ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತದಾಳು ಬಾಲಕನಿಗೆ ಹಿಂಸೆ: ಆಸ್ಪತ್ರೆಗೆ ದಾಖಲು

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕುರಿ ಕಾಯಲು ಜೀತಕ್ಕಿದ್ದ ಎನ್ನಲಾಗಿರುವ ಒಂಬತ್ತು ವರ್ಷದ ಬಾಲಕನಿಗೆ ಹೊಡೆದು, ಬರೆ ಹಾಕಿ ಗಾಯಗೊಳಿಸಿರುವ ಪ್ರಕರಣ ತಾಲ್ಲೂಕಿನ ಬೋರಗಾಂವ ಗ್ರಾಮದಲ್ಲಿ ಗುರುವಾರ ರಾತ್ರಿ ಬೆಳಕಿಗೆ ಬಂದಿದೆ.

ಆಕಾಶ್ ಭಜರಂಗ ಇಂಗಳೆ (9) ಎಂಬ ಬಾಲಕ ಅದೇ ಗ್ರಾಮದ ಬಾಳು ಕೆ.ಐದಮಾಳೆ (49) ಮನೆಯಲ್ಲಿ ಜೀತಕ್ಕಿದ್ದ ಎನ್ನಲಾಗಿದೆ. ಬಾಲಕನ ತಾಯಿ ಲತಾ ಇಂಗಳೆ ಅವರು ಐದಮಾಳೆ ವಿರುದ್ಧ ಗುರುವಾರ ರಾತ್ರಿ ಸದಲಗಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ತಹಶೀಲ್ದಾರ ರಾಜಶೇಖರ್ ಡಂಬಳ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.
`ಮೂಲತಃ ಅಥಣಿ ಪಟ್ಟಣದ ನಿವಾಸಿಯಾದ ಭಜರಂಗ ಇಂಗಳೆ ಅವರದ್ದು ಅಲೆಮಾರಿ ಕುಟುಂಬ. ಈ ಕುಟುಂಬ ಮೂರು ವರ್ಷಗಳಿಂದ ಬೋರಗಾಂವ ಗ್ರಾಮದ ಹೊರವಲಯದಲ್ಲಿ ಗುಡಿಸಲಿನಲ್ಲಿ ವಾಸವಾಗಿದೆ. ಲತಾ ಮತ್ತು ಭಜರಂಗ ಇಂಗಳೆ ದಂಪತಿಗೆ ಮೂರು ಜನ ಗಂಡುಮಕ್ಕಳಿದ್ದಾರೆ. ಈ ಕುಟುಂಬ ಕೂಲಿನಾಲಿ ಮಾಡಿ ಬದುಕು ನಡೆಸುತ್ತಿದೆ. ಆಕಾಶ್‌ನನ್ನು ಓದಿಸುವುದಾಗಿ ಹೇಳಿ ದಾವಣಗೆರೆಗೆ ಕರೆದುಕೊಂಡು ಹೋದ ಬಾಳು ಐದಮಾಳೆ,  ಮಗನನ್ನು ಅಲ್ಲಿ ಶಾಲೆಗೆ ಸೇರಿಸದೆ ಕುರಿ ಕಾಯುವ ಕೆಲಸಕ್ಕೆ ಹಚ್ಚಿ, ಬಡಿಗೆಯಿಂದ ಹೊಡೆದು, ಬರೆ ಹಾಕಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.

`ಅವನಿಗೆ ದಿನಕ್ಕೆ ಅರ್ಧ ರೊಟ್ಟಿ ಮತ್ತು ಖಾರ ಮಾತ್ರ ನೀಡಲಾಗುತ್ತಿತ್ತು. ಹಟ ಮಾಡಿದರೆ ಹೊಡೆಯುತ್ತಿದ್ದರು. ಅಲ್ಲದೇ ಮೈತುಂಬ ಸುಟ್ಟು ಗಾಯಗೊಳಿಸಲಾಗಿದೆ' ಎಂದು ಬಾಲಕನ ಸಂಬಂಧಿ ಲಕ್ಷ್ಮಿಬಾಯಿ ಎಸ್. ವಾಘಮೋರೆ ದೂರಿದ್ದಾರೆ.
ಕುಟುಂಬದ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡ ಬಾಳು ಐದಮಾಳೆ, `ನಿಮ್ಮ ಮಗನಿಗೆ ಶಾಲೆ ಕಲಿಸಲು ನಿಮಗೆ ಆಗುವುದಿಲ್ಲ. ನಾನು ಅವನ ಕಾಳಜಿ ವಹಿಸುತ್ತೇನೆ ಮತ್ತು ವರ್ಷಕ್ಕೆ ್ಙ 10,000 ನೀಡುತ್ತೇನೆ. ನನ್ನ ಜೊತೆ ಕಳಿಸಿಕೊಡಿ' ಎಂದು ಆತನ ಪೋಷಕರ ಮನವೊಲಿಸಿ 6 ತಿಂಗಳ ಹಿಂದೆ ಆತನನ್ನು ಕರೆದುಕೊಂಡು ಹೋಗಿದ್ದರು.

2 ದಿನಗಳ ಹಿಂದಷ್ಟೇ ಬಾಳು ಐದಮಾಳೆ ಆಕಾಶ್‌ನನ್ನು ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ತೀರಾ ನಿಶ್ಯಕ್ತನಾಗಿರುವ ಬಾಲಕನಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ' ಎಂದು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಪೋಪಟ ಹವಲೆ ಹೇಳುತ್ತಾರೆ.

`ಆಕಾಶ್ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾನೆ. ಅವನ ಮೈಮೇಲೆ ಕಟ್ಟಿಗೆಯಿಂದ ಬಡಿದ ಮತ್ತು ಸುಟ್ಟ ಗಾಯದ ಗುರುತುಗಳಿವೆ. ಒಂದು ವಾರದ ಚಿಕಿತ್ಸೆ ನಂತರ ನಡೆದಾಡುವಷ್ಟು ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಿದ್ದೇವೆ' ಎಂದು ವೈದ್ಯಾಧಿಕಾರಿ ಡಾ. ಶುಭಾಂಗಿ ಪಾಟೀಲ ಹೇಳಿದರು. ಘಟನೆ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಸಂತೋಷ ಹಿಪ್ಪರಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT