ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವಿಮೆಗೆ ಆದ್ಯತೆ ಇರಲಿ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬದಲಾದ ಜೀವನಶೈಲಿಯೇ ಪ್ರಮುಖವಾಗಿರುವ ಇಂದಿನ ದಿನಗಳಲ್ಲಿ ಜೀವ ವಿಮೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಕುಟುಂಬಕ್ಕೆ ಆಧಾರವಾದ ವ್ಯಕ್ತಿಯು ಮೊದಲು ತಾನು ವಿಮೆ ಮಾಡಿಸಿಕೊಂಡು, ತನ್ನ ಅವಲಂಬಿತರಿಗೆ ಆರ್ಥಿಕ ಭದ್ರತೆ ನೀಡಿದ ಬಳಿಕ ಹಣಕಾಸಿನ ಇತರ ವಿಷಯಗಳ ಬಗ್ಗೆ ಮುಂದೆ ಯೋಚಿಸಲು ಶುರು ಮಾಡುತ್ತಾನೆ.

ಹಣಕಾಸು ಲೆಕ್ಕಾಚಾರ ಎಂದರೆ ಬೇರೇನೂ ಅಲ್ಲ; ಸದ್ಯ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡುವುದರೊಂದಿಗೆ ದೂರದೃಷ್ಟಿಯಿಂದ ಒಂದಷ್ಟು ಆಸ್ತಿ ಗಳಿಕೆಗೆ ಈಗಲೇ ಯೋಚಿಸಿ ಉಳಿತಾಯ ಮಾಡುವಂಥದು.
 
ಈ ಲೆಕ್ಕಾಚಾರದಲ್ಲಿ ವಿಮೆ, ಆಸ್ತಿ-ಪಾಸ್ತಿ ಗಳಿಕೆ, ಜೀವನದಲ್ಲಿ ಎದುರಾಗುವ ತುರ್ತು ಸಂದರ್ಭದ ಖರ್ಚು-ವೆಚ್ಚ ಸೇರಿರುತ್ತದೆ. ಬದುಕಿನ ವಿವಿಧ ಘಟ್ಟಗಳಲ್ಲಿ ಅಗತ್ಯವಾಗಿ ಬೇಕಾದ ಹಣದ ಪ್ರಮಾಣವು ಆ ವ್ಯಕ್ತಿಯ ಹಣಕಾಸಿನ ಯೋಜನೆಯಲ್ಲಿ ಒಳಗೊಂಡಿರುತ್ತದೆ.
ಮದುವೆ, ಮನೆ ಖರೀದಿ, ಮಕ್ಕಳ ಶಿಕ್ಷಣವನ್ನಂತೂ ನಿರ್ಲಕ್ಷ್ಯಿಸಲು ಅಸಾಧ್ಯ. ನಿಗದಿತ ಕಾಲಮಿತಿಯೊಳಗೆ ಇವುಗಳನ್ನು ಪೂರ್ಣಗೊಳಿಸುವ ಒತ್ತಡ ಕೂಡ ಇರುತ್ತದೆ.

`ಯಾವಾಗ ಹಣಕಾಸಿನ ಲೆಕ್ಕಾಚಾರ- ಯೋಜನೆ ಪ್ರಾರಂಭಿಸಬೇಕು?~ ಎಂಬುದು ಆಯಾ ವ್ಯಕ್ತಿಯ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಉದ್ಯೋಗಕ್ಕೆ ಸೇರಿದ ವ್ಯಕ್ತಿಯು ಉಳಿತಾಯದ ಮೂಲಕ ಆಸ್ತಿ (ಸಂಪತ್ತು) ಗಳಿಸಲು ಆದ್ಯತೆ ನೀಡುತ್ತಾನೆಯೇ ಹೊರತೂ ಜೀವನದ `ರಕ್ಷಣೆ~ಯತ್ತ ಗಮನಹರಿಸುವುದಿಲ್ಲ. ಒಂದೊಮ್ಮೆ ಕುಟುಂಬಕ್ಕೆ ಆಧಾರವಾದ ವ್ಯಕ್ತಿಯ ಜೀವಕ್ಕೆ ಹಾನಿಯಾದಾಗ, ಅದನ್ನು ಮತ್ತೆ ಗಳಿಸಲು ಆಗುವುದಿಲ್ಲ.

ಇದಕ್ಕಾಗಿಯಾದರೂ ಜೀವ ವಿಮೆ ಮಾಡಿಸುವುದು ಅಗತ್ಯ. ಇದರಿಂದ ಕುಟುಂಬದ ಸದಸ್ಯರು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿ  ಪರಿತಪಿಸುವುದು ತಪ್ಪುತ್ತದೆ.

ಹೀಗಾಗಿ ಹಣಕಾಸಿನ ಲೆಕ್ಕಾಚಾರದಲ್ಲಿ ಜೀವ ವಿಮೆಗೆ ಮೊದಲು ಪ್ರಾಮುಖ್ಯ ಕೊಡುವಂತೆ ನೋಡಿಕೊಳ್ಳಬೇಕು. ತಾನಿಲ್ಲದೇ ಹೋದರೂ ಕುಟುಂಬದ ಅಗತ್ಯಗಳಿಗೆ ತಕ್ಕಷ್ಟು ಹಣ ಬರುವಂತೆ ಮಾಡುವ ಜೀವ ವಿಮೆ ವಿಧಾನಗಳು ಸಾಕಷ್ಟಿವೆ.

ಜೀವ ವಿಮೆ ಎಂದ ಕೂಡಲೇ ಅದಕ್ಕೇ ಹೆಚ್ಚಿನ ಒತ್ತು ಕೊಟ್ಟು, ಒಮ್ಮೆಲೇ ಅಧಿಕ ಹಣ ಹೂಡುವುದು ಎಂದೇನಲ್ಲ. ಬದುಕಿನ ವೃದ್ಧಾಪ್ಯದ ಹಂತದಲ್ಲಿ ವಿವಿಧ ಕೆಲಸಗಳಿಗೆ ಬೇಕಾಗುವ ಹಣ ಪಡೆಯಲು, ಈಗಲೇ ಉಳಿತಾಯದ ರೂಪದಲ್ಲಿ ಸಣ್ಣ ಪ್ರಮಾಣದಲ್ಲಿ ಹಣ ತೊಡಗಿಸಬಹುದು.
 
ಇದರಿಂದ ಈಗ ಆರ್ಥಿಕವಾಗಿ ಹೆಚ್ಚು ಭಾರ ಬೀಳುವುದಿಲ್ಲ; ಮುಂದೆ ಜೀವನದಲ್ಲೂ ಸಾಕಷ್ಟು ನೆರವು ಲಭ್ಯವಾಗುತ್ತದೆ. ಅದರಲ್ಲೂ ಅನಾರೋಗ್ಯ ಹಾಗೂ ಮಕ್ಕಳ ಮದುವೆಗೆ ಒಮ್ಮೆಲೇ ಹೆಚ್ಚು ಮೊತ್ತದ ಹಣ ಸಿಗುವುದರಿಂದ, ಹಣಕಾಸಿನ ಸಮಸ್ಯೆ ಎದುರಾಗದು. ಇದು ಜೀವ ವಿಮೆಯ ವೈಶಿಷ್ಟ್ಯ.

ಒಬ್ಬ ವ್ಯಕ್ತಿಯು ತನ್ನ ಹಣಕಾಸಿನ ಇತಿಮಿತಿ ಅರಿತು, ಮುಂದಿನ ಯೋಜನೆಗಳಿಗೆ ಎಷ್ಟು ಹಣ ಬೇಕು ಎಂಬುದನ್ನು ಲೆಕ್ಕಾಚಾರ ಮಾಡಿಕೊಂಡು ಜೀವ ವಿಮೆ ಮಾಡಿಸಬೇಕಾಗುತ್ತದೆ. ಈಗ ವಹಿಸಬೇಕಾದ ಜವಾಬ್ದಾರಿ, ಅವಲಂಬಿತ ಕುಟುಂಬದ ಸದಸ್ಯರ ಸಂಖ್ಯೆ, ಅನುಸರಿಸುವ ಜೀವನ ಶೈಲಿ, ಮುಂದೆ ಖರೀದಿಸಬೇಕಿರುವ ಆಸ್ತಿ-ಪಾಸ್ತಿ, ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲ ವಿಚಾರಗಳನ್ನೂ ಇಲ್ಲಿ ಯೋಚಿಸಬೇಕು.

ವ್ಯಕ್ತಿಯೊಬ್ಬನ `ರಕ್ಷಣೆ~ಯೇ ಜೀವ ವಿಮೆಯ ಮುಖ್ಯ ಉದ್ದೇಶವೆಂದು ಹೇಳಲಾಗುತ್ತಿದೆ; ಆದರೆ, ದೂರದೃಷ್ಟಿಯಲ್ಲಿ ಅಧಿಕ ಉಳಿತಾಯ ಹಾಗೂ ಸಂಪತ್ತು ಗಳಿಕೆಯ ಸಾಧನವನ್ನಾಗಿಯೂ ಇದನ್ನು ಬಳಸಿಕೊಳ್ಳಲು ಸಾಧ್ಯವಿದೆ.
 
ಸ್ವಲ್ಪವೇ ಹಣವನ್ನು ಅಚ್ಚುಕಟ್ಟಾಗಿ ಜೀವ ವಿಮೆಯ ಪಾಲಿಸಿಗಳಲ್ಲಿ ಬಳಸಿದರೆ, ಅದು ಮುಂದೊಂದು ದಿನ ಹೆಚ್ಚು ಮೊತ್ತ ತಂದುಕೊಡಬಲ್ಲದು. ಮಕ್ಕಳ ಉನ್ನತ ಶಿಕ್ಷಣ ಅಥವಾ ಮದುವೆಯಂಥ ಸಂದರ್ಭದಲ್ಲಿ ಅಧಿಕ ಖರ್ಚು ಮಾಡುವಾಗ ಜೀವ ವಿಮೆ ಆಪತ್ಬಾಂಧವನಂತೆ ನೆರವಿಗೆ ಬರುತ್ತದೆ.

ಜೀವ ವಿಮೆಗೆ ಮಾಡುವ ವೆಚ್ಚ ಎಷ್ಟೋ ವರ್ಷಗಳ ಬಳಿಕ ಪ್ರಯೋಜನಕ್ಕೆ ಬರುತ್ತದೆ ಎಂಬುದು ಹಲವು ಜನರ ತಕರಾರು.

`ರಕ್ಷಣೆ~ಯ ಪ್ರಮುಖ ಉದ್ದೇಶದೊಂದಿಗೆ ಜೀವ ವಿಮೆ ರೂಪುಗೊಂಡಿದೆಯೇ ಹೊರತೂ ಇತರ ತಕ್ಷಣದ ಲಾಭದ ಯೋಜನೆಗಳ ರೀತಿ ಇದಲ್ಲ ಎಂಬುದನ್ನು ಅವರು ಅರಿತಿರುವುದಿಲ್ಲ.

ಹೀಗಾಗಿ ಇತರ ಯೋಜನೆಗಳೊಂದಿಗೆ ಇದನ್ನು ಹೋಲಿಕೆ ಮಾಡುವುದು ಸಮರ್ಪಕವಲ್ಲ. ಬೇರೆ ಹಣ ಹೂಡಿಕೆಯ ಯೋಜನೆಗಳಿಗೆ ಹೋಲಿಸಿದರೆ, ಜೀವ ವಿಮೆಯು ತುಸು ಕಡಿಮೆ `ರಿಟರ್ನ್ಸ್~ ಕೊಡುತ್ತದೆ ಎಂಬುದೂ ನಿಜವೇ. ಆದರೆ, ದುರದೃಷ್ಟವಶಾತ್ ಕುಟುಂಬದ ಯಜಮಾನ ದಿಢೀರ್ ಅಗಲಿದರೆ, ಆ ಕುಟುಂಬದ ಸದಸ್ಯರು ಆರ್ಥಿಕ ಸಂಕಟಕ್ಕೆ ಸಿಲುಕುತ್ತಾರೆ.
 
ಅಂಥ ಸಂದರ್ಭದಲ್ಲಿ ಜೀವ ವಿಮೆಯೊಂದೇ ಆ ಕುಟುಂಬಕ್ಕೆ ನೆರವಿನ ಹಸ್ತ ಚಾಚಿ, ಅಭಯ ನೀಡುತ್ತದೆ. ವೈಯಕ್ತಿಕವಾಗಿ ಒಬ್ಬ ವ್ಯಕ್ತಿ ಜೀವ ವಿಮೆ ಮಾಡಿಸಬೇಕೆಂದರೆ, ಎಷ್ಟು ಪ್ರಮಾಣದ ಪ್ರೀಮಿಯಂ ಇರಬೇಕು . ಮುಂದೆ ಸಿಗುವ ಹಣವೆಷ್ಟು. ಎಷ್ಟು ವರ್ಷಗಳ ಬಳಿಕ, ಮತ್ತಿತರ ಮಾಹಿತಿಗೆ ಸಂಕೀರ್ಣ ಹಾಗೂ ಸುಲಭವಾದ ಲೆಕ್ಕಾಚಾರಗಳಿವೆ.

ಕುಟುಂಬಕ್ಕೆ ಆಧಾರವಾದ ವ್ಯಕ್ತಿ ಇಲ್ಲದಾದಾಗ ಹಣಕಾಸು ನೆರವು ನೀಡುವ ಯೋಜನೆ ಇದು ಎಂದಷ್ಟೇ ಭಾವಿಸುವಂತಿಲ್ಲ. ಇನ್ನಾವುದೇ ವೆಚ್ಚದ ಸಂದರ್ಭ ಎದುರಾದಾಗಲೂ ನೆರವು ಕಲ್ಪಿಸುವ ಯೋಜನೆ `ಜೀವ ವಿಮೆ~ ಎಂಬುದನ್ನೂ ಅರಿಯಬೇಕು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗ ಜೀವ ವಿಮೆಗೆ ಅಧಿಕ ಆದ್ಯತೆ ಸಿಗುತ್ತಿದೆ. ಉದ್ಯೋಗಿಯೊಬ್ಬ ತಾನು ಆದ್ಯತೆ ನೀಡಬೇಕಾದ ಲೆಕ್ಕಾಚಾರದಲ್ಲಿ ಜೀವ ವಿಮೆ ಅಗ್ರಸ್ಥಾನ ಪಡೆದಿದೆ. ದೇಶದ ವಿಮಾ ವಲಯವು ನಿಧಾನವಾಗಿದ್ದರೂ, ಗ್ರಾಹಕರು ಆ ಕ್ಷೇತ್ರದತ್ತ ಗಮನ ಹರಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕಿದೆ.

ವ್ಯಕ್ತಿಯೊಬ್ಬನ ಜೀವನದ ವಿವಿಧ ಹಂತಗಳಲ್ಲಿ ಬೇಕಾಗುವ ಹಣದ ಅಗತ್ಯವನ್ನು ಮೊದಲೇ ಗಮನಿಸಿ, ಅದಕ್ಕೆ ತಯಾರಾಗುವಂಥ ಹಣಕಾಸು ಲೆಕ್ಕಾಚಾರ ರೂಪಿಸಬೇಕು.

ಉಳಿತಾಯದ ಮೂಲಕ ಆಸ್ತಿ ಗಳಿಕೆ ಮಾಡುವವರು ಜೀವ ವಿಮೆಯನ್ನು ಭವಿಷ್ಯದ ಅನುಕೂಲಕರ ಸಾಧನವನ್ನಾಗಿ ಬಳಸಿಕೊಂಡರೆ, ಅದರಿಂದಲೂ ಗಳಿಕೆ ಮಾಡಲ ಸಾಧ್ಯವಿದೆ ಎಂಬುದನ್ನು ಅರಿಯಬೇಕು.
(ಲೇಖಕರು ಐಸಿಐಸಿಐ  ಪ್ರುಡೆನ್ಶಿಯಲ್ ಜೀವ ವಿಮೆ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT