ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಕ್ಕೆ ಕುತ್ತಾದ ವೀಲಿಂಗ್ ಚಾಲನೆ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೀಲಿಂಗ್ (ಮುಂದಿನ ಚಕ್ರವನ್ನು ಮೇಲಕ್ಕೆತ್ತಿ ಹಿಂದಿನ ಚಕ್ರವೊಂದರ ಮೇಲೆಯೇ ಬೈಕ್ ಚಾಲನೆ ಮಾಡುವುದು) ಮಾಡುತ್ತಿದ್ದ ಯುವಕನೊಬ್ಬ ಬಾಲಕನಿಗೆ ವಾಹನ ಗುದ್ದಿಸಿದ ಪರಿಣಾಮ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಕೆಂಗೇರಿ ಹೊರ ವರ್ತುಲ ರಸ್ತೆಯ ಜ್ಞಾನಗಂಗಾನಗರದಲ್ಲಿ ಶನಿವಾರ ನಡೆದಿದೆ.

ಕಾಮಾಕ್ಷಿಪಾಳ್ಯ ಸಮೀಪದ ಮಾರುತಿನಗರ 11ನೇ ಅಡ್ಡರಸ್ತೆ ನಿವಾಸಿ ತಿಮ್ಮಪ್ಪ ಎಂಬುವರ ಮಗ ಯತೀಶ್ (9) ಮೃತಪಟ್ಟ ಬಾಲಕ. ಆತ ಜ್ಞಾನಗಂಗಾನಗರದ ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ. ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ತಿಮ್ಮಪ್ಪ ಅವರಿಗೆ ಒಟ್ಟು ನಾಲ್ಕು ಮಕ್ಕಳು. ಯತೀಶ್ ಅವರ ಕೊನೆಯ ಮಗ ಎಂದು ಪೊಲೀಸರು ತಿಳಿಸಿದ್ದಾರೆ.

ಯತೀಶ್ ತನ್ನ ಪಕ್ಕದ ಮನೆಯಲ್ಲೇ ವಾಸವಿರುವ ಗಗನ್ ಎಂಬಾತನ ಜತೆ ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಬಿಎಂಟಿಸಿ ಬಸ್‌ನಲ್ಲಿ ಜ್ಞಾನಗಂಗಾನಗರಕ್ಕೆ ಬಂದ. ಗಗನ್, ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲೇ ಎಂಟನೇ ತರಗತಿ ವಿದ್ಯಾರ್ಥಿ.
 
ಬಸ್‌ನಿಂದ ಕೆಳಗಿಳಿದ ಅವರಿಬ್ಬರೂ ರಸ್ತೆ ದಾಟುವ ಯತ್ನದಲ್ಲಿದ್ದಾಗ ಕೆಂಗೇರಿ ವರ್ತುಲ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಬಂದ ಯುವಕನೊಬ್ಬ ನಿಯಂತ್ರಣ ತಪ್ಪಿ ಯತೀಶ್‌ಗೆ ವಾಹನ ಗುದ್ದಿಸಿದ. ಪರಿಣಾಮ ಆತನ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಯಿತು.

ಆತನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಾತ್ರಿ ಏಳು ಗಂಟೆ ಸುಮಾರಿಗೆ ಆತ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್ ಸವಾರನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ. ಘಟನೆ ನಂತರ ಬೈಕ್ ಸವಾರ ವಾಹನದೊಂದಿಗೆ ಪರಾರಿಯಾಗಿದ್ದಾನೆ.

ಆತನ ಗುರುತು ಪತ್ತೆಯಾಗಿಲ್ಲ ಮತ್ತು ವಾಹನದ ನೋಂದಣಿ ಸಂಖ್ಯೆ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಘಟನೆಯ ಪ್ರತ್ಯಕ್ಷದರ್ಶಿ ಗಗನ್ ಮಾನಸಿಕವಾಗಿ ಆಘಾತಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT