ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ್, ನೀರಜ್‌ಗೆ ಗೆಲುವು

ಐಟಿಎಫ್ ಟೆನಿಸ್ ಟೂರ್ನಿ; ಚಂದ್ರಿಲ್ ಮುನ್ನಡೆ
Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ದಾವಣಗೆರೆ: ಜೀವನ್ ನೆಡುಂಚೆಳಿಯನ್, ನೀರಜ್ ಇಳಂಗೋವನ್, ಚಂದ್ರಿಲ್ ಸೂದ್ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್‌ನ ಮಂಗಳವಾರದ ಪಂದ್ಯಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿ ಎರಡನೇ ಸುತ್ತಿಗೆ ಮುನ್ನಡೆದರು.

ಇಲ್ಲಿನ ಹೈಸ್ಕೂಲ್ ಮೈದಾನದ ಟೆನಿಸ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ, ಜಿಲ್ಲಾ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಜಿಎಂಐಟಿ ಐಟಿಎಫ್ ದಾವಣಗೆರೆ ಓಪನ್ ಟೂರ್ನಿಯಲ್ಲಿ ವೈಲ್ಡ್ ಕಾರ್ಡ್ ಪಡೆದ ದಾವಣಗೆರೆಯ ಅಲೋಕ್ ಆರಾಧ್ಯ, ಮೈಸೂರಿನ ಸೂರಜ್ ಪ್ರಬೋದ್, ಬೆಂಗಳೂರಿನ ವಿಕ್ರಂ ನಾಯ್ಡು ಅವರು ತೀವ್ರ ಸೆಣಸಾಟ ನಡೆಸಿಯೂ ಸೋಲು ಕಂಡರು.

ಪಂದ್ಯದ ನಡುವೆ ಸಣ್ಣಗೆ ಮಳೆ ಹನಿಯಿತಾದರೂ ಆಟಕ್ಕೆ ಅಡ್ಡಿಯಾಗಲಿಲ್ಲ. ಮೋಡ ಕವಿದ ತಂಪು ವಾತಾವರಣದ ಮಧ್ಯೆ ಮಂಗಳವಾರ ಅಲೋಕ್ ಆರಾಧ್ಯ ಅವರ ರಭಸದ ಸರ್ವ್‌ಗಳಿಗೆ ನೀಳಕಾಯದ ನೀರಜ್ ಇಳಂಗೋವನ್ ಸುಲಭವಾಗಿ ಉತ್ತರಿಸಿದರು. ಅಲೋಕ್ ಸವಾಲನ್ನು ಎದುರಿಸಿದ ನೀರಜ್ 6-1, 6-3ರಲ್ಲಿ ಗೆದ್ದರು.

ಇತ್ತ ಚಂದ್ರಿಲ್ ಸೂದ್ ಮತ್ತು ದಾವಣಗೆರೆಯ ಸೂರಜ್ ಆರ್. ಪ್ರಭೋದ್ ಅವರದ್ದು ಕೊನೆವರೆಗೂ ಆಸಕ್ತಿ ಉಳಿಸಿದ ಪಂದ್ಯ. ಚೆಂಡು ಅಂಗಣದಾಚೆ ಸರಿದದ್ದು ಕಡಿಮೆ. ಮೊದಲ ಸೆಟ್‌ನಲ್ಲಿ ಸೂರಜ್ 5-3ರಷ್ಟು ಮುಂದಿದ್ದರು. ಇದೇ ಸೆಟ್‌ನ ಉತ್ತರಾರ್ಧದಲ್ಲಿ ಸೂದ್ ಸ್ವಲ್ಪ ತಾಳ್ಮೆ ಕಳೆದುಕೊಂಡು ನಿರಾಶರಾದಂತೆ ಕಂಡುಬಂದರು. ಆದರೆ, ಮುಂದಿನ ಸೆಟ್ ಸೂದ್ ಅವರ ಪಾಲಿಗೆ ಅದೃಷ್ಟ ತಂದುಕೊಟ್ಟಿತು. ಚಂದ್ರಿಲ್ 4-6, 6-3, 6-4ರಲ್ಲಿ ಗೆದ್ದರು.

ಚೆನ್ನೈನ ಜೀವನ್ ನೆಡುಂಚೆಳಿಯನ್ ಅವರು ಪೋರ್ಚುಗೀಸ್‌ನ ಆ್ಯಂಡ್ರೆ ಗಾಸ್ಪರ್ ಮುರ್ತಾ ಅವರನ್ನು ಮಣಿಸಿದ ರೀತಿಯೂ ರೋಚಕವಾಗಿತ್ತು. ಇಬ್ಬರದ್ದೂ ಸಮಬಲದ ಹೋರಾಟ. ಕೊನೆಗೂ ಜೀವನ್ 6-1, 6-4ರಲ್ಲಿ ಗೆದ್ದರು.

ವಿವೇಕ್ ಶೋಕಿನ್ ಅವರು ಸೂರಜ್ ಬೆನಿವಾಲ್ ಅವರನ್ನು 6-0, 1-0ಯಿಂದ ಸೋಲಿಸಿದರು. ಕಾಝಾ ವಿನಾಯಕ ಶರ್ಮಾ ಅವರು ಬೆಂಗಳೂರಿನ ವಿಕ್ರಂ ನಾಯ್ಡು ವಿರುದ್ಧ 6-3, 6-3ರಲ್ಲಿ ಗೆದ್ದರು. ಹಾಲೆಂಡ್‌ನ ಕೊಲಿನ್ ವಾನ್ ಬೀಮ್ ಅವರು ರಷ್ಯಾದ ಸೆರ್ಗೈ ಕ್ರತಿಯೋಕ್ ವಿರುದ್ಧ 6-1, 6-4ರಲ್ಲಿ ಜಯಿಸಿದರು. ಹೈದರಾಬಾದ್‌ನ ಶಶಿಕುಮಾರ್ ಮುಕುಂದ್ ಅವರನ್ನು ಅಲ್ಲಿನವರೇ ಆದ ಅಶ್ವಿನ್ ವಿಜಯರಾಘವನ್ 6-3, 6-2ರಿಂದ ಸೋಲಿಸಿದರು. ಜರ್ಮನಿಯ ಟಾರ್ಸ್ಟನ್‌ವೀಟೋಸ್ಕಾ ಅವರು ಎನ್. ವಿಜಯಸುಂದರ್ ಪ್ರಶಾಂತ್ ವಿರುದ್ಧ 6-4, 6-2ರಲ್ಲಿ ಜಯ ಸಾಧಿಸಿದರು. ಹಾಲೆಂಡ್‌ನ ಜೆರಿಯೋನ್ ಬೆನಾರ್ಡ್ ಅವರು ಬ್ರಹ್ಮಜೋತ್ ಸಿಂಗ್ ವಿರುದ್ಧ 6-4, 6-4ರಲ್ಲಿ ಗೆದ್ದರು. ರಾಮ್‌ಕುಮಾರ್ ರಾಮನಾಥನ್ ಅವರು ರೋಣಕ್ ಮನುಜ ಅವರನ್ನು 6-2, 6-2ರಲ್ಲಿ ಮಣಿಸಿದರು.

ಡಬಲ್ಸ್‌ನಲ್ಲಿ ವೈಲ್ಡ್‌ಕಾರ್ಡ್ ಪಡೆದ ಸಾಗರ್ ಮಂಜಣ್ಣ, ರಕ್ಷಯ್ ಥಕ್ಕರ್ ಜೋಡಿಯು ವಿಜಯಂತ್ ಮಲಿಕ್, ವಿವೇಕ್ ಶೋಕೀನ್ ಜೋಡಿಯನ್ನು 3-6, 7-6(4) (10-3)ರಲ್ಲಿ ಮಣಿಸಿತು. ಅಮೆರಿಕದ ಅಮೃತ್ ನರಸಿಂಹನ್, ಮೈಕೆಲ್ ಶಾಬಾಸ್ ಜೋಡಿಯು ಭಾರತದ ಅರ್ಜುನ್ ಖಾಡೆ, ಖಾಜಾ ವಿನಾಯಕ ಶರ್ಮಾ ಜೋಡಿಯನ್ನು 6-3, 7-5ರಲ್ಲಿ ಸೋಲಿಸಿತು. ಚಂದ್ರಿಲ್ ಸೂದ್, ವೈಲ್ಡ್ ಕಾರ್ಡ್ ಪಡೆದ ಲಕ್ಷಿತ್ ಸೂದ್ ಸಹೋದರರು ಅಗ್ರ ಶ್ರೇಯಾಂಕಿತ ಆಟಗಾರ ಎನ್. ಶ್ರೀರಾಮ್ ಬಾಲಾಜಿ, ಜೀವನ್ ನೆಡುಂಚೆಳಿಯನ್ ಜೋಡಿ ಮುಂದೆ 6-2, 7-5ರಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT