ವಿಮುಕ್ತರ ಕುಟುಂಬಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ತೀರ ಹಿಂದುಳಿದಿವೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಕುಟುಂಬ­ಗಳಿಗೆ ಅಂತ್ಯೋದಯ ಪಡಿತರ ಚೀಟಿಗಳನ್ನು ಒದಗಿಸುವುದು ತುರ್ತು ಅಗತ್ಯವಿದೆ. ಈ ಕಾರಣದಿಂದಲೇ ಜೀವಿಕ ಸಂಘಟನೆಯ ನೆರವಿನಿಂದ ಆಯಾ ಕುಟುಂಬಗಳನ್ನು ಪತ್ತೆ ಮಾಡಿ, ಅವರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ ಒಟ್ಟು 3921 ಅಂತ್ಯೋದಯ ಪಡಿತರ ಚೀಟಿಗಳು ಮಂಜೂರಾಗಿದ್ದು, ಅದಕ್ಕೆ ಇನ್ನೂ 700 ಪಡಿತರ ಚೀಟಿಗಳು ಮಂಜೂರಾಗಲಿವೆ. ನಗರ­ಪ್ರದೇಶಕ್ಕೆ 133 ಪಡಿತರ ಚೀಟಿಗಳು ಮಂಜೂರಾ­ಗಿದ್ದು, ಅದಕ್ಕೆ ಇನ್ನೂ 63 ಚೀಟಿಗಳು ಸೇರ್ಪಡೆಯಾಗಲಿವೆ. ಸದ್ಯಕ್ಕೆ 333 ಕುಟುಂಬದವರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಎಲ್ಲವನ್ನೂ ಪರಿಶೀಲಿಸಿದ ನಂತರ ಚೀಟಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಜೀವಿಕ ಸಂಘಟನೆಯ ಮುಖಂಡ ನಾರಾ­ಯಣಸ್ವಾಮಿ ಮಾತನಾಡಿ, ಜೀತ ವಿಮುಕ್ತರಿಗೆ ಸಮಾಜದಲ್ಲಿ ಗೌರವ ಸ್ಥಾನಮಾನ ಸಿಗಬೇಕು. ನಿತ್ಯವೂ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಈ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆಯೂ ಮಾಹಿತಿಯಿಲ್ಲ.

ಪಡಿತರ ಚೀಟಿ ವ್ಯವಸ್ಥೆ ಬಗ್ಗೆಯೂ ಅವರಿಗೆ ಸರಿಯಾದ ಮಾಹಿತಿಯಿಲ್ಲ. ಅವರೆಲ್ಲರನ್ನೂ ಒಂದುಗೂಡಿಸಿ ಇಲ್ಲಿ ಕರೆ­ತಂದಿದ್ದೇವೆ. ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಪಡಿತರ ಚೀಟಿಯಲ್ಲದೇ ಸರ್ಕಾರದ ಇತರ ಸೌಲಭ್ಯಗಳನ್ನು ಪೂರೈಸಲು ಸಹ ಪ್ರಯತ್ನಿಸುತ್ತೇವೆ ಎಂದರು.

ಜೀವಿಕ ಸಂಘಟನೆಯ ಸಂಚಾಲಕ ಮೂರ್ತಿ ಮಾತನಾಡಿ, ಜೀತ ವಿಮುಕ್ತರು ವಾಸವಿರುವ ಎಲ್ಲ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿ­ದ್ದೇವೆ. ಕಾಡುಪ್ರಾಣಿಗಳು, ಹಾವುಗಳು ಇರು­ವಂತಹ ಕುಗ್ರಾಮಗಳಲ್ಲಿ ಅಂತಹ ಜನರು ವಾಸ­ವಿದ್ದು, ಅವರನ್ನು ಕೂಡ ಕರೆ ತಂದು ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಜೀವಿಕ ಸಂಘಟನೆಯ ರಾಜ್ಯ ಘಟಕದ ಸಂಚಾಲಕರಾದ ಗೋಪಾಲ್, ರತ್ನಮ್ಮ, ಮುನಿಕೃಷ್ಣ, ರವಿ, ಕಾಮಾಕ್ಷಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT