ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರೊ ಸೈಜ್‌ರೋಗದ ಸಂಕೇತ?

ವಾರದ ವೈದ್ಯ
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತಮ್ಮ ಅತಿಯಾದ ತೆಳು ದೇಹದಿಂದ ಪ್ರತಿನಿತ್ಯ ಅವಮಾನ, ಕೀಟಲೆಯನ್ನು ಎದುರಿಸುತ್ತಾ ಬದುಕುವವರ ಬಗ್ಗೆ ಏನು ಹೇಳುತ್ತೀರಿ?
ಹೌದು, ಅಂತಹ ಅನೇಕ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹೆಣ್ಣು- ಗಂಡೆಂಬ ಭೇದವಿಲ್ಲದೇ ಅನೇಕರು ತಮ್ಮ ತೆಳು ದೇಹದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಕೆಲವರದು ಎಷ್ಟು ತಿಂದರೂ ದಪ್ಪ ಆಗುತ್ತಿಲ್ಲ ಎನ್ನುವ ಆತಂಕ, ಇನ್ನು ಕೆಲವರದು ಹೆಚ್ಚು ತಿನ್ನಲು ಸಾಧ್ಯವಾಗುತ್ತಿಲ್ಲ ಎನ್ನುವ ತಗಾದೆ. ಅನಾರೋಗ್ಯದಿಂದಾಗಿ ಈ ಸ್ಥಿತಿ ಬರಬಹುದಾದ ಸಾಧ್ಯತೆ ಇರುತ್ತದೆ. ಹಾಗೆಯೇ ಈ ಸ್ಥಿತಿಯಿಂದಲೇ ಅನಾರೋಗ್ಯವನ್ನು ಆಹ್ವಾನಿಸಿಕೊಳ್ಳುವ ಸಂಭವವೂ ಉಂಟು.

ಅಗತ್ಯಕ್ಕಿಂತ ಅತಿ ಕಡಿಮೆ ತೂಕ ಹೊಂದಿರುವವರ ಸಮಸ್ಯೆಗೆ ಕಾರಣ?
ಮುಖ್ಯವಾಗಿ ನಾಲ್ಕು ಕಾರಣಗಳನ್ನು ಗುರುತಿಸಬಹುದು.
1. ಕೌಟುಂಬಿಕ ಹಿನ್ನೆಲೆ: ಸ್ಥೂಲಕಾಯದಂತೆ ಇಲ್ಲಿಯೂ ಆನುವಂಶೀಯತೆ ಒಂದು ಕಾರಣ ಆಗಿರುತ್ತದೆ. ಸಣ್ಣ ನಿಲುವು, ಚಿಕ್ಕ ದೇಹ ರಚನೆ ಹಾಗೂ ತೆಳುವಾದ ಮೈಕಟ್ಟಿನ ಪಾಲಕರು ಅಥವಾ ಸಂಬಂಧಿಕರನ್ನು ಹೊಂದಿರುವವರಲ್ಲಿ ಇದನ್ನು ಸ್ವಾಭಾವಿಕ ಎಂದು ಪರಿಗಣಿಸಲಾಗುತ್ತದೆ.

2. ವೈದ್ಯಕೀಯ ಕಾರಣಗಳು: ಚಯಾಪಚಯ ಕ್ರಿಯೆಯಲ್ಲಿ ತೊಂದರೆ, ಹಾರ್ಮೋನುಗಳ ಅಸಮತೋಲನದಂತಹ ಜೀವರಾಸಾಯನಿಕ ಅಂಶಗಳು, ರಕ್ತಹೀನತೆ, ಜೀವಸತ್ವಗಳು ಅಥವಾ ಖನಿಜಾಂಶಗಳ ಕೊರತೆ ಹಾಗೂ ಮುಖ್ಯವಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾದಂತಹ ತಿನ್ನುವ ಅಸ್ವಸ್ಥತೆಯನ್ನು ಹೆಸರಿಸಬಹುದು.

3. ಸಾಮಾಜಿಕ ಪ್ರಭಾವ: ತೀರಾ ತೆಳ್ಳಗಿರುವುದು ಸೌಂದರ್ಯದ ಸಂಕೇತ ಎಂಬ ನಂಬಿಕೆಯೂ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಹೇಳಬಹುದು. `ಬಳುಕುವ ಬಳ್ಳಿ'ಯಂತಹ ದೇಹ ಮಾಟ ಎಂದರೆ ಅದು ಅಂತಿಮ ಎಂಬ ಕಲ್ಪನೆ ಮುಖ್ಯವಾಗಿ ನಗರ ಪ್ರದೇಶದ ಯುವತಿಯರಲ್ಲಿ ಕಂಡುಬರುತ್ತಿದೆ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಂತಹ ಇಮೇಜ್‌ನ್ನು ನಂಬಿಕೊಂಡಿರುವವರಲ್ಲಿ ಈ ತೊಂದರೆ ಹೆಚ್ಚಾಗಿದೆ.

4. ವೈಯಕ್ತಿಕ ಕಾರಣಗಳು: ಹದಿಹರೆಯ, ಪ್ರೀತಿಪಾತ್ರರ ಸಾವು, ಸಂಬಂಧಗಳಲ್ಲಿ ಬಿರುಕು, ಹೆರಿಗೆ, ಹೊಸ ಜವಾಬ್ದಾರಿಗಳು ಇತ್ಯಾದಿ.

ತಿನ್ನುವ ಅಸ್ವಸ್ಥತೆಯ(eating disorder) ಬಗ್ಗೆ ವಿವರಿಸಿ.
ತಿನ್ನುವ ಅಸ್ವಸ್ಥತೆ ಆಧುನಿಕ ಯುವತಿಯರನ್ನು ಕಾಡುತ್ತಿರುವ ಒಂದು ಮನೋ-ದೈಹಿಕ ಸಮಸ್ಯೆ ಎಂದು ಹೇಳಬಹುದು. ಭಾರತದಲ್ಲೂ ಇತ್ತೀಚೆಗೆ ಹೆಚ್ಚಿನ ಯುವತಿಯರು ಬುಲಿಮಿಯಾದಂತಹ ತಿನ್ನುವ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇದು ಸ್ಥೂಲಕಾಯ ಅಥವಾ ಬೊಜ್ಜಿನ ಭಯದೊಂದಿಗೆ ತಳಕು ಹಾಕಿಕೊಂಡಿರುತ್ತದೆ. ತಾನು ಕಡಿಮೆ ತಿನ್ನಬೇಕು, ಹೆಚ್ಚು ತಿಂದರೆ  ದೇಹದ ಮಾಟ ಕೆಡುತ್ತದೆ ಎಂಬ ಬಲವಾದ ಬಯಕೆ ಅವರನ್ನು ತಿನ್ನದಂತೆ ತಡೆಯುತ್ತದೆ. ತಿಂದರೂ ಅವರು ವಾಂತಿ ಮಾಡಿಕೊಳ್ಳುತ್ತಾರೆ.

ಇದರಿಂದಾಗಿ ಅವರ ತೂಕ ಕಡಿಮೆಯಾಗುತ್ತದೆ. ತಲೆಸುತ್ತು, ಆಯಾಸ, ಬಳಲಿಕೆಯಿಂದ ನಲುಗುತ್ತಾರೆ. ಹೆಚ್ಚಾಗಿ ಸಿನಿಮಾ, ಮಾಡೆಲಿಂಗ್, ಫ್ಯಾಶನ್ ಲೋಕದ ಯುವತಿಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇವೆರಡನ್ನೂ ಗಂಭೀರ ಸಮಸ್ಯೆ ಎಂದು ಪರಿಗಣಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆಗಿಂತಲೂ ಮುಖ್ಯವಾಗಿ ಮನೋಚಿಕಿತ್ಸೆಯ ಅಗತ್ಯವಿದೆ.

ಈ ಅಸ್ವಸ್ಥತೆಯಿಂದ ದೈಹಿಕ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ?

* ಮೂತ್ರಪಿಂಡಕ್ಕೆ ತೊಂದರೆ, ಮೂತ್ರದ ಸೋಂಕು ಮತ್ತು ಕರುಳಿಗೆ ಹಾನಿ
* ನಿರ್ಜಲೀಕರಣ, ಮಲಬದ್ಧತೆ ಮತ್ತು ಭೇದಿ
* ಸ್ನಾಯು ಸೆಳೆತ
* ದೀರ್ಘಕಾಲದ ಅಜೀರ್ಣ
* ಅಸ್ವಾಭಾವಿಕ ಋತುಚಕ್ರ
* ದೇಹದ ಭಾಗಗಳಲ್ಲಿ ಸೆಳವು, ದೇಹದ ಮೇಲೆ ಬೇಡದ ಕೂದಲು ಬೆಳೆಯುವುದು
* ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯ ಇಲ್ಲದಿರುವುದು
ಇತರ ತೊಂದರೆಗಳೆಂದರೆ ಕೂದಲು ಉದುರುವುದು, ಒಸಡಿನಲ್ಲಿ ರಕ್ತ, ಬಾಯಿಯ ದುರ್ಗಂಧ, ದೇಹದ ದುರ್ಗಂಧ, ಕಣ್ಣಿನ ಕೆಳಗೆ ಕಪ್ಪು ವರ್ತುಲ, ನಿರಂತರ ಅಥವಾ ದೀರ್ಘಕಾಲದ ದಿಗ್ಭ್ರಮೆ ಅಥವಾ ಗೊಂದಲ ಇತ್ಯಾದಿ.

ಕೊಬ್ಬಿನ ಬಗ್ಗೆ ಅನೇಕರಿಗೆ ಭಯವಿದೆ. ಈ ಬಗ್ಗೆ ಮಾಹಿತಿ ನೀಡಿ.
ಕೊಬ್ಬಿನ ಬಗ್ಗೆ ಅನಗತ್ಯ ಭಯ ಅಥವಾ ದ್ವೇಷ ಬೇಡ. ಕೊಬ್ಬು ಕೂಡ ಶರೀರದ ಒಂದು ಮುಖ್ಯ ಅಂಶ. ಇದು ರೋಗಕಾರಕ ಜೀವಾಣುಗಳಿಂದ ರಕ್ಷಣೆ ಒದಗಿಸುತ್ತದೆ. ದೇಹದಲ್ಲಿ ಕೊಬ್ಬಿನ ಜೀವಕೋಶಗಳೇ ಇಲ್ಲದಿರುವಾಗ, ಅವರು ಸೇವಿಸುವ ಆಹಾರವು ಯಕೃತ್, ಮಾಂಸಖಂಡಗಳು ಹಾಗೂ ಮೇದೋಜೀರಕ ಗ್ರಂಥಿಗಳಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಇದರಿಂದ ರಕ್ತಹೀನತೆ, ಸಿಹಿಮೂತ್ರ ರೋಗದಂತಹ ಸಮಸ್ಯೆಗಳು ಎದುರಾಗಬಹುದು.

ಇದಕ್ಕೆ ಚಿಕಿತ್ಸೆ ಏನು?

* ಆರೋಗ್ಯಕರ ಆಹಾರ ಅಭ್ಯಾಸದ ಶಿಕ್ಷಣ
* ತಿನ್ನುವ ಅಸ್ವಸ್ಥತೆಗೆ ಸಂಬಂಧಿಸಿದಂತಹ ಆಲೋಚನೆಗಳು, ಭಾವನೆಗಳು ಹಾಗೂ ವರ್ತನೆಯನ್ನು ಬದಲಾಯಿಸಲು ಸಹಾಯಕ ಆಗುವಂತಹ ಮನೋವೈಜ್ಞಾನಿಕ ಮಧ್ಯಸ್ಥಿಕೆ ಅಥವಾ ಕೌನ್ಸೆಲಿಂಗ್
* ಖಿನ್ನತೆ ಮತ್ತು ಆತಂಕದ ಭಾವನೆಯನ್ನು ಕಡಿಮೆ ಮಾಡಲು ಬಳಸಬಹುದಾದ ಶಮನಕಾರಿ ಔಷಧಿಗಳು
* ಅಂತರ್ವ್ಯಕ್ತೀಯ ಚಿಕಿತ್ಸಾ ವಿಧಾನ:  ತಮ್ಮ ಭಾವನೆ, ತಿನ್ನುವ ವರ್ತನೆಯ ನಡುವಿನ ಸಂಬಂಧ ಮತ್ತು ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುವ ಚಿಕಿತ್ಸೆ
* ಹಾರ್ಮೋನ್ ಚಿಕಿತ್ಸೆ (ಅಗತ್ಯ ಬಂದಲ್ಲಿ ಮಾತ್ರ)

ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ.
ಮಕ್ಕಳು ಹರೆಯಕ್ಕೆ ಕಾಲಿಡುವ ಸಂದರ್ಭದಲ್ಲೇ ಪಾಲಕರು ಅವರ ದೇಹದ ಬೆಳವಣಿಗೆಯತ್ತ ಗಮನ ಕೊಡಬೇಕು. ಬೆಳೆಯುವ ಮಕ್ಕಳಿಗೆ ಅಗತ್ಯ ಜೀವಸತ್ವಗಳು ಹಾಗೂ ಪ್ರೊಟೀನ್‌ಯುಕ್ತ ಆಹಾರ ನೀಡಬೇಕು. ಆರೋಗ್ಯಕರ ಬೆಳವಣಿಗೆ ಕಂಡುಬರದೇ ಹೋದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು.

ತೀರಾ ತೆಳ್ಳಗಿರುವ ಮಕ್ಕಳಿಗೆ ಬೆಲ್ಲ ಹಾಕಿ ಮಾಡಿದ ಎಳ್ಳು, ಶೇಂಗಾ, ಕೊಬ್ಬರಿ ಉಂಡೆಯನ್ನು ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ನೀಡುವುದು ಅತ್ಯುತ್ತಮ. ಮಸಾಜ್, ಅಭ್ಯಂಗ ಸ್ನಾನವೂ ದೈಹಿಕ ಬೆಳವಣಿಗೆಗೆ ಪೂರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT