ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರ್ಣೋದ್ಧಾರಕ್ಕೆ ಕಾಯುತ್ತಿರುವ ದೇಗುಲ

Last Updated 6 ಜುಲೈ 2013, 5:36 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ : ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಪುರಾತನ ದೇವಾಲಯವೊಂದು ಶಿಥಿಲಾವಸ್ಥೆಯಲ್ಲಿದ್ದು, ಗಿಡಗಂಟಿಗಳಿಂದ ಮುಚ್ಚಿಹೋಗಿದೆ. ಚಾರಿತ್ರಿಕ ಹಿನ್ನೆಲೆಯುಳ್ಳ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಸಾರ್ವಜನಿಕ ವೀಕ್ಷಣೆಗೆ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಕೋರಿಕೆಯಾಗಿದೆ.

ಸುಮಾರು ನಾಲ್ಕು ತಲೆಮಾರಿಗಿಂತಲೂ ಮುಂಚೆ ನಿರ್ಮಾಣವಾಗಿದೆ ಎನ್ನಲಾದ ಈ ದೇವಾಲಯದಲ್ಲಿ ಯಾವ ದೇವರ ವಿಗ್ರಹವಿತ್ತು  ಎಂದು ನಿಖರವಾಗಿ ತಿಳಿದುಬಂದಿಲ್ಲ. ಗ್ರಾಮದ ಹಿರಿಯರು ಹೇಳುವ ಪ್ರಕಾರ ಧ್ಯಾನಾವಸ್ಥೆಯಲ್ಲಿ ಕುಳಿತಿರುವ ವಿಗ್ರಹವನ್ನು ಇಲ್ಲಿ ಪೂಜಿಸಲಾಗುತ್ತಿತ್ತು. ಕಾಲಕ್ರಮೇಣ ಪುರಾತನ ದೇವಾಲಯದ ಮೇಲ್ಚಾವಣಿ ಕುಸಿದುಹೋದಾಗ ಜನರು ದೇವಾಲಯಕ್ಕೆ ಹೋಗುವುದನ್ನು ಬಿಟ್ಟಿದ್ದಾರೆ.

ಹೀಗಾಗಿ ದೇವಾಲಯದ ಸುತ್ತಲೂ ಎತ್ತರವಾದ ಪೊದೆಗಳು ಬೆಳೆದುಕೊಂಡಿದ್ದು, ಅದನ್ನು ಸಂಪೂರ್ಣವಾಗಿ ಮರೆಮಾಡಿದ್ದು, ಅದು ಅಜ್ಞಾತವಾಗಿ ಉಳಿದುಬಿಟ್ಟಿದೆ. ಅಲ್ಲದೆ ದೇವಾಲಯ ಗ್ರಾಮದ ಅಂಚಿನಲ್ಲಿರುವುದರಿಂದ ಇದರ ಸುತ್ತಮುತ್ತಲಿನ ಪ್ರದೇಶ ಸಾರ್ವಜನಿಕರ ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಈ ಕಾರಣದಿಂದ ಸುಮಾರು ಮೂವತ್ತು ವರ್ಷಗಳಿಂದ ಯಾರೂ ದೇವಾಲಯದ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ.

ಗ್ರಾಮದ ಮುಖಂಡ ಎಂ.ಪಿ. ಕುಮಾರಸ್ವಾಮಿ ಹೇಳುವಂತೆ ಇದು ತುಂಬಾ ಪ್ರಾಚೀನ ದೇವಾಲಯವಾಗಿದ್ದು, ಜೈನ ಪರಂಪರೆಗೆ ಸಂಬಂಧಿಸಿದ್ದಾಗಿದೆ. ಜೈನ ಮುನಿಯೊಬ್ಬರ ವಿಗ್ರಹ ಇತ್ತು ಎಂದು ಹಿರಿಯರು ಹೇಳಿದ್ದನ್ನು ಸ್ಮರಿಸುತ್ತಾರೆ.

ಕೃಷ್ಣರಾಜಪೇಟೆ ತಾಲ್ಲೂಕು ಒಂದು ಕಾಲಕ್ಕೆ ಜೈನ ಧರ್ಮೀಯರ ಪವಿತ್ರ ಕ್ಷೇತ್ರವಾಗಿತ್ತು ಎಂಬ ಬಗ್ಗೆ ಸಾಕಷ್ಟು ಆಧಾರಗಳಿವೆ. ಇಲ್ಲಿನ ಹೊಸಹೊಳಲು, ಕತ್ತರಿಘಟ್ಟ, ಮುರುಕನಹಳ್ಳಿ, ಬಸ್ತಿ ಹೊಸಕೋಟೆ ಮತ್ತಿತರ ಕಡೆಗಳಲ್ಲಿ ಜೈನ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ದೇಗುಲಗಳು, ಶಾಸನಗಳು ಲಭಿಸಿವೆ.

ಈ ನಿಟ್ಟಿನಲ್ಲಿ  ಮಾಕವಳ್ಳಿಯ ಶಿಥಿಲ ದೇವಾಲಯವನ್ನು ಅಗತ್ಯವಾಗಿ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಪುರಾತತ್ವ ಇಲಾಖೆ, ಪ್ರಾಚ್ಯವಸ್ತು ಸಂಶೋಧನಾಲಯ ಅಥವಾ ಕ್ಷೇತ್ರ ಪರಿಣಿತರು ಇತ್ತ ಕಡೆ ಗಮನಹರಿಸಬೇಕು ಎನ್ನುತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT