ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಚೈತನ್ಯಕ್ಕೆ ನಗುವೇ ದಿವ್ಯ ಔಷಧ

Last Updated 24 ಜನವರಿ 2011, 10:20 IST
ಅಕ್ಷರ ಗಾತ್ರ

ದಾವಣಗೆರೆ: ಮನುಷ್ಯನ ಚಿಂತೆಯನ್ನು ಕಡಿಮೆ ಮಾಡಿ ಚೈತನ್ಯ ತುಂಬುವ ಶಕ್ತಿ ನಗುವಿಗೆ ಮಾತ್ರ ಇದೆ ಎಂದು ಅಂಕಣಕಾರರಾದ ಹಾಗೂ ಜಯದೇವ ಆಸ್ಪತ್ರೆ ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೆಕುಂದ್ರಿ ಪ್ರತಿಪಾದಿಸಿದರು.ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನಗೆ ಕೂಟಗಳ 9ನೇ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕೋಪ-ತಾಪ ಪಾಪದ ನೆಲೆ. ಅದನ್ನು ಬಿಟ್ಟು ಸದಾ ನಗುನಗುತಾ ಬಾಳುವುದನ್ನು ಕಲಿಯಬೇಕು. ನಗು ದೇಹಕ್ಕೆ ಬೇಕಾದ ರಾಸಾಯನಿಕ ಬಿಡುಗಡೆ ಮಾಡುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.ಹಣ ಇದ್ದ ತಕ್ಷಣ ಆರೋಗ್ಯ ದೊರೆಯುವುದಿಲ್ಲ. ಮಾನಸಿಕ ಖಿನ್ನತೆಯಿಂದ ಕಾಯಿಲೆಗೆ ತುತ್ತಾಗುವ ಜನರು ಅದರಿಂದ ಹೊರಬಾರದೇ ಚಿಂತೆಯ ಸೆರಗಿನಲ್ಲೇ ಚಿತೆಯ ದಾರಿ ಹಿಡಿಯುತ್ತಾರೆ. ಅಂತಹ ಮನೋರೋಗಿಗಳಿಗೆ ನಗು ಸಿದ್ಧ ಔಷಧಿ ಎಂದು ಅಭಿಪ್ರಾಯಪಟ್ಟರು.

ಹರಿಹರ ಎಸ್‌ಜೆವಿಪಿ ಕಾಲೇಜಿನ ಪ್ರಾಂಶುಪಾಲ ಎಚ್.ಬಿ. ಭಿಕ್ಷಾವರ್ತಿಮಠ ಮಾತನಾಡಿ, ಜೋಕ್‌ಗಳು ಜನರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತವೆ. ಆದರೆ, ನಗಿಸುವ ಭರದಲ್ಲಿ ಚೌಕಟ್ಟಿಲ್ಲದ ಜೋಕ್‌ಗಳನ್ನು ಬಳಸುವುದು ತರವಲ್ಲ. ಹಾಸ್ಯಕ್ಕೆ ನೈತಿಕ ಮತ್ತು ಸಾಂಸ್ಕೃತಿಕ ಚೌಕಟ್ಟು ಇರದಿದ್ದರೆ ಅದು ದೀರ್ಘ ಮನೋಲ್ಲಾಸ ನೀಡದು ಎಂದು ಪ್ರತಿಪಾದಿಸಿದರು.

ದಿನನಿತ್ಯದ ಬದುಕಿನಲ್ಲಿ ಬಂದುಹೋಗುವ ಹಾಸ್ಯ ಪ್ರಸಂಗಗಳನ್ನು ಅನುಭವಿಸಬೇಕು. ಜೀವನದಲ್ಲಿ ಹಾಸ್ಯ ಹಾಸುಹೊಕ್ಕಾಗಬೇಕು. ಖಿನ್ನತೆಯಿಂದ ಹೊರಬಂದು ಎಂತಹ ಸಂದರ್ಭದಲ್ಲೂ ನಗುನಗುತಾ ಬಾಳುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.ಅಂತರರಾಷ್ಟ್ರೀಯ ನಗೆಯೋಗ ಟ್ರಸ್ಟ್ ಅಧ್ಯಕ್ಷ ಪ್ರೊ.ಸದಾಶಿವ, ರಾಜ್ಯ ನಗೆಯೋಗ ಕೂಟಗಳ ಅಧ್ಯಕ್ಷ ಎಂ.ಆರ್. ಬಸವರಾಜು, ಡಾ.ಎಂ.ಪಿ. ಶ್ರೀರಾಮಶೆಟ್ಟಿ, ಸುಮನಾ ಪಂಚಗಟ್ಟಿ, ಸಮ್ಮೇಳನಾಧ್ಯಕ್ಷೆ ಕೃಷ್ಣಾಬಾಯಿ ಬುದ್ದಿ, ಕೆ.ಆರ್. ವೈಶ್ಯರ ಮತ್ತಿತರರು ಉಪಸ್ಥಿತರಿದ್ದರು. ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT