ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜೀವನೋಪಾಯಕ್ಕೆ ಅಲಂಕಾರಿಕ ಮೀನು ಸಾಕಲು ಸಲಹೆ'

Last Updated 16 ಜುಲೈ 2013, 10:45 IST
ಅಕ್ಷರ ಗಾತ್ರ

ಚಳ್ಳಕೆರೆ: ಕೃಷಿ ಮತ್ತು ತೋಟಗಾರಿಕೆಗೆ ಉಪಯೋಗಿಸುವ ನೀರಿನಲ್ಲಿ ಮೀನು ಸಾಕಾಣಿಕೆ ಮಾಡುವುದರಿಂದ ರೈತರಿಗೆ ಪೌಷ್ಟಿಕ ಭದ್ರತೆ ಒದಗುವುದರ ಜತೆಗೆ ಆದಾಯಗಳಿಕೆ ಹೆಚ್ಚುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಒಳನಾಡು ಮೀನುಗಾರಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ವಿ.ಕೃಷ್ಣಮೂರ್ತಿ ಹೇಳಿದರು.

ತಾಲ್ಲೂಕಿನ ಸಾಣೀಕೆರೆ ಗ್ರಾಮದಲ್ಲಿ ಈಚೆಗೆ ಹಿರಿಯೂರು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮೀನು ಕೃಷಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮೀನುಗಾರಿಕೆ ನೀರಿನ ನೈರ್ಮಲ್ಯವನ್ನು ಕಾಪಾಡಿ, ನೀರು ಬಸಿಯುವಿಕೆಯನ್ನು ಕಡಿಮೆ ಗೊಳಿಸುತ್ತದೆ.  ಸಾಕಾಣಿಕೆ ನಂತರ ಕೊಳದ ತಳದ ಗೋಡು ಮಣ್ಣನ್ನು ಕೃಷಿ ಮತ್ತು ತೋಟಗಾರಿಕೆಗೆ ಬಳಸುವುದರಿಂದ ರಸಗೊಬ್ಬರದ ಬಳಕೆ ಕಡಿಮೆಯಾಗಿ ಲಾಭ ಗಳಿಸಬಹುದು ಎಂದು ನುಡಿದರು.

ಅಲಂಕಾರಿಕ ಮೀನು ಸಾಕಣೆಗೆ ಜಲ ಸಂಪನ್ಮೂಲಗಳನ್ನು ಹೊಂದಿರದ ಸಣ್ಣ ರೈತರು ಹಾಗೂ ಮಹಿಳೆಯರು ಮನೆ, ತೋಟ, ಜಮೀನು, ಅಂಗಳದಲ್ಲಿ ಸಿಮೆಂಟ್ ತೊಟ್ಟಿಗಳಲ್ಲಿ ಅಥವಾ ಪ್ಲಾಸ್ಟಿಕ್ ಹೊದಿಕೆ ಹಾಕಿದ ನೆಲ ತೊಟ್ಟಿಗಳಲ್ಲಿ  ಸಾಕಣೆ ಮಾಡಬಹುದು. ಆ ಮೂಲಕ ಜೀವನ ನಿರ್ವಹಣೆ ಜತೆ ಅಧಿಕ ಲಾಭವನ್ನು ಗಳಿಸಬಹುದು ಎಂದು ವಿವರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಂ.ಪದ್ಮಾವತಿ ಮಾತನಾಡಿ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮೀನುಗಾರಿಕೆ ಇಲಾಖೆ ಚಿಲ್ಲರೆ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಉತ್ತೇಜನ ನೀಡುತ್ತಿದೆ. ರೈತ ಮಹಿಳೆಯರು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ವಾಗಿ ಪ್ರಗತಿ ಸಾಧಿಸಬೇಕು ಎಂದರು.

ದಾವಣಗೆರೆ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ ಧೀರೇಶ್ ನಾಯಕ್ ಮಾತನಾಡಿದರು. ಸಾಣೀಕೆರೆ ಗ್ರಾ.ಪಂ ಸದಸ್ಯೆ ಅನಸೂಯ, ಪ್ರಮೋದ್, ಡಾ.ಹರ್ಷ, ಸ್ವಾಮಿ, ಕುಶಲ, ತಿಪ್ಪಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT