ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತದಾಳುಗಳ ಮೇಲೆ ದೌರ್ಜನ್ಯ: ಪ್ರತಿಭಟನೆ

Last Updated 3 ಜನವರಿ 2014, 11:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇಬ್ಬರು ಜೀತದಾಳುಗಳ ಕೈಗಳನ್ನು ಕತ್ತರಿಸಿ ಹಾಕಿದವರ ವಿರುದ್ಧ ಒಡಿಶಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆಯ ಸದಸ್ಯರು ಗುರುವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, ಒಡಿಶಾದಲ್ಲಿ ಇಬ್ಬರು ಜೀತದಾಳುಗಳ ಕೈಗಳನ್ನು ಕತ್ತರಿಸಿ ಹಾಕಿದವರ ವಿರುದ್ಧ ಅಲ್ಲಿನ ಸರ್ಕಾರ ಕ್ರಮ ಜರುಗಿಸಬೇಕು. ಕಾರಣಕರ್ತರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ ಸಂಘಟನೆಯ ಸಂಚಾಲಕಿ ರತ್ನಮ್ಮ ಮಾತನಾಡಿ, ಒಡಿಶಾದಲ್ಲಿ ಕಾರ್ಮಿಕರಾದ ದಿಯಾಲು ನಿಯಾಲ್‌ ಮತ್ತು ನೀಲಾಂಬರ್‌ ದಂಗ್ಡ್‌ ಮಝಿ ಎಂಬುವರ ಮೇಲೆ ಕಾರ್ಮಿಕ ಗುತ್ತಿಗೆದಾರರು ಮತ್ತು ಅವರ ಸಹಾಯಕರು ಇತ್ತೀಚೆಗೆ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೇ ಕೈಗಳನ್ನು ಕತ್ತರಿಸಿ ಹಾಕಿದ್ದಾರೆ. ಇದು ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಇಂತಹ ಘಟನೆ ಮರುಕಳುಹಿಸಬಾರದು ಎಂದು ಆಗ್ರಹಿಸಿದರು.
ಸಂಘಟನೆಯ ಸಂಚಾಲಕ ವಿ.ಗೋಪಾಲ್‌ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 1532 ಮಂದಿ ಜೀತ ಪದ್ಧತಿಯಿಂದ ವಿಮುಕ್ತರಾಗಿದ್ದು, ಇದುವರೆಗೆ ಅವರಿಗೆ ಯಾವುದೇ ರೀತಿಯ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದರು.

ಜೀತವಿಮುಕ್ತರಿಗೆ ಅಂತ್ಯೋದಯ ಪಡಿತರ ಚೀಟಿ ವಿತರಿಸಬೇಕು. ಜಿಲ್ಲೆ ಮತ್ತು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನದ ಕೊರತೆಯಿದ್ದು, ಸ್ಮಶಾನಕ್ಕಾಗಿ ಸ್ಥಳವನ್ನು ಗುರುತಿಸಿ ಸ್ಮಶಾನಕ್ಕೆ ಅವಕಾಶ ಮಾಡಿಕೊಡಬೇಕು. ದಲಿತ ಕಾಲೋನಿಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಮನವಿಪತ್ರ ಸ್ವೀಕರಿಸಿರು. ನಂತರ ಜಿಲ್ಲಾಧಿಕಾರಿ ಡಾ. ಆರ್‌.ವಿಶಾಲ್‌ ಅವರು ಕೂಡ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಜಿಲ್ಲಾಡಳಿತ ವ್ಯಾಪ್ತಿಯೊಳಗಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಸಂಘಟನೆಯ ಸಂಚಾಲಕರಾದ ಎನ್‌.ನಾರಾಯಣಸ್ವಾಮಿ, ಮುನಿಕೃಷ್ಣ, ಸಿ.ಎಂ.ಮೂರ್ತಿ, ರವಿಕುಮಾರ್‌, ಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತ್ವರಿತ ವಿಚಾರಣೆಗೆ ಒತ್ತಾಯ
ಗುಡಿಬಂಡೆ: ಕಾರ್ಮಿಕ ಗುತ್ತಿಗೆದಾರರು ಒಡಿಶಾ ರಾಜ್ಯದಲ್ಲಿ ಇಬ್ಬರು ಜೀತದಾಳುಗಳ ಬಲಗೈ ಕತ್ತರಿಸಿರುವುದನ್ನು ಖಂಡಿಸಿ ಜೀವ ವಿಮುಕ್ತಿ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರನ್ನು ತ್ವರಿತ ಪಥ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಜೀವಿಕ ಸಂಘಟಣೆಯ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಆಗ್ರಹಿಸಿದರು.

ಘಟನೆ ನಡೆದು 15 ದಿನವಾದರೂ ಸಂತ್ರಸ್ತರ ನೆರವಿಗೆ ನೆರವಿಗೆ ಕೇಂದ್ರ– ರಾಜ್ಯ ಸರ್ಕಾರಗಳು ಧಾವಿಸಿಲ್ಲ ಎಂದು ದೂರಿದರು. ಕರ್ನಾಟಕದಲ್ಲಿಯೂ ಜೀತದಾಳುಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಇಲ್ಲಿಯವರೆಗೂ ಜೀತದಾಳುಗಳ ಗೋಳು ಆಲಿಸಿಲ್ಲ. ಈ ಹಿಂದೆ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕರು, ‘ಗ್ರಾ.ಪಂ. ಮತ್ತು ತಾ.ಪಂನಿಂದ ಜೀತ ವಿಮುಕ್ತರಿಗೆ ₨ 20 ಸಾವಿರದ ಚೆಕ್‌ ನೀಡುವ ಅಗತ್ಯವಿಲ್ಲ. ಸುಬ್ಬಾರೆಡ್ಡಿ ಚಾರಿಟೆಬಲ್ ಟ್ರಸ್ಟ್‌ನಿಂದ ಹೆಚ್ಚಿನ ನೆರವು ಕಲ್ಪಿಸಲಾಗುವುದು’ ಎಂದು ಹೇಳಿದ್ದರು. ಆದರೆ 6 ತಿಂಗಳು ಕಳೆದರೂ ಅವರು ತಮ್ಮ ಮುಖವನ್ನೇ ಜೀವಿಕ ಸಂಘಟಣೆಗೆ ತೋರಿಲ್ಲ ಎಂದು ದೂರಿದರು.

ವಕೀಲ ಉನ್ನತಿ ವಿಶ್ವನಾಥ್ ಮಾತನಾಡಿ, ಜೀತದಾಳುಗಳ ಮೇಲೆ ನಡೆದ ದೌರ್ಜನ್ಯವನ್ನು ಒಡಿಶಾ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯು ಸ್ವಯಂ ಪ್ರೇರಿತ ಪ್ರಕರಣವನ್ನಾಗಿ ದಾಖಲಿಸಿ, ಮುಖ್ಯಮಂತ್ರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು. ಇತರ ರಾಜ್ಯಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೀವಿಕ ತಾಲ್ಲೂಕು ಘಟಕದ ಸಂಚಾಲಕ ಚನ್ನರಾಯಪ್ಪ, ಕಸಬಾ ಹೋಬಳಿ ಸಂಚಾಲಕ ರಾಮಾಂಜಿನೇಯ, ಸೋಮೆನಹಳ್ಳಿ ಹೋಬಳಿ ಸಂಚಾಲಕಿ ಸುಜಾತ, ತಾಲ್ಲೂಕು ಒಕ್ಕೂಟದ ಅದ್ಯಕ್ಷ ಅಶ್ವತ್ಥಪ್ಪ ಸೇರಿದಂತೆ ತಾಲ್ಲೂಕಿನ ಹಲವು ಜೀವ ವಿಮುಕ್ತರು ಭಾಗವಹಿಸಿದ್ದರು. ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಮುಖ್ಯಬೀದಿ ಮಾರ್ಗವಾಗಿ ಮಿನಿವಿಧಾನಸೌಧದ­ವರೆಗೆ ಮೆರವಣಿಗೆ ನಡೆಸಲಾಯಿತು. ತಹ­ಶೀಲ್ದಾರ್ ಎಸ್.ಶೈಲಜಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಅಮಾನವೀಯ ಕೃತ್ಯ
ಗೌರಿಬಿದನೂರು: ಒಡಿಶಾದಲ್ಲಿ ಇಬ್ಬರ ಜೀತ­ದಾಳು­ಗಳ ಬಲಗೈ ಕತ್ತರಿಸಿರುವ ಅಮಾನವೀಯ ಘಟನೆ ವಿರೋಧಿಸಿ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಆವರಣದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಒಡಿಶಾದಲ್ಲಿ ನಡೆದಿರುವ ಅಮಾನವೀಯ ಕೃತ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಹನುಮಂತು ಮಾತನಾಡಿ, ಜೀತ ಪದ್ಧತಿ ಸಾಮಾಜಿಕ ಪಿಡುಗಾಗಿದೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರಗಳು ಹಲವಾರು ಕಟ್ಟುನಿಟ್ಟಿನ ಕಾನೂನುಗಳು ತಂದಿ­ದ್ದರೂ ಇಂಥ ಘಟನೆಗಳು ಮುಂದು­ವರಿ­ಯುತ್ತಲೇ ಇವೆ ಎಂದು ಆತಂಕ ವ್ಯಕ್ತಪಡಿಸಿದರು.

ಒಡಿಶಾದಂತೆ ಕರ್ನಾಟಕದಲ್ಲಿಯೂ ಇಂಥ ಅನೇಕ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿದ್ದವು. ಹಂಗರಹಳ್ಳಿ ಗ್ರಾಮದಲ್ಲಿ ಮೂರು ವರ್ಷಗಳ ಕಾಲ ಐದು ಮಂದಿ ಜೀತದಾಳುಗಳನ್ನು ಕಬ್ಬಿಣದ ಸರಪಳಿಗಳಲ್ಲಿ ಕಟ್ಟಿಹಾಕಿ ಬಂಧಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಘಟನೆ ಮತ್ತು ಅನೇಕಲ್ ತಾಲ್ಲೂಕಿನಲ್ಲಿ ಬಾಲ ಜೀತದಾಳು ಹಬ್ಬಕ್ಕೆ ಮನೆಗೆ ಹೋಗಬೇಕೆಂದು ಮಾಲೀಕರನ್ನು ಕೇಳಿದಾಗ ಕೆನ್ನೆಗೆ ಹೊಡೆದು ಸಾಯಿಸಿರುವ ಘಟನೆಗಳನ್ನು ಅವರು ನೆನಪಿಸಿಕೊಂಡರು.
ತಹಶೀಲ್ದಾರ್ ಡಾ.ಎನ್.ಭಾಸ್ಕರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಸಂಘಟನೆಯ ತಾಲ್ಲೂಕು ಘಟಕದ ಸಂಚಾಲಕ ಲಕ್ಷ್ಮೀನಾರಾಯಣ, ತಾಲ್ಲೂಕು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಗಂಗಾಧರಪ್ಪ, ಹೋಬಳಿ ಕಾರ್ಯಕರ್ತರಾದ ರವಿ, ಗಿರಿ, ಗೋಪಿ, ಕೃಷ್ಣಪ್ಪ, ರಾಜು, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT