ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ರಕ್ಷಕ ಹೆಲ್ಮೆಟ್!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಾಲಕ ರಹಿತ ಕಾರಿನ ಬಗ್ಗೆ ತಿಳಿದುಕೊಂಡಿರಲ್ಲ. ಈಗ `ಜೀವರಕ್ಷಕ ಹೆಲ್ಮೆಟ್~ ಬಗ್ಗೆ ತಿಳಿಯೋಣ. ರಸ್ತೆ ಅಪಘಾತದ ಸಂದರ್ಭದಲ್ಲಿ ಸವಾರನ ತಲೆಯನ್ನೇ ಏಕೆ ಜೀವವನ್ನೇ ಉಳಿಸುವ ಈ ಶಿರಸ್ತ್ರಾಣ ಈಗ ಸಂವಹನ ಸೇತುವಾಗಿಯೂ ಕಾರ್ಯನಿರ್ವಹಿಸಲಿದೆ.

ಹೌದು! ವಾಹನ ಸವಾರಿ ಮಾಡುವಾಗ ಕರೆ ಬಂದರೆ, ಹಲವರು ಮೊಬೈಲ್ ಫೋನನ್ನು ಹೆಲ್ಮೆಟ್‌ನೊಳಕ್ಕೇ ತೂರಿಸಿ ಕಿವಿಗೆ ಅಂಟಿಸಿ ಮಾತನಾಡುವುದನ್ನು ನೋಡಿರುತ್ತೀರಿ. ಇನ್ನು ಮುಂದೆ ಈ ಸರ್ಕಸ್ ಮಾಡಬೇಕಾಗಿಲ್ಲ. ಬದಲಿಗೆ  ಕರೆ ಬಂದ ಕೂಡಲೇ ಹೆಲ್ಮೆಟ್ ಮೊಬೈಲ್‌ನೊಂದಿಗೆ ಸಂಪರ್ಕ ಸಾಧಿಸುತ್ತದೆ.

ಮೊಬೈಲ್ ಜೇಬಿನಲ್ಲಿದ್ದರೂ (ಬ್ಲ್ಯೂಟೂತ್ ರೀತಿ) ಕರೆ ಸ್ವೀಕರಿಸಬಹುದು, ಮಾತನಾಡಬಹುದು. ಅಷ್ಟೇ ಅಲ್ಲ, ಅಪಘಾತವಾಗಿ ಸವಾರ ಗಾಯಗೊಂಡಿದ್ದರೆ ಆಯ್ದ ಕೆಲವು ಸಂಖ್ಯೆಗಳಿಗೆ ಜಾಗೃತಿಯ `ಸಂದೇಶ~ವನ್ನೂ (ಎಸ್‌ಎಂಎಸ್) ಇದು ತನ್ನಷ್ಟಕ್ಕೇ ಕಳುಹಿಸಿಬಿಡುತ್ತದೆ. ಜತೆಗೆ ಅಲಾರಾಂ ಮೊಳಗಿಸಿ ಎಚ್ಚರಿಸುತ್ತದೆ!

ಎಂಥ ತಂತ್ರಜ್ಞಾನವಿರಬಹುದು ಎಂದು ಯೋಚಿಸುತ್ತಿದ್ದೀರಾ?
ಅಸಲಿಗೆ ಇದೊಂದು ಸ್ಮಾರ್ಟ್‌ಫೋನ್ ಅಪ್ಲಿಕೇಷನ್. ನಿಮ್ಮ ಬಳಿ ಹೆಲ್ಮೆಟ್ ಈ ಇದ್ದರಷ್ಟೇ ಸಾಲದು, ಜತೆಗೆ ಸ್ಮಾರ್ಟ್‌ಫೋನ್ ಕೂಡ ಇರಬೇಕು. ಸ್ಮಾರ್ಟ್‌ಫೋನ್‌ನಲ್ಲಿರುವ ಈ ಚತುರ ಅಪ್ಲಿಕೇಷನ್ ಹೆಲ್ಮೆಟ್‌ನಲ್ಲಿ ಅಳವಡಿಸಿರುವ ಬ್ಲೂಟೂಥ್ ಜತೆ ಸಂಪರ್ಕ ಸಾಧಿಸುತ್ತದೆ. ಅಪಘಾತ ಸಂಭವಿಸಿದಾಗ ಈ ಮೇಲಿನ ಎಲ್ಲ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುತ್ತದೆ.

ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಅಮೆರಿಕ ಮೂಲದ `ಐಸಿಇ ಡಾಟ್~ ಎನ್ನುವ ಸಾಫ್ಟ್‌ವೇರ್ ಕಂಪೆನಿ. ಈ ಕಂಪೆನಿಗೆ ಹೀಗೊಂದು ಹೊಳಹು ಕೊಟ್ಟವರು ಬೈಜು ಥಾಮಸ್ ಎನ್ನುವ ಸೈಕಲ್ ಸವಾರ.

ಒಮ್ಮೆ ಬೈಜು ಸೈಕಲ್ ಸವಾರಿ ಮಾಡುವಾಗ ಆಯ ತಪ್ಪಿ ಆಳ ಕಂದಕಕ್ಕೆ ಬಿದ್ದರು. ಅವರು ಬಿದ್ದದ್ದು ಯಾರ ಗಮನಕ್ಕೂ ಬರಲಿಲ್ಲ. ಅಪಘಾತ ಸಂಭವಿಸಿದ ಸ್ಥಳವೂ ಯಾರಿಗೂ ಗೊತ್ತಾಗಲಿಲ್ಲ.
 
ಆದರೆ ಅದುಹೇಗೋ ಪ್ರಯಾಸದಿಂದ ಬೈಜು ಪಾರಾಗಿ ಮೇಲೆ ಬಂದರು. ಆದರೆ, ಈ ಅಪಘಾತದ ನಂತರ ಶಿರಸ್ತ್ರಾಣದಲ್ಲೇ `ಬ್ಲೂಟೂಥ್~ ಅಳವಡಿಸಿದರೆ ಕೂಡಲೇ ಜತೆಗಿದ್ದವರ ಜತೆ ಸಂಪರ್ಕ ಸಾಧಿಸಬಹುದಿತ್ತಲ್ಲ ಎನ್ನುವ ಯೋಜನೆ ಅವರಿಗೆ ಬಂತು. `ಐಸಿಇ ಡಾಟ್ ಕಂಪೆನಿ ಜತೆ ಈ ಯೋಚನೆ ಹಂಚಿಕೊಂಡರು. ಅದೇ ಈಗ ಹೆಲ್ಮೆಟ್ ರೂಪದಲ್ಲಿ ಹೊರಬಂದಿದೆ.

ಅಷ್ಟೇ ಅಲ್ಲ, ಈ ಹೆಲ್ಮೆಟ್‌ನಲ್ಲಿ `ಜಿಪಿಎಸ್~ ಸೇರಿದಂತೆ ಹಲವು ಸೌಲಭ್ಯಗಳಿವೆ. ಸವಾರನ ಆರೋಗ್ಯದತ್ತಲೂ ಈ ಅಪ್ಲಿಕೇಷನ್ ಬಳಸಿ ನಿಗಾ ವಹಿಸಬಹುದಾಗಿದೆ. ಅಂದ ಹಾಗೆ ಈ ಅಪ್ಲಿಕೇಷನ್ ಬೆಲೆ 120 ಪೌಂಡ್! ಅಂದರೆ ಅಂದಾಜು 10,500 ರೂಪಾಯಿ.

ಮುಂದಿನ ಏಪ್ರಿಲ್ ವೇಳೆಗೆ ಹೆಲ್ಮೆಟ್ ಮಾರುಕಟ್ಟೆಗೆ ಬರಲಿದೆ. `ಐಸಿಇ ಡಾಟ್~ ಕಂಪೆನಿಯ ಒಂದು ವರ್ಷದ ಸದಸ್ಯತ್ವ ಪಡೆದರೆ ದರದಲ್ಲಿ ಸ್ವಲ್ಪ ರಿಯಾಯ್ತಿ ಇದೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT