ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದಿ ನೇತ್ರಾವತಿ ಹರಣ

Last Updated 25 ಫೆಬ್ರುವರಿ 2011, 7:50 IST
ಅಕ್ಷರ ಗಾತ್ರ

ಮಂಗಳೂರು: ನೇತ್ರಾವತಿ ನದಿಯ ಉಪನದಿಯೊಂದರ ನೀರನ್ನು ಪೈಪ್‌ಲೈನ್ ಮೂಲಕ ಬಯಲುಸೀಮೆಯ ಐದು ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗೆ ಬಳಸುವ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ ರೂ. 200 ಕೋಟಿ ಕಾದಿರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ರಾಜ್ಯ ಮುಂಗಡ ಪತ್ರದಲ್ಲಿ ‘ಪಶ್ಚಿಮ ವಾಹಿನಿ’ಗಳ ಮೂಲಕ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗುವುದು. ಪರಿಸರಕ್ಕೆ ಹಾನಿಯಾಗದಂತೆ ಹಂತಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮೊದಲನೇ ಹಂತದಲ್ಲಿ ‘ಎತ್ತಿನಹೊಳೆ ನಾಲೆ’ಯಿಂದ ನೀರು ಒದಗಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ ಪರಿಣತ ಸಂಸ್ಥೆಗಳ ಸಹಕಾರ ಪಡೆದು ಅನುಷ್ಠಾನಗೊಳಿಸಲು ಈ ವರ್ಷ ಆರಂಭಿಕವಾಗಿ ರೂ. 200 ಕೋಟಿ ಅನುದಾನ ಮೀಸಲಿಡಲಾಗುವುದು’ ಎಂದು ಪ್ರಕಟಿಸಿದ್ದಾರೆ. ಈ ಪ್ರಸ್ತಾಪಕ್ಕೆ ಕರಾವಳಿ ಭಾಗದ ಪರಿಸರವಾದಿಗಳು ಹಾಗೂ ಜನಪ್ರತಿನಿಧಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಹಾದಿ ತಪ್ಪಿಸುವ ಯತ್ನ: ‘ಬಜೆಟ್‌ನಲ್ಲಿ ಉಲ್ಲೇಖಿಸಿರುವ ‘ಎತ್ತಿನಹೊಳೆ’ ಕೆಂಪುಹೊಳೆಯ ಉಪನದಿ. ಸಕಲೇಶಪುರ ಬಳಿ ಪಶ್ಚಿಮಘಟ್ಟದಲ್ಲಿ ಹುಟ್ಟುವ ಈ ನದಿ ಗುಂಡ್ಯ ಸಮೀಪ ಕೆಂಪು ಹೊಳೆಗೆ ಸೇರುತ್ತದೆ. ಬಳಿಕ ಕೆಂಪು ಹೊಳೆ ನೇತ್ರಾವತಿಯನ್ನು ಸೇರುತ್ತದೆ. ನೇತ್ರಾವತಿಯ ನದಿಪಾತ್ರಗಳಲ್ಲೊಂದಾದ ಎತ್ತಿನಹೊಳೆಯಲ್ಲಿ ಅಷ್ಟು ಪ್ರಮಾಣದಲ್ಲಿ ನೀರಿಲ್ಲ. ನೇತ್ರಾವತಿ ನದಿ ಹೆಸರನ್ನು ಉಲ್ಲೇಖಿಸದೆಯೇ ನದಿಯ ನೀರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ನೇತ್ರಾವತಿ ನದಿ ತಿರುಗಿಸುವ ಯೋಜನೆಯಲ್ಲದೆ ಬೇರೇನಲ್ಲ. ಕರಾವಳಿ ಜನರ ದಾರಿ ತಪ್ಪಿಸಲು ಸರ್ಕಾರ ಸಂಚು ರೂಪಿಸಿದಂತೆ ಭಾಸವಾಗುತ್ತಿದೆ’ ಎಂದು ಚಾರಣಿಗ ದಿನೇಶ್ ಹೊಳ್ಳ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕರ ವಿರೋಧ: ನದಿಪಾತ್ರದಲ್ಲಿ ಅಣೆಕಟ್ಟು ಕಟ್ಟುವುದಕ್ಕೆ ಆಡಳಿತ ಪಕ್ಷದ ಜನಪ್ರತಿನಿಧಿಗಳಿಂದಲೇ ವಿರೋಧ ವ್ಯಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ‘ಈ ಯೋಜನೆಯ ಸಮಗ್ರ ವಿವರ ತಿಳಿದಿಲ್ಲ. ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯ ಹರಿವಿಗೆ ತೊಂದರೆ, ಪರಿಸರಕ್ಕೆ ಹಾನಿ ಆಗುವುದಾದರೆ ಈ ಯೋಜನೆ ವಿರೋಧಿಸಲು ಹಿಂದೇಟು ಹಾಕುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನದಿಪಾತ್ರದಲ್ಲಿ ಯಾವುದೇ ನಾಲೆಯ ನೀರು ತಿರುಗಿಸುವುದನ್ನು ಖಂಡಿತಾ ವಿರೋಧಿಸುತ್ತೇನೆ. ಕರಾವಳಿಯ ಎಲ್ಲ ಶಾಸಕರೂ ಈ ಬಗ್ಗೆ ಏಕ ಅಭಿಪ್ರಾಯ ಹೊಂದಿದ್ದೇವೆ. ಆದರೆ ಎತ್ತಿನಹೊಳೆಯಿಂದ ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯುವ ಯೋಜನೆಯ ವಿವರ ತಿಳಿದಿಲ್ಲ. ಅದನ್ನು ತಿಳಿದ ಬಳಿಕ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುತ್ತೇನೆ’ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ತಿಳಿಸಿದರು.

ಕರಾವಳಿಗೆ ವಂಚನೆ: ‘ಕೋಲಾರ ಮತ್ತಿತರ ಕಡೆ ನಡೆದ ಪ್ರತಿಭಟನೆಗೆ ಮಣಿದು ಮುಖ್ಯಮಂತ್ರಿಗಳು ಈ ಯೋಜನೆಗೆ ಬಜೆಟ್‌ನಲ್ಲಿ ಮಂಜೂರಾತಿ ನೀಡಿದ್ದಾರೆ. ಇದೊಂದು ಆಲೋಚನೆ ಇಲ್ಲದ ನಿರ್ಧಾರ. ನೇತ್ರಾವತಿಯ ಉಪನದಿ ನೀರನ್ನು ಬಳಸಿಕೊಳ್ಳುವುದಕ್ಕೆ ಸ್ಪಷ್ಟ ವಿರೋಧವಿದೆ, ಈ ಯೋಜನೆ ಮೂಲಕ ಕರಾವಳಿಯ ಜನತೆಗೆ ವಂಚನೆ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಶಾಸಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.

ವಿವಾದದ ಹಾದಿ: ಕರಾವಳಿಯಲ್ಲಿ ನೀರಿನ ತೊಂದರೆಗೆ ಕಾರಣವಾಗುವ ನೇತ್ರಾವತಿ ನದಿ ತಿರುವು ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಪರಮಶಿವಯ್ಯ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದಾಗ ಪರಿಸರ ವಾದಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಯೋಜನೆ ವಿರೋಧಿಸಿ ಮಂಗಳೂರಿನಲ್ಲಿ ಮಾಜಿ ಸಚಿವ ಬಿ.ಸುಬ್ಬಯ್ಯ ಶೆಟ್ಟಿ ನೇತೃತ್ವದಲ್ಲಿ ಕರಾವಳಿ ಹಾಗೂ ಸಮಗ್ರ ಮಲೆನಾಡು ಹಿತರಕ್ಷಣಾ ವೇದಿಕೆ ರಚಿಸಲಾಗಿತ್ತು. 2009ರ ಡಿಸೆಂಬರ್‌ನಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ನೇತ್ರಾವತಿ ನದಿ ತಿರುವು ಯೋಜನೆಯನ್ನು ಬಲವಾಗಿ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಸರ್ಕಾರ ಮೌನ ವಹಿಸಿತ್ತು. ನೇತ್ರಾವದಿ ನದಿ ತಿರುವು ಯೋಜನೆಗೆ ಪ್ರಾರಂಭಿಕ ಹಂತಕ್ಕೆ ಸರ್ಕಾರ ರೂ 200 ಕೋಟಿ ಮೀಸಲಿಟ್ಟಿರುವುದು ಈ ವಿವಾದ ಭುಗಿಲೇಳುವುದಕ್ಕೆ ಕಾರಣವಾಗಿದೆ.

‘ಏನಿದು ನೇತ್ರಾವತಿ ತಿರುವು?’
ಬರಪೀಡಿತ ಜಿಲ್ಲೆಗಳ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ನೇತ್ರಾವತಿ ತಿರುವು ಯೋಜನೆ ರೂಪಿಸಲಾಗಿದೆ. ‘ನೇತ್ರಾವತಿ ನದಿಯಿಂದ ಪ್ರತಿವರ್ಷ 464.62 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ. ಈ ಪೈಕಿ 142.46 ಟಿಎಂಸಿ ನೀರನ್ನು ಪಶ್ಚಿಮ ಘಟ್ಟದಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ಬಯಲುಸೀಮೆಯ 57 ತಾಲ್ಲೂಕುಗಳಿಗೆ ಸರಬರಾಜು ಮಾಡಬಹುದು. ಉಪನದಿಗಳ ಉಗಮ ಸ್ಥಾನದ ಸಮೀಪ ಅಲ್ಲಲ್ಲಿ ನೀರು ತಡೆದು 36 ಜಲಾಶಯಗಳನ್ನು ನಿರ್ಮಿಸಲು ಅಂದಾಜಿಸಲಾಗಿದೆ.

ಈ ಯೋಜನೆಯ ಎರಡು ಕಾಲುವೆಗಳು ನಿರ್ಮಾಣವಾಗಲಿದ್ದು, ಒಂದನೇ ಕಾಲುವೆ ಮೂಲಕ 90.73 ಟಿಎಂಸಿ ನೀರನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಸಿ ಬಯಲುಸೀಮೆಯ 7 ಜಿಲ್ಲೆಗಳ 40 ಬರಪೀಡಿತ ತಾಲ್ಲೂಕುಗಳಿಗೆ ಸಾಗಿಸಲಾಗುತ್ತದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ನಗರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕುಗಳಿಗೆ ನೇರವಾಗಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲ್ಲೂಕುಗಳಿಗೆ ಪೈಪ್ ಮೂಲಕ ತಲುಪಿಸಲಾಗುತ್ತದೆ. ಇದರಲ್ಲಿ 8684 ಹಳ್ಳಿಗಳಿಗೆ ನೀರು ಸಿಗಲಿದ್ದು, 1.08 ಕೋಟಿ ಜನರಿಗೆ, 1.02 ಕೋಟಿ ಜಾನುವಾರುಗಳಿಗೆ ಪ್ರಯೋಜನವಾಗಲಿದೆ. 2ನೇ ಹಂತದಲ್ಲಿ ಪಶ್ಚಿಮದಿಂದ ಉತ್ತರಕ್ಕೆ ನೀರು ಹರಿಸಿ 51.70 ಟಿಎಂಸಿ ನೀರನ್ನು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಬಳ್ಳಾರಿ ಜಿಲ್ಲೆಗಳಿಗೆ ಒದಗಿಸಲಾಗುವುದು’ ಎಂಬುದು ಈ ಯೋಜನೆಯ ರೂವಾರಿ ಪರಮಶಿವಯ್ಯ ಅವರ ಲೆಕ್ಕಾಚಾರ.

‘ತೊರೆಗಳೇ ನದಿ ಜೀವಾಳ’
ಪಶ್ಚಿಮಘಟ್ಟದಲ್ಲಿ ಹರಿಯುವ ಸಣ್ಣಪುಟ್ಟ ತೊರೆಗಳೂ ಪಶ್ಚಿಮವಾಹಿನಿ ನದಿಗಳ ಜೀವಾಳ. ಇವು ಅಂತರ್ಜಲ ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಲ್ಲಿನ ನೀರಿನ ಹರಿವಿನಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಪರಿಸರ ವ್ಯವಸ್ಥೆ ಹದಗೆಡುವುದರಲ್ಲಿ ಸಂದೇಹವಿಲ್ಲ. ನದಿಪಾತ್ರಗಳಲ್ಲಿ ಸಣ್ಣಪುಟ್ಟ ಹೊಳೆಗಳಿಗೆ ಅಣೆಕಟ್ಟು ಕಟ್ಟಿದ್ದೇ ಆದಲ್ಲಿ, ಭವಿಷ್ಯದಲ್ಲಿ ಅದು ಪ್ರಮುಖ ನದಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಮಂಗಳೂರು ನೇತ್ರಾವತಿ ನದಿಯನ್ನೇ ಅವಲಂಬಿಸಿದೆ. ಮುಂದೆ ನೇತ್ರಾವತಿ ನದಿಯಲ್ಲಿ ಬೇಸಿಗೆಯಲ್ಲಿ ನೀರೇ ಇಲ್ಲದ ಸ್ಥಿತಿ ತಲುಪಿದರೂ ಆಶ್ಚರ್ಯವಿಲ್ಲ. ‘ಯಾವುದೇ ಕಾರಣಕ್ಕೂ ನದಿಪಾತ್ರದ ವ್ಯವಸ್ಥೆ ಹದಗೆಡಿಸಬಾರದು. ಇದು ಕಾಲಿಗೆ ಹರಿಯುವ ರಕ್ಷನಾಲವನ್ನು ಹೃದಯಭಾಗದಲ್ಲೇ ತಡೆಹಿಡಿದಂತೆ. ನದಿಪಾತ್ರದಲ್ಲಿ ಒಂದು ಹೊಳಗೆ ಅಣೆಕಟ್ಟು ಕಟ್ಟಿದರೂ ಉಳಿದ ಸಣ್ಣಪುಟ್ಟ ತೊರೆಗಳ ಹರಿವೂ ಸ್ಥಗಿತಗೊಳ್ಳುತ್ತದೆ. ಅಂತಿಮವಾಗಿ ಇದು ನದಿಪಾತ್ರದ ಅಂತರ್ಜಲ ವ್ಯವಸ್ಥೆಯನ್ನು ಏರುಪೇರು ಮಾಡುತ್ತದೆ. ಜತೆಗೆ ನದಿಯನ್ನೇ ನಂಬಿಕೊಂಡ ಜೀವರಾಶಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ತೊರೆಗಳನ್ನು ನದಿಪಾತ್ರದಲ್ಲೇ ತಡೆಗಟ್ಟಿದರೆ ವಲಸೆ ಮೀನುಗಳ ಸಂತತಿ ಮೇಲೂ ಪರಿಣಾಮ ಬೀಳುತ್ತದೆ’.
 ಡಾ.ಎನ್.ಎ.ಮಧ್ಯಸ್ಥ, ಪರಿಸರ ತಜ್ಞ 
 
‘ಕರಾವಳಿಗೇ ನೀರಿಲ್ಲವಾದೀತು’
‘ಹಾಲು ಕುಡಿಯುತ್ತಿದ್ದ ಮಗುವಿನ ಕೈಯಿಂದ ಹಾಲಿನ ಲೋಟ ಕಿತ್ತು ಇನ್ನೊಂದು ಮಗುವಿಗೆ ಕೊಡುವಾಗ ಹಾಲಿನ ಲೋಟ ಕೆಳಗೆ ಬಿದ್ದು ಚೆಲ್ಲಿಹೋಗಿ ಕೊನೆಗೆ ಹಾಲು ಕೊಟ್ಟ ಹಸುವನ್ನೇ ಕೊಂದು ಬಿಟ್ಟರೆ ಹೇಗಾಗುತ್ತದೋ ಹಾಗೆ ಈ ಯೋಜನೆ. ಕೊನೆಗೂ ಬಯಲು ಸೀಮೆಗೆ ನೀರಿಲ್ಲ, ಕರಾವಳಿಗೂ ಇಲ್ಲ. ನೇತ್ರಾವತಿ ನದಿ ಆಟಿಕೆ ವಸ್ತುವಲ್ಲ. ಜನಾಭಿಪ್ರಾಯಕ್ಕೆ ಮಣಿಯದ, ಉಣ್ಣುವ ಬಟ್ಟಲಿಗೆ ವಿಷ ಮೆತ್ತುವ ಈ ಯೋಜನೆಯನ್ನು ಪ್ರತಿಭಟಿಸುವ ಅನಿವಾರ್ಯತೆ ಇದೆ’.
ದಿನೇಶ್ ಹೊಳ್ಳ , ಚಾರಣಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT