ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವೈವಿಧ್ಯ ಸಂರಕ್ಷಣೆ ಎಲ್ಲರ ಹೊಣೆ

Last Updated 28 ಜನವರಿ 2012, 5:25 IST
ಅಕ್ಷರ ಗಾತ್ರ

ಕೋಲಾರ: ಜಗತ್ತಿನಲ್ಲಿರುವ ಜೀವ ವೈವಿಧ್ಯವನ್ನು ಸಂರಕ್ಷಿಸುವುದು ಎಲ್ಲರ ಹೊಣೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಕಾಳಜಿ ವಹಿಸಬೇಕಾಗಿದೆ ಎಂದು ಬೆಂಗಳೂರಿನ ಸಿ.ಪಿ.ರಾಮಸ್ವಾಮಿ ಪರಿಸರ ಶಿಕ್ಷಣ ಕೇಂದ್ರದ ಕಾರ್ಯಕ್ರಮ ಅಧಿಕಾರಿ ರವಿಶಂಕರ್ ಹೇಳಿದರು.

ನಗರದ ಹೊರವಲಯದ ಆದಿಮ ಸಾಂಸ್ಕೃತಿಕ ಸಂಘಟನೆ ಆವರಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಜೀವವೈವಿಧ್ಯ ಮತ್ತು ಅರಣ್ಯ ವರ್ಷಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜೀವ ಸಂಕುಲದಲ್ಲಿ ಸಸ್ಯಗಳು ಮತ್ತು ಪ್ರಾಣಿಗಳು ತಮ್ಮದೇ ವಿಶಿಷ್ಟ ಕಾರಣಕ್ಕೆ ಮಹತ್ವದ್ದಾಗಿವೆ. ಆದರೆ ನಾಗರಿಕತೆ ಬೆಳೆದಂತೆ ಅವುಗಳ ಬಳಕೆಯೂ ಹೆಚ್ಚಾಗತೊಡಗಿ, ಇತ್ತೀಚಿನ ವರ್ಷಗಳಲ್ಲಿ ದುರ್ಬಳಕೆಯೂ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಮ್ಮ ಇರುವಿಕೆಯಿಂದಲೇ ಪ್ರಕೃತಿಗೆ ಗೋಚರ ಮತ್ತು ಅಗೋಚರ ಕೊಡುಗೆಗಳನ್ನು ನೀಡುತ್ತಿದ್ದ ಅಪರೂಪದ ಸಸ್ಯ, ಪ್ರಾಣಿ ವೈವಿಧ್ಯ ಅಳಿವಿನಂಚಿನಲ್ಲಿದೆ. ಈಗ ಉಳಿದಿರುವ ಕೆಲವನ್ನಾದರೂ ಸಂರಕ್ಷಿಸುವ ಕಡೆಗೆ ಗಮನ ಹರಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಔಷಧೀಯ ಸಸ್ಯಗಳು, ಅಪರೂಪದ ಹಕ್ಕಿಗಳೂ ಇಲ್ಲಿದ್ದವು. ಕ್ರಮೇಣ ಅವುಗಳಲ್ಲಿ ಹಲವು ಕಾಣೆಯಾಗಿದೆ. ಈಗ ಉಳಿದಿರುವ ಅಂಥವನ್ನು ಹುಡುಕಿ ಗುರುತಿಸಬೇಕಾಗಿದೆ. ಆ ಮೂಲಕ ಸ್ಥಳೀಯ ಜೀವ ವೈವಿಧ್ಯದ ಕುರಿತು ಕಾಳಜಿಯನ್ನು ವ್ಯಕ್ತಪಡಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಕ್ಷಣ ಸಂಯೋಜಕ ರಾಮಚಂದ್ರಾರೆಡ್ಡಿ ಮಾತನಾಡಿ, ಬರಪೀಡಿತ ಜಿಲ್ಲೆ ಎಂದೇ ಖ್ಯಾತವಾದ ಕೋಲಾರದ ಬೆಟ್ಟಸಾಲಿನಲ್ಲಿ ಜೀವವೈವಿಧ್ಯದ ಸಂಪತ್ತು ಅಪಾರವಾಗಿದೆ. ಜನ ಸಮುದಾಯಕ್ಕೆ ಅನುಕೂಲಕರವಾದ ಔಷಧೀಯ ಸಸ್ಯಗಳು ಹೆಚ್ಚಿವೆ.
 
ಅಪರೂಪದ ಕೀಟ ಮತ್ತು ಹಕ್ಕಿ ಪ್ರಪಂಚವೇ ಇದೆ. ಅವುಗಳ ಕುರಿತು ವಿದ್ಯಾರ್ಥಿಗಳು ಹುಡುಕಾಟ ನಡೆಸಲು ಕಾರ್ಯಾಗಾರ ನೆರವಾಗಲಿದೆ ಎಂದು ತಿಳಿಸಿದರು. ಶಿಕ್ಷಕರಾದ ಹಾ.ಮ.ರಾಮಚಂದ್ರ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಕಾರ್ಯಾಗಾರದ ಸಂಚಾಲಕ ಜಿ.ಎನ್.ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ಅಳಿವಿನಂಚಿನಲ್ಲಿ ರುವ ಸಸ್ಯ ಮತ್ತು ಪ್ರಾಣಿಪ್ರಭೇದಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯದ ನಡುವೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಂತರ, ಪರಿಸರವನ್ನು ಜೀವ ವೈವಿಧ್ಯದ ಹಿನ್ನೆಲೆಯಲ್ಲಿ ವೀಕ್ಷಿಸುವ ಮತ್ತು ದಾಖಲಿಸುವ ಪ್ರಯತ್ನದ ಗುಂಪು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೂ ಅನುಭವ ಹಂಚಿಕೆಗೆ ಅನುವು ಮಾಡಿಕೊಡ ಲಾಯಿತು. ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯ ಕುರಿತು ಸಂಜೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಂತರ ನಾಗರಹೊಳೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಶನಿವಾರ ಪಕ್ಷಿ ವೀಕ್ಷಣೆ, ಸಸ್ಯಗಳನ್ನು ಗುರುತಿಸುವಿಕೆ ಕುರಿತು ತರಬೇತಿ ನೀಡಲಾಗುವುದು. ಕೋಲಾರ ತಾಲ್ಲೂಕಿನ 7 ಸರ್ಕಾರಿ ಶಾಲೆ ಮತ್ತು ಮೂರು ಅನುದಾನಿತ ಖಾಸಗಿ ಶಾಲೆಗಳ ತಲಾ ಐವರು ವಿದ್ಯಾರ್ಥಿಗಳು (ಮೂವರು ಬಾಲಕಿಯರು, ಇಬ್ಬರು ಬಾಲಕರು) ಮತ್ತು ತಲಾ ಒಬ್ಬ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT