ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ `ಜಗತ್ತು' ಅನಾವರಣ!

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಮಂಗಳವಾರದವರೆಗೆ (ಡಿ. 11) ನಡೆಯಲಿರುವ ಭಾರತೀಯ ಜೀವವೈವಿಧ್ಯ ವಸ್ತುಪ್ರದರ್ಶನದಲ್ಲಿ ಕೇರಳದ ಸರ್ಕಾರೇತರ ಸಂಸ್ಥೆಯೊಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಫಾಸ್ಟ್‌ಫುಡ್ ಸೇವನೆಯ ದುಷ್ಪರಿಣಾಮಗಳನ್ನು ತಿಳಿಸುವ ಭಿತ್ತಿ ಚಿತ್ರದಲ್ಲಿದ್ದ ಗಮನಾರ್ಹ ಅಂಶಗಳಿವು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, `ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಆ್ಯಂಡ್ ಇಂಟಿಗ್ರೇಟಿವ್ ಮೆಡಿಸಿನ್' (ಐ-ಎಐಎಂ) ಸೇರಿದಂತೆ ವಿವಿಧ ಇಲಾಖೆಗಳು ಸೇರಿ ಆಯೋಜಿಸಿರುವ ಈ ಜೀವವೈವಿಧ್ಯ ವಸ್ತು ಪ್ರದರ್ಶನದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಮಳಿಗೆಗಳಿವೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಲ್ಲಿ ಜೀವವೈವಿಧ್ಯ ಬಗ್ಗೆ ಅರಿವು ಹಾಗೂ ಶಿಕ್ಷಣ ನೀಡುವ ಉದ್ದೇಶದಿಂದ ಈ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ.

ದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ 150ಕ್ಕೂ ಹೆಚ್ಚಿನ ಪ್ರಭೇದಗಳ ಮರಗಿಡಗಳಿಂದ ದೊರೆಯುವ ಬೀಜಗಳನ್ನು ಜೈವಿಕ ಇಂಧನ ತಯಾರಿಸಲು ಬಳಸಬಹುದಾಗಿದೆ. ಪ್ರಸ್ತುತ ಹೊಂಗೆ, ಬೇವು, ಹಿಪ್ಪೆ, ಜತ್ರೋಪ, ಸೀಮಾರೂಬ ಬೀಜದ ಎಣ್ಣೆ ಇಂಧನವಾಗಿ ಬಳಕೆಯಾಗುತ್ತಿದೆ. ಡೀಸೆಲ್ ಚಾಲಿತ ವಾಹನಗಳಲ್ಲಿ ಈ ಜೈವಿಕ ಇಂಧನ ಬಳಸುವುದರಿಂದ ಇಂಧನ ಸ್ವಾಲಂಬನೆ ಸಾಧ್ಯ, ಪರಿಸರ ಮಾಲಿನ್ಯದ ಪ್ರಮಾಣ ತಗ್ಗುತ್ತದೆ ಎಂಬ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಿಬ್ಬಂದಿ ವೀಕ್ಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸುತ್ತಿದ್ದರು.

`ಈ ಪ್ರದರ್ಶನದಲ್ಲಿ ಕರ್ನಾಟಕದ ಜೀವವೈವಿಧ್ಯದ ವಿಶೇಷತೆಗಳು, ಸಾಂಸ್ಕೃತಿಕ ಮಹತ್ವ ತಿಳಿದುಕೊಂಡೆ. ಕರ್ನಾಟಕ ಅದ್ಭುತವಾದ ಜೀವವೈವಿಧ್ಯ ತಾಣ ಎಂಬುದು ಗೊತ್ತೇ ಇರಲಿಲ್ಲ. ಇಲ್ಲಿ ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ದೊರೆಯಿತು' ಎಂದು ಹೇಳುತ್ತಾರೆ ತಮಿಳುನಾಡಿನ ಕಾಮರಾಜ ವಿಶ್ವವಿದ್ಯಾಲಯದಿಂದ ಬಂದಿದ್ದ ಜೀವ ರಸಾಯನಶಾಸ್ತ್ರ ಪದವಿ ವಿದ್ಯಾರ್ಥಿ ಅಭಿಷೇಕ್.

`ಪಶ್ಚಿಮ ಘಟ್ಟ ಕಾಡುಗಳಲ್ಲಿ ವೈವಿಧ್ಯಮಯ ಉರಗಗಳಿವೆ. 7 ಜಾತಿಯ ಆಮೆಗಳು, 17 ಜಾತಿ ಹಲ್ಲಿಗಳು, 44 ಜಾತಿ ಹಾವುಗಳಿವೆ ಎಂಬ ಮಾಹಿತಿ ಇಲ್ಲಿ ತಿಳಿಯಿತು. ಜನಸಾಮಾನ್ಯರೆಲ್ಲರೂ ಭೇಟಿ ನೀಡಬೇಕಾದ ಪ್ರದರ್ಶನ ಇದಾಗಿದೆ' ಎನ್ನುತ್ತಾರೆ ರಾಜಾಜಿನಗರದಿಂದ ಬಂದಿದ್ದ ಗೃಹಿಣಿ ಸೌಮ್ಯ.

ಕೊಳ್ಳೆಗಾಲದ ರೈತರು ಸಾವಯವ ಕೃಷಿಯಿಂದ ಬೆಳೆದ ಭತ್ತದ ವಿವಿಧ ತಳಿಗಳು ಹಾಗೂ ತರಕಾರಿಗಳ ಪ್ರದರ್ಶನ ಗಮನ ಸೆಳೆಯುತ್ತದೆ. ಜೊತೆಗೆ ಕಾಫಿ ಮಂಡಳಿಯ ಮಳಿಗೆಯಲ್ಲಿದ್ದ ಕಾಫಿ ರುಚಿ ಸವಿಯಲು ಪ್ರೇಕ್ಷಕರ ಹಿಂಡು ಸಾಲುಗಟ್ಟಿತ್ತು. ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಬಗ್ಗೆ ಸಂಪೂರ್ಣ ಚಿತ್ರ, ಮಾಹಿತಿ ನೀಡುವ ಹಾಗೂ ಸಾರ್ವಜನಿಕರಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನೈಸರ್ಗಿಕ ಇತಿಹಾಸದ ಪ್ರಾದೇಶಿಕ ವಸ್ತುಸಂಗ್ರಹಾಲಯ ಪ್ರದರ್ಶನ ಆಯೋಜಿಸಿದೆ.

`ಜನಸಂಖ್ಯೆ ಹೆಚ್ಚಳ, ಗಣಿಗಾರಿಕೆ, ಅಭಿವೃದ್ಧಿ ಕೆಲಸಗಳ ಉದ್ದೇಶದಿಂದ ಪಾರಂಪರಿಕ ಪಶ್ಚಿಮ ಘಟ್ಟ ಅರಣ್ಯಗಳು ನಾಶವಾಗುತ್ತಿವೆ. ಮುಂದಿನ ಪೀಳಿಗೆಗೆ ಸಂರಕ್ಷಿಸುವ ನಿಟ್ಟಿನಲ್ಲಿ ಇಂಥ ಪ್ರದರ್ಶನ ಸದುಪಯೋಗವಾಗಬೇಕು, ಆ ಮೂಲಕ ಜೀವ ವೈವಿಧ್ಯ ತಾಣದ ರಕ್ಷಣೆಗೆ ಕೈಜೋಡಿಸಬೇಕು' ಎಂದು ಸಲಹೆ ನಿಡುತ್ತಾರೆ ಶಿಕ್ಷಣ ಸಂಯೋಜಕ ಯೋಗೇಂದ್ರ.

ಇವಿಷ್ಟೇ ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಿಂದ ಬಂದಿರುವ ಸಂಘ ಸಂಸ್ಥೆಗಳ ಕರಕುಶಲ ಉತ್ಪನ್ನ ಮಳಿಗೆಗಳಿವೆ. ಪ್ರವಾಸೋದ್ಯಮ ಇಲಾಖೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸ್ವಯಂ ಸೇವಾ ಸಂಸ್ಥೆಗಳ ಮಳಿಗೆಗಳು ಮಾಹಿತಿ ಕೇಂದ್ರಗಳಾಗಿ ಗಮನ ಸೆಳೆಯುತ್ತಿವೆ. ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳವಿರುತ್ತದೆ.
ಸ್ಥಳ: ಪಶುವೈದ್ಯಕೀಯ ಕಾಲೇಜು ಮೈದಾನ, ಹೆಬ್ಬಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT