ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಸಂಕುಲ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪರಿಸರ ಸಂರಕ್ಷಣೆ ಮಾಡದ ಹೊರತು ಮಾನವ ಜನಾಂಗಕ್ಕೆ ಭವಿಷ್ಯವಿಲ್ಲ~ ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಸ್.ಇ.ನೇಗಿನ್‌ಹಾಳ್ ಹೇಳಿದರು.
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ `ಹನುಮಂತರಾವ್ ಸ್ಮಾರಕ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ~ಯನ್ನು ಸ್ವೀಕರಿಸಿ ಅವರು ಮಾತನಾಡಿದರು.

`ಮಾನವನ ಬದುಕಿನಲ್ಲಿ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಮನುಷ್ಯನ ಜೀವನಕ್ಕೆ ಅರಣ್ಯ ಪ್ರದೇಶಗಳು ಅಗತ್ಯ. ಜೀವಸಂಕುಲದ ಸುಸ್ಥಿರತೆಗೆ ಅರಣ್ಯ ಪ್ರದೇಶಗಳು ಹಾಗೂ ಜೀವವೈವಿಧ್ಯ ಅನಿವಾರ್ಯ. ಹೀಗಾಗಿ ಪರಿಸರ ಸಂರಕ್ಷಣೆಯ ಕಾಳಜಿ ಅಗತ್ಯವಾಗಿದೆ~ ಎಂದು ಅವರು ನುಡಿದರು.

`ಭಾರತೀಯ ಅರಣ್ಯ ಸೇವೆಗೆ ಸೇರಿದ ನಂತರ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕೆಲಸ ಮಾಡುತ್ತಾ ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು. ನಾಗರಹೊಳೆ ಹಾಗೂ ಬಂಡೀಪುರಗಳಲ್ಲಿ ಸೇವೆಯಲ್ಲಿದ್ದಾಗ ಸಲೀಂ ಅಲಿ, ಎಂ.ವೈ.ಘೋರ್ಪಡೆ ಅವರ ಪರಿಚಯವಾಯಿತು. ಅವರಿಂದ ವನ್ಯಜೀವಿ ಛಾಯಾಗ್ರಹಣದ ಸೂಕ್ಷ್ಮತೆಗಳು ತಿಳಿದವು~ ಎಂದು ಅವರು ಹೇಳಿದರು.

`ಬೆಂಗಳೂರು ನಗರದಲ್ಲಿ ಅನವಶ್ಯಕವಾಗಿ ರಸ್ತೆಗಳ ವಿಸ್ತರಣೆ ಮಾಡುತ್ತಾ, ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. ರಸ್ತೆ ಬದಿಯ ಮರಗಳನ್ನು ಸಂರಕ್ಷಿಸುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳಿಗೆ ತರಬೇತಿ ನೀಡಬೇಕು. ಮರಗಳನ್ನು ಸಂರಕ್ಷಿಸುವ ಹಾಗೂ ಬೆಳೆಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು~ ಎಂದು ಅವರು ಆಶಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ ಕೆ.ಆರ್.ನಿರಂಜನ್ ಮಾತನಾಡಿ, `ವನ್ಯಜೀವಿ ಛಾಯಾಗ್ರಹಣವನ್ನು ತಪಸ್ಸಿನಂತೆ ಕಾಯ್ದುಕೊಂಡು ಬಂದವರು ನೇಗಿನ್‌ಹಾಳ್. ಬದುಕಿನ ಚೈತನ್ಯವಾದ ಕಲೆಯನ್ನು ವನ್ಯಜೀವಿ ಛಾಯಾಗ್ರಹಣದ ಮೂಲಕ ಸಾಧಿಸಿದವರು ಅವರು. ಅವರ ವನ್ಯಜೀವಿ ಛಾಯಾಗ್ರಹಣ ಸೂಕ್ಷ್ಮತೆಯಿಂದ ಕೂಡಿದೆ. ಸರ್ಕಾರಿ ಸೇವೆಯಲ್ಲಿದ್ದುಕೊಂಡು ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರ ಹವ್ಯಾಸ ಮಾದರಿಯಾಗಿದೆ~ ಎಂದರು.

`ಭಾರತೀಯ ವಿದ್ಯಾಭವನ ಹಾಗೂ ಬಿಬಿಎಂಪಿ ಜಂಟಿಯಾಗಿ ನಡೆಸುತ್ತಿರುವ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಾ ಮಾದರಿಯಾಗಿವೆ. ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುತ್ತಿದ್ದಾರೆ~ ಎಂದು ಅವರು ನುಡಿದರು.

ಪ್ರಶಸ್ತಿಯು 20 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಭಾರತೀಯ ವಿದ್ಯಾಭವನದ ಇ.ಹನುಮಂತರಾವ್ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ಸಂಜೆ 7ರ ವರೆಗೆ ನೇಗಿನ್‌ಹಾಳ್ ಅವರ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT